ಬೆಂಗಳೂರು : ವಿವಾದಿತ ಎಲಿವೇಟೆಡ್‌ ಕಾರಿಡಾರ್‌ನ ಮೊದಲ ಹಂತದ ಯೋಜನೆಗೆ ರಿಚ್‌ಮಂಡ್‌ ವೃತ್ತದ ಭಾಗಶಃ ಮೇಲ್ಸೇತುವೆ ಹಾಗೂ ಅಲ್ಲಿ ಹೊಸದಾಗಿ ನಿರ್ಮಿಸಿರುವ ಪಾದಚಾರಿ ಮೆಲ್ಸೇತುವೆಗೂ ಕಂಟಕ ಬರಲಿದೆ ಎಂಬುದು ವಿವಿಧ ಸಂಘ ಸಂಸ್ಥೆಗಳು ನಡೆಸಿದ ಸಾಮಾಜಿಕ ಪರಿಣಾಮದ ಮೌಲ್ಯಮಾಪನದಲ್ಲಿ ಕಂಡುಬಂದಿದೆ.

ಹೆಬ್ಬಾಳದಿಂದ ಸೆಂಟ್ರಲ್‌ ಸಿಲ್ಕ್ ಬೋರ್ಡ್‌ ವರೆಗಿನ ಮೊದಲ ಹಂತದ ಎಲಿವೇಟೆಡ್‌ ಕಾರಿಡಾರ್‌ ಯೋಜನೆಯಿಂದಾಗುವ ಸಾಮಾಜಿಕ ಪರಿಣಾಮಗಳ ಬಗ್ಗೆ ಬಸ್‌ ಪ್ರಯಾಣಿಕರ ವೇದಿಕೆ (ಬಿಬಿವಿಪಿ), ಸಿಟಿಝನ್ಸ್‌ ಫಾರ್‌ ಬೆಂಗಳೂರು (ಸಿಎಫ್‌ಬಿ) ಮತ್ತು ದಿ ಸ್ಟುಡೆಂಟ್‌ ಔಟ್‌ಪೋಸ್ಟ್‌ (ಟಿಎಸ್‌ಒ) ಮತ್ತು ಬೆಂಗಳೂರು ಸುದ್ದಿ ಸಂಘಟನೆಗಳು ಮೌಲ್ಯಮಾಪನ ನಡೆಸುತ್ತಿವೆ. ಈಗಾಗಲೇ ಎರಡು ಹಂತದ ಮೌಲ್ಯಮಾಪನದಲ್ಲಿ ಬಿಟಿಎಸ್‌ ರಸ್ತೆ, ಜಯಮಹಲ್‌ ರಸ್ತೆ, ಲಷ್ಕರ್‌ ರಸ್ತೆಗಳಲ್ಲಿನ ವೈಟ್‌ಟಾಪಿಂಗ್‌ ವಿರೂಪಗೊಳ್ಳಲಿದೆ. 250ಕ್ಕೂ ಆಸ್ತಿಗಳು ಸ್ವಾಧೀನಗೊಳ್ಳುತ್ತವೆ ಎಂಬ ಅಂಶಗಳು ಕಂಡುಬಂದಿದ್ದವು. ಶನಿವಾರ ಶಾಂತಿನಗರದಿಂದ ರಿಚ್ಮಂಡ್‌ ವೃತ್ತದ ವರೆಗೆ ಸಂಘಟನೆಗಳ ಸದಸ್ಯರು ಮತ್ತಷ್ಟುಮೌಲ್ಯಮಾಪನ ನಡೆಸಿದರು.

ಈ ವೇಳೆ, ಉದ್ದೇಶಿತ ಎಲಿವೇಟೆಡ್‌ ಕಾರಿಡಾರ್‌ಗೆ ರಿಚ್ಮಂಡ್‌ ವೃತ್ತ ಮೇಲ್ಸೇತುವೆಯ ಒಂದು ಭಾಗ ಹಾಗೂ ಇದೇ ಸ್ಥಳದಲ್ಲಿ ಇತ್ತೀಚೆಗಷ್ಟೇ ನಿರ್ಮಿಸಲಾಗಿರುವ ಪಾದಚಾರಿ ಮೇಲ್ಸೇತುವೆಯನ್ನೂ ಕೆಡವಬೇಕಾಗುವ ಅಂಶ ಕಂಡುಬಂದಿದೆ ಎಂದು ಬಿಬಿವಿಪಿ ಸದಸ್ಯ ವಿನಯ್‌ ಶ್ರೀನಿವಾಸ ತಿಳಿಸಿದ್ದಾರೆ.

ಅಲ್ಲದೆ, ಕೆ.ಎಚ್‌.ರಸ್ತೆಯ ಅಂಗಡಿಗಳ ವ್ಯಾಪಾರಿಗಳಿಗೆ ಈ ಯೋಜನೆಯಿಂದ ಅವರ ವ್ಯಾಪಾರಕ್ಕೆ ಧಕ್ಕೆಯಾಗಲಿದೆ ಎಂಬ ಆತಂಕ ಕಾಡುತ್ತಿದೆ. ಈಗಾಗಲೇ ವ್ಯಾಪಾರ ಕಡಿಮೆಯಾಗಿದೆ, ಇನ್ನು ಕಾಮಗಾರಿ ಆರಂಭವಾದರೆ ಇನ್ನಷ್ಟುಕುಸಿಯುವ ಭಯ ಕಾಡುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅಲ್ಲದೆ, ಸರ್ಕಾರ ಈ ಯೋಜನೆ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ನೀಡದ ಬಗ್ಗೆ ಜನರಲ್ಲಿ ಕೋಪವಿರುವುದು ಕಂಡುಬಂತು. ರಸ್ತೆ ಮಧ್ಯದಲ್ಲಿ ಹಾಗೂ ರಸ್ತೆಯ ಎರಡೂ ಕಡೆ ಇರುವ ಸುಮಾರು 55 ಮರಗಿಡಗಳು ನಾಶವಾಗುವ ಸಾಧ್ಯತೆ ಕಂಡುಬರುತ್ತಿದೆ ಎಂದು ಹೇಳಿದ್ದಾರೆ.

ನಗರದ ಸಂಚಾರ ದಟ್ಟಣೆ ನಿವಾರಣೆಗೆ ಸಾರ್ವಜನಿಕ ಸಾರಿಗೆ ಸೇವೆ ಉತ್ತಮಗೊಳಿಸಲು ಸರ್ಕಾರ ಏಕೆ ಪ್ರಯಾಣ ದರ ಕಡಿಮೆ ಮಾಡುವ, ಬಸ್ಸುಗಳ ಸಂಖ್ಯೆ ಹೆಚ್ಚಿಸುವ, ಇರುವ ರಸ್ತೆಗಳಲ್ಲೇ ಪ್ರತ್ಯೇಕ ಬಸ್‌ ಪಥಗಳ ನಿರ್ಮಾಣ ಮಾಡುವ ಕೆಲಸ ಮಾಡುತ್ತಿಲ್ಲ ಎಂಬ ಪ್ರಶ್ನೆಗಳು ಮೌಲ್ಯಮಾಪನದ ವೇಳೆ ಜನರಿಂದ ವ್ಯಕ್ತವಾಗಿವೆ ಎಂದು ತಿಳಿಸಿದರು.

ಯೋಜನೆ ಪರಿಣಾಮಗಳ ಬಗ್ಗೆ ಜನ ಜಾಗೃತಿ

ಈ ಮಧ್ಯೆ, ಎಲಿವೇಟೆಡ್‌ ಕಾರಿಡಾರ್‌ ಯೋಜನೆಯಿಂದ ಎಷ್ಟೆಲ್ಲಾ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿ ಪಾಸ್ತಿಗಳಿಗೆ ಹಾನಿಯಾಗಲಿದೆ, ಎಷ್ಟುಜನರು ಮನೆ, ಆಸ್ತಿ ಕಳೆಕೊಳ್ಳಲಿದ್ದಾರೆ. ಪರಿಸರದ ಮೇಲಾಗುವ ಪರಿಣಾಮಗಳೇನು? ಕಾನೂನಾತ್ಮಕ ಉಲ್ಲಂಘನೆಗಳೇನು? ಇದನ್ನೆಲ್ಲಾ ಎದುರಿಸಲು ಏನು ಮಾಡಬೇಕೆಂಬ ಬಗ್ಗೆ ಸಂಪೂರ್ಣ ಮಾಹಿತಿಯುಳ್ಳ ಕರಪತ್ರ ಹಂಚುವ ಮೂಲಕ ಸಂಘ ಸಂಸ್ಥೆಗಳು ಜನ ಜಾಗೃತಿ ಮೂಡಿಸುವ ಕಾರ್ಯ ಆರಂಭಿಸಿವೆ.

26,690 ಕೋಟಿ ರು.ಗಳ ಬೃಹತ್‌ ಮೊತ್ತದ ಯೋಜನೆಗೆ 3,821 ಮರಗಳು ಮತ್ತು 2084 ಮರದ ಕೊಂಬೆಗಳನ್ನು ಕಡಿಯಲಾಗುತ್ತದೆ. ಮನೆ, ವಾಣಿಜ್ಯ ಕಟ್ಟಡ, ಧಾರ್ಮಿಕ, ಶೈಕ್ಷಣಿಕ ಸಂಸ್ಥೆಗಳು ಸೇರಿದಂತೆ 1,130 ಆಸ್ತಿಪಾಸ್ತಿ ಹಾನಿಗೊಳಗಾಗುತ್ತವೆ. ಯೋಜನೆಗೆ ಬರೋಬ್ಬರಿ 266 ಮಿಲಿಯನ್‌ ಲೀಟರ್‌ ನೀರು ಬಳಸಬೇಕಾಗುತ್ತದೆ. ಯೋಜನೆಯಿಂದ 5,88,678 ಘನ ಮೀಟರ್‌ನಷ್ಟುನಿರ್ಮಾಣ ತ್ಯಾಜ್ಯ ಉತ್ಪಾದನೆಯಾಗುತ್ತದೆ ಎಂಬುದು ಸೇರಿದಂತೆ ಅನೇಕ ಮಾಹಿತಿಯನ್ನು ಕರಪತ್ರದಲ್ಲಿ ನೀಡಲಾಗಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.