Kolar : ಹಸುಗಳಿಗೆ ಬೊಬ್ಬೆ ರೋಗ: ಹೈನುಗಾರಿಕೆ ಅಸ್ಥಿರ
ರೈತರೆಂದರೆ ಹೈನೋದ್ಯಮ ನಂಬಿ ಜೀವಿಸುತ್ತಿರುವ ಕುಟುಂಬಗಳು. ಆದರೆ ಕಳೆದ ಒಂದು ತಿಂಗಳಿನಿಂದ ಅವರಲ್ಲಿ ಆತಂಕ ಮನೆ ಮಾಡಿದ್ದು, ಎಷ್ಟೇ ಖರ್ಚು ಮಾಡಿದರೂ ಅದರಿಂದ ಪರಿಹಾರ ಸಿಗುತ್ತಿಲ್ಲ ಎಂಬುವುದು ಹೈನ್ಯೋದ್ಯಮ ನಂಬಿಕೊಂಡಿರುವ ರೈತರ ಮನವಿಯಾಗಿದೆ.
ಸ್ಕಂದಕುಮಾರ್ ಬಿ.ಎಸ್
ಕೋಲಾರ (ಡಿ. 04): ರೈತರೆಂದರೆ ಹೈನೋದ್ಯಮ ನಂಬಿ ಜೀವಿಸುತ್ತಿರುವ ಕುಟುಂಬಗಳು. ಆದರೆ ಕಳೆದ ಒಂದು ತಿಂಗಳಿನಿಂದ ಅವರಲ್ಲಿ ಆತಂಕ ಮನೆ ಮಾಡಿದ್ದು, ಎಷ್ಟೇ ಖರ್ಚು ಮಾಡಿದರೂ ಅದರಿಂದ ಪರಿಹಾರ ಸಿಗುತ್ತಿಲ್ಲ ಎಂಬುವುದು ಹೈನ್ಯೋದ್ಯಮ ನಂಬಿಕೊಂಡಿರುವ ರೈತರ ಮನವಿಯಾಗಿದೆ.
ಹಸುಗಳ ಮೈಮೇಲೆ ಎಲ್ಲಿ ನೋಡಿದರೂ ಬೊಬ್ಬೆಗಳೇ ಇದರ ನೋವಿನ ಆಯಾಸದಿಂದ ಮೇವು ಸೇವಿಸದೇ ನರಳಾಡುತ್ತಿರುವ ಹಸುಗಳು (Cow) . ಅಯ್ಯೋ ದೇವರೇ ! ಏನಪ್ಪಾ ಹೀಗಾಯ್ತಲ್ಲ ಅಂತ ಗೋಳಾಡುತ್ತಿರುವ ರೈತರು (Farmers). ಇಂಥ ಇವೆಲ್ಲಾ ದೃಶ್ಯಗಳು ನಮಗೆ ಕಂಡು ಬಂದಿದು, ತಾಲೂಕಿನ ತೊಟ್ಲಿ ಗ್ರಾಮದ ಸುತ್ತಮುತ್ತ.
ಕೋಲಾರ (Kolar) ಜಿಲ್ಲೆ ಅಂದರೆ ಸಾಕು ಹಾಲು ಉತ್ಪಾದನೆಗೆ ಹೆಸರುವಾಸಿ, ದಿನಕ್ಕೆ ಲಕ್ಷಾಂತರ ಲೀಟರ್‌ನಷ್ಟುಹಾಲು ಇಲ್ಲಿಂದ ಉತ್ಪಾದನೆಯಾಗಿ ದೇಶದ ನಾನಾ ಕಡೆಗಳಿಗೆ ಸರಬರಾಜು ಆಗುತ್ತಿದೆ. ಬಿಸಿಲು, ಮಳೆ, ಗಾಳಿ, ಚಳಿಯನ್ನು ಲೆಕ್ಕಿಸದೇ ಹಾಲು ಉತ್ಪಾದನೆ ಮಾಡುವ ಮೂಲಕ ಇಲ್ಲಿನ ರೈತರು ಸೈ ಎನಿಸಿಕೊಂಡಿದ್ದಾರೆ.
ಆದರೆ ಕಳೆದ ಒಂದು ತಿಂಗಳಿನಿಂದ ಜಿಲ್ಲೆಯ ಹಲವು ಕಡೆಗಳಲ್ಲಿ ಹಸುಗಳಿಗೆ ವಿಚಿತ್ರ ಖಾಯಿಲೆಯೊಂದು ಕಾಣಿಸಿಕೊಂಡಿದ್ದು ರೈತರನ್ನು, ಹಾಲು ಉತ್ಪಾದಕರನ್ನು ಆತಂಕಕ್ಕೆ ದೂಡಿದೆ. ಹಲವಾರು ಕಡೆ ಸಾಂಕ್ರಾ ಮಿಕ ಬೊಬ್ಬೆ ರೋಗ ಕಾಣಿಸಿಕೊಂದಿದ್ದು, ಹಸುಗಳು ವಿಪರೀತ ಸುಸ್ತಾಗಿ, ಮೇವು, ನೀರು ಸರಿಯಾಗಿ ಸೇವಿಸದೇ ನರಳಾಟ ಅನುಭವಿಸುತ್ತಿದೆ.
ಹಸುವಿಗೆ ಮೊದಲು ಜ್ವರ ಕಾಣಿಸಿಕೊಂಡು ಬಳಿಕ ಚರ್ಮದಲ್ಲಿ ಗಂಟುಗಳು ಕಾಣಿಸಿಕೊಳ್ಳುತ್ತಿದೆ, ಒಂದು ಹೊತ್ತಿಗೆ 7 ರಿಂದ 8 ಲೀಟರ್ ಹಾಲು ನೀಡುತ್ತಿದ್ದ ಹಸುಗಳು ಕೇವಲ ಒಂದರಿಂದ ಎರಡು ಲೀಟರ್ ಹಾಲು ಕೊಡುವಂತಾಗಿರುವುದು, ಹಾಲು ಉತ್ಪಾದಕರ ನಿದ್ದೆ ಕೆಡಿಸಿದೆ.
ರೋಗಗ್ರಸ್ತ ಹಸುಗಳಿಗೆ ಅತಿಯಾದ ಜ್ವರವಿದ್ದು, ಮಂಕಾಗಿ, ಮೂಗು, ಕೆಚ್ಚಲು, ಕಣ್ಣುಗಳಲ್ಲಿ ದ್ರವ ಸೋರುವಿಕೆ, ಜೊಲ್ಲು ಸುರಿಸುವಂತಹ ಲಕ್ಷಣಗಳು ಗೋಚರಿಸುತ್ತಿದೆ. ಜೊತೆಗೆ ಹಸುಗಳ ಕಾಲುಗಳಲ್ಲಿ ಊತ ಕಾಣಿಸಿಕೊಳ್ಳುತ್ತಿದೆ. ಪರಿಣಾಮ ಹಾಲು ಕೊಡುವ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗುತ್ತಿದೆ. ಕೆಲವು ರಾಸುಗಳು ಮೇವು ತಿನ್ನದೆ ಕ್ರಮೇಣವಾಗಿ ಬಡಕಲಾಗುತ್ತಿರುವುದರಿಂದ ಹೈನುಗಾರಿಗೆ ನಂಬಿರುವ ಕುಟುಂಬಕ್ಕೆ ಭಾರೀ ನಷ್ಟವನ್ನು ಉಂಟು ಮಾಡಿದೆ.
ವರೋಗಪೀಡಿತ ರಾಸುಗಳನ್ನು ಆರೋಗ್ಯವಂತ ಹಸುಗಳಿಂದ ಬೇರ್ಪಡಿಸಿ ಕೂಡಲೇ ಚಿಕಿತ್ಸೆಗೆ ಒಳಪಡಿಸಿ, ರಾಸುಗಳಿಗೆ ಸೊಳ್ಳೆ ಪರದೆಗಳನ್ನು ಬಳಸಬೇಕಾಗಿದೆ, ಕೊಟ್ಟಿಗೆಗಳನ್ನು ಸ್ವಚ್ಚಗೊಳಿಸಿ ಸೂಕ್ತವಾದ ರೋಗ ನಿವಾರಕ ಔಷಧಗಳನ್ನು ನಿರ್ದಿಷ್ಟಪ್ರಮಾಣದಲ್ಲಿ ಸಿಂಪಡಿಸಿದರೆ ರೋಗ ಹರಡುವಿಕೆಯನ್ನು ತಡೆಗಟ್ಟಬಹುದು.
ಮುಖ್ಯವಾಗಿ ಈ ರೋಗವು ಮನುಷ್ಯರಿಗೆ ಹರಡುವುದಿಲ್ಲ ಅನ್ನೋದು ಒಂದು ಕಡೆ ಸಮಾಧಾನ ತಂದು ಕೊಟ್ಟಿದ್ದರೂ ಸಹ, ಪ್ರತಿದಿನ ಸಾವಿರಾರು ರೂಪಾಯಿ ಖರ್ಚು ಮಾಡಿದರೂ ಸಹ ಹಸುಗಳ ಅರೋಗ್ಯ ದಲ್ಲಿ ಚೇತರಿಕೆ ಕಾಣದೆ ಇರುವುದು ಹಾಲು ಉತ್ಪಾದಕರನ್ನು ಆತಂಕಕ್ಕೆ ದೂಡಿದೆ.
ಬೊಬ್ಬೆ ರೋಗದಿಂದ ಹಲವಾರು ಹಸುಗಳು ನರಳಾಡುತ್ತಿದ್ದು, ಹಾಲು ಉತ್ಪಾದಕರು ದಿನಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದರೂ ಸಹ ಖಾಯಿಲೆ ವಾಸಿಯಾಗುತ್ತಿಲ್ಲ. ಸಂಬಂಧಪಟ್ಟಪಶು ಇಲಾಖೆಯವರು ಕೂಡಲೇ ನೆರವಿಗೆ ಧಾವಿಸಿ, ಖಾಯಿಲೆ ಉಲ್ಬಣವಾಗದಂತೆ ತಡೆಗಟ್ಟಿ, ಸೂಕ್ತ ಚಿಕಿತ್ಸೆ ನೀಡಲಿ ಅನ್ನೋದು ಹೈನೋದ್ಯಮದಲ್ಲಿ ತೊಡಗಿಸಿ ಕೊಂಡಿರುವ ರೈತರ ಮನವಿಯಾಗಿದೆ.
ಶೇ.1ರಿಂದ 5ರಷ್ಟುರಾಸುಗಳ ಸಾವು !
ಈಗಾಗಲೇ ಸ್ಥಳೀಯ ಸುಗಟೂರು ಪಶು ಇಲಾಖೆಯ ವೈದ್ಯರು ಪ್ರತಿದಿನ ರೋಗಗ್ರಸ್ಥ ಹಸುಗಳಿಗೆ ಆ್ಯಂಟಿಬಯೋಟಿಕ್, ನೋವು ನಿವಾರಕ, ಅಲರ್ಜಿ ನಿವಾರಕ ಔಷಧ ನೀಡುತ್ತಾ ಬರುತ್ತಿದ್ದರೂ ಸಹ ಕಡಿಮೆ ಆಗುತ್ತಿಲ್ಲ. ಇದೊಂದು ವೈರಲ್ ಖಾಯಿಲೆ ಆಗಿರುವುದರಿಂದ ಸೊಳ್ಳೆ ಮತ್ತು ನೊಣಗಳಿಂದ ಹರಡುತ್ತಿದೆ.
ಬೊಬ್ಬೆ ರೋಗದ ಹಸುಗಳಿಗೆ ಸೊಳ್ಳೆ, ನೊಣಗಳು ಕಚ್ಚಿ, ರಕ್ತ ಹೀರಿದ ಬಳಿಕ ಆ ರಕ್ತವನ್ನು ಮತ್ತೊಂದು ಹಸುಗಳಿಗೆ ಕಚ್ಚುವ ಮೂಲಕ ರೋಗ ಉಲ್ಬಣಿಸುತ್ತಿದೆ. ರೋಗ ತಗುಲಿದ ಕೂಡಲೇ ರಾಸುಗಳು ಬಡಕ ಲಾಗಿ, ಚರ್ಮದ ಗಂತಿಗಳು ಕೊಳೆತು, ನೊಣಗಳ ಉಪಟಳದಿಂದ ಚರ್ಮದಲ್ಲಿ ಆಳವಾದ ರಂಧ್ರಗಳಾಗುತ್ತಿವೆ. ಗುಂಪಿನಲ್ಲಿರುವ ಶೇ.10 ರಿಂದ 20ರಷ್ಟುರಾಸುಗಳು ರೋಗಕ್ಕೆ ತುತ್ತಾಗಬಹುದು. ಅವುಗಳಲ್ಲಿ ಶೇ.1ರಿಂದ 5ರಷ್ಟು ರಾಸುಗಳು ಸಾವನ್ನಪ್ಪಬಹುದು.