ಲಕ್ಷ್ಮೇಶ್ವರ: ಮನೆಯನ್ನೇ ಹಸಿರು ವನವನ್ನಾಗಿ ಮಾಡಿಕೊಂಡ ದಂಪತಿ
ಚೆನ್ನಯ್ಯ ಶಿಗ್ಲಿ ಹಿರೇಮರ ಮನೆಯಲ್ಲಿಯೇ ಹಲವು ಬಗೆಯ ಸಸ್ಯ, ಅಲಂಕಾರಿಕ ಸಸಿಗಳ ಪಾಲನೆ| ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣ| ಸಸ್ಯ ಸಂಕುಲ ಮನುಷ್ಯನ ಜೀವಾಳ|
ಅಶೋಕ ಸೊರಟೂರ
ಲಕ್ಷ್ಮೇಶ್ವರ(ಜೂ.05): ಗೇರು ಅಭಿವೃದ್ಧಿ ಮಂಡಳಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಚೆನ್ನಯ್ಯ ಶಿಗ್ಲಿ ಹಿರೇಮಠ ಅವರು ತಮ್ಮ ಮನೆಯನ್ನು ಸಸ್ಯಕಾಶಿಯನ್ನಾಗಿ ಮಾಡಿಕೊಳ್ಳುವ ಮೂಲಕ ಪರಿಸರ ಪ್ರೇಮಕ್ಕೆ ಮಾದರಿಯಾಗಿದ್ದಾರೆ.
ಪಟ್ಟಣದ ಕೆಂಪಿಗೆರೆ ಕೆರೆಯ ಪಕ್ಕದಲ್ಲಿನ ಈಶ್ವರ ನಗರದಲ್ಲಿ ಚೆನ್ನಯ್ಯ ಶಿಗ್ಲಿಹಿರೇಮಠ ಅವರ ಮನೆಯಲ್ಲಿ ಎಲ್ಲಿ ನೋಡಿದಲ್ಲಿ ನೂರಾರು ಬಗೆಯ ಸಸ್ಯಗಳು ಕಾಣ ಸಿಗುವ ಮೂಲಕ ಮನೆಯನ್ನೇ ಹಸಿರು ವನವನ್ನಾಗಿಸಿಕೊಂಡಿದ್ದಾರೆ.
ಕುಂದಗೋಳ ತಾಲೂಕಿನ ಹರ್ಲಾಪುರ ಗ್ರಾಮದ ಚೆನ್ನಯ್ಯ ಅವರು ಕರಾವಳಿ ಭಾಗದಲ್ಲಿನ ಗೇರು ಅಭಿವೃದ್ಧಿ ಮಂಡಳಿಯಲ್ಲಿ ಸುಮಾರು 34 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯ ನಂತರ ಕಳೆದ 7-8 ವರ್ಷಗಳಿಂದ ಲಕ್ಷ್ಮೇಶ್ವರದಲ್ಲಿ ವಾಸವಾಗಿದ್ದಾರೆ.
ವಿಶ್ವ ಪರಿಸರ ದಿನ: ನೀರುಳಿಸುವ 10 ಉಪಾಯಗಳು
ಪ್ರತಿವರ್ಷ ಜೂ. 5 ವಿಶ್ವ ಪರಿಸರ ದಿನವನ್ನು ಆಚರಿಸುವ ಹೊತ್ತಲ್ಲಿ ಚೆನ್ನಯ್ಯ ಮತ್ತು ಮೀನಾಕ್ಷಿ ದಂಪತಿ ಮನೆಯಲ್ಲಿನ ಸಸ್ಯಕಾಶಿ ನಿಜವಾದ ಪರಿಸರ ಪ್ರೇಮ ಎಂದರೆ ಏನು ಎನ್ನುವುದನ್ನು ಎತ್ತಿ ತೋರಿಸುತ್ತದೆ. ಪ್ರತಿಯೊಂದು ಸಸ್ಯವನ್ನು ತಮ್ಮ ಮಗುವಂತೆ ಜೋಪಾನ ಮಾಡುವ ದಂಪತಿಯಲ್ಲಿ ನಿಜವಾದ ಪರಿಸರ ಕಾಳಜಿ ಎದ್ದು ಕಾಣುತ್ತದೆ.
ವಿವಿಧ ಬಗೆಯ ಸಸ್ಯಗಳಲ್ಲಿ ಹೂವು, ಹಣ್ಣು ಮತ್ತು ಅಲಂಕಾರಿಕ ಸಸ್ಯಗಳಾಗಿ ವಿಂಗಡಿಸಬಹುದು. ಹೂವಿನ ವಿಭಾಗದಲ್ಲಿ ಜಾಜಿ, ಸೂಜಿ ಮಲ್ಲಿಗೆ, ದುಂಡು ಮಲ್ಲಿಗೆ, ಕಾಕಡಾ ಮಲ್ಲಿಗೆ, ಕನಕಾಂಬರ, ಸಂಪಿಗೆ, ಮೇಣ ಮಲ್ಲಿಗೆ, ಅಪರೂಪದ ಅಂಥೋರಿಯಂ ಹೂವಿನ ಸಸ್ಯ, ಕರಾವಳಿ ಸಂಪಿಗೆ, ನಾಗಕೇಸರ, ಲಿಲ್ಲಿ ಪ್ಲವರ್, ಮೇ ಪ್ಲವರ್, ಗುಲಾಬಿ ಮತ್ತು ದಾಸವಾಳ ಹೂವಿನಲ್ಲಿ 7-8 ತರಹದ ಬಣ್ಣಗಳ ಹೂವುಗಳು ಇಲ್ಲಿ ಕಾಣಸಿಗುತ್ತವೆ.
ಹಣ್ಣಿನ ಗಿಡಗಳಲ್ಲಿ-ಮಾವು, ಪೇರಲೆ, ನೀರಲ, ನೆಲ್ಲಿ, ಬೆಣ್ಣಿ ಹಣ್ಣು, ಕಿತ್ತಳೆ, ಲಕ್ಷ್ಮಣ ಫಲ, ಸೀತಾಫಲ, ಚಿಕ್ಕು, ದಾಳಿಂಬೆ, ವಿದೇಶಿಯ ಡ್ರ್ಯಾಗನ್ ಫ್ರೂಟ್ ಹಣ್ಣಿನ ಗಿಡಗಳು ಈ ಮನೆಯ ಸುತ್ತಲು ಕಾಣುತ್ತವೆ. ಔಷಧ ಸಸ್ಯ ಚೆಂದಲಗ, ದವನ, ಬಿಲ್ವ, ಲವಂಗ, ದಾಲ್ಚಿನ್ನಿ, ಹಿಪ್ಪಲಿ, ಅರಿಷಿಣ, ಎಲೆ ಬಳ್ಳಿ ಮತ್ತು ತುಳಸಿ, ನುಗ್ಗೆಕಾಯಿ, ಮಂಚಪತ್ರೆ ಗಿಡಗಳನ್ನು ಇವರು ಅಕ್ಕರೆಯಿಂದ ಬೆಳೆಸಿದ್ದಾರೆ. ಅಲಂಕಾರಿಕ ಸಸ್ಯ-ಜಪಾನ್ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಅಡಕೆ, ಗೇರು ಮತ್ತು ತೆಂಗು, ಬರ್ಮಾ ಬೊಂಬು, ವೆನಿಲ್ಲಾ, ಕ್ರಿಸ್‌ಮಸ್ ಟ್ರೀ, ಮನಿ ಟ್ರೀ, ಪಾಮನ್ ಟ್ರೀ, ಹಲಸು, ಅಲೋವೆರಾ ಸಸ್ಯ ಬೆಳೆಸಿ ಮನೆಯನ್ನು ನಂದನವನವನ್ನಾಗಿ ಮಾಡಿದ್ದಾರೆ.
ಪರಿಸರಸ್ನೇಹಿ ಊಟಕ್ಕೆ 10 ಉಪಾಯಗಳು!
ಈ ಬಗ್ಗೆ ಮಾತನಾಡಿದ ಪರಿಸರಪ್ರೇಮಿ ಚೆನ್ನಯ್ಯ ಶಿಗ್ಲಿಹಿರೇಮಠ ಅವರು, ಸಸ್ಯ ಸಂಕುಲ ಮನುಷ್ಯನ ಜೀವಾಳವಾಗಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಸಸ್ಯಪ್ರೇಮ ಹೆಚ್ಚಾಗಿ ಕಂಡು ಬರುತ್ತದೆ. ಇಂತಹ ಪರಿಸರ ಪ್ರೇಮ ಬಯಲು ಸೀಮೆ ಜನರಲ್ಲಿ ಕಂಡು ಬಂದರೆ ಅರಣ್ಯ ಇಲಾಖೆಯ ಶ್ರಮ ಸಾರ್ಥಕವಾಗುತ್ತದೆ. ಕರಾವಳಿ ಭಾಗದಲ್ಲಿ ಸೇವೆ ಸಲ್ಲಿಸಿದ್ದರಿಂದ ಪ್ರಕೃತಿ ಪ್ರೇಮ ಸಹಜವಾಗಿ ಮನೆ ಮಾಡಿದೆ. ಹಸಿರಿನ ನಡುವೆ ಜೀವನ ಆಹ್ಲಾದಕರವಾಗಿರುತ್ತದೆ. ಪ್ರತಿಯೊಬ್ಬರೂ ಸಸ್ಯ ಬೆಳಸುವ ಮನಸ್ಸು ಮಾಡಬೇಕು. ಇಲ್ಲವಾದಲ್ಲಿ ಮುಂದೊಂದು ದಿನ ಆಪತ್ತು ಕಾದಿದೆ ಎಂದು ಹೇಳಿದ್ದಾರೆ.