ಶ್ರೀನಗರ[ಡಿ.31]: ಜಮ್ಮು-ಕಾಶ್ಮೀರ ಹೈಕೋರ್ಟ್‌ನಲ್ಲಿ ಖಾಲಿಯಿರುವ ಗೆಜೆಟೆಡೇತರ 33 ಹುದ್ದೆಗಳ ಭರ್ತಿಗೆ ದೇಶಾದ್ಯಂತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಹಾಗೂ ದೇಶದ ಇತರೆ ಭಾಗದವರು ಕಾಶ್ಮೀರದಲ್ಲಿ ಆಸ್ತಿ ಖರೀದಿಸದಂತೆ ನಿರ್ಬಂಧಿಸಿದ್ದ ಸಂವಿಧಾನದ 370ನೇ ವಿಧಿ ಹಾಗೂ ಪರಿಚ್ಛೇದ 35(ಎ)ವನ್ನು ರದ್ದುಗೊಳಿಸಲಾದ ಬಳಿಕ ಇದೇ ಮೊದಲ ಬಾರಿಗೆ, ದೇಶಾದ್ಯಂತ ಇರುವ ಎಲ್ಲಾ ಪ್ರಜೆಗಳು ಕಾಶ್ಮೀರದಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಕಾಶ ಕಲ್ಪಿಸಿದಂತಾಗಿದೆ.

ಹೈಕೋರ್ಟ್‌ ಹೊರಡಿಸಿದ ಅಧಿಸೂಚನೆ ಪ್ರಕಾರ ಖಾಲಿಯಿರುವ 33 ಹುದ್ದೆಗಳ ಪೈಕಿ 17 ಸ್ಥಾನಗಳಿಗೆ ಮೆರಿಟ್‌ ಆಧಾರದಲ್ಲಿ ದೇಶದ ಯಾವುದೇ ಭಾಗದ ಅರ್ಹ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಾಗುತ್ತದೆ. ಉಳಿದ 16 ಸ್ಥಾನಗಳಿಗೆ ಮೀಸಲಾತಿ ಇರಲಿದೆ.

ಆದರೆ, ಜಮ್ಮು-ಕಾಶ್ಮೀರದ ಕೇಂದ್ರಾಡಳಿತ ಪ್ರದೇಶ ಆಡಳಿತದ ಈ ಕ್ರಮಕ್ಕೆ ಜಮ್ಮು-ಕಾಶ್ಮೀರ ನ್ಯಾಷನಲ್‌ ಪ್ಯಾಂಥರ್ಸ್‌ ಪಕ್ಷ(ಜೆಕೆಎನ್‌ಪಿಪಿ) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಜಮ್ಮು-ಕಾಶ್ಮೀರ ಯುವಕರಿಗೆ ಮೀಸಲಾಗಿದ್ದ ಸರ್ಕಾರಿ ಹುದ್ದೆಗಳನ್ನು ದೇಶಕ್ಕೆ ವಿಸ್ತರಿಸುವ ಮೂಲಕ ಸ್ಥಳೀಯ ಸುಶಿಕ್ಷಿತ ನಿರುದ್ಯೋಗಿಗಳ ಭವಿಷ್ಯವನ್ನು ಸರ್ಕಾರ ಮಂಕಾಗಿಸಿದೆ ಎಂದು ಜೆಕೆಎನ್‌ಪಿಪಿ ದೂರಿದೆ.