ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತು ಕೃಷಿಯತ್ತ ಮುಖ ಮಾಡಿದ ಯುವಕ

life | Monday, May 14th, 2018
Shrilakshmi Shri
Highlights

ಕೈ ತುಂಬಾ ಹಣ ಸಂಪಾದನೆ ಮಾಡಲು ಬೆಂಗಳೂರು ಬೇಕು. ಆದರೆ ನೆಮ್ಮದಿಯಿಂದ ನಾವಂದುಕೊಂಡಂತೆ ಬದುಕಬೇಕು ಎಂದರೆ ಅದು ನಮ್ಮೂರಲ್ಲಿ ಮಾತ್ರ ಸಾಧ್ಯ’ ಎಂದುಕೊಂಡು ಅದರಂತೆಯೇ ಕೈ ತುಂಬಾ ಸಂಬಳ ತರುತ್ತಿದ್ದ ಕೆಲಸವನ್ನೇ ಬಿಟ್ಟು ತನ್ನೂರಾದ ಮೂಡುಬಿದಿರೆಯ ಮೂಡುಕೊಣಾಜೆಗೆ ಬಂದು ಎರಡು ಎಕರೆಯಿಂದ ಕೃಷಿ ಪ್ರಾರಂಭಿಸಿ ಈಗ ಇಪ್ಪತ್ತೈದು ಎಕರೆಯಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ ಶಂಕರ್ ಕೋಟ್ಯಾನ್.

ಬೆಂಗಳೂರು (ಮೇ. 14):  ಕೈ ತುಂಬಾ ಹಣ ಸಂಪಾದನೆ ಮಾಡಲು ಬೆಂಗಳೂರು ಬೇಕು. ಆದರೆ ನೆಮ್ಮದಿಯಿಂದ ನಾವಂದುಕೊಂಡಂತೆ ಬದುಕಬೇಕು ಎಂದರೆ ಅದು ನಮ್ಮೂರಲ್ಲಿ ಮಾತ್ರ ಸಾಧ್ಯ’ ಎಂದುಕೊಂಡು ಅದರಂತೆಯೇ ಕೈ ತುಂಬಾ ಸಂಬಳ ತರುತ್ತಿದ್ದ ಕೆಲಸವನ್ನೇ ಬಿಟ್ಟು ತನ್ನೂರಾದ ಮೂಡುಬಿದಿರೆಯ ಮೂಡುಕೊಣಾಜೆಗೆ ಬಂದು ಎರಡು ಎಕರೆಯಿಂದ ಕೃಷಿ ಪ್ರಾರಂಭಿಸಿ ಈಗ ಇಪ್ಪತ್ತೈದು ಎಕರೆಯಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ ಶಂಕರ್ ಕೋಟ್ಯಾನ್.

ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಎಂಜಿನಿಯರಿಂಗ್ ಮುಗಿಸಿದ ಶಂಕರ್ ನಂತರ ದೊಡ್ಡ ದೊಡ್ಡ ಐಟಿ ಕಂಪನಿಗಳಲ್ಲಿ ಸುಮಾರು 16 ವರ್ಷಗಳ ಕಾಲ ದುಡಿದವರು. ಸಾಕಷ್ಟು ಹಣ ಸಂಪಾದನೆಯಾಗುತ್ತಿದೆ. ಮುಂದೆಯೂ ಆಗುತ್ತದೆ. ಆದರೆ ನಾನಂದುಕೊಂಡಂತೆ ಸ್ವತಂತ್ರವಾಗಿ ಬದುಕು ನಡೆಸಲು  ಸಾಧ್ಯವಾಗುತ್ತಿಲ್ಲ. ಏನೇ ದುಡಿದರೂ ನೆಮ್ಮದಿ ಇಲ್ಲದ ಮೇಲೆ ಬದುಕು  ಸುಂದರವಾಗುವುದಿಲ್ಲ ಎಂದುಕೊಂಡು ಸ್ವಂತವಾಗಿ ಯಾವುದಾದರೂ ಬ್ಯುಸಿನೆಸ್ ಮಾಡುವ ಉದ್ದೇಶ ಹೊಂದಿದ್ದರು.

ಇದೇ ಸಮಯದಲ್ಲಿ ಜಪಾನ್ ಕೃಷಿ ವಿಜ್ಞಾನಿ ಮಸನೊಬು ಫುಕೋಕ, ಮಹಾರಾಷ್ಟ್ರದ ಸುಭಾಷ್ ಪಣೇಕರ್, ಕರ್ನಾಟಕದ ನಾರಾಯಣ ರೆಡ್ಡಿ ಅವರ ಪರಿಚಯವಾಗಿ ಆಧುನಿಕ ಕೃಷಿ ಪದ್ಧತಿಗಳನ್ನು ತಿಳಿದುಕೊಳ್ಳುತ್ತಾರೆ. ಇದಾದ ನಂತರವೇ ಅಂದರೆ, 2013 ರಲ್ಲಿ ಲಕ್ಷ ರುಪಾಯಿ ಸಂಬಳದ ಕೆಲಸಕ್ಕೆ ವಿದಾಯ ಹೇಳಿ ಕೃಷಿಯತ್ತ ಹೊರಳುತ್ತಾರೆ. ಮುಂದಿನದು ಸಾಧನೆಯ ಕತೆ.

ಎರಡು ಎಕರೆಯಿಂದ ಆರಂಭ
ಶಂಕರ್ ಕೃಷಿಗೆ ಪಾದಾರ್ಪಣೆ ಮಾಡಿದ್ದು ಎರಡು ಎಕರೆ ಕೃಷಿ ಭೂಮಿಯೊಂದಿಗೆ. ಪ್ರಾರಂಭದಿಂದಲೇ ಹೈನುಗಾರಿಕೆಯತ್ತ ಚಿತ್ತ ಹರಿಸಿ ಇಂದು ಬರೊಬ್ಬರಿ  ನಲವತ್ಮೂರು ಹಸುಗಳನ್ನು ಹೊಂದಿದ್ದಾರೆ. ಅಲ್ಲದೇ ಇವರ ಮತ್ತೊಂದು ಸಾಧನೆ  ಎಂದರೆ ಪ್ರಸ್ತುತ ಇವರು ಕೃಷಿ ಮಾಡುತ್ತಿರುವುದು ಇಪ್ಪತ್ತೈದು ಎಕರೆ ಪ್ರದೇಶದಲ್ಲಿ. ಎರಡು ಎಕರೆಯಿಂದ ಪ್ರಾಯೋಗಿಕವಾಗಿ ಕೃಷಿ ಪ್ರಾರಂಭಿಸಿ ಇದರಲ್ಲಿ ನೆಮ್ಮದಿ ಇದೆ ಎಂದು ಕಂಡುಕೊಂಡು ಬಂದ ಲಾಭ ಮತ್ತು ತಮ್ಮ ಬಳಿ ಇದ್ದ ಹಣದಿಂದ ಅಕ್ಕ ಪಕ್ಕದಲ್ಲಿ ಕೃಷಿ ಭೂಮಿಯನ್ನು ಕೊಂಡುಕೊಂಡು ತಮ್ಮ ಕ್ಷೇತ್ರ ವಿಸ್ತಾರ  ಮಾಡಿಕೊಂಡು ಸಾವಯವ ಕೃಷಿ ಮಾಡುತ್ತಾ ಬಂದಿದ್ದಾರೆ.

ಸಿಟಿಯ ಬೋರಿಂಗ್ ಲೈಫ್‌ನಿಂದ ಹೊರಕ್ಕೆ
‘ನನಗೆ ಮೊದಲಿನಿಂದಲೂ ಕೃಷಿಯಲ್ಲಿ ಒಲವಿತ್ತು. ಆದರೆ ಭೂಮಿ ತೆಗೆದುಕೊಳ್ಳಲು ಹಣ ಮತ್ತು ಸಮಯ ಎರಡೂ ಬೇಕಿತ್ತು. ಅಂತಹ ಸಮಯಕ್ಕಾಗಿ ಕಾಯುತ್ತಿದ್ದೆ. ಸಿಟಿ ಲೈಫ್‌ನಲ್ಲಿ ತುಂಬಾ ತಲೆನೋವುಗಳಿವೆ. ಬೆಂಗಳೂರಲ್ಲಿ ದಿನಕ್ಕೆ ನಾಲ್ಕು ತಾಸು ಟ್ರಾಫಿಕ್‌ನಲ್ಲಿಯೇ ಕಳೆಯುವ ಕಷ್ಟವನ್ನು ನನಗೆ ಸಹಿಸಿಕೊಳ್ಳಲೇ ಆಗುತ್ತಿರಲಿಲ್ಲ. ನನ್ನ ಪ್ರಕಾರ ಯಾರಿಗೇ ಆಗಲಿ ಮೊದಲ ಐದಾರು ವರ್ಷ ನಗರ ಜೀವನ ಖುಷಿ ಕೊಡುತ್ತದೆ. ಆದರೆ ಕಾರ್ಪೋರೇಟ್ ವ್ಯವಸ್ಥೆಯಲ್ಲಿ ಒಂದು ಹಂತ ದಾಟಿದ ನಂತರ ಏನೂ ಉಳಿಯುವುದಿಲ್ಲ. ಎಲ್ಲವೂ ಬೇಸರ ತರಿಸುತ್ತದೆ. ಇದರ ನಡುವಲ್ಲಿ  ಸ್ವಂತವಾಗಿ ಏನಾದರೂ ಮಾಡುತ್ತಲೇ ಇರಬೇಕು. ಪ್ರವೃತ್ತಿಯನ್ನು ಹೊಂದಿರಬೇಕು. ಆದರೆ ನನಗೆ ಬೇರೆ ರೀತಿಯ ಪ್ರವೃತ್ತಿಗಳು ಕಡಿಮೆ ಇದ್ದದ್ದರಿಂದ ಸಾಕಷ್ಟು ಪೂರ್ವ ತಯಾರಿಗಳನ್ನು ಮಾಡಿಕೊಂಡು ಕೃಷಿಯತ್ತ ಬಂದೆ. ಇಲ್ಲಿ ನನಗೆ ಜೀವನದ ಸಾರ್ಥಕತೆ ಕಂಡಿದೆ ಮತ್ತು ಕಾಣುತ್ತಿದೆ’ ಎಂದು ಸಂತಸ ವ್ಯಕ್ತಪಡಿಸುವ ಶಂಕರ್ ಎಲ್ಲರೂ ಹಳ್ಳಿಯಿಂದ ನಗರಗಳತ್ತ ಮುಖ ಮಾಡುವ ಹೊತ್ತಲ್ಲಿ ವಿರುದ್ಧವಾಗಿ ಸಾಗಿ ಯಶದ ಹಾದಿ ಹಿಡಿದಿದ್ದಾರೆ. ಇದು ಇಂದಿನ ಯುವಕರಿಗೆ ಖಂಡಿತ ಮಾದರಿ.

ಕೃಷಿಯತ್ತ ಬನ್ನಿ

‘ಒಳ್ಳೆಯ ಆರೋಗ್ಯ, ನೆಮ್ಮದಿಯ ಬದುಕು ಬೇಕು ಎನ್ನುವವರು ಕೃಷಿಗೆ ಬರಬಹುದು. ಇಲ್ಲಿ ಯಾವುದೇ ತಲೆನೋವುಗಳಿಲ್ಲ. ಆದರೆ ಒಂದು ನೆನಪಿನಲ್ಲಿರಲಿ ಇಲ್ಲಿ ಶೀಘ್ರ ಫಲ ದೊರೆಯುವುದಿಲ್ಲ. ತಾಳ್ಮೆಯಿಂದ ಕೆಲಸ ಮಾಡಿದರೆ ಮಾತ್ರ ಫಲ ದೊರೆಯುವುದು’ ಎನ್ನುವ ಶಂಕರ್ ತಮ್ಮ ತೋಟದಲ್ಲಿಯೇ ಸ್ಥಳೀಯ ಆಸಕ್ತ ಮಕ್ಕಳು, ಪ್ರಗತಿಪರ ಕೃಷಿಕರಿಗೆ ನಿಯಮಿತವಾಗಿ ಕೃಷಿ ತರಬೇತಿ ನೀಡುತ್ತಾ ಕೃಷಿಯತ್ತ ಯುವಕರನ್ನು ಸೆಳೆಯುತ್ತಾ ಬಂದಿದ್ದಾರೆ.
ನನ್ನ ಅನ್ನವನ್ನು ನಾನೇ ಬೆಳೆಯಬೇಕು

ನನ್ನ ಅನ್ನವನ್ನು ನಾನೇ ಬೆಳೆಯಬೇಕು

‘ನನ್ನ ಆಹಾರವನ್ನು ನಾನೇ ರಾಸಾಯನಿಕ ರಹಿತವಾಗಿ ತಯಾರು ಮಾಡಿಕೊಳ್ಳಬೇಕು ಎನ್ನುವ ಆಸೆ ನನ್ನದು. ಎರಡು ಎಕರೆಯಿಂದ ಪ್ರಾರಂಭ ಮಾಡಿ ಇಂದು ಇಪ್ಪತ್ತೈದು ಎಕರೆ ಕೃಷಿ ಪ್ರದೇಶ, 43 ಹಸುಗಳಿಂದ ದಿನಕ್ಕೆ ೨೫೦ ಲೀಟರ್ ಹಾಲು, ರಬ್ಬರ್ ತೋಟ, ಅಡಿಕೆ ಸೇರಿದಂತೆ ಅಗತ್ಯವಾದ ಎಲ್ಲವನ್ನೂ ನಾನೇ ಬೆಳೆದುಕೊಳ್ಳುತ್ತಿದ್ದೇನೆ’ ಎನ್ನುವ ಶಂಕರ್ ಸ್ಥಳೀಯರ ನೆರವು ಪಡೆದುಕೊಂಡು ಮೂರು ಕಿಂಡಿ ಅಣೆಕಟ್ಟುಗಳ ನಿರ್ಮಾಣ ಮಾಡಿದ್ದಾರೆ. ಅಲ್ಲದೇ ತಮ್ಮ ಜಮೀನಿನಲ್ಲಿಯೇ ಎರಡು ಎಕರೆಯಲ್ಲಿ ಕಾಡು, ಎರಡು ಕೆರೆಗಳ ನಿರ್ಮಾಣ ಮಾಡಿ ಬೇಸಿಗೆಯಲ್ಲಿಯೂ ಕೃಷಿಗೆ ನೀರಿ  ತೊಂದರೆಯಾಗದಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಶಂಕರ್ ಅವರು ಸಾಫ್ಟ್‌ವೇರ್ ಉದ್ಯೋಗಿಯಾಗಿ ಸಂಪಾದನೆ ಮಾಡುತ್ತಿದ್ದ ಹಣಕ್ಕೆ ಹೋಲಿಕೆ ಮಾಡಿದರೆ ಆದಾಯದ ಪ್ರಮಾಣ ಕಡಿಮೆಯಾಗಿದ್ದರೂ ಸಹಿತ ಅವರಿಗೆ ನೆಮ್ಮದಿ ಇದೆ. ನಾಳೆ ಹಾಕಿದ ಎಲ್ಲಾ ಪರಿಶ್ರಮಕ್ಕೂ ತಕ್ಕ ಪ್ರತಿಫಲ ದೊರೆತೇ ದೊರೆಯುತ್ತದೆ ಎನ್ನುವ ವಿಶ್ವಾಸ ಹೊಂದಿದ್ದಾರೆ. ಇಲ್ಲಿ ನನಗೆ ಯಾರೂ ಬಾಸ್ ಗಳಿಲ್ಲ. ನಾನು ಅಂದುಕೊಂಡಂತೆ ಬದುಕುತ್ತಿದ್ದೇನೆ. ಇದೇ ನನಗೆ ಹೆಚ್ಚು ತೃಪ್ತಿ ನೀಡುತ್ತಿದೆ ಎನ್ನುವ ಶಂಕರ್ ಅವರೊಂದಿಗೆ ಸಂವಹನಕ್ಕಾಗಿ shankar.kotian@gmail.com ಸಂಪರ್ಕಿಸಿ. 

Comments 0
Add Comment

  Related Posts

  Mangaluru Rowdies destroyed Bar

  video | Thursday, April 12th, 2018

  MLA Bava Defends performing Pooja in Temple

  video | Saturday, March 31st, 2018

  Sangh Parviar Master Plan To Defeat UT Khader

  video | Saturday, March 31st, 2018

  MLA Mohidin Bava Prays To Hindu Gods

  video | Saturday, March 31st, 2018

  Mangaluru Rowdies destroyed Bar

  video | Thursday, April 12th, 2018
  Shrilakshmi Shri