ಕೆ.ಆರ್‌ .ಪೇಟೆ (ಅ.22):  ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗೃಹಿಣಿ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಪತಿ ಸಾವನ್ನಪ್ಪಿದ್ದು, ಅತ್ತೆ, ಮಾವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ತಾಲೂಕಿನ ಹೆಮಡಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ನಾಗಮಣಿ ಪತಿ ನಾಗರಾಜು(50) ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮಾವ ವೆಂಕಟೇಗೌಡ(70), ಅತ್ತೆ ಕುಳ್ಳಮ್ಮ (60) ತಲೆಗೆ ಗಂಭೀರ ಪೆಟ್ಟು ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಡ್ರಗ್ಸ್ ಸೇವಿಸೋದನ್ನ ಪತ್ನಿ ಕೈಲಿ ವಿಡಿಯೋ ಮಾಡಿಸಿದ ಪತಿ; ಸಹಕರಿಸು ಎಂದು ಪತ್ನಿಗೂ ಹಿಂಸೆ ...

ಕಳೆದ 5 ದಿನಗಳ ಹಿಂದೆ ಕೌಟುಂಬಿಕ ಕಲಹದಿಂದ ನಾಗಮಣಿ ತನ್ನ ಪತಿ, ಅತ್ತೆ ಮತ್ತು ಮಾವನಿಗೆ ನಡುರಾತ್ರಿ ಮಲಗಿದ್ದ ಸಮಯದಲ್ಲಿ ತುರಿಯುವ ಮಣೆಯಿಂದ ತಲೆಗೆ ಮಾರಣಾಂತಿಕವಾಗಿ ಹೊಡೆದು ಕೊಲೆಗೆ ಯತ್ನಿಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಗಾಯಾಳುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಬುಧವಾರ ಪತಿ ನಾಗರಾಜು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ನಾಗಮಣಿ ಸದಾ ಕುಟುಂಬ ಸದಸ್ಯರ ಜೊತೆಗೆ ಸಣ್ಣಪುಟ್ಟವಿಷಯಕ್ಕೆ ಜಗಳ ಮಾಡುತ್ತಿದ್ದರು. ಹಲವಾರು ಬಾರಿ ರಾಜಿ ಪಂಚಾಯಿತಿಗಳು ನಡೆದಿದ್ದರೂ ಆಕೆ ಯಾರ ಮಾತನ್ನೂ ಕೇಳುವ ಮನಸ್ಥಿತಿಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ. ಮನೆಯಲ್ಲಿ ಹೊಂದಾಣಿಕೆಯ ಕೊರತೆ ಇತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಸಂಬಂಧ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿ ನಾಗಮಣಿಯನ್ನು ಪೊಲೀಸರು ಬಂಧಿಸಿದ್ದಾರೆ