ಪುಟ್ಟ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕಿಯವರೆಗೆ ಮೈಕೈ ನೋವು ಯಾರನ್ನೂ ಬಿಡಲಾರದು. ಅದರಲ್ಲೂ ಕಂಪ್ಯೂಟರ್, ಟಿವಿ, ಮೊಬೈಲ್ ಪರಿಣಾಮವಾಗಿ ಕತ್ತು, ಬೆನ್ನು ಹಾಗೂ ಭುಜ ನೋವುಗಳು ಬಹುತೇಕರಿಗೆ ದಿನದ ಭಾಗವೇ ಆಗಿಹೋಗಿರುತ್ತದೆ. ಆದರೆ, ಸಣ್ಣಪುಟ್ಟ ಸಮಸ್ಯೆ ಎಂದು ಈ ನೋವನ್ನು ನೆಗ್ಲೆಕ್ಟ್ ಮಾಡಲಾಗದು. ಏಕೆಂದರೆ, ಇಂದು ಸಣ್ಣದಾಗಿ ಶುರುವಾಗಿದ್ದೇ ಮುಂದೊಂದು ದಿನ ದೊಡ್ಡದಾಗಿ ಕಾಡಬಹುದು. ಹೀಗಾಗಿ, ಗುಣಮಟ್ಟದ ಜೀವನಕ್ಕಾಗಿ ಈ ಸಣ್ಣಪುಟ್ಟ ಕಿರಿಕಿರಿಗಳನ್ನು ಅಲ್ಲಲ್ಲೇ ನಿವಾರಿಸಿಕೊಂಡು ಮುಂದೆ ಸಾಗುವುದು ಜಾಣತನ. ಇದಕ್ಕಾಗಿ ದಿನಚರಿಯಲ್ಲಿ ಈ ಸರಳ ವ್ಯಾಯಾಮಗಳನ್ನು ಅಳವಡಿಸಿಕೊಂಡು ನೋಡಿ.

ವ್ಯಾಯಾಮ 1 :
ಮಂಡಿಯೂರಿ ನೇರವಾಗಿ ಕುಳಿತುಕೊಂಡು ಕೈಗಳನ್ನು ಎರಡೂ ಬದಿಯಲ್ಲಿರಿಸಿ. ಈಗ ಉಸಿರನ್ನು ಒಳಗೆಳೆದುಕೊಳ್ಳುತ್ತಾ ನಿಮ್ಮ ಭುಜಗಳನ್ನು ಕಿವಿಗೆ ತಾಕಿಸಿ. ಉಸಿರನ್ನು ಹೊರಗೆ ಬಿಡುತ್ತಾ ಭುಜಗಳನ್ನು ಸಾಮಾನ್ಯ ಸ್ಥಿತಿಗೆ ತನ್ನಿ. ಈ ವ್ಯಾಯಾಮವನ್ನು 10 ಬಾರಿ ಪುನರಾವರ್ತಿಸಿ. ಇದು ನಿಮ್ಮ ಬೆನ್ನಿನ ಮೇಲ್ಭಾಗದ ಸ್ನಾಯುಗಳನ್ನು ಬಲಗೊಳಿಸುತ್ತದೆ. 

ವ್ಯಾಯಾಮ 2: 
ಮಂಡಿಯೂರಿ ಕುಳಿತುಕೊಂಡು ಕೈಗಳನ್ನು ಎರಡೂ ಬದಿಯಲ್ಲಿರಿಸಿ. ನಿಧಾನವಾಗಿ ಉಸಿರನ್ನು ಒಳಗೆಳೆದುಕೊಳ್ಳುವುದು ಹಾಗೂ ಹೊರಬಿಡುವುದನ್ನು ಆರಂಭಿಸಿ. ಉಸಿರನ್ನು ಹೊರಬಿಡುವಾಗ ನಿಮ್ಮ ಎಡ ಕಿವಿಯನ್ನು ಎಡಭುಜಕ್ಕೆ ತಾಕಿಸಿ. ನಂತರ ಉಸಿರನ್ನು ಒಳಗೆಳೆದುಕೊಳ್ಳುತ್ತಾ ಅದನ್ನು ಗಲ್ಲದ ಬಳಿ ತೆಗೆದುಕೊಂಡು ಹೋಗಿ. ಈಗ ಇದೇ ರೀತಿ ಬಲಗಿವಿಯನ್ನು ಬಲಭುಜಕ್ಕೆ ತಾಗಿಸಿ. ಇದು ಒಂದು ಸರ್ಕಲ್ ಸಂಪೂರ್ಣವಾದ ಬಳಿಕ ಈ ವಿಧಾನವನ್ನು ಪುನರಾವರ್ತಿಸಿ. ಈ ವ್ಯಾಯಾಮವು ನಿಮಗೆ ನಿಮ್ಮ ಉಸಿರಾಟದ ಮೇಲೆ ಗಮನ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ ಜೊತೆಗೆ ಕತ್ತಿನಲ್ಲಿ ಶೇಖರವಾದ ಒತ್ತಡ ಬಿಡುಗಡೆ ಮಾಡುತ್ತದೆ.

ವ್ಯಾಯಾಮ 3: 
ಕೋಣೆಯ ಮೂಲೆಯಲ್ಲಿ ನೇರವಾಗಿ ನಿಂತುಕೊಳ್ಳಿ. ಎರಡೂ ಕೈಗಳನ್ನೂ ಗೋಡೆಯ ಎರಡು ಭಾಗದ ಮೇಲಿಡಿ. ನಿಧಾನವಾಗಿ ಉಸಿರನ್ನು ಒಳಗೆಳೆದುಕೊಳ್ಳುವುದು ಹಾಗೂ ಹೊರಬಿಡುವುದನ್ನು ಆರಂಭಿಸಿ. ಉಸಿರನ್ನು ತೆಗೆದುಕೊಳ್ಳುತ್ತಾ ಸಾಧ್ಯವಾದಷ್ಟು ಮುಂದೆ ಬಗ್ಗಿ. 30 ಸೆಕೆಂಡ್‌ ಕಾಲ ಹಾಗೆಯೇ ನಿಂತುಕೊಳ್ಳಿ. ನಂತರ ಉಸಿರು ಬಿಡುತ್ತಾ ಸಾಮಾನ್ಯ ಸ್ಥಿತಿಗೆ ಬನ್ನಿ. 10 ಬಾರಿ ಈ ವ್ಯಾಯಾಮ ಪುನರಾವರ್ತಿಸಿ. ಈ ವ್ಯಾಯಾಮವು ಬೆನ್ನಿನ ಸ್ನಾಯುಗಳಿಂದ ಒತ್ತಡವನ್ನು ಬಿಡುಗಡೆ ಮಾಡುತ್ತದೆ. 

ವ್ಯಾಯಾಮ 4:
ಕತ್ತನ್ನು ಬಲಬದಿಗೆ ತಗ್ಗಿಸಿ ನಿಧಾನವಾಗಿ ಸುತ್ತಲೂ ತಿರುಗಿಸಿ. ಹೀಗೆ ತಿರುಗುವಾಗ ಗಲ್ಲ ಕತ್ತಿಗೆ ಭುಜಗಳಿಗೆ ಹಾಗೂ ಮೇಲೆ ನೋಡುವಾಗ ಬೆನ್ನಿಗೆ ತಾಕಬೇಕು. ಉಸಿರಾಟ ಸಾಮಾನ್ಯವಾಗಿರಲಿ. ಇದು ಕತ್ತಿನ ಹಿಂಭಾಗದಲ್ಲಿ ಜಮೆಯಾದ ಟೆನ್ಷನ್ ರಿಲೀಸ್ ಮಾಡಿಸುತ್ತದೆ.

ವ್ಯಾಯಾಮ 5:
ನೇರವಾಗಿ ನಿಂತುಕೊಂಡು ಎರಡೂ ಭುಜವನ್ನು ನಿಧಾನವಾಗಿ ಸಾಧ್ಯವಾದಷ್ಟು ಸ್ಟ್ರೆಚ್ ಮಾಡುತ್ತಾ ಮುಂದಿನಿಂದ ಹಿಂದೆ ಹತ್ತು ಬಾರಿ, ಹಿಂದಿನಿಂದ ಮುಂದೆ 10 ಬಾರಿ ತಿರುಗಿಸಿ. 

ಹಾರ್ಟ್ ಆಟ್ಯಾಕ್ ಆದಾಗ ಎದೆ ನೋವು ಬಂದೇ ಬರುತ್ತಾ?

ವ್ಯಾಯಾಮ 6:
ನೆಲದ ಮೇಲೆ ಹೊಟ್ಟೆ ಮೇಲೆ ನೇರ ಮಲಗಿ. ಕೈಗಳು ಎರಡೂ ಬದಿಯಲ್ಲಿರಲಿ. ನಿಧಾನವಾಗಿ ಕಾಲುಗಳನ್ನು ಮೇಲ್ಮುಖವಾಗಿ ಮಡಚಿ ಎರಡೂ ಕೈಗಳಿಂದ ಕಾಲುಗಳನ್ನು ಪಾದದ ಭಾಗದಲ್ಲಿ ಹಿಡಿದುಕೊಳ್ಳಿ. ಈಗ ಕಾಲುಗಳನ್ನು ಸಾಧ್ಯವಾದಷ್ಟು ಬೆನ್ನಿನೆಡೆಗೆ ಎಳೆಯಿರಿ. ಕತ್ತನ್ನು ಸಾಧ್ಯವಾದಷ್ಟು ಹಿಂದಕ್ಕೆಳೆಯಿರಿ. 20 ಸೆಕೆಂಡ್ ಕಾಲ ಅದೇ ಭಂಗಿಯಲ್ಲಿ ಮಲಗಿ, ನಿಧಾನವಾಗಿ ಮುಂಚಿನ ಸ್ಥಿತಿಗೆ ಬನ್ನಿ. ಈ ವ್ಯಾಯಾಮವನ್ನು 10 ಬಾರಿ ಪುನರಾವರ್ತಿಸಿ. ಇದು ಬೆನ್ನಿನ ಸ್ನಾಯುಗಳನ್ನು ಬಲಗೊಳಿಸುವುದಲ್ಲಿದೆ ಭುಜ ಹಾಗೂ ಕತ್ತು ನೋವಿಗೆ ಉತ್ತಮ ವ್ಯಾಯಾಮ. 

ಇವೇ ಅಲ್ಲದೆ ಈ ಕೆಳಗಿನ ಟಿಪ್ಸ್‌ ಫಾಲೋ ಮಾಡಿ. 
- ಕತ್ತು ಹಾಗೂ ಭುಜದ ನೋವನ್ನು ದೂರವಿಡಲು ನಡೆಯುವ, ಕುಳಿತುಕೊಳ್ಳುವ ಭಂಗಿಯನ್ನು ಸರಿಯಾಗಿಟ್ಟುಕೊಳ್ಳುವುದು ಮುಖ್ಯ. ಕಂಪ್ಯೂಟರ್ ವರ್ಕ್, ಡ್ರೈವಿಂಗ್‌ನಂಥ ಕೆಲಸ ಮಾಡುವಾಗ ಬೆನ್ನು ನೇರವಾಗಿರಲಿ. ಕಂಪ್ಯೂಟರ್ ಮಾನಿಟರ್ ನಿಮ್ಮ ಕಣ್ಣಿನ ನೇರಕ್ಕಿರಬೇಕು. ಇದರಿಂದ ಕೆಲಸ ಮಾಡುವಾಗ ನೀವು ಕುತ್ತಿಗೆ ನೋವು ಬರಿಸಿಕೊಳ್ಳುವುದು ತಪ್ಪುತ್ತದೆ. ಫೋನನ್ನು ಬಳಸುವಾಗ ಕೂಡ ಅದು ನಿಮ್ಮ ಕಣ್ಣಿನ ನೇರಕ್ಕಿರಲಿ. ಇಲ್ಲವೇ ಹ್ಯಾಂಡ್ಸ್‌ ಫ್ರೀ ಬಳಸಿ. 
- ಇಡೀ ದಿನ ಫೋನ್ ಹಾಗೂ ಕಂಪ್ಯೂಟರ್ ಜೊತೆ ಕೆಲಸ ಮಾಡುವವರು ಅರ್ಧ ಗಂಟೆಗೊಮ್ಮೆ ಸುತ್ತಲೂ ತಿರುಗಿ ನೋಡಿ ಸಣ್ಣ ಬ್ರೇಕ್ ತೆಗೆದುಕೊಳ್ಳಿ. 
- ನಿಮ್ಮ ಮಲಗುವ ಭಂಗಿಯನ್ನೂ ಸರಿಯಾಗಿರಿಸಿಕೊಳ್ಳವುದು ಅಗತ್ಯ. ಯಾವಾಗಲೂ ಬದಿಗೆ ತಿರುಗಿ ಅಥವಾ ಬೆನ್ನಿನ ಮೇಲೆ ಮಲಗಿ. ಮೆದು ಹಾಸಿಗೆಯ ಮೇಲೆ ಹೊಟ್ಟೆಯ ಮೇಲೆ ಮಲಗಿದಿರಾದರೆ, ಹೊಟ್ಟೆಯು ಹಾಸಿಗೆಯೊಳಗೆ ಹೋಗುತ್ತದೆ. ಇದರಿಂದ ನಿಮ್ಮ ಕೆಳಬೆನ್ನಿಗೆ ಯಾವುದೇ ಸಪೋರ್ಟ್ ಸಿಗುವುದಿಲ್ಲ.
- ಬಟ್ಟೆಯಲ್ಲಿ ಬಿಸಿ ಉಪ್ಪನ್ನು ಅಥವಾ ಅಕ್ಕಿಯನ್ನು ಕಟ್ಟಿಕೊಂಡು ನೋವಿರುವ ಭಾಗಕ್ಕೆ ಶಾಖ ಕೊಡಿ. ಇಲ್ಲವೇ ಐಸ್ ಬ್ಯಾಗನ್ನು ನೋವಿರುವ ಭಾಗದಲ್ಲಿ 20 ನಿಮಿಷ ಇರಿಸಿ. 
- ನಿರಂತರವಾಗಿ ಕತ್ತು ಹಾಗೂ ಭುಜ ನೋವಿದ್ದರೆ ಆಗ ಮೂಳೆ ತಜ್ಞರನ್ನು ಭೇಟಿಯಾಗುವುದು ಒಳಿತು. ಎಂಆರ್‌ಐ, ಸಿಟಿ ಸ್ಕ್ಯಾನ್ ಇತ್ಯಾದಿ ಪರೀಕ್ಷೆಗಳ ಮೂಲಕ ಎಲ್ಲಿ ಏನು ಎಡವಟ್ಟಾಗಿದೆ ಎಂದು ಅವರು ಸರಿಯಾಗಿ ಗುರುತಿಸಬಲ್ಲರು. ಅದಕ್ಕೆ ಬೇಕಾದ ಚಿಕಿತ್ಸೆ ನೀಡಬಲ್ಲರು. 

ಆರೋಗ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ