Asianet Suvarna News Asianet Suvarna News

ಬಾಣಂತಿಯನ್ನು ಜೋಳಿಗೆ ಕಟ್ಟಿ ಹೊತ್ತೊಯ್ದ ಚಿಕ್ಕಮಗಳೂರಿನ ಆದಿವಾಸಿಗಳು!

ಬಾಣಂತಿಯನ್ನು ಬಡಿಗೆ ಕಟ್ಟಿಕೊಂಡು ನಾಲ್ವರು ಹೊತ್ತುಕೊಂಡು ಬಂದಂತಹ ಕರುಣಾಜನಕ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಬಿಳಿಗಲ್ ಗ್ರಾಮದಲ್ಲಿ ನಡೆದಿದೆ. ಇಲ್ಲಿ ಸುಮಾರು 35ಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳು ಸಂಕಷ್ಟದಲ್ಲೇ ಜೀವನ ನಡೆಸುತ್ತಿವೆ.

Chikkamagaluru Tribes carried Postpartum women in  sacks gow
Author
Bengaluru, First Published Jul 24, 2022, 8:32 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಜು.24):  ಓಡಾಡೋದಕ್ಕೆ ರಸ್ತೆ ಇಲ್ಲದೆ ಬಾಣಂತಿಯನ್ನು ಬಡಿಗೆ ಕಟ್ಟಿಕೊಂಡು ನಾಲ್ವರು ಹೊತ್ತುಕೊಂಡು ಬಂದಂತಹ ಕರುಣಾಜನಕ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಬಿಳಿಗಲ್ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಜನರಿಗೆ ಮಳೆಗಾಲ ಬಂತು ಅಂದ್ರೆ ಜೀವ ಕೈ ಹಿಡಿದು ಜೀವನ ನಡೆಸುವ ದುಸ್ಥಿತಿ. ಸೂಕ್ತ ರಸ್ತೆ ಇಲ್ಲದೇ ಇಲ್ಲಿನ ಜನರು ನಿತ್ಯವೂ ನರಕಯಾತನೆಯನ್ನು ಅನುಭವಿಸುತ್ತಿದ್ದಾರೆ. ಮಲೆನಾಡಿನ ಆದಿವಾಸಿ ಕುಟುಂಬಗಳ ಅನುಭವಿಸುತ್ತಿರುವ ಸಂಕಷ್ಟಕ್ಕೆ ಮುಕ್ತಿ ಯಾವಾಗ ಎನ್ನುವ ಯಕ್ಷ ಪ್ರಶ್ನೆಯಾಗಿದೆ. ಬಿಳಿಗಲ್ ಗ್ರಾಮದಲ್ಲಿ ಸುಮಾರು 35ಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳಿವೆ. ಸುತ್ತಮುತ್ತಲಿನ ತೋಟಗಳಲ್ಲಿ ಕೂಲಿ ಕೆಲಸ ಮಾಡಿಕೊಂಡು ಈ ಕುಟುಂಬಗಳು ಬದುಕುತ್ತಿವೆ. ಆದರೆ, ಇವರಿಗೆ ಓಡಾಡೋದಕ್ಕೆ ಒಂದು ಸೂಕ್ತವಾದ ರಸ್ತೆ ಇಲ್ಲ. ಭದ್ರಾ ನದಿಗೆ ಕಟ್ಟಿರುವ ತೂಗುಸೇತುವೆ ಇವರಿಗೆ ದಾರಿ. ಆದರೆ, ಇವರು ಕಳಸ ತಾಲೂಕಿನ ಸಂಸ್ಥೆಗೆ ಬರಬೇಕೆಂದರೆ ತೂಗು ಸೇತುವೆಯನ್ನು ದಾಟಿದ ಮೇಲು 3 ಕಿ.ಮೀ ನಡೆಯಲೇಬೇಕು. ಬೇರೆ ದಾರಿ ಇಲ್ಲ. ಬೇಸಿಗೆಯಲ್ಲಿ ಮತ್ತೊಂದು ಮಾರ್ಗವಿದ್ದರೂ ಕೂಡ ಅಲ್ಲೂ ಅಲ್ಲವನ್ನು ದಾಟಬೇಕು. ಬೇಸಿಗೆಯಲ್ಲಿ ಹಳ್ಳದಲ್ಲಿ ನೀರಿನ ಅರಿವು ಕಡಿಮೆ ಇರುವುದರಿಂದ ಆ ಮಾರ್ಗದಲ್ಲಿ ಓಡಾಡುತ್ತಾರೆ. ಆದರೆ, ಮಳೆಗಾಲದಲ್ಲಿ ಇಲ್ಲಿನ ಆದಿವಾಸಿ ಕುಟುಂಬಗಳು ಅನಾಗರಿಕರಂತೆ ಬದುಕುತ್ತಿವೆ.

ಕುದುರೆಮುಖ ಕಬ್ಬಿಣದ ಕಂಪನಿ ಆರಂಭವಾದಾಗ ಇವರನ್ನ ಅಲ್ಲಿಂದ ಸ್ಥಳಾಂತರ ಗೊಳಿಸಿದ್ದರು. ಅಂದಿನಿಂದಲೂ ಕೂಡ ಇವರದ್ದು ಇದೇ ರೀತಿಯ ಹೋರಾಟದ ಬದುಕು. ಜನಪ್ರತಿನಿಧಿಗಳು ಹಾಗೂ ಜನನಾಯಕರಿಗೆ ಹತ್ತಾರು ವರ್ಷಗಳಿಂದ ಮನವಿ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಯಾರು ಕೂಡ ಇವರ ನೋವಿಗೆ ಸ್ಪಂದಿಸಿಲ್ಲ. ಗ್ರಾಮದಲ್ಲಿ ಹುಟ್ಟು-ಸಾವು, ನೋವು-ನಲಿವು ಎಲ್ಲದಕ್ಕೂ ಈ ತೂಗು ಸೇತುವೆಯೇ ಗತಿ. ಚುನಾವಣೆ ಸಂದರ್ಭಗಳಲ್ಲಿ ಬಿಳಿಗಲ್ ಗ್ರಾಮಕ್ಕೆ ಭೇಟಿ ನೀಡುವ ಜನನಾಯಕರು ನಿಮಗೆ ಸೇತುವೆ ನಿರ್ಮಿಸಿ ಕೊಡುತ್ತೇವೆ ಎಂದು ಭರವಸೆ ನೀಡಿದರು ಕೂಡ ಆ ಭರವಸೆ ಇಂದಿಗೂ ಭರವಸೆಯಾಗಿ ಉಳಿದಿದೆ.

ಹಾಗಾಗಿ ಇಲ್ಲಿನ ಜನ ಸ್ಥಳೀಯರ ಆರೋಗ್ಯ ಹದಗೆಟ್ಟಾಗ ಈ ರೀತಿ ಬಡಿಗೆ ಕಟ್ಟಿಕೊಂಡು ಹೊಕ್ಕುಕೊಂಡು ಬಂದು ಆಸ್ಪತ್ರೆಗೆ ದಾಖಲಿಸುತ್ತಾರೆ. ಶಾಲಾ-ಕಾಲೇಜಿಗೆ ಹೋಗುವ ಮಕ್ಕಳು ಕೂಡ ಪ್ರತಿನಿತ್ಯ ಐದು ಕಿಲೋ ಮೀಟರ್ ನಡೆದೇ ಹೋಗಿ ಬರಬೇಕು. ಹಾಗಾಗಿ, ಇಲ್ಲಿನ ಆದಿವಾಸಿ ಜನ ತೂಗು ಸೇತುವೆ ಬದಲು ವಾಹನಗಳು ಸಂಚರಿಸುವಂತೆ ಸೇತುವೆ ನಿರ್ಮಿಸಿ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ, ಯಾವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇವರ ಮನವಿಗಳನ್ನು ಕುರ್ಚಿಯ ಕೆಳಗೆ ಹಾಕಿಕೊಂಡು ಕರಗಿಸಿದ್ದಾರೆಯೇ ಹೊರತು ಇವರಿಗೊಂದು ಸೇತುವೆ ನಿರ್ಮಾಣ ಮಾಡಿ ಕೊಟ್ಟಿಲ್ಲ. ಹಾಗಾಗಿ, ಇಲ್ಲಿನ ಆದಿವಾಸಿ ಸಮುದಾಯದ ಜನ ನಾವು ನೂರಾರು ವರ್ಷಗಳಿಂದ ಅನಾಗರಿಕರಂತೆ, ಪ್ರಾಣಿಗಳಂತೆ ಬದುಕುತ್ತಿದ್ದೇವೆ. ದಯವಿಟ್ಟು ನಮಗೊಂದು ಸೇತುವೆ ನಿರ್ಮಿಸಿ ಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

Follow Us:
Download App:
  • android
  • ios