ವಿಜಯಪುರ[ಜು.24]: ಭೀಮಾ ತೀರದ ಧರ್ಮರಾಜ್‌ ಚಡಚಣ ಹಾಗೂ ಗಂಗಾಧರ ಚಡಚಣ ಸಹೋದರರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಹಾದೇವ ಸಾಹುಕಾರ ಭೈರಗೊಂಡ ಜನ್ಮದಿನ ಸಮಾರಂಭದಲ್ಲಿ ಹಿಂದಿನ ಚಡಚಣ ಸಿಪಿಐ ಎಂ.ಬಿ.ಅಸೋದೆ, ಪಿಎಸ್‌ಐ ಗೋಪಾಲ ಹಳ್ಳೂರ ಭಾಗಿಯಾಗಿ ಸಂಭ್ರಮಪಟ್ಟವಿಡಿಯೋ ಈಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದೆ.

ಚಡಚಣ ಸಹೋದರರ ಹತ್ಯೆ ಪ್ರಕರಣದಲ್ಲಿ ಸಿಪಿಐ ಎಂ.ಬಿ.ಅಸೋದೆ, ಪಿಎಸ್‌ಐ ಗೋಪಾಲ ಹಳ್ಳೂರ ಆರೋಪಿಯಾಗಿದ್ದರು. ಈ ಕಾರಣಕ್ಕಾಗಿ ಇಬ್ಬರು ಪೊಲೀಸ್‌ ಅಧಿಕಾರಿಗಳನ್ನು ಬಂಧಿಸಲಾಗಿತ್ತು. ನಂತರ ಇಬ್ಬರೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿ ಮಹಾದೇವ ಸಾಹುಕಾರ ಭೈರಗೊಂಡ ಕೂಡ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರ ಬಂದಿದ್ದಾನೆ.

ಸೋಮವಾರ ಅಷ್ಟೇ ಮಹಾದೇವ ಸಾಹುಕಾರ ಭೈರಗೊಂಡ ನೂತನ ಚಡಚಣ ತಾಲೂಕಿನ ಕೆರೂರ ಗ್ರಾಮದಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಈ ಸಮಾರಂಭದಲ್ಲಿ ಅಮಾನತುಗೊಂಡಿರುವ ಇಬ್ಬರು ಪೊಲೀಸ್‌ ಅಧಿಕಾರಿಗಳು ಕೂಡ ಭಾಗಿಯಾಗಿರುವುದು ವೈರಲ್‌ ಆಗಿರುವ ವಿಡಿಯೋದಲ್ಲಿದೆ. ಇದು ಸಾಮಾಜಿಕ ಜಾಲತಾಣ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಲ್ಲಿ ವೈರಲ್‌ ಆಗಿದೆ. ಕಾರ್ಯಕ್ರಮದಲ್ಲಿ ದೊಡ್ಡ ಹೂವಿನ ಹಾರ ಹಾಕಿದ್ದಲ್ಲದೆ ಪುಷ್ಪವೃಷ್ಟಿಮಾಡಿ ಮಹಾದೇವ ಸಾಹುಕಾರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.