ಶಿರಸಿ ಮಾರಿಕಾಂಬೆಯ ಅದ್ಧೂರಿ ಜಾತ್ರೆ: ಲಡ್ಡುವಿಗೆ ಬಹು ಬೇಡಿಕೆ
ಪ್ರಸಿದ್ಧ ಶಿರಸಿಯ ಮಾರಿಕಾಂಬ ಜಾತ್ರೆಯು ಆರಂಭವಾಗಿದೆ. ಸಾವಿರಾರು ಭಕ್ತ ವೃಂದ ಆಗಮಿಸಿ ದೇವಿಯ ದರ್ಶನ ಪಡೆದುಕೊಳ್ಳುತ್ತಿದ್ದಾರೆ.
ಶಿರಸಿ [ಮಾ.06]: ಶಿರಸಿಯ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಆಚರಣೆಯಾಗುತ್ತಿದ್ದು ರಾಜ್ಯದ ಹಲವೆಡೆಗಳಿಂದ ಆಗಮಿಸುವ ಭಕ್ತಾಧಿಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಏರಿಕೆಯಾಗತೊಡಗಿದೆ.
ಗುರುವಾರ ಮಾರಿಕಾಂಬಾ ದೇವಿಗೆ ಭಕ್ತಾಧಿಗಳು ಸಲ್ಲಿಸುವ ಸೇವೆಗಳಿಗೆ ಅವಕಾಶ ಮಾಡಿಕೊಡಲಾಗಿದ್ದು, ಉಡಿ ಸೇವೆ, ಹಣ್ಣು- ಕಾಯಿ, ಕಣ ಸೇವೆಗೆ ಭಕ್ತಾಧಿಗಳು ಸಹಸ್ರಾರು ಸಂಖ್ಯೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಗಂಟೆಗಳ ಕಾಲ ದೇವಿಯ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇನ್ನೊಂದೆಡೆ ಜಾತ್ರಾ ಮಹೋತ್ಸವದ ವಿಧಿ ವಿಧಾನಗಳು ಸಾಂಪ್ರದಾಯಿಕ ಹಾಗೂ ಪಾರಂಪರಿಕ ಪದ್ಧತಿಗಳಂತೆ ನಡೆಯುತ್ತಿದೆ. ಗದ್ದುಗೆಯ ಮುಂಭಾಗದಲ್ಲಿ ಹಾಕಲಾದ ಆಸಾದಿ ರಂಗಮಂಟಪದಲ್ಲಿ ನಡೆಯುತ್ತಿರುವ ಧಾರ್ಮಿಕ ವಿಧಿವಿಧಾನಗಳು ಭಕ್ತಾಧಿಗಳ ಆಕರ್ಷಣೆಗೆ ಕಾರಣವಾಗಿದೆ.
ಶತಮಾನದಾಚೆಯ ರಾಣಿಗೋಲಿದು..!
ಕೇಳಿದ ವರವನ್ನು ನೀಡುವ ಅಭಯ ಹಸ್ತೆ ಸರ್ವಮಂಗಳೆಯ ಗದ್ದುಗೆಯ ಮುಂಭಾಗ ವಿಶಾಲವಾದ ಖಾಲಿ ಸ್ಥಳದಲ್ಲಿ ಮೇಟಿ ದೀಪ, ಹರಕೆ ಕೋಳಿ, ಹಾರುಗೋಳಿ, ರಾಣಿಗೋಲಿನ ಸೇವೆಗಳನ್ನು ಆಸಾದಿ ಕುಟುಂಬದವರು ಭಕ್ತಾಧಿಗಳಿಗೆ ನೀಡುತ್ತಿದ್ದಾರೆ. ದೇವಿಯ ಎದುರು ಭಾಗದ ರಂಗಮಂಟಪದಲ್ಲಿ ನಿಂತು ಶಿರಭಾಗಿ ಆಶೀರ್ವಾದ ಕೋರಿದರೆ ತಾಯಿ ಮಾರಿಕಾಂಬೆ ಅಭಯ ನೀಡದೆ ಇರಲಾರಳು ಎಂಬುದು ಭಕ್ತರ ನಂಬಿಕೆಯಾಗಿದೆ.
ಶಿರಸಿ ಜಾತ್ರೆಗೆ ಹೋಗೋಣ ಬಾ...ಜನಸಾಗರ ಅಂದ್ರೆ ಇದೆ ತಾನೆ!...
ಆಸಾದಿ ಕುಟುಂಬದ ಪ್ರಮುಖರು ಭಕ್ತರ ಕೋರಿಕೆಯನ್ನು ದೇವಿಗೆ ತಲುಪಿಸುವ ನಿಟ್ಟಿನಲ್ಲಿ ಶತಮಾನದಾಚೆಯ ರಾಣಿಗೋಲಿನಲ್ಲಿ ದೇವಿಯ ನೇರ ಆಶೀರ್ವಾದ ಕರುಣಿಸುವಂತೆ ಮಾಡುತ್ತಾರೆ. ಆ ನಿಟ್ಟಿನಲ್ಲಿ ಅನಾದಿ ಕಾಲದಿಂದ ಕಾಪಾಡಿಕೊಂಡು ಬರಲಾದ ರಾಣಿಗೋಲಿನಲ್ಲಿ ಆಸಾದಿ ಕುಟುಂಬದ ಮುಖ್ಯಸ್ಥರ ಬಳಿ ದೇವಿಯ ನೇರ ಆಶೀರ್ವಾದ ಪಡೆಯಲು ಭಕ್ತರು ಸರತಿ ಸಾಲಿನಲ್ಲಿ ಕಾತುರರಾಗಿ ನಿಂತಿದ್ದ ದೃಶ್ಯಗಳು ಗದ್ದುಗೆಯ ಮಾರಿ ಚಪ್ಪರದಲ್ಲಿ ಕಂಡುಬಂತು.
ಆನವಟ್ಟಿಯ ಹುಚ್ಚವ್ವ ಹೇಳಿದಂತೆ:
ಪ್ರತಿ 2 ವರ್ಷಕ್ಕೊಮ್ಮೆ 9 ದಿನಗಳ ಕಾಲ ಅದ್ಧೂರಿಯಾಗಿ ನಡೆಯುವ ಶ್ರೀ ಮಾರಿಕಾಂಬಾ ದೇವಿ ಜಾತ್ರೆಯಲ್ಲಿ ಅನಾದಿ ಕಾಲದಿಂದಲೂ ಸಹ ರಾಣಿಗೋಲಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆಯಂತೆ. 8 ಅಡಿ ಎತ್ತರದ ದೇವಿಯ ಭವ್ಯ ಕಾಷ್ಠದ ಶಿರದ ಮೇಲಿನ ನಾಗರ ಹೆಡೆಗೂ ಈ ರಾಣಿಗೋಲಿಗೂ ಸಂಬಂಧ ಇದೆಯೆಂಬ ಪ್ರತೀತಿ ಇದೆ.
ಸರ್ವ ಶಕ್ತಿ ದೇವಿ ಮಾರಿಕಾಂಬಾ ದೇವಿಯ ನೇರ ಆಶೀರ್ವಾದಕ್ಕೆ ರಾಣಿಗೋಲು ನೆರವಾಗುತ್ತದೆ. ರಾಣಿ ಗೋಲಿನ ಆಶೀರ್ವಾದ ಸಿಕ್ಕಲ್ಲಿ ದೇವಿ ಅಭಯ ಸಿಕ್ಕಂತೆ. ಬೆತ್ತದ ಕೋಲು ಬೆಂಡಾಗಿದ್ದು ಅದಕ್ಕೆ ಬೆಳ್ಳಿಯ ಕವಚ ಇರುವದೇ ರಾಣಿಗೋಲು. ಇದನ್ನು ಭಕ್ತಾದಿಗಳ ತಲೆಯ ಮೇಲೆ ಇಟ್ಟು ದೇವರಡೆಗೆ ಕೈ ಎಳೆದರೆ ಭಕ್ತರ ಕಷ್ಟದೇವಿ ಪಡೆದು ಭಜಕರಿಗೆ ತಾಯಿ ಮಾರಿಕಾಂಬೆ ಅಭಯ ನೀಡುತ್ತಾಳೆಂದು ಅಸಾದಿ ರಂಗದ ಆನವಟ್ಟಿಯ ಹುಚ್ಚವ್ವ ವಿವರಿಸುತ್ತಾರೆ.
ರಾಣಿಗೋಲು ಎಲ್ಲಿರುತ್ತೆ?:
ಆಸಾದಿ ಕುಟುಂಬದವರು ನಡೆಸಿಕೊಡುವ ರಾಣಿಗೋಲಿನ ಸೇವಾ ಕಾರ್ಯದ ನಂತರದಲ್ಲಿ ರಾಣಿಗೋಲನ್ನು ಎಲ್ಲಿಡಲಾಗುತ್ತದೆ ಹಾಗೂ ಬೆತ್ತದ ಕೋಲನ್ನು ಹೇಗೆ ಭದ್ರ ಪಡಿಸಲಾಗುತ್ತದೆ ಎಂಬುದು ಕಾತರದ ಸಂಗತಿಯಾಗಿದೆ. ಜಾತ್ರಾ ವೇಳೆಯಲ್ಲಿ ಆರದ ಮೇಟಿ ದೀಪಗಳೊಂದಿಗೆ ಅಕ್ಕಿ ರಾಶಿಯ ನಡುವೆ ಹಾಕಲಾದ ರಂಗೋಲಿಯ ಮಂಟಪದಲ್ಲಿ ರಾಣಿಗೋಲನ್ನಿಟ್ಟು ದೇವಿಯ ಮುಂಭಾಗ ಧಾರ್ಮಿಕ ವಿಧಿಯಂತೆ ಪೂಜೆ ನಡೆಸಲಾಗುತ್ತದೆ.
ಪ್ರತಿ ಜಾತ್ರಾ ವೇಳೆಯಲ್ಲಿ ಭಕ್ತಾಧಿಗಳಿಗೆ ನೇರ ಆಶೀರ್ವಾದ ನೀಡುವ ರಾಣಿಗೋಲನ್ನು ಜಾತ್ರಾ ದಿನದ ನಂತರದಲ್ಲಿ ದೇವಾಲಯದಲ್ಲಿ ಭದ್ರವಾಗಿಟ್ಟು ಕಾಪಾಡಲಾಗುತ್ತದೆ. ಜೊತೆಯಲ್ಲಿ ಯುಗಾದಿಯಂದು ದೇವಿ ಪುನಃ ಪ್ರತಿಷ್ಠಾಪನೆ ಆದಾಗಲೂ ಹೊಸ ಕೋಣನ ತಲೆ ಸವರುವದೂ ಇದೇ ರಾಣಿಗೋಲಿನಲ್ಲಿಯೇ!.
ಬಹು ಬೇಡಿಕೆಯ ಲಡ್ಡು...
ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವಕ್ಕೆ ಆಗಮಿಸಿ ಹಣ್ಣು ಕಾಯಿ, ಉಡಿ ಸೇವೆ ಸಲ್ಲಿಸುತ್ತಿರುವ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ನೀಡಲಾಗುತ್ತಿರುವ ಲಡ್ಡು ಪ್ರಸಾದಕ್ಕೆ ವ್ಯಾಪಕ ಬೇಡಿಕೆ ಸಿಕ್ಕಿದೆ. ದೇವಿಯ ದರ್ಶನ ಪಡೆದು ಸೇವೆ ಸಲ್ಲಿಸಿದ ಭಕ್ತರು ಮೊದಲು ರವಾ ಪ್ರಸಾದ ಹಾಗೂ ಕುಂಕುಮ ಒಯ್ಯುತ್ತಿದ್ದರು. ಆದರೆ, ಕಳೆದ ಅವಧಿಯಿಂದ ತಿರುಪತಿ ಮಾದರಿಯಲ್ಲಿ 5 ಲಕ್ಷದಷ್ಟುಲಡ್ಡು ಪ್ರಸಾದ ತಯಾರಿಸಲಾಗಿದೆ. ಉತ್ತಮ ಗುಣಮಟ್ಟದ ತುಪ್ಪವನ್ನೇ ಬಳಸಿ ಬುಂದಿಲಾಡನ್ನು ಗೇರುಬೀಜ ಬಳಸಿ ಸಿದ್ಧ ಮಾಡಲಾಗಿದೆ. ಜಾತ್ರೆಯಲ್ಲಿ ಸೇವೆ ಆರಂಭವಾದ ಮೊದಲ ದಿನವೇ ಭಕ್ತಾದಿಗಳು ಲಡ್ಡು ಪ್ರಸಾದವನ್ನು ಕೇಳಿ ಪಡೆಯುತ್ತಿದ್ದರು. ಇದರಿಂದ ಈ ಬಾರಿಯ ತಿರುಪತಿ ಮಾದರಿಯ ಲಡ್ಡುವಿಗೆ ಬಹು ಬೇಡಿಕೆ ಬಂದಂತಾಗಿದೆ.