Asianet Suvarna News Asianet Suvarna News

ಬೆಂಗ್ಳೂರಲ್ಲಿ ನೀರಿಗಾಗಿ ಹಾಹಾಕಾರ: ಆತಂಕದಲ್ಲಿ ಸಿಲಿಕಾನ್‌ ಸಿಟಿ ಜನತೆ..!

1.5 ಲಕ್ಷ ಕೊಳವೆ ಬಾವಿಗಳಲ್ಲಿ ನೀರು ಮಟ್ಟ ಕುಸಿತ । ನಿಯಂತ್ರಣವಿಲ್ಲದೆ ಅಂತರ್ಜಲ ಹೀರುತ್ತಿರುವ ರಾಜಧಾನಿ । ನೀರು ಮರುಪೂರಣಕ್ಕೆ ನಿರಾಸಕ್ತಿ, 10 ವರ್ಷ ಹಿಂದೆ ಜಲಕ್ಷಾಮದ ಎಚ್ಚರಿಸಿದ್ದ ಕೇಂದ್ರ । ಅಂತರ್ಜಲ ಬಳಕೆ ಕಾಯ್ದೆ ನೀರಲ್ಲಿ ಹೋಮ । ಸಮಸ್ಯೆ ಉಲ್ಬಣಿಸಿದಾಗ ಜಲಮಂಡಳಿ ಪರದಾಟ

More Than 1 Lakh Borewells Completely Drained Last 15 Days in Bengaluru grg
Author
First Published Mar 8, 2024, 6:28 AM IST

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಮಾ.08): ಬೇಸಿಗೆ ಆರಂಭಗೊಳ್ಳುತ್ತಿದಂತೆ ರಾಜಧಾನಿ ಬೆಂಗಳೂರಿನಲ್ಲಿರುವ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಕಳೆದ 15 ದಿನದಲ್ಲಿ ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಕೊಳವೆ ಬಾವಿಗಳ ಒಡಲು ಸಂಪೂರ್ಣ ಬರಿದಾಗಿರುವುದು ತೀವ್ರ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ಬೆಂಗಳೂರಿನ 1.40 ಕೋಟಿ ಮಹಾಜನತೆಗೆ ಪ್ರತಿ ದಿನ ಕಾವೇರಿಯಿಂದ 1,450 ಎಂಎಲ್‌ಡಿಯಷ್ಟು ನೀರು ಪಂಪ್‌ ಮಾಡಿ ಪೂರೈಕೆ ಮಾಡಲಾಗುತ್ತಿದೆ. ಅಲ್ಲದೇ, ಪ್ರತಿ ದಿನ ಸುಮಾರು 4.5 ಲಕ್ಷಕ್ಕೂ ಅಧಿಕ ಕೊಳವೆ ಬಾವಿಗಳಿಗೆ ಸುಮಾರು 400 ಎಂಎಲ್‌ಡಿ ನೀರನ್ನು ಭೂ ಗರ್ಭದಿಂದ ಹೀರಲಾಗುತ್ತಿದೆ. ಆದರೆ, ಅಂತರ್ಜಲಕ್ಕೆ ಒಂದು ಒಂದು ಹನಿ ನೀರನ್ನು ಮರು ಪೂರ್ಣ ಮಾಡುವುದಕ್ಕೆ ಕ್ರಮ ಕೈಗೊಂಡಿಲ್ಲ. ಅದರ ಪರಿಣಾಮವಾಗಿ ಇದೀಗ ಕಳೆದ 15 ದಿನದಲ್ಲಿ ಬೆಂಗಳೂರಿನ ಹೃದಯ ಭಾಗದ ವಿವಿಧ ಬಡಾವಣೆಗಳಲ್ಲಿನ ಸುಮಾರು 1 ಲಕ್ಷದಷ್ಟು ಕೊಳವೆ ಬಾವಿಗಳು ಒಣಗಿ ಹೋಗಿವೆ. ಅಷ್ಟೇ ಅಲ್ಲ ಸುಮಾರು 1.5 ಲಕ್ಷಕ್ಕೂ ಅಧಿಕ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಇನ್ನಷ್ಟು ದಿನ ಮತ್ತಷ್ಟು ಕೊಳವೆ ಬಾವಿಗಳ ಒಡಲು ಖಾಲಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬೆಂಗಳೂರು ನಿವಾಸಿಗಳೇ ನೀರಿಗಾಗಿ ಮಾಸಿಕ 6,000 ರೂ. ಭರಿಸಲು ಸಿದ್ಧರಾಗಿ; ಇಲ್ಲವೆಂದರೆ ನೀರು ಸಿಗೊಲ್ಲ!

ಕಾವೇರಿ ಮೇಲೆ ಒತ್ತಡ ಹೆಚ್ಚು

ನಗರದಲ್ಲಿ ಸುಮಾರು 10.84 ಲಕ್ಷ ಕಾವೇರಿ ನೀರಿನ ಸಂಪರ್ಕ ಪಡೆದುಕೊಂಡಿದ್ದಾರೆ. ಈ ಪೈಕಿ ಅರ್ಧದಷ್ಟು ಮಂದಿ ಇಷ್ಟು ದಿನ ಸ್ವಂತ ಕೊಳವೆ ಬಾವಿಗಳನ್ನು ಹೊಂದಿದ್ದಾರೆ. ಕುಡಿಯುವುದಕ್ಕೆ ಮಾತ್ರ ಕಾವೇರಿ ನೀರು ಬಳಕೆ ಮಾಡುತ್ತಿದ್ದರು. ಇದೀಗ ತಮ್ಮ ಕೊಳವೆ ಬಾವಿಯಲ್ಲಿ ನೀರಿನ ಮಟ್ಟ ಕುಸಿಯುವುದು, ಖಾಲಿಯಾಗುತ್ತಿರುವುದರಿಂದ ಕಾವೇರಿ ನೀರಿನ ಬಳಕೆ ಪ್ರಮಾಣ ಹೆಚ್ಚು ಮಾಡಿದ್ದಾರೆ. ಇದರಿಂದ ಕಾವೇರಿ ನೀರಿನ ಪೂರೈಕೆ ಮೇಲಿನ ಒತ್ತಡ ಹೆಚ್ಚಾಗುವುದಕ್ಕೆ ಪ್ರಮುಖ ಕಾರಣವಾಗಿದೆ.

ಮಂಡಳಿ ಅಧಿಕಾರಿಗಳ ಪರದಾಟ:

ಕೊಳವೆ ಬಾವಿಯಲ್ಲಿ ನೀರಿನ ಮಟ್ಟ ಕುಸಿಯುತ್ತಿರುವುದರಿಂದ ಇಷ್ಟು ದಿನ ನೀರು ಪೂರೈಕೆ ಮಾಡುತ್ತಿದ್ದ ಪ್ರದೇಶಗಳಿಗೆ ಇದೀಗ ಕಾವೇರಿ ನೀರು ಪೂರೈಕೆ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಕೊರತೆ ಪ್ರಮಾಣ ಹೆಚ್ಚಾಗುತ್ತಿದೆ. ಹೀಗಾಗಿ, ಜಲಮಂಡಳಿ ಅಧಿಕಾರಿಗಳು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

2013ರಲ್ಲಿಯೇ ಎಚ್ಚರಿಕೆ ಕಡೆಗಣನೆ

ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರುವ ಬಗ್ಗೆ ಹತ್ತು ವರ್ಷಗಳ ಮೊದಲೇ ಕೇಂದ್ರೀಯ ಅಂತರ್ಜಲ ಮಂಡಳಿ -2013ನೇ ವರದಿಯಲ್ಲಿ ಎಚ್ಚರಿಸಿತ್ತು. ಸುಸ್ಥಿರ ಅಂತರ್ಜಲ ನಿರ್ವಹಣೆ ವರದಿಯಲ್ಲಿ ಕರ್ನಾಟಕದ ಅಂತರ್ಜಲ ಮಟ್ಟದ ಆಧಾರದ ಮೇಲೆ ನಾಲ್ಕು ವಿಭಾಗಗಳನ್ನಾಗಿ ಮಾಡಲಾಗಿತ್ತು. ಅವುಗಳಲ್ಲಿ ಅಂತರ್ಜಲ ಮಟ್ಟ ಉತ್ತಮವಾಗಿ ಇರುವ ಪ್ರದೇಶಗಳನ್ನು ಸುರಕ್ಷಿತ, ಅರೆ ಶೋಷಿತ ಎಂದೂ, ಅಂತರ್ಜಲ ಮಟ್ಟ ಕುಸಿಯುತ್ತಿರುವ ಪ್ರದೇಶಗಳನ್ನು ಶೋಷಿತ ಹಾಗೂ ಅತಿ ಶೋಷಿತ ಎಂದು ಗುರುತಿಸಲಾಗಿತ್ತು. ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶಗಳು ಅತಿ ಶೋಷಿತ ಅಂತರ್ಜಲ ಮಟ್ಟದಲ್ಲಿ ಗುರುತಿಸಿಕೊಂಡಿದ್ದವು. ಆದರೆ, ಈ ಬಗ್ಗೆ ನಿರ್ಲಕ್ಷ್ಯ ಧೋರಣೆಯಿಂದ ಇದೀಗ ಬೆಂಗಳೂರು ನೀರಿನ ಸಮಸ್ಯೆಗೆ ತುತ್ತಾಗಿದೆ.

ಇತಿ ಇಲ್ಲ, ಮಿತಿ ಇಲ್ಲ:

ಕೈಗಾರಿಕೋದ್ಯಮಿಗಳು ದಿನಕ್ಕೆ 25 ಸಾವಿರ ಲೀಟರ್ ಮಾತ್ರ ಅಂತರ್ಜಲವನ್ನು ಹೊರ ತೆಗೆಯಬೇಕೆಂಬ ನಿಯಮವಿದೆ. ಆದರೆ, ನಗರದಲ್ಲಿ ಟ್ಯಾಂಕರ್‌ ಮೂಲಕ ನೀರು ಮಾರಾಟ ಮಾಡುವವರು, ಅಪಾರ್ಟ್‌ಮೆಂಟ್ ಮಾಲೀಕರು, ಕೈಗಾರಿಕೆಗಳು, ಕಟ್ಟಡ ನಿರ್ಮಾಣ ಕಂಪನಿಗಳು ಈ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಕಡಿವಾಣ ಹಾಕಬೇಕಾದ ಅಧಿಕಾರಿಗಳು ಕಣ್ಮುಚ್ಚಿ ಕೊಂಡು ಕುಳಿತುಕೊಂಡಿರುವುದು ದುರಂತ ಸಂಗತಿಯಾಗಿದೆ.

ಬೆಂಕಿ ಬಿದ್ದಾಗ ಬಾವಿ ತೋಡಲು ಮುಂದಾದ ಜಲ ಮಂಡಳಿ?

ಇಷ್ಟು ದಿನ ಬೆಂಗಳೂರಿನ ತ್ಯಾಜ್ಯ ನೀರನ್ನು ಹೊರ ಜಿಲ್ಲೆಗಳಿಗೆ ಹರಿಸಲಾಗುತ್ತಿತ್ತು. ಇದೀಗ ನಗರದಲ್ಲಿ ಕೊಳವೆ ಬಾವಿಗಳು ಬತ್ತಿ ಹೋಗಿ ಜಲ ಕ್ಷಾಮ ಉಂಟಾಗಿರುವುದರಿಂದ ಇದೀಗ ಬೆಂಗಳೂರಿನಲ್ಲಿರುವ ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ತುಂಬಿಸಿ ಅಂತರ್ಜಲ ಮಟ್ಟ ಮರು ಪೂರ್ಣಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸುವುದಕ್ಕೆ ಬೆಂಗಳೂರು ಜಲ ಮಂಡಳಿ ಅಧಿಕಾರಿಗಳು ಮುಂದಾಗಿದ್ದಾರೆ. ಈ ಕಾರ್ಯದಿಂದ ಸದ್ಯದ ನೀರಿನ ಸಮಸ್ಯೆ ಪರಿಹಾರವಾಗುವುದಿಲ್ಲ. ಆದರೆ, ಮುಂದಿನ ದಿನದಲ್ಲಿ ಈ ರೀತಿಯ ಸಮಸ್ಯೆ ಎದುರಾದಾಗ ಸ್ವಲ್ಪ ಮಟ್ಟಿನ ಸುಧಾರಣೆ ಆಗಬಹುದಷ್ಟೇ.

ಬೆಂಗಳೂರಿನ ಖಾಸಗಿ ನೀರಿನ ಟ್ಯಾಂಕರ್‌ಗೆ ಕೇವಲ 600 ರೂ. ದರ ನಿಗದಿಪಡಿಸಿದ ಸರ್ಕಾರ!

ಎಲ್ಲಿ ಎಷ್ಟು ಅಂತರ್ಜಲ ಮಟ್ಟ ಕುಸಿತ?

ಬೆಂಗಳೂರು ವ್ಯಾಪ್ತಿಯಲ್ಲಿ ಅತಿ ಹೆಚ್ಚು ಆನೇಕಲ್‌ನಲ್ಲಿ 7.42 ಮೀಟರ್ ನಷ್ಟು ಅಂತರ್ಜಲ ಕುಸಿತ ಆಗಿದೆ. ಯಲಹಂಕ ವ್ಯಾಪ್ತಿಯಲ್ಲಿ 7.31 ಮೀಟರ್, ಬೆಂಗಳೂರು ಪೂರ್ವದಲ್ಲಿ 5.81 ಮೀಟರ್, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಉತ್ತರ ಭಾಗದಲ್ಲಿ ತಲಾ ಒಂದು ಮೀಟರ್‌ಗಿಂತ ಅಂತರ್ಜಲ ಕುಸಿದಿದೆ.

ಬಳಕೆ ಪ್ರಮಾಣ ಹೆಚ್ಚಾಗಿ ಮರು ಪೂರ್ಣ ಪ್ರಮಾಣ ಕಡಿಮೆಯಾಗಿರುವುದು ಕೊಳವೆ ಬಾವಿಗಳನ್ನು ಒತ್ತಿ ಹೋಗುವುದಕ್ಕೆ ಮುಖ್ಯ ಕಾರಣವಾಗಿದೆ. ನಗರಿಕರಣ ಹೆಚ್ಚಾಗಿರುವುದು ಹಾಗೂ ಬೆಂಗಳೂರು ಗಟ್ಟಿ ಶಿಲೆಗಳಿಂದ ಕೂಡಿದೆ. ಹೀಗಾಗಿ, ಬಿದ್ದ ಮಳೆ ಸಂಪೂರ್ಣವಾಗಿ ಅಂತರ್ಜಲ ಮಟ್ಟ ಮರು ಪೂರ್ಣವಾಗುವುದಿಲ್ಲ. ಕಡಿಮೆ ಮಳೆ ಬಿದ್ದ ವರ್ಷದಲ್ಲಿ ಈ ರೀತಿ ಸಮಸ್ಯೆ ಹೆಚ್ಚಾಗಲಿದೆ. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಜಲ ತಜ್ಞ ಡಾ। ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.  

Follow Us:
Download App:
  • android
  • ios