ಬೆಂಗಳೂರು [ಫೆ.09]:  ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ನೂತನ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಶನಿವಾರ ಕನಕಪುರ ರಸ್ತೆಯ ಆರ್ಟ್‌ ಆಫ್‌ ಲಿವಿಂಗ್‌ ಆಶ್ರಮಕ್ಕೆ ಭೇಟಿ ನೀಡಿ ರವಿಶಂಕರ್‌ ಗುರೂಜಿ ಅವರ ಆರ್ಶೀವಾದ ಪಡೆದರು.

ಈ ವೇಳೆ ವಿಷೇಶ ಪೆನ್‌ ನೀಡಿದ ರವಿಶಂಕರ್‌ ಗುರೂಜಿ, ಇದೇ ರೀತಿಯ ಪೆನ್‌ವೊಂದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೂ ನೀಡಿದ್ದೆ. ಅದನ್ನು ಅವರು ಇಂದಿಗೂ ತಮ್ಮಲ್ಲಿರಿಸಿಕೊಂಡಿದ್ದಾರೆ. ಇದೀಗ ನಿಮಗೆ ನೀಡುತ್ತಿದ್ದೇನೆ. ನಿಮ್ಮ ಬಳಿ ಇಟ್ಟುಕೊಂಡರೆ ಒಳ್ಳೆಯದಾಗಲಿದೆ ಎಂದು ಹೇಳಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್‌, ಎಲ್ಲ ನೂತನ ಸಚಿವರಿಗೂ ಸೋಮವಾರ ಖಾತೆ ಹಂಚುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ್ದಾರೆ. ಇಂತಹದ್ದೇ ಖಾತೆ ನೀಡಬೇಕು ಎಂದು ನಾವು ಮುಖ್ಯಮಂತ್ರಿಗಳಲ್ಲಿ ಒತ್ತಡ ಹೇರುವುದಿಲ್ಲ. ಆದರೆ, ಆಸಕ್ತಿಯ ಕ್ಷೇತ್ರಗಳ ಖಾತೆ ನೀಡುವಂತೆ ಕೇಳಿದ್ದೇವೆ. ಬೆಂಗಳೂರು ಅಭಿವೃದ್ಧಿ ಮಾಡುವುದು ನನಗೆ ಆಸಕ್ತಿಯ ಕ್ಷೇತ್ರವಾಗಿದೆ. ಹೀಗಾಗಿ, ಅದೇ ಖಾತೆ ನೀಡುವಂತೆ ಕೇಳಿದ್ದೇನೆ ಎಂದರು.

ಇಂತಹದ್ದೇ ಖಾತೆ ನೀಡಬೇಕು ಎನ್ನುವುದು ಮುಖ್ಯವಲ್ಲ. ಆ ಖಾತೆಯಲ್ಲಿ ಯಾವ ರೀತಿಯ ಕೆಲಸ ಮಾಡುತ್ತೇವೆ ಎನ್ನುವುದು ಮುಖ್ಯವಾಗಲಿದೆ ಎಂದೂ ಅವರು ತಿಳಿಸಿದರು.