Asianet Suvarna News Asianet Suvarna News

ದೇಹದ ಸರ್ವಾಂಗ ಕಾಯಿಲೆಗಳಿಗೆ ನೇಚರ್ ಉಪಚಾರ

ಚಳಿಗಾಲದಲ್ಲಿ ಜ್ವರ- ಶೀತದಂಥ ಸಣ್ಣಪುಟ್ಟರೋಗಗಳು ಕಾಮನ್‌. ಈ ಕಾಯಿಲೆಗಳನ್ನು ಪ್ರಕೃತಿ ಚಿಕಿತ್ಸೆಯ ಮೂಲಕ ಸುಲಭವಾಗಿ ಪರಿಹರಿಸಿಕೊಳ್ಳಬಹುದು. ಹಾಗಾದರೆ ಯಾವ ರೋಗಕ್ಕೆ, ಯಾವ ಚಿಕಿತ್ಸೆ?

Health Tips Major Health issues

ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಎಷ್ಟುಕಾಳಜಿ ವಹಿಸಿದರೂ ಸಾಲದು. ಚರ್ಮದ ತೇವಾಂಶವು ಕಡಿಮೆಯಾಗಿ ಮೊಡವೆಗಳು, ಕಪ್ಪುಕಲೆಗಳು, ಒಣಗಿದ ಚರ್ಮ, ಮೈ ನವೆ, ಕೂದಲು ಉದುರುವಿಕೆ, ತಲೆಹೊಟ್ಟು, ಕೆಮ್ಮು, ಶೀತ, ಜ್ವರ, ಅಲರ್ಜಿ, ತಲೆ ನೋವು, ಮೈಗ್ರೇನ್‌, ಅಸ್ತಮಾ- ಈ ಎಲ್ಲ ಸಮಸ್ಯೆಗಳು ಚಳಿಗಾಲದಲ್ಲಿ ಕಾಮನ್‌. ಇದಕ್ಕೆಲ್ಲ ಪರಿಹಾರ ನಮ್ಮ ಜೀವನ ಕ್ರಮವನ್ನು ಅಚ್ಚುಕಟ್ಟಾಗಿ ಮಾಡಿಕೊಳ್ಳುವುದು. ಅದೂ ಪ್ರಕೃತಿ ಚಿಕಿತ್ಸೆ ಅಳವಡಿಸಿಕೊಳ್ಳುವ ಮೂಲಕ.

ಪ್ರಕೃತಿ ಚಿಕಿತ್ಸೆಯಲ್ಲಿ ರೋಗನಿರೋಧಕ ಶಕ್ತಿಯನ್ನು ಮೈಗೂಡಿಸಿಕೊಳ್ಳಲು ಹಲವು ದಾರಿಗಳಿವೆ. ಪ್ರಕೃತಿ ಚಿಕಿತ್ಸೆ, ನಿಸರ್ಗ ಚಿಕಿತ್ಸೆ, ನಿಸರ್ಗೋಪಚಾರ, ನ್ಯಾಚುರೋಪತಿ, ನೇಚರ್‌ಕ್ಯೂರ್‌ ಹೀಗೆ ಹಲವು ಹೆಸರಿನಿಂದ ಕರೆಯಲ್ಪಡುವ ಈ ಚಿಕಿತ್ಸೆಯು ಒಂದು ವೈಜ್ಞಾನಿಕ ಚಿಕಿತ್ಸಾ ಪದ್ಧತಿ. ಇದು ಕೇವಲ ರೋಗವನ್ನು ಮಾತ್ರ ದೂರ ಮಾಡುವುದಲ್ಲದೆ, ಮನುಷ್ಯನ ಜೀವನ ಶೈಲಿಯನ್ನು ಸರಿಮಾಡಿ, ದೇಹದ ರೋಗ ನಿರೋಧಕ ಶಕ್ತಿ ಹಾಗೂ ಚೈತನ್ಯ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹದ ವಿಸರ್ಜನಾಂಗಗಳನ್ನು ಉತ್ತೇಜನಗೊಳಿಸಿ ದೇಹದ ಕಶ್ಮಲಗಳನ್ನು ಹೊರಹಾಕಿ ಮಾನವನ ಆರೋಗ್ಯವನ್ನು ನೈಸರ್ಗಿಕವಾಗಿ ವೃದ್ಧಿಗೊಳಿಸುತ್ತದೆ. ಚಳಿಗಾಲದಲ್ಲಿ ಬರುವ 7 ಸಾಮಾನ್ಯ ರೋಗಗಳಿಗೆ ಇಲ್ಲಿ ಸರಳ ಪರಿಹಾರಗಳಿವೆ.

1)ಶೀತ,ಕೆಮ್ಮು ಬಂದಾಗ
-ಕಾದಾರಿದ ನೀರು ಸೇವನೆ
-ಎಲ್ಲ ಕೃತಕ ಆಹಾರ ಪದಾರ್ಥಗಳು, ಕರಿದ ತಿಂಡಿಗಳು, ಐಸ್‌ ಕ್ರೀಂ, ಬೇಕರಿ ತಿಂಡಿಗಳನ್ನು ವರ್ಜಿಸುವುದು.
-ಮುಖಕ್ಕೆ ಹಬೆಯನ್ನು ದಿನಕ್ಕೆ 2 ರಿಂದ 3 ಬಾರಿ 10 ನಿಮಿಷಗಳ ಅವಧಿಗೆ ತೆಗೆದುಕೊಳ್ಳುವುದು.
-ಬೆಚ್ಚನೆಯ ನೀರಿನ ಕುತ್ತಿಗೆ ಪಟ್ಟಿಯು ಬಹಳ ಉಪಯುಕ್ತ.
-ಕೆಮ್ಮು ಹೆಚ್ಚಿದ್ದ ಸಮಯದಲ್ಲಿ ಬೆಚ್ಚನೆಯ ಎದೆಪಟ್ಟಿಯು ತುಂಬಾ ಸೂಕ್ತ.
-ಕಷಾಯದ ಸೇವನೆಯು ಉಪಯುಕ್ತ. ಉದಾ: ತುಳಸಿ ಕಷಾಯ, ಶುಂಠಿ ಕಷಾಯ ಇತ್ಯಾದಿ.
-ಲವಂಗ, ತುಳಸಿ ಬಾಯಿಯಲ್ಲಿಟ್ಟು ರಸವನ್ನು ನುಂಗುತ್ತಿರುವುದು.


2. ಜ್ವರಕ್ಕೇನು ಮದ್ದು?
-ಎಲ್ಲ ಕೃತಕ ಆಹಾರ ಪದಾರ್ಥಗಳು, ಎಣ್ಣೆಯಲ್ಲಿ ಕರಿದ ತಿಂಡಿಗಳು, ಬೇಕರಿ ತಿಂಡಿಗಳನ್ನು ವರ್ಜಿಸುವುದು.
-ಹೆಚ್ಚು ನೀರನ್ನು ಕುಡಿಯುವುದು.
-ತಣ್ಣೀರಿನ ಹಣೆ ಪಟ್ಟಿಯನ್ನು ಹಾಕುವುದು.
-ಎನಿಮಾವನ್ನು ತೆಗೆದುಕೊಳ್ಳುವುದು.
-ತಣ್ಣೀರಿನ ಒದ್ದೆಬಟ್ಟೆಯಿಂದ ಮೈಯನ್ನು ಒರೆಸುವುದು.
-ಸಂಪೂರ್ಣವಾಗಿ ವಿಶ್ರಾಂತಿ.
-ರಸಾಹಾರಗಳನ್ನು ತೆಗೆದುಕೊಳ್ಳುವುದು, ಮುಖ್ಯವಾಗಿ ಹಣ್ಣಿನ ರಸಗಳು, ಎಳನೀರು, ಗಂಜಿ, ತರಕಾರಿಗಳು.


3. ತಲೆನೋವು ಬಂದರೆ?
-ಎಲ್ಲ ಕೃತಕ ಆಹಾರ ಪದಾರ್ಥಗಳು, ಎಣ್ಣೆಯಲ್ಲಿ ಕರಿದ ತಿಂಡಿಗಳು, ಬೇಕರಿ ತಿಂಡಿಗಳನ್ನು ವರ್ಜಿಸುವುದು.
-ವಾಂತಿಯ ಅನುಭವವಿದ್ದಲ್ಲಿ ನಿಧಾನವಾಗಿ ಸ್ವಲ್ಪ-ಸ್ವಲ್ಪ ಮಂಜುಗಡ್ಡೆಯ ನೀರನ್ನು ಕುಡಿಯುವುದು.
-ನೋವಿನ ಸಮಯದಲ್ಲಿ ಮಂಜುಗಡ್ಡೆಯಿಂದ ತಲೆಗೆ ಮರ್ಧನವನ್ನು ಮಾಡುವುದು.
-ನೋವಿನ ಸಮಯದಲ್ಲಿ ಬೆಚ್ಚನೆಯ ನೀರಿನ ಪಾದಸ್ನಾನ.
-ವಾರಕ್ಕೊಮ್ಮೆ ಎನಿಮಾವನ್ನು ತೆಗೆದುಕೊಳ್ಳುವುದು.
-ಮಣ್ಣಿನ ಪಟ್ಟಿಯನ್ನು ಹೊಟ್ಟೆಯ ಮತ್ತು ಕಣ್ಣಿನ ಭಾಗಕ್ಕೆ ತೆಗೆದುಕೊಳ್ಳುವುದು.
-ಹೆಚ್ಚು ನೀರು ಸೇವನೆ.
-ಸರಿಯಾದ ಸಮಯಕ್ಕೆ ಆಹಾರವನ್ನು ತೆಗೆದುಕೊಳ್ಳುವುದು.
-ದಿನಕ್ಕೊಂದು ಬಾರಿ ಪ್ರಾರ್ಥನೆ.


4. ಅಸ್ತಮಾಕ್ಕೇನು ಚಿಕಿತ್ಸೆ?
-ಬೆಚ್ಚನೆಯ ನೀರಿನ ಎದೆ ಪಟ್ಟಿದಿನಕ್ಕೆರಡು ಬಾರಿ.
-ಕಾದಾರಿದ ಉಗುರು ಬೆಚ್ಚನೆಯ ನೀರು ಸೇವನೆ.
-ಶುಂಠಿ ಕಷಾಯ/ ತುಳಸಿ ಕಷಾಯವನ್ನು ದಿನಕ್ಕೊಂದು ಬಾರಿ ತೆಗೆದುಕೊಳ್ಳುವುದು.
-ಬಿಸಿನೀರಿನ ಸ್ನಾನ.
-ಬೆನ್ನಿಗೆ ಎಣ್ಣೆಯಿಂದ ಮಾಲೀಶ್‌ ಮಾಡಿ ಬೆಚ್ಚನೆಯ ನೀರಿನ ಶಾಖವನ್ನು ಕೊಡುವುದು.
-ಪ್ರತಿ ದಿನ ರಾತ್ರಿ ಮುಖಕ್ಕೆ ಹಬೆಯನ್ನು ತೆಗೆದುಕೊಳ್ಳುವುದು.


5. ಮೊಡವೆ, ಕಾಂತಿಹೀನತೆಗೆ?
-ಮುಖಕ್ಕೆ ಹಬೆ (5 ರಿಂದ 10 ನಿಮಿಷÜವರೆಗೆ) ದಿನಕ್ಕೆರಡು ಬಾರಿ ತೆಗೆದುಕೊಳ್ಳುವುದು.
-ಹೆಚ್ಚು ನೀರು ಸೇವನೆ.
-ದಿನಕ್ಕೆ 4 ರಿಂದ 6 ಬಾರಿ ಸ್ವಚ್ಛ ನೀರಿನಿಂದ ಮುಖ ತೊಳೆಯುವುದು.
-ಉಗಿ ಸ್ನಾನವನ್ನು ವಾರಕ್ಕೆರಡು ದಿನ ಮಾಡುವುದು.
-ದಿನಕ್ಕೊಮ್ಮೆ ಸೌತೆಕಾಯಿಯ ಪ್ಯಾಕ್‌ ಅಥವಾ ಮಣ್ಣಿನ ಲೇಪನವನ್ನು ಮುಖಕ್ಕೆ ಮಾಡುವುದು.
-ವಾರಕ್ಕೊಮ್ಮೆ ಅರಿಶಿನ- ಗಂಜಿ ಸ್ನಾನ.
-ಲೋಳೆಸರದ ರಸವನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ಸ್ವಚ್ಛ ನೀರಿನಿಂದ ತೊಳೆಯುವುದು.


6. ಕೂದಲುದುರುವಿಕೆ, ತಲೆ ಹೊಟ್ಟಿಗೆ?
-ತಲೆಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಕೆಲವು ಗಂಟೆಗಳ ನಂತರ ಸ್ವಚ್ಛವಾದ ಉಗುರು ಬೆಚ್ಚನೆಯ ನೀರಿನಿಂದ ತಲೆ ಸ್ನಾನ.
-ತಲೆಸ್ನಾನಕ್ಕೆ ಶಾಂಪೂವಿನ ಬದಲಾಗಿ ಸೀಗೆಕಾಯಿ ಪುಡಿಯನ್ನು ಬಳಸುವುದು.
-ಆಗಾಗ ತಲೆಗೆ ಎಣ್ಣೆಯನ್ನು ಹಾಕಿ ಮರ್ಧನ.
-ಶುಭ್ರವಾದ ಬಾಚಣಿಕೆಯನ್ನು ಮಾತ್ರ ಬಳಸಿ ತಲೆ ಕೂದಲನ್ನು ಬಾಚುವುದು.
-ಕೊಬ್ಬರಿ ಎಣ್ಣೆಗೆ ಮೆಂತ್ಯೆ ಕಾಳು ಮತ್ತು ದಾಸವಾಳ ಗಿಡದ ಚಿಗುರೆಲೆಗಳನ್ನು ಸೇರಿಸಿ ಕುದಿಸಿ ಆರಿದ ನಂತರ ತಲೆಗೆ ಹಚ್ಚುವುದು.
-ಹೆಚ್ಚಾಗಿ ನೀರು, ರಸಾಹಾರ ಸೇವನೆ.
-ವಾರಕ್ಕೊಂದು ದಿನ ಹಣ್ಣಿನ ಉಪವಾಸ ಮಾಡುವುದು.


7. ಮೈ ನವೆ, ತುರಿಕೆಯಾದರೆ?
-ಕೊಬ್ಬರಿ ಎಣ್ಣೆಯನ್ನು ಅಥವಾ ಬೇವಿನೆಣ್ಣೆಯನ್ನು ತುರಿಕೆಯ ಜಾಗಕ್ಕೆ ಹಚ್ಚುವುದು.
-ಬೆಚ್ಚನೆಯ ನೀರಿಗೆ ಉಪ್ಪನ್ನು ಸೇರಿಸಿ ಸ್ನಾನ.
-ನಡಿಗೆಯ ಅಭ್ಯಾಸ
-ಎ.ಸಿ.ಯಿಂದ ದೂರವಿರುವುದು.
-ಮೈ ಬೆವರುವ ಕೆಲಸಗಳನ್ನು ಮಾಡುವುದು.
-ವಾರಕ್ಕೊಮ್ಮೆ ಮಣ್ಣಿನ ಸ್ನಾನ ಅಥವಾ ಅರಿಶಿನ ಗಂಜಿ ಸ್ನಾನ.
-ಸಾಧ್ಯವಾದರೆ ಆಗಾಗ್ಗೆ ಎಣ್ಣೆಯ ಮರ್ಧನ ಮತ್ತು ಉಗಿಸ್ನಾನ.
-ಪ್ರತಿದಿನ ಸ್ವಚ್ಛವಾದ ಉಗುರು ಬೆಚ್ಚನೆಯ ನೀರಿನಿಂದ ಸ್ನಾನ.
-ಹೆಚ್ಚಾಗಿ ನೀರು, ರಸಾಹಾರ ಸೇವನೆ.
-ವಾರಕ್ಕೊಂದು ದಿನ ಹಣ್ಣಿನ ಉಪವಾಸ.

-ಡಾ. ಗಂಗಾಧರ ವರ್ಮಾ ಬಿ ಆರ್‌
(ಕೃಪೆ :ಕನ್ನಡ ಪ್ರಭ)

Follow Us:
Download App:
  • android
  • ios