ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಲಿ : ಮಾಲವಿಕಾ ಆಕ್ರೋಶ
- ಸಂತ್ರಸ್ತೆಯನ್ನೇ ತಪ್ಪಿತಸ್ಥೆಯ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನವನ್ನು ಗೃಹ ಸಚಿವರು ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ
- ಗೃಹ ಸಚಿವ ಹುದ್ದೆಯಲ್ಲಿ ಮುಂದುವರಿಯುವುದಕ್ಕಿಂತ ರಾಜೀನಾಮೆ ನೀಡುವುದೇ ಮಹಿಳೆಯರ ಪಾಲಿಗೆ ಒಳ್ಳೆಯದು
- ಆಮ್ ಆದ್ಮಿ ಪಾರ್ಟಿ ಜಿಲ್ಲಾ ಸಂಚಾಲಕಿ ಮಾಲವಿಕ ಗುಬ್ಬಿವಾಣಿ ಕಿಡಿ
ಮೈಸೂರು (ಆ.27): ಸಾಮೂಹಿಕ ಅತ್ಯಾಚಾರದ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸುವ ಬದಲು ಸಂತ್ರಸ್ತೆಯನ್ನೇ ತಪ್ಪಿತಸ್ಥೆಯ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನವನ್ನು ಗೃಹ ಸಚಿವರು ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಅವರು ಗೃಹ ಸಚಿವ ಹುದ್ದೆಯಲ್ಲಿ ಮುಂದುವರಿಯುವುದಕ್ಕಿಂತ ರಾಜೀನಾಮೆ ನೀಡುವುದೇ ಮಹಿಳೆಯರ ಪಾಲಿಗೆ ಒಳ್ಳೆಯದು. ಸಂತ್ರಸ್ತೆಯೇ ತಪ್ಪಿತಸ್ಥೆ ಎನ್ನುವವರು ಗೃಹ ಸಚಿವರಾಗಿರಲು ಯೋಗ್ಯರಲ್ಲ ಎಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾ ಸಂಚಾಲಕಿ ಮಾಲವಿಕ ಗುಬ್ಬಿವಾಣಿ ಕಿಡಿಕಾರಿದ್ದಾರೆ.
ಮೈಸೂರಿಗೆ ಆಗಮಿಸುವ ನೂತನ ಗೃಹ ಸಚಿವ ಆರಗ ಜ್ಞಾನೇಂದ್ರರವರು ಅಪರಾಧಿಗಳ ಶೀಘ್ರ ಪತ್ತೆಗೆ ಕ್ರಮ ಕೈಗೊಳ್ಳುತ್ತಾರೆ ಹಾಗೂ ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಯೋಜನೆ ರೂಪಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅವರು ಆಕೆ ಅಲ್ಲಿಗೆ ಹೋಗಿದ್ದೇ ತಪ್ಪು ಎನ್ನುವ ಮೂಲಕ ಸಂತ್ರಸ್ತೆಯನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ, ತಮ್ಮ ಮೇಲಿರುವ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸಿದ್ದಾರೆ.
'ಗ್ಯಾಂಗ್ ರೇಪ್ ಆರೋಪಿಗಳ ಬಗ್ಗೆ 34 ಸಾಕ್ಷ್ಯ ಸಿಕ್ಕಿವೆ'
ವಿರೋಧಪಕ್ಷದವರು ನನ್ನನ್ನು ರೇಪ್ ಮಾಡುತ್ತಿದ್ದಾರೆ ಎಂಬ ಉಡಾಫೆಯ ಹೇಳಿಕೆಯನ್ನೂ ನೀಡಿದ್ದಾರೆ. ಗೃಹ ಸಚಿವ ಹುದ್ದೆಯಲ್ಲಿ ಇರುವವರೇ ಗಂಭೀರ ವಿಷಯದಲ್ಲಿ ಈ ರೀತಿ ಬೇಜವಾಬ್ದಾರಿ ಹೇಳಿಕೆ ನೀಡಿದರೆ ಜನರು ಯಾರಲ್ಲಿ ವಿಶ್ವಾಸ ಇಡಬೇಕು ಎಂದು ಅವರು ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರಕ್ಕೆ ನಿಜವಾಗಿಯೂ ಮಹಿಳೆಯರ ಬಗ್ಗೆ ಕಾಳಜಿಯಿದ್ದರೆ ಆರೋಪಿಗಳನ್ನು ಶೀಘ್ರವೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಲಿ. ಅವರಿಗೆ ನೀಡುವ ಶಿಕ್ಷೆಯಿಂದಾಗಿ, ಭವಿಷ್ಯದಲ್ಲಿ ಕಾಮುಕರು ಮಹಿಳೆಯರನ್ನು ಕೆಟ್ಟದೃಷ್ಟಿಯಲ್ಲಿ ನೋಡಲು ಹೆದರಬೇಕು. ಅಂತಹ ಕಠೋರ ಶಿಕ್ಷೆಯನ್ನು ಆರೋಪಿಗಳಿಗೆ ನೀಡಬೇಕು. ಜೊತೆಗೆ, ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ತಿರುಗಲು ಹೆಚ್ಚಿನ ಪೊಲೀಸರನ್ನು ನಿಯೋಜಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಆಗ ಮಾತ್ರ, ಪ್ರಸ್ತುತ ಘಟನೆಯಿಂದ ಮಹಿಳೆಯರಲ್ಲಿ ಉಂಟಾಗಿರುವ ಅಭದ್ರತೆಯ ಭಾವನೆ ಹೋಗಲು ಸಾಧ್ಯ ಎಂದು ಅವರು ತಿಳಿಸಿದ್ದಾರೆ.