ಬೆಳಗಾವಿಯಲ್ಲಿ ಡಿ.ಕೆ. ಶಿವಕುಮಾರ್‌ಗೆ ಭಾರಿ ಮುಜುಗರ: ಸತೀಶ್ ಜಾರಕಿಹೊಳಿ ದಸರಾ ಟೀಮ್‌ನಿಂದ ತಿರುಗೇಟು!
ಬೆಳಗಾವಿಯಲ್ಲಿ ಕಾಂಗ್ರೆಸ್ ಸಭೆ ನಡೆಸಲು ಆಗಮಿಸಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಭಾರಿ ಮುಜುಗರ ಉಂಟಾಗಿದೆ.
ಬೆಳಗಾವಿ (ಅ.18): ದಸರಾ ಸಂಭ್ರಮಕ್ಕೆ 20 ಶಾಸಕರನ್ನು ಕರೆದೊಯ್ಯಲು ಸಿದ್ಧವಾಗಿದ್ದ ಸಚಿವ ಸತೀಶ್ ಜಾರಕಿಹೊಳಿಯನ್ನು ತಡೆದ ಬೆನ್ನಲ್ಲಿಯೇ ಬೆಳಗಾವಿಯಲ್ಲಿ ಕಾಂಗ್ರೆಸ್ ಸಭೆ ನಡೆಸಲು ಆಗಮಿಸಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಭಾರಿ ಮುಜುಗರ ಉಂಟಾಗಿದೆ. ರಾಜ್ಯಮಟ್ಟದ ದೊಡ್ಡ ನಾಯಕರು ಯಾರೊಬ್ಬರೂ ಸಮಾವೇಶಕ್ಕೆ ಹಾಜರಾಗದೇ ಸ್ಥಳೀಯ ಕಾರ್ಯಕರ್ತರು ಮಾತ್ರ ಹಾಜರಾಗಿದ್ದಾರೆ.
ಬೆಳಗಾವಿ ಜಿಲ್ಲೆ ಹುಕ್ಕೇರಿಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಬುಧವಾರ ಆಗಮಿಸಿದ್ದಾರೆ. ಈ ವೇಳೆ ಸಚಿವ ಸತೀಶ್ ಜಾರಕಿಹೊಳಿ ಮುನಸಿನ ಮಧ್ಯೆ ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಕ್ಕೆ ಆಗಮಿಸಿದ ಡಿಕೆಶಿಗೆ ಮುಜುಗರ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಬೆಳಗಾವಿ ಜಿಲ್ಲೆಯ 11 ಕಾಂಗ್ರೆಸ್ ಶಾಸಕರು, ಇಬ್ಬರು ಎಂಎಲ್‌ಸಿಗಳು ಸಮಾವೇಶಕ್ಕೆ ಗೈರಾಗಿದ್ದಾರೆ. ಮಾಜಿ ಸಚಿವರಾದ ಎ.ಬಿ.ಪಾಟೀಲ್, ಶಶಿಕಾಂತ್ ನಾಯಕ್ ಸೇರಿ ಸ್ಥಳೀಯ ನಾಯಕರು ಮಾತ್ರ ಉಪಸ್ಥಿತಿರಿದ್ದಾರೆ.
ಕರ್ನಾಟಕ ರಾಜಕಾರಣ ಟಾಪ್ 10 ತಿರುಗುಬಾಣ: ಐಟಿ ದಾಳಿಯ ನಂತರ ಸರ್ಕಾರದ ಮೇಲೆ ಮುಗಿಬಿದ್ದ ಬಿಜೆಪಿ
ಹುಕ್ಕೇರಿಯ ಕಾಂಗ್ರೆಸ್ ಸಮಾವೇಶಕ್ಕೆ ಇಬ್ಬರು ಸಚಿವರು ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರೂ ಕೂಡ ಬರುವಂತೆ ಆಹ್ವಾನ ನೀಡಲಾಗಿತ್ತು. ಇನ್ನು ಬೆಳಗ್ಗೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ್ದ ಡಿ.ಕೆ. ಶಿವಕುಮಾರ್ ಜೊತೆಯಲ್ಲಿದ್ದ ಶಾಸಕ ಮಹೇಂದ್ರ ತಮ್ಮಣ್ಣವರ್ ಹಾಗೂ ಎಂಎಲ್‌ಸಿ ಪ್ರಕಾಶ್ ಹುಕ್ಕೇರಿ ಸಹ ಹುಕ್ಕೇರಿ ಕಾಂಗ್ರೆಸ್ ಸಮಾವೇಶಕ್ಕೆ ಗೈರಾಗಿದ್ದಾರೆ. ಕಾಂಗ್ರೆಸ್ ಸಮಾವೇಶಕ್ಕೆ ಸ್ವತಃ ಕೆಪಿಸಿಸಿ ಅಧ್ಯಕ್ಷ ಬಂದರೂ ಸ್ಥಳೀಯ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಬಾರದೇ ಒರುವುದು ಭಾರಿ ಮುಜುಗರ ಉಂಟುಮಾಡಿದೆ ಎಂದು ಹೇಳಲಾಗುತ್ತಿದೆ.
ಮೈಸೂರು ದಸರಾ ಪ್ರವಾಸ ತಡೆದದ್ದೇ ಮುಳುವಾಯ್ತಾ?
ಮೈಸೂರು ದಸರಾ ನೆಪದಲ್ಲಿ 20ಕ್ಕೂ ಅಧಿಕ ಶಾಸಕರೊಂದಿಗೆ ಮೈಸೂರಿಗೆ ತೆರಳಲು ಸಿದ್ದತೆ ನಡೆಸಿದ್ದ ಸಚಿವ ಸತೀಶ್ ಜಾರಕಿಹೊಳಿ ನಡೆ ಕಾಂಗ್ರೆಸ್‌ನಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ತಮ್ಮ ಉಸ್ತುವಾರಿ ಜಿಲ್ಲಾ ಶಾಸಕರೊಂದಿಗೆ ಸತೀಶ್ ಜಾರಕಿಹೊಳಿ ತಮ್ಮ ಜಿಲ್ಲೆಯ ಎಲ್ಲ ಶಾಸಕರನ್ನು ಒಗ್ಗೂಡಿಸಿಕೊಂಡು ಮೈಸೂರು ದಸರಾಗೆ ತೆರಳಲು ತಯಾರಿ ನಡೆಸಿದ್ದರು. ಇದಕ್ಕೆ ಬಸ್ ಕೂಡ ಸಿದ್ಧವಾಗಿತ್ತು. ಆದರೆ, ಈ ವಿಚಾರ ತಿಳಿಯುತ್ತಿದ್ದಂತೆ ಅಲರ್ಟ್ ಆದ ಕಾಂಗ್ರೆಸ್ ಹೈಕಮಾಂಡ್, ಈ ಸಮಯದಲ್ಲಿ ಶಾಸಕರನ್ನು ಒಗ್ಗೂಡಿಸಿಕೊಂಡು ಹೋಗುವುದು ಬೇಡ, ಕೂಡಲೇ ಕ್ಯಾನ್ಸಲ್ ಮಾಡುವಂತೆ ಸೂಚನೆ ನೀಡಿತ್ತು. ಹೀಗಾಗಿ, ಕೆಪಿಸಿಸಿ ಅಧ್ಯಕ್ಷರ ಮೇಲೆ ಬೆಳಗಾವಿ ಕೈ ನಾಯಕರು ಮುನಿಸು ಪ್ರದರ್ಶನ ಮಾಡುತ್ತಿದ್ದಾರೆ ಎಂಬ ಗುಮಾನಿ ಕಂಡುಬರುತ್ತಿದೆ.
ಭಾರೀ ಸಂಚಲನ ಮೂಡಿಸಿದ ಸತೀಶ ಜಾರಕಿಹೊಳಿ ನಡೆ ; 20ಕ್ಕೂ ಅಧಿಕ ಶಾಸಕರನ್ನು ಒಟ್ಟುಗೂಡಿಸಿ ಹೊರಟಿದ್ದು ಎಲ್ಲಿಗೆ?
ದಸರಾ ಹಬ್ಬಕ್ಕೆ ಶಾಸಕರನ್ನು ಕರೆದೊಯ್ಯುವ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಚಿವ ಸತೀಶ್ ಜಾರಕಿಹೊಳಿ, ನಾಡಹಬ್ಬ ದಸರಾ ಹಬ್ಬ ಹಿನ್ನೆಲೆ ಮೈಸೂರಿಗೆ ಕೆಲವರು ಹೋಗಬೇಕು ಅಂತ ಮಾತನಾಡಿದ್ದೆವು. ದಸರಾ ನೋಡೋಕೆ ಬನ್ನಿ ಅಂತ ಅಲ್ಲಿನ ಶಾಸಕರೂ ಹೇಳ್ತಿದ್ದರು. ಹೀಗಾಗಿ ಕೆಲವು ನಮ್ಮ ಲೈಕ್ ಮೈಂಡೆಡ್ ಶಾಸಕರು ಒಟ್ಟಿಗೆ ಸೇರಿ ಅಲ್ಲಿಗೆ ಹೋಗಬೇಕು ಅಂದುಕೊಂಡಿದ್ದೆವು. ಅಲ್ಲದೆ ಕೆಲವು ಶಾಸಕರು ನಮ್ಮನ್ನು ಎಲ್ಲಾದ್ರೂ ಟ್ರಿಪ್ ಕರೆದುಕೊಂಡು ಹೋಗಿ ಅಂತಾ ಕೇಳಿದ್ದರು. ಸಮಾನ ಮನಸ್ಕರ ಸೇರಿ ಟ್ರಿಪ್ ಹೋಗಬೇಕು ಅಂತಾ ನಮಗೂ ಇತ್ತು. ಈಗ ದಸರಾ ಹಬ್ಬ ಬೇಡ ಅಂದಿದ್ದೇವೆ. ಮುಂದೆ ಹೋಗಬೇಕು ಅಂತಾದ್ರೆ ಸಿಎಂ ಹಾಗೂ ಅಧ್ಯಕ್ಷರ ಗಮನಕ್ಕೆ ತಂದು ಹೋಗುತ್ತೇವೆ ಇದು ವಿತ್ ಇನ್ ದಿ ಪಾರ್ಟಿ (with in the party) ಯಾವುದೇ ಬಣ ಗಿಣ ಅಂತೇನಿಲ್ಲ ಎಂದು ಸ್ಪಷ್ಟಪಡಿಸಿದ್ದರು.