ಮೈಸೂರು : ಪಿ.ಎಚ್.ಡಿ ಏಕೀಕೃತ ಪ್ರವೇಶ ಪರೀಕ್ಷೆಗೆ ವಿರೋಧ
ಪಿಎಚ್.ಡಿ ಪ್ರವೇಶ ಪರೀಕ್ಷೆ ಏಕೀಕೃತಗೊಳಿಸುವ ಉನ್ನತ ಶಿಕ್ಷಣ ಇಲಾಖೆಯ ಉದ್ದೇಶಕ್ಕೆ ಮೈಸೂರು ವಿವಿ ಶಿಕ್ಷಣ ಮಂಡಲಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು.
ಮೈಸೂರು : ಪಿಎಚ್.ಡಿ ಪ್ರವೇಶ ಪರೀಕ್ಷೆ ಏಕೀಕೃತಗೊಳಿಸುವ ಉನ್ನತ ಶಿಕ್ಷಣ ಇಲಾಖೆಯ ಉದ್ದೇಶಕ್ಕೆ ಮೈಸೂರು ವಿವಿ ಶಿಕ್ಷಣ ಮಂಡಲಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು.
ಕ್ರಾಫರ್ಡ್ ಭವನದಲ್ಲಿ ಬುಧವಾರ ನಡೆದ ಶಿಕ್ಷಣ ಮಂಡಳಿಯ ಎರಡನೇ ಸಾಮಾನ್ಯ ಸಭೆಯಲ್ಲಿ ಈ ಕುರಿತು ಚರ್ಚಿಸಲಾಯಿತು. ಇದು ವಿಶ್ವವಿದ್ಯಾನಿಲಯ ಸ್ವಾಯತ್ತತೆಗೆ ಧಕ್ಕೆ ತರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದಲೇ ಪಿಎಚ್.ಡಿ ಪ್ರವೇಶ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಇದರಿಂದ ಪದವಿ ಪೂರ್ವ ಶಿಕ್ಷಣ ಮಂಡಳಿ ಅಥವಾ ಕುಲಪತಿಯನ್ನು ಕಾಲೇಜು ಪ್ರಾಂಶುಪಾಲರಾಗಿ ಮಾಡಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿರುವುದಾಗಿ ಕುಲಪತಿ ಪ್ರೊ. ಲೋಕನಾಥ್ ಹೇಳಿದರು.
ಬೆಂಗಳೂರು, ಕಲಬುರ್ಗಿ ವಿವಿಗಳು ಪರೀಕ್ಷೆ ನಡೆಸಲು ಮುಂದಾಗಿವೆ. ರಾಣಿಚೆನ್ನಮ್ಮ ವಿವಿಯ ಪಿಎಚ್.ಡಿ ಪ್ರವೇಶ ಪರೀಕ್ಷೆಗೆ ಕರೆ ನೀಡಿದೆ. ವಿವಿಗಳು ನಡೆಸುವ ಪರೀಕ್ಷೆಗಳಿಂದ ಯಾವುದೇ ಭಾಗದ ವಿದ್ಯಾರ್ಥಿಗೆ ತೊಂದರೆಯಾಗಿಲ್ಲ. ಅಂಕಿಸಂಖ್ಯೆ ಸಮೇತ ಉನ್ನತ ಶಿಕ್ಷಣ ಇಲಾಖೆಗೆ ಮಾಹಿತಿ ನೀಡುವಂತೆ ಅವರು ಸದಸ್ಯರನ್ನು ಕೋರಿದರು.
ಫೆ. 8ರಂದು ನಡೆಯುವ ಉನ್ನತ ಶಿಕ್ಷಣ ಇಲಾಖೆ ಸಭೆಯಲ್ಲಿ ಈ ಸಂಬಂಧ ಚರ್ಚಿಸುವುದಾಗಿ ಭರವಸೆ ನೀಡಿದರು.
ಅಂಕಪಟ್ಟಿ ನೀಡಿ
ಅಂಕಪಟ್ಟಿಯನ್ನು ನಿಗದಿತ ಅವಧಿಯೊಳಗೆ ನೀಡಬೇಕು ಎಂದು ಬಿ.ಇಡಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರೊಬ್ಬರು ಒತ್ತಾಯಿಸಿದರು. ಸಮಯಕ್ಕೆ ಸರಿಯಾಗಿ ಅಂಕಪಟ್ಟಿ ನೀಡದೆ ಇರುವುದರಿಂದ ಯುವನಿಧಿ ಯೋಜನೆಗೆ ನೋಂದಾಯಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದರು. ಇದಕ್ಕೆ ಮತ್ತೊಬ್ಬ ಸದಸ್ಯರೂ ಧ್ವನಿಗೂಡಿಸಿದರು.
ಎಂಬಿಎ ಮತ್ತು ಕಾಮರ್ಸ್ ವಿದ್ಯಾರ್ಥಿಗಳು ಇಂಟರ್ನ್ ಶಿಪ್ಹೊಸ ಪಠ್ಯ ರೂಪಿಸಲು ಅಥವಾ ಕಾರ್ಖಾನೆಯ ತಜ್ಞರನ್ನು ಆಹ್ವಾನಿಸಿ ಉಪನ್ಯಾಸ ಕೊಡಿಸುವುದು, ಇಂಟರ್ನ್ ಶಿಪ್ ಮಾದರಿ ರೂಪಿಸಲು ತಜ್ಞರನ್ನು ಒಳಗೊಂಡ ಸಮಿತಿ ರಚಿಸಲು ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ತಿಳಿಸಿದರು.
ಎಲ್ಲ ವಿದ್ಯಾರ್ಥಿಗಳಿಗೆ ಕಂಪನಿಯಲ್ಲಿ ಇಂಟರ್ನ್ ಶಿಪ್ ಕೊಡಲಾಗದು. ಪ್ರಾಜೆಕ್ಟ್ ವರ್ಕ್ ಕೊಟ್ಟರೆ ಜೆರಾಕ್ಸ್ ಅಂಗಡಿಯವರಿಗೆ ಅನುಕೂಲವಾಗುತ್ತದೆ. ಎನ್.ಇ.ಪಿ, ಎಸ್ಇಪಿಯಲ್ಲೂ ದ್ವಂದ್ವ ಇದೆ. ಡಿಗ್ರಿ ಕೋರ್ಸ್ಗಳು 3ನೇ ವರ್ಷಕ್ಕೆ ಮುಗಿಯುವ ಸಾಧ್ಯತೆಯೂ ಇದೆ. ಹೀಗೆ ಬಹಳಷ್ಟು ಗೊಂದಲವಿದೆ ಎಂದು ಅವರು ವಿವರಿಸಿದರು.
ಕುಲಸಚಿವೆ ವಿ.ಆರ್. ಶೈಲಜಾ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಭೂಮಿ- ಲ್ಯಾಂಡ್ ರೆರ್ಕಾರ್ಡಸ್ ವೆಬ್ ಸೈಟ್ ಇರುವಂತೆ ವಿಶ್ವವಿದ್ಯಾನಿಲಯಗಳ ಅಂಕಪಟ್ಟಿಗೆ ಒಂದು ಮಾದರಿ ರೂಪಿಸಬಹುದು. ಇದನ್ನು ಮೈಸೂರು ವಿವಿಯಿಂದಲೇ ಆರಂಭಿಸಬಹುದು. ಎಲ್ಲಾ ಮಾಹಿತಿಯನ್ನು ಅಲ್ಲಿ ದಾಖಲಿಸಿದರೆ ವಿದ್ಯಾರ್ಥಿ ತನಗೆ ಬೇಕಾದ್ದನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿ ಸ್ನೇಹಿ ಆಗಿಯೂ ಅದನ್ನು ರೂಪಿಸಬಹುದು ಎಂದು ಸಲಹೆ ನೀಡಿದರು.
ಎಂಜಿನಿಯರಿಂಗ್ ಶಾಲೆಯ ಅಧಿನಿಯಮ ರಚನಾ ಸಮಿತಿ ಸಿದ್ಧಪಡಿಸಿರುವ ಕರಡು ಅಧಿನಿಯಮಕ್ಕೆ ಅನುಮೋದನೆ ನೀಡಲಾಯಿತು. ಇಲ್ಲಿ 600ಕ್ಕೂ ಹೆಚ್ಚು ಮಕ್ಕಳು ಅಧ್ಯಯನ ಮಾಡುತ್ತಿದ್ದಾರೆ ಎಂದು ಲೋಕನಾಥ್ ವಿವರಿಸಿದರು.
ಲೇಟ್ ಅಮರಾವತಿ ಮತ್ತು ಲೇಟ್ ಕೃಷ್ಣಾಚಾರಿ ನಗದು ಬಹುಮಾನ, ಪ್ರೊ. ಮಲ್ಲಿನಾಥ ಕುಂಬಾರರ ಅಭಿನಂದನಾ ನಗದು ಬಹುಮಾನ, ಪ್ರೊ.ಬಿ. ಎಸ್. ಕಿರಣಗಿ ಚಿನ್ನದ ಪದಕ ದತ್ತಿಗಳ ಸ್ಥಾಪನೆಗೆ ಸಭೆ ಒಪ್ಪಿಗೆ ನೀಡಿತು.
9 ಸರ್ಕಾರಿ ಕಾಲೇಜುಗಳಲ್ಲಿ ಬಿಸಿಎ ಕೋರ್ಸ್ ಆರಂಭ, ಸ್ವಾಯತ್ತ ಕಾಲೇಜುಗಳಾದ ಜೆಎಸ್ಎಸ್ ಮಹಿಳಾ ಕಾಲೇಜು, ಊಟಿ ರಸ್ತೆಯ ಜೆಎಸ್ಎಸ್ ಕಾಲೇಜು, ಮಹಾಜನ ಪ್ರಥಮ ದರ್ಜೆ ಕಾಲೇಜು, ಬನ್ನಿ ಮಂಟಪದ ಸೆಂಟ್ ಫಿಲೋಮಿನಾ ಕಾಲೇಜಿಗೆ ಪರಾಮರ್ಶನಾ ಸಮಿತಿಯು ಸಲ್ಲಿಸಿದ ವರದಿಗಳಿಗೆ ಒಪ್ಪಿಗೆ ನೀಡಲಾಯಿತು.
ಹಣಕಾಸು ಅಧಿಕಾರಿ ಕೆ.ಎಸ್. ರೇಖಾ ಅವರು 2021-22, 2022-23ನೇ ಸಾಲಿನ ವಿವಿಯ ವಾರ್ಷಿಕ ಲೆಕ್ಕ ಪತ್ರಗಳಿಗೆ ಒಪ್ಪಿಗೆ ಪಡೆದುಕೊಂಡರು.