Asianet Suvarna News Asianet Suvarna News

ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ಪ್ರತಿಭಟನೆ ಮುಂದುವರಿಕೆ

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕಾವೇರಿ ಕ್ರಿಯಾ ಸಮಿತಿಯವರು ಪುರಭವನ ಮುಂಭಾಗದ ದೊಡ್ಡ ಗಡಿಯಾರ ವೃತ್ತದಲ್ಲಿ 8ನೇ ದಿನವಾದ ಸೋಮವಾರ ಸಹ ಪ್ರತಿಭಟಿಸಿದರು.

Protest continues against water supply to Tamil Nadu snr
Author
First Published Oct 10, 2023, 8:22 AM IST

 ಮೈಸೂರು :  ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕಾವೇರಿ ಕ್ರಿಯಾ ಸಮಿತಿಯವರು ಪುರಭವನ ಮುಂಭಾಗದ ದೊಡ್ಡ ಗಡಿಯಾರ ವೃತ್ತದಲ್ಲಿ 8ನೇ ದಿನವಾದ ಸೋಮವಾರ ಸಹ ಪ್ರತಿಭಟಿಸಿದರು.

ಈ ಹೋರಾಟಕ್ಕೆ ಬೆಂಬಲ ಸೂಚಿಸಿ 7 ರೈನ್ಬೋಸ್ ಲಿಂಗತ್ವ ಅಲ್ಪಸಂಖ್ಯಾತರ ಸಂಘಟನೆಯ ಮಂಗಳಮುಖಿಯರು ಪಾಲ್ಗೊಂಡು, ಕನ್ನಡಿಗರ ಜೀವನದಿ ಕಾವೇರಿ ಉಳಿಸುವಂತೆ ಆಗ್ರಹಿಸಿದರು.

ರಾಜ್ಯದಲ್ಲಿ ಮಳೆಯಾಗದೆ ತೀವ್ರ ಬರಗಾಲ ಆವರಿಸಿದ್ದರೂ ಕಬಿನಿಯಿಂದ 3 ಸಾವಿರ, ಕೆಆರ್ ಎಸ್ ನಿಂದ 2 ಸಾವಿರ ಕ್ಯಸೆಕ್ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದು ಖಂಡನಿಯ. ಮುಖ್ಯಮಂತ್ರಿ, ಜಲ ಸಂಪನ್ಮೂಲ ಸಚಿವರು ಇನ್ನು ಮುಂದಾದರು ಸ್ವಾಭಿಮಾನದಿಂದ ವರ್ತಿಸಬೇಕು. ಈ ಕೂಡಲೇ ಪ್ರಧಾನಿ ಮೋದಿ ಮಧ್ಯಪ್ರವೇಶಿಸಿ ರಾಜ್ಯದ ಹಿತ ಕಾಪಾಡಬೇಕು ಎಂದು ಅವರು ಒತ್ತಾಯಿಸಿದರು.

ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್. ಜಯಪ್ರಕಾಶ್, ಮುಖಂಡರಾದ ಮೂಗೂರು ನಂಜುಂಡಸ್ವಾಮಿ, ಎಂ.ಜೆ. ಸುರೇಶ್ ಗೌಡ, ಮೆಲ್ಲಳ್ಳಿ ಮಹದೇವಸ್ವಾಮಿ, ಮೋಹನ್ ಕುಮಾರ್ ಗೌಡ, ಮಹಾದೇವಸ್ವಾಮಿ, ಎಸ್. ಬಾಲಕೃಷ್ಣ, ಶಿವನಾಯ್ಕರ್, ಶ್ರೀನಿವಾಸ್, ರಾಜೇಶ್, ಸಿದ್ದಲಿಂಗಪ್ಪ, ಪುಷ್ಪಾವತಿ, ಪದ್ಮ, ನೇಹಾ, ಮಂಜುಳಾ, ಸುನಿಲ್ ಕುಮಾರ್, ಗೋವಿಂದ್ ರಾಜ್, ಸಿದ್ದಪ್ಪ, 7 ರೈನ್ಬೋಸ್ ಸಂಘಟನೆಯ ಪ್ರಕಾಶ್, ಪೂಜಾ, ಜಾಸ್ಮಿನ್, ಸುಧಾರಾಣಿ, ಶಿವರಾಂ, ಸಾಗರಿ, ರಮ್ಯಾ, ಮಧುರ, ಪುಷ್ಪಾ ಮೊದಲಾದವರು ಇದ್ದರು.

ಪ್ರಧಾನಿ ಒಂದು ರಾಜ್ಯದ ಪರ ಇರಲು ಸಾಧ್ಯವಿಲ್ಲ

ಮದ್ದೂರು(ಅ.10): ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಪ್ರಧಾನಿ ಮಧ್ಯಪ್ರವೇಶ ಮಾಡಬೇಕೆನ್ನುವವರಿಗೆ ತಿರುಗೇಟು ನೀಡಿರುವ ಸಂಸದೆ ಸುಮಲತಾ, ಮುಖ್ಯಮಂತ್ರಿ ಹೇಗೆ ಒಂದು ಜಿಲ್ಲೆಯ ಪರ ಇರಲು ಸಾಧ್ಯವಿಲ್ಲವೋ ಅದೇ ರೀತಿ ದೇಶದ ಪ್ರಧಾನಿ ಕೂಡ ಒಂದು ರಾಜ್ಯದ ಪರವಾಗಿರಲು ಸಾಧ್ಯವಿಲ್ಲ ಎಂದು ಖಡಕ್ಕಾಗಿ ಹೇಳಿದರು.

ಪಟ್ಟಣದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ನದಿ ನೀರು ಹಂಚಿಕೆ ವಿಚಾರದಲ್ಲಿ ಪ್ರಾಧಿಕಾರದ ನಿರ್ಧಾರವೇ ಅಂತಿಮ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಕೂಡ ಮಧ್ಯಪ್ರವೇಶ ಮಾಡುವುದಿಲ್ಲ ಎಂದಿದೆ. ಸುಪ್ರೀಂ ಕೋರ್ಟೇ ಹೇಳಿದ ಮೇಲೆ ಇನ್ಯಾರು ಮಧ್ಯಪ್ರವೇಶ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ಕಾವೇರಿ ವಿಚಾರವಾಗಿ ಅಂಬರೀಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು: ಸಂಸದೆ ಸುಮಲತಾ

ಕಾವೇರಿ ನೀರಿನ ವಿಚಾರದಲ್ಲಿ ತಮಿಳುನಾಡು ಮೊದಲಿನಿಂದಲೂ ಒತ್ತಡ ಹೇರುತ್ತಿದೆ. ನಮ್ಮ ಅಧಿಕಾರಿಗಳು ಸರಿಯಾದ ವಾದ ಮಂಡಿಸುವಲ್ಲಿ ವಿಫಲರಾಗಿದ್ದಾರೆ. ಸರ್ಕಾರ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಸಮಸ್ಯೆಗೆ ಪರಿಹಾರ ಹುಡುಕಬೇಕು ಎಂದು ಒತ್ತಾಯಿಸಿದರು.

ಇಂಡಿಯಾ ಒಕ್ಕೂಟ ಮಾಡಿಕೊಂಡಿದ್ದಾರೆ. ಎರಡೂ ರಾಜ್ಯದವರು ಒಟ್ಟಿಗೆ ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಬಹುದು. ಪಾಕಿಸ್ತಾನ, ‌ಭಾರತ ಕುಳಿತು ಮಾತನಾಡಲು ಸಾಧ್ಯವಿರುವಾಗ ಎರಡು ರಾಜ್ಯಗಳು ಕುಳಿತು ಮಾತನಾಡಲು ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ ಸುಮಲತಾ, ಸರ್ಕಾರದ ಜೊತೆ ಮೂರು ಸಭೆಯಲ್ಲಿ ಭಾಗವಹಿಸಿದ್ದೇನೆ. ಕೇವಲ ಚರ್ಚೆ ಆಗಿದೆ ಎನ್ನುವುದು ಬಿಟ್ಟರೆ ಪರಿಹಾರ ಕ್ರಮ ಈವರೆಗೆ ಆಗಿಲ್ಲ ಎಂದಿರು.

ದಶಪಥ ಹೆದ್ದಾರಿಯಲ್ಲಿ ಎಂಟ್ರಿ, ಎಕ್ಸಿಟ್ ಮುಚ್ಚಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಮೊದಲೇ ತಾತ್ಕಾಲಿಕ ಎಂಟ್ರಿ, ಎಕ್ಸಿಟ್ ಎಂದು ಹೇಳಲಾಗಿತ್ತು. ಹೆದ್ದಾರಿ ನಿಯಮಾವಳಿ ಅನ್ವಯ ಬಂದ್‌ ಮಾಡಲಾಗುತ್ತಿದೆ. ಎಲ್ಲಾ ಕಡೆ ಎಂಟ್ರಿ, ಎಕ್ಸಿಟ್ ಬೇಕು ಎಂದರೆ ಅದು ಸಾಧ್ಯವಾಗುವುದಿಲ್ಲ. ಮುಂದಿನ ದಿಶಾ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು.

ಮನ್‌ಮುಲ್ ಅಗ್ನಿ ಅವಘಡ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಗ್ನಿಶಾಮಕ ದಳದಿಂದ ನಿರಾಕ್ಷೇಪಣಾ ಪತ್ರ ಪಡೆಯದೆ ಕಟ್ಟಡ ನಿರ್ಮಿಸಿರುವುದು ತಪ್ಪು. ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸದೆ ಯಾವುದೇ ಕಟ್ಟಡ ಕಟ್ಟಬಾರದು. ತಪ್ಪು ಮಾಡಿದವರ ವಿರುದ್ಧ ತನಿಖೆಯಾಗಿ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

Follow Us:
Download App:
  • android
  • ios