Asianet Suvarna News Asianet Suvarna News

Mandya : ಮಿಮ್ಸ್‌ ಆಸ್ಪತ್ರೆ ಅವ್ಯವಸ್ಥೆಗಳ ಅನಾವರಣ

ಕೊರೋನಾ ಸಮಯದಲ್ಲಿ ಕೊಟ್ಟಹಾಸಿಗೆಗಳು ಹೆಗ್ಗಣಗಳ ಪಾಲು. ಹೆರಿಗೆ ವಾರ್ಡ್‌ನೊಳಗಿರುವವರ ಗೋಳು ಕೇಳೋರಿಲ್ಲ.

Mandya Mims Hospital is a hotbed of chaos snr
Author
First Published Jan 18, 2023, 6:58 AM IST

  ಮಂಡ್ಯ :  ಕೊರೋನಾ ಸಮಯದಲ್ಲಿ ಕೊಟ್ಟಹಾಸಿಗೆಗಳು ಹೆಗ್ಗಣಗಳ ಪಾಲು. ಹೆರಿಗೆ ವಾರ್ಡ್‌ನೊಳಗಿರುವವರ ಗೋಳು ಕೇಳೋರಿಲ್ಲ. ಎಂಆರ್‌ಐ ಸ್ಕಾ್ಯನಿಂಗ್‌ ರಿಪೋರ್ಚ್‌ ಸಕಾಲಕ್ಕೆ ಸಿಗುತ್ತಿಲ್ಲ, ಬಡವರಿಗೆ ಐಸಿಯು ಬೆಡ್‌ ಕೊಡುತ್ತಿಲ್ಲ, ಔಷಧಗಳನ್ನು ಹೊರಗೆ ಬರೆದುಕೊಡುವುದಾದರೆ ಆಸ್ಪತ್ರೆಯೊಳಗಿನ ಔಷಧಗಳು ವ್ಯರ್ಥವೇ? - ಹೀಗೆ ನಗರಸಭಾ ಸದಸ್ಯರಿಂದ ನೂರೆಂಟು ಪ್ರಶ್ನೆಗಳು ಮಿಮ್ಸ್‌ ಆಸ್ಪತ್ರೆ ಆರ್‌ಎಂಒ ಡಾ.ವೆಂಕಟೇಶ್‌ ಕಡೆ ತೂರಿಬಂದವು. ರೋಗಿಗಳಿಗೆ ಆಸ್ಪತ್ರೆಯಿಂದ ತೃಪ್ತಿದಾಯಕ ಸೇವೆ ದೊರೆಯದಿರುವುದನ್ನು ಒಪ್ಪಿಕೊಂಡು ಕೊರತೆಗಳನ್ನು ವಿವರಿಸುತ್ತಾ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

ಮಂಗಳವಾರ ನಗರಸಭೆಯ ಧರಣಪ್ಪ ಸಭಾಂಗಣದಲ್ಲಿ ಅಧ್ಯಕ್ಷ ಹೆಚ್‌.ಎಸ್‌.ಮಂಜು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಸದಸ್ಯ ಶ್ರೀಧರ್‌ ಜಿಲ್ಲಾಸ್ಪತ್ರೆಯೊಳಗಿನ ಲೋಪ-ದೋಷಗಳನ್ನು ವಿವರಿಸಿದರು. ಇದಕ್ಕೆ ಉತ್ತರಿಸಿದ ಆರ್‌ಎಂಒ ವೆಂಕಟೇಶ್‌, ಆಸ್ಪತ್ರೆಯಲ್ಲಿ ವೈದ್ಯರು, ದಾದಿಯರ ಕೊರತೆ ಬಹಳಷ್ಟಿದೆ. 280 ಶೌಚಾಲಯಗಳಿಗೆ 16 ಜನರಷ್ಟೇ ಸ್ವಚ್ಛತಾ ನೌಕರರಿದ್ದಾರೆ. 120 ನಾನ್‌ ಕ್ಲಿನಿಕಲ್‌ ಸಿಬ್ಬಂದಿ ನೇಮಕಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಹೇಳಿದರು.

ಹೆರಿಟೇಜ್‌ ಕಟ್ಟಡ ದುರಸ್ತಿಗೆ 1.17 ಕೋಟಿ ರು.:

ಮಳೆ ಬಂದರೆ ಹೆರಿಗೆ ವಾರ್ಡ್‌ನೊಳಗೆ ನೀರು ತುಂಬಿಕೊಳ್ಳುತ್ತದೆ. ಅಲ್ಲಿನ ಗರ್ಭಿಣಿಯರು, ಬಾಣಂತಿಯರ ಗತಿ ಏನು. ಈ ವ್ಯವಸ್ಥೆ ಸರಿಪಡಿಸುವಂತೆ ಹಿಂದೆ ಇದ್ದ ಮಿಮ್ಸ್‌ ನಿರ್ದೇಶಕರಿಗೂ ಪತ್ರ ಮೂಲಕ ತಿಳಿಸಿದ್ದೆ. ಇದುವರೆಗೂ ಕ್ರಮ ವಹಿಸಿಲ್ಲ ಎಂದು ಸದಸ್ಯೆ ಸೌಭಾಗ್ಯ ದನಿ ಎತ್ತಿದರು.

ಹೆರಿಗೆ ವಾರ್ಡ್‌ನಲ್ಲಿರುವುದೇ 18 ಬೆಡ್‌ಗಳು. ದಿನಕ್ಕೆ 25 ಹೆರಿಗೆಗಳಾಗುತ್ತವೆ. ಅನಿವಾರ್ಯ ಸಂದರ್ಭದಲ್ಲಷ್ಟೇ ಇಬ್ಬಿಬ್ಬರನ್ನು ಒಂದು ಹಾಸಿಗೆ ಮೇಲೆ ಮಲಗಿಸಲಾಗುತ್ತದೆ. ಉಳಿದಂತೆ ಬೇರಡೆ ಹಾಸಿಗೆ ಕೊಟ್ಟು ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಡಾ.ವೆಂಕಟೇಶ್‌ ಸಮಜಾಯಿಷಿ ನೀಡಿದರು.

ಹೆರಿಗೆ ವಾರ್ಡ್‌ ಇರುವ ಕಲ್ಲು ಕಟ್ಟಡ ಪಾರಂಪರಿಕ ಕಟ್ಟಡವಾಗಿದೆ. ಇದನ್ನು ದುರಸ್ತಿಪಡಿಸಲು ನಿರ್ಮಿತಿ ಕೇಂದ್ರದ ಮೂಲಕ 1.17 ಕೋಟಿ ರು. ವೆಚ್ಚದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಸರ್ಕಾರದ ಮಂಜೂರಾತಿ ದೊರಕಿದ ಕೂಡಲೇ ದುರಸ್ತಿಗೆ ಕ್ರಮ ವಹಿಸಲಾಗುವುದು. ಮುಂದಿನ ಮಳೆಗಾಲದ ವೇಳೆಗೆ ಕಟ್ಟಡವನ್ನು ಸುಸ್ಥಿತಿಗೆ ತರಲಾಗುವುದು ಎಂದು ಡಾ.ವೆಂಕಟೇಶ್‌ ಉತ್ತರಿಸಿದರು.

ಹಾಸಿಗೆಗಳು ಹೆಗ್ಗಣಗಳ ಪಾಲು:

ಸದಸ್ಯ ನಹೀಂ ಮಾತನಾಡಿ, ಕೊರೋನಾ ಸಮಯದಲ್ಲಿ ಬಂದ ನೂರಾರು ಹಾಸಿಗೆಗಳನ್ನು ಏನು ಮಾಡಿದಿರಿ. ಆ ಬೆಡ್‌ಗಳನ್ನು ಗರ್ಭಿಣಿಯರು, ಬಾಣಂತಿಯರ ಉಪಯೋಗಕ್ಕೆ ಬಳಸುತ್ತಿಲ್ಲವೇಕೆ. ಮಂಚಗಳನ್ನು ಜೋಡಿಸಿ ಒಂದೊಂದು ಬೆಡ್‌ಗೆ ಇಬ್ಬರು ಬಾಣಂತಿಯರನ್ನು ಮಲಗಿಸಿ ಅಮಾನವೀಯವಾಗಿ ನಡೆಸಿಕೊಳ್ಳುವುದು ಸರಿಯೇ ಎಂದು ಪ್ರಶ್ನಿಸಿದರು. ಇದಕ್ಕೆ ದನಿಗೂಡಿಸಿದ ಸದಸ್ಯ ಶಿವಲಿಂಗಪ್ಪ, ಕೊರೋನಾ ಸಮಯದಲ್ಲಿ ಕೊಟ್ಟಬೆಡ್‌ಗಳು ಹೆಗ್ಗಣಗಳ ಪಾಲಾಗುತ್ತಿವೆ. ಖಾಸಗಿ ನರ್ಸಿಂಗ್‌ಹೋಂಗಳಿಗೆ ಅನುಕೂಲ ಮಾಡಿಕೊಡುವುದಕ್ಕಾಗಿಯೇ ಎಂಆರ್‌ಐ ಸ್ಕಾ್ಯನಿಂಗ್‌ ವರದಿ ನೀಡುವುದನ್ನು ವಿಳಂಬ ಮಾಡುತ್ತಿರುವಿರಾ ಎಂದು ಕಿಡಿಕಾರಿದರು.

ಎಂಆರ್‌ಐ ಸ್ಕಾ್ಯನಿಂಗ್‌ ವರದಿ ಶೀಘ್ರ ನೀಡುವುದರಲ್ಲಿ ವೈದ್ಯರ ನಡುವೆ ಸಮನ್ವಯದ ಕೊರತೆ ಇದೆ ಎಂದು ಆರ್‌ಎಂಒ ಡಾ.ವೆಂಕಟೇಶ್‌ ಹೇಳಿದಾಗ, ಅದನ್ನು ಸರಿಪಡಿಸಬೇಕಾದವರು ಯಾರು. ನಿಮ್ಮ ಲೋಪಕ್ಕೆ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳು ಬಲಿಯಾಗಬೇಕೇ ಎಂದು ಸದಸ್ಯರು ದೂಷಿಸಿದರು.

ಸಮಸ್ಯೆಗಳು ಬಂದಾಗ ನನಗೆ ಫೋನ್‌ ಮಾಡುವಂತೆ ಪದೇ ಪದೇ ಆರ್‌ಎಂಒ ಡಾ.ವೆಂಕಟೇಶ್‌ ಹೇಳುತ್ತಿದ್ದರಿಂದ ಆಕ್ರೋಶಗೊಂಡ ಸದಸ್ಯರು ಆಸ್ಪತ್ರೆಗೆ ಬರುವ ಸಾವಿರಾರು ಜನರು ನಿಮಗೆ ಫೋನ್‌ ಮಾಡಲಾಗುವುದೇ. ಅವರೆಲ್ಲರ ಫೋನ್‌ಗಳಿಗೆ ಸ್ಪಂದಿಸಿ ಸಮಸ್ಯೆ ಬಗೆಹರಿಸುವಿರಾ ಎಂದು ಪ್ರಶ್ನಿಸಿದರು.

ಆಸ್ಪತ್ರೆ ಔಷಧಗಳು ವ್ಯರ್ಥವೇ?:

ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬರುವ ಬಹಳಷ್ಟುರೋಗಿಗಳಿಗೆ ವೈದ್ಯರು ಹೊರಗಡೆಗೆ ಔಷಧಗಳನ್ನು ಬರೆದುಕೊಡುತ್ತಾರೆ. ಹಾಗಾದರೆ ಆಸ್ಪತ್ರೆಯಲ್ಲಿ ನೀಡುವ ಔಷಧಗಳು ಉಪಯೋಗಕ್ಕೆ ಬಾರದವೇ. ಅವುಗಳನ್ನು ತರಿಸುವ ಉದ್ದೇಶವಾದರೂ ಏನು ಎಂದು ಸದಸ್ಯ ಎಂ.ಪಿ.ಅರುಣ್‌ಕುಮಾರ್‌ ಪ್ರಶ್ನಿಸಿದಾಗ ಡಾ.ವೆಂಕಟೇಶ್‌ ಅವರಿಂದ ಸಮರ್ಪಕ ಉತ್ತರ ಬರಲೇ ಇಲ್ಲ.

ಸಭೆಯಲ್ಲಿ ಉಪಾಧ್ಯಕ್ಷೆ ಇಶ್ರತ್‌ ಫಾತೀಮಾ, ಆಯುಕ್ತ ಮಂಜುನಾಥ್‌ ಇದ್ದರು.

3 ದಿನಗಳೊಳಗೆ ಎಂಆರ್‌ಐ ವರದಿ

ಎಂಆರ್‌ಐ ಸ್ಕಾ್ಯನಿಂಗ್‌ ವರದಿಯನ್ನು ನೀಡಲು ಎಷ್ಟುಸಮಯ ಬೇಕು ಎಂದು ಸದಸ್ಯರು ಕೇಳಿದಾಗ, ದಿನಕ್ಕೆ 25 ಎಂಆರ್‌ಐ, 50 ಸಿಟಿ ಸ್ಕಾ್ಯನ್‌ ಆಗುತ್ತದೆ. ಮೂವರು ರೇಡಿಯಾಲಜಿ ವೈದ್ಯರು ಮಾತ್ರ ಆಸ್ಪತ್ರೆಯಲ್ಲಿದ್ದಾರೆ. ಇದರಿಂದಾಗಿ ವರದಿ ನೀಡುವುದಕ್ಕೆ ವಿಳಂಬವಾಗುತ್ತಿದೆ ಎಂದು ವೆಂಕಟೇಶ್‌ ತಿಳಿಸಿದಾಗ, ವರದಿ ಯಾವಾಗ ಸಿಗುತ್ತದೆ ಎಂಬ ಬಗ್ಗೆ ನಿಖರ ಮಾಹಿತಿಯನ್ನು ನೀಡದೆ ಅದನ್ನು ಕೇಳುವವರ ಮೇಲೆ ಸಿಬ್ಬಂದಿ ದರ್ಪ ತೋರುತ್ತಾರೆ ಎಂದು ಸದಸ್ಯರು ಪ್ರತಿಯಾಗಿ ದೂರಿದರು. ಆಗ ವೆಂಕಟೇಶ್‌ ಇನ್ನು ಮುಂದೆ ಎಂಆರ್‌ಐ ಸ್ಕಾ್ಯನಿಂಗ್‌ ಆದ ಮೂರು ದಿನಗಳೊಳಗೆ ವರದಿ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.

ಐಸಿಯು ಬೆಡ್‌ಗಳು ಪ್ರಭಾವಿಗಳಿಗಷ್ಟೇನಾ?

ಅಧ್ಯಕ್ಷ ಹೆಚ್‌.ಎಸ್‌.ಮಂಜು ಹಾಗೂ ಸದಸ್ಯ ನಹೀಂ ಮಾತನಾಡಿ, ತುರ್ತು ಚಿಕಿತ್ಸೆಗೆ ಬರುವ ಬಡ ರೋಗಿಗಳು ಐಸಿಯು ಬೆಡ್‌ ಕೇಳಿದರೆ ಇಲ್ಲ ಎನ್ನುತ್ತೀರಿ. ಅವರನ್ನು ನಾಯಿಗಳನ್ನು ಅಟ್ಟುವಂತೆ ಹೊರಗಟ್ಟುತ್ತೀರಿ. ಅದೇ ನಾವು ಐಸಿಯು ಬೆಡ್‌ ಕೇಳಿದರೆ ಕಳುಹಿಸಿ ಎನ್ನುತ್ತೀರಿ. ಹಾಗಾದರೆ ಆಸ್ಪತ್ರೆ ಐಸಿಯು ಬೆಡ್‌ಗಳು ರಾಜಕಾರಣಿಗಳು, ಪ್ರಭಾವಿಗಳಿಗೆ ಮಾತ್ರನಾ ಇರೋದು. ಮೊದಲು ನಿಮ್ಮ ಕಾರ್ಯವೈಖರಿಯನ್ನು ಸರಿಪಡಿಸಿ. ಬಡ ರೋಗಿಗಳಿಗೆ ಸ್ಪಂದಿಸುವ ಮಾನವೀಯ ಗುಣವನ್ನು ಬೆಳೆಸಿಕೊಳ್ಳಿ ಎಂದು ಬುದ್ಧಿಮಾತು ಹೇಳಿದರು

Follow Us:
Download App:
  • android
  • ios