ಗಾಯ ವಾಸಿ ಮಾಡಲಿದೆ ರೇಷ್ಮೆಗೂಡು ಪ್ಲಾಸ್ಟರ್!
- ಗಾಯ ವಾಸಿ ಮಾಡಲಿದೆ ರೇಷ್ಮೆಗೂಡು ಪ್ಲಾಸ್ಟರ್!
- ರಾಮನಗರ, ಶಿಡ್ಲಘಟ್ಟದ ರೇಷ್ಮೆಗೂಡು ಗಾಯಗಳಿಗೆ ರಾಮಬಾಣ
- ರೇಷ್ಮೆಗೂಡಿನಿಂದಲೇ ವಿಶ್ವದರ್ಜೆ ಪ್ಲಾಸ್ಟರ್ ಆವಿಷ್ಕರಿಸಿದ ಬೆಂಗಳೂರು ಕಂಪನಿ
- ಈಗಾಗಲೇ 1 ಲಕ್ಷ ರೋಗಿಗಳ ಮೇಲೆ ಯಶಸ್ವಿ ಪ್ರಯೋಗ
- ಡ್ರೆಸ್ಸಿಂಗ್ ವೇಳೆ ಆಗುತ್ತೆ ನಯವಾದ ಅನುಭವ,ನೋವೂ ಆಗಲ್ಲ
- ವಿಶ್ವ ಹೂಡಿಕೆದಾರರ ಸಮಾವೇಶದ ಸ್ಟಾಲ್‌ನಲ್ಲಿ ಪ್ರಮುಖ ಆಕರ್ಷಣೆ
ಶ್ರೀಕಾಂತ್ ಎನ್. ಗೌಡಸಂದ್ರ
ಬೆಂಗಳೂರು (ನ.3) : ರಾಮನಗರ ಹಾಗೂ ಶಿಡ್ಲಘಟ್ಟರೇಷ್ಮೆ ಮಾರುಕಟ್ಟೆಯಲ್ಲಿ ದೊರೆಯುವ ರೇಷ್ಮೆ ಗೂಡಿನ ನೂಲಿನಿಂದ ಪರಿಣಾಮಕಾರಿಯಾಗಿ ಗಾಯಗಳ ಆರೈಕೆ ಮಾಡುವ ವಿಶ್ವದರ್ಜೆ ಪ್ಲಾಸ್ಟರ್‌ಗಳನ್ನು ಯಲಹಂಕ ಮೂಲದ ಕಂಪೆನಿಯೊಂದಿಗೆ ಆವಿಷ್ಕರಿಸಿದೆ. ಅಷ್ಟೇ ಅಲ್ಲದೆ, 1 ಲಕ್ಷ ರೋಗಿಗಳ ಮೇಲೆ ಪ್ರಯೋಗ ನಡೆಸಿ ಯಶಸ್ವಿಯಾಗಿದ್ದು ಹಲವು ಆಸ್ಪತ್ರೆಗಳಿಗೆ ಪೂರೈಕೆಯನ್ನೂ ಆರಂಭಿಸಿದೆ. ತನ್ಮೂಲಕ ರೇಷ್ಮೆ ನೂಲಿನಿಂದ ಗಾಯಗಳಿಗೆ ನೋವು ಕೊಡದೆ ನಯವಾದ ಅನುಭವದೊಂದಿಗೆ ಗುಣಪಡಿಸುವ ಕೆಲಸವನ್ನು ಫಿಬ್ರೋಹೀಲ್ ವುಂಡ್‌ಕೇರ್ ಕಂಪೆನಿಯ ಪ್ಲಾಸ್ಟರ್‌ಗಳು ಮಾಡುತ್ತಿದೆ.
ರೇಷ್ಮೆ ಇಲಾಖೆಯ 2000 ಹುದ್ದೆಗಳನ್ನು ರದ್ದತಿಗೆ ಎಐಡಿವೈಒ ವಿರೋಧ
ಶಸ್ತ್ರಚಿಕಿತ್ಸೆ ಗಾಯ, ಸುಟ್ಟಗಾಯ, ಮಧುಮೇಹದ ಹುಣ್ಣು ಸೇರಿದಂತೆ ಯಾವುದೇ ರೀತಿಯ ಪ್ರಮುಖ ಗಾಯಗಳಿಗೆ ರೇಷ್ಮೆ ನೂಲಿನಿಂದ ಮಾಡಿದ ಪ್ಲಾಸ್ಟರ್‌ಗಳು ಪರಿಣಾಮಕಾರಿಯಾಗಿ ಆರೈಕೆ ಮಾಡಿ ಗುಣಪಡಿಸಲು ನೆರವಾಗಿವೆ. ಈ ಉತ್ಪನ್ನಗಳನ್ನು ವಿಶ್ವ ಹೂಡಿಕೆದಾರರ ಸಮಾವೇಶದಲ್ಲಿ ಕಂಪೆನಿ ಪ್ರದರ್ಶಿಸಿದೆ.
ರೇಷ್ಮೆ ಪ್ಲಾಸ್ಟರ್‌ನಲ್ಲೇನಿದೆ?
ಸಾಂಪ್ರದಾಯಿಕ ಪ್ಲಾಸ್ಟರ್‌ಗಳಲ್ಲಿ ಕೊಲೊಜಿನ್, ಕಿಟೊಸಿನ್ ಎಂಬ ರಾಸಾಯನ ಅಂಶಗಳಿರುತ್ತವೆ. ಇವುಗಳ ಬದಲಿಗೆ ಫಿಬ್ರೋಹೀಲ್ ಪ್ಲಾಸ್ಟರ್‌ಗಳಲ್ಲಿ ರೇಷ್ಮೆ ಗೂಡಿನಲ್ಲಿರುವ ಸಿಲ್‌್ಕ ಪ್ರೊಟೀನ್ ಬಳಸಿಕೊಂಡು ಪ್ಲಾಸ್ಟರ್ ತಯಾರಿಸಲಾಗುವುದು. ಗೂಡಿನಲ್ಲಿರುವ ಸೆರಿಸಿನ್, ಫಿಬ್ರಾಯಿನ್ ಅಂಶಗಳು ಗಾಯಾಳುಗಳಿಗೆ ನೋವಿನ ಅನುಭವ ನೀಡದೆ ವೇಗವಾಗಿ ಗುಣಪಡಿಸಲು ಅನುವು ಮಾಡಿಕೊಡುತ್ತವೆ ಎಂದು ಕಂಪೆನಿಯ ಉತ್ಪಾದನಾ ವ್ಯವಸ್ಥಾಪಕ ಎಂ.ಆರ್. ಶಕ್ತಿ ಪ್ರಸಾದ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ದೇಶದಲ್ಲೇ ಮೊದಲ ಬಾರಿಗೆ ರೇಷ್ಮೆ ಗೂಡಿನಿಂದ ಪ್ಲಾಸ್ಟರ್‌ಗಳನ್ನು ತಯಾರಿಸಿದ್ದು, ಈ ಬಗ್ಗೆ ಎರಡು ಪೇಟೆಂಟ್‌ಗಳನ್ನೂ ಕಂಪೆನಿ ಹೊಂದಿದೆ ಎಂದು ಅವರು ತಿಳಿಸಿದರು.
ಯಾವ್ಯಾವ ಗಾಯಗಳಿಗೆ ಉಪಯುಕ್ತ?:
ಗಾಯದ ಮೇಲೆ ಡ್ರೆಸ್ಸಿಂಗ್ ಮಾಡುವ ಪ್ಲಾಸ್ಟರ್‌ನ್ನೂ ಸಹ ಇದೇ ರೀತಿ ಉತ್ಪಾದಿಸಲಾಗುತ್ತದೆ. ಇದರಿಂದ ರೋಗಿಗೆ ಆರಾಮದಾಯಕವಾಗಿರುತ್ತದೆ. ಜತೆಗೆ ಬಿಗಿಯಾಗಿ ಅಂಟಿಕೊಂಡು ರೋಗಿಯ ಚಲನೆಯನ್ನು ನಿಯಂತ್ರಿಸುವುದಿಲ್ಲ.
ಮೈಕ್ರೊಗ್ರಾಸ್, ಸ್ಕಾರ್ಲೈಟ್, ಸ್ಯೂಚರ್ ಡ್ರೆಸ್ ಎಂಬ ಮೂರು ವಿಧದ ಪ್ಲಾಸ್ಟರ್‌ಗಳನ್ನು ತಯಾರಿಸಲಾಗುತ್ತದೆ. ಮಧುಮೇಹದ ಗಾಯ, ಶಸ್ತ್ರಚಿಕಿತ್ಸೆ ಬಳಿಕದ ಗಾಯ, ಸಿ-ಸೆಕ್ಷನ್ ಗಾಯ, ಸುಟ್ಟಗಾಯ ಸೇರಿದಂತೆ ಯಾವುದೇ ಗಾಯಗಳಿಗೂ ಪ್ಲಾಸ್ಟರ್‌ಗಳನ್ನು ಬಳಸಬಹುದು. ಈಗಾಗಲೇ 1 ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಯಶಸ್ವಿಯಾಗಿ ಈ ಪ್ಲಾಸ್ಟರ್‌ಗಳ ಮೂಲಕ ಚಿಕಿತ್ಸೆ ನೀಡಲಾಗಿದೆ ಎಂದು ಹೇಳಿದ್ದಾರೆ.
Ramanagara; ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾದ ಕಾಡಾನೆಗಳ ಹಿಂಡು, ಆತಂಕದಲ್ಲಿ ಗ್ರಾಮಸ್ಥರು
ರಾಮನಗರ, ಶಿಡ್ಲಘಟ್ಟರೇಷ್ಮೆಗೂಡು:
ಕಂಪೆನಿಯು ರಾಮನಗರ ಹಾಗೂ ಶಿಡ್ಲಘಟ್ಟದಿಂದ ರೇಷ್ಮೆಗೂಡನ್ನು ಖರೀದಿ ಮಾಡುತ್ತದೆ. ರೇಷ್ಮೆಗೂಡು ಖರೀದಿ ಮಾಡಿ ಅದರಿಂದ ನೂಲನ್ನು ಬೇರ್ಪಡಿಸಿ ಪ್ಲಾಸ್ಟರ್‌ಗಳನ್ನು ತಯಾರಿಸುತ್ತದೆ. ಇದು ಆ್ಯಂಟಿಬಯೋಟಿಕ್ ಅಂಶಗಳನ್ನು ಹೊಂದಿದ್ದು, ಗಾಯಗಳು ಸೆಪ್ಟಿಕ್ ಆಗದಂತೆ ಹಾಗೂ ಸೋಂಕು ಉಂಟಾಗದಂತೆ ತಡೆಯುತ್ತವೆ. ಹೀಗಾಗಿ ರೇಷ್ಮೆ ಗೂಡಿನಿಂದ ತಯಾರಿಸಿದ ಪ್ಲಾಸ್ಟರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಶಕ್ತಿ ಪ್ರಸಾದ್ ಹೇಳುತ್ತಾರೆ.