ಬೆಂಗಳೂರು :  ರಾಜ್ಯ ಸರ್ಕಾ​ರ​ದಿಂದ ಸವ​ಲತ್ತು ಪಡೆದ ಎಲ್ಲ ಖಾಸಗಿ ಕಂಪನಿ​ಗಳು ಇನ್ನು ಮುಂದೆ ‘ಸಿ’ ಹಾಗೂ ‘ಡಿ’ ದರ್ಜೆ ಉದ್ಯೋಗಗಳಲ್ಲಿ ಶೇ. 100ರಷ್ಟುಮೀಸ​ಲಾ​ತಿ​ಯನ್ನು ಕನ್ನ​ಡಿ​ಗ​ರಿಗೆ ನೀಡು​ವು​ದನ್ನು ಕಡ್ಡಾ​ಯ​ಗೊ​ಳಿ​ಸಲು ರಾಜ್ಯ ಸರ್ಕಾರ ನಿರ್ಧ​ರಿ​ಸಿ​ದೆ.

ಗುರು​ವಾರ ನಡೆದ ಸಚಿವ ಸಂಪುಟ ಸಭೆ​ಯಲ್ಲಿ ಈ ಮಹ​ತ್ವದ ನಿರ್ಧಾರ ಕೈಗೊ​ಳ್ಳ​ಲಾ​ಗಿದ್ದು, ಡಾ. ಸರೋಜಿನಿ ಮಹಿಷಿ ವರದಿ ಶಿಫಾರಸು ಆಧಾರದ ಮೇಲೆ ಖಾಸಗಿ ಕಂಪೆನಿಗಳಲ್ಲೂ ಕನ್ನಡಿಗರಿಗೆ ಕಡ್ಡಾಯವಾಗಿ ಆದ್ಯತೆ ನೀಡಲು ‘ಕರ್ನಾಟಕ ಔದ್ಯೋಗಿಕ ಕೈಗಾರಿಕಾ ಉದ್ಯೋಗಗಳ ನಿಯಮಾವಳಿ-1961’ಗೆ ತಿದ್ದುಪಡಿ ತರಲು ತನ್ನ ಒಪ್ಪಿಗೆ ನೀಡಿದೆ.

ಇದ​ರಿಂದಾಗಿ ರಾಜ್ಯ ಸರ್ಕಾರದಿಂದ ಪ್ರೋತ್ಸಾಹಧನ, ಭೂಮಿ, ಭೂ ಕಂದಾಯ ವಿನಾಯಿತಿ, ಇಂಧನ ಶುಲ್ಕ ರಿಯಾಯಿತಿ ಸೇರಿದಂತೆ ಯಾವುದೇ ಪರೋಕ್ಷ ಹಾಗೂ ಪ್ರತ್ಯಕ್ಷ ಸಹಾಯ ಪಡೆದ ಕಂಪೆನಿಗಳು ಹುದ್ದೆಗಳ ಲಭ್ಯತೆ ಆಧಾರದ ಮೇಲೆ ಕನ್ನಡಿಗರಿಗೆ ಕಡ್ಡಾಯ ಆದ್ಯತೆ ನೀಡಬೇಕು. ಆದರೆ, ಈ ಕಾಯ್ದೆ ಅಡಿ ಬರದ ಖಾಸಗಿ ಸಂಸ್ಥೆ​ಗಳಿಗೆ (ಐ​ಟಿ-ಬಿಟಿ ಸಂಸ್ಥೆ​ಗ​ಳು) ಈ ಕಡ್ಡಾಯ ನೀತಿ ಅನ್ವಯ ವಾಗು​ವು​ದಿ​ಲ್ಲ.

ಉಳಿ​ದಂತೆ ಈ ಕಾಯ್ದೆ ಅಡಿ ಬರುವ ಎಲ್ಲಾ ಖಾಸಗಿ ಸಂಸ್ಥೆ​ಗಳು ಕಡ್ಡಾ​ಯ​ವಾಗಿ ಈ ನೀತಿ ಪಾಲಿ​ಸ​ಬೇಕು ಎಂದು ಸಂಪುಟ ಸಭೆಯ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

ಉಲ್ಲಂಘಿಸಿದರೆ ಕ್ರಮ:  ಈ ನೀತಿ ಉಲ್ಲಂಘಿಸಿದ ಕಂಪೆನಿಗಳ ವಿರುದ್ಧ ದೂರು ನೀಡಲು ‘ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ’ ರಚಸಲಾ​ಗು​ವುದು. ದೂರುದಾರರು ಸಂಸ್ಥೆ​ಯಲ್ಲಿ ಅವಕಾಶವಿದ್ದರೂ ತಮಗೆ ಉದ್ಯೋಗ ನೀಡಿಲ್ಲ ಎಂದು ದೂರು ನೀಡಿದರೆ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ ಕಂಪೆನಿಗೆ ಉದ್ಯೋಗ ನೀಡುವಂತೆ ಸೂಚಿಸುತ್ತಾರೆ. ಒಂದು ವೇಳೆ ಸೂಚನೆಯನ್ನು ಉಲ್ಲಂಘಿಸಿದರೆ ಸರ್ಕಾರದಿಂದ ಕಂಪೆನಿಗೆ ನೀಡುತ್ತಿರುವ ಸವಲತ್ತುಗಳನ್ನು ತಡೆ ಹಿಡಿಯಲು ಈ ಕಾಯ್ದೆ ಅಡಿ ಅವ​ಕಾಶ ಕಲ್ಪಿ​ಸ​ಲಾ​ಗಿದೆ ಎಂದು ತಿಳಿ​ಸಿ​ದ​ರು.

ಕಳೆದ ಎರಡು ವರ್ಷಗಳ ಹಿಂದೆ ಕನ್ನಡಿಗರಿಗೆ ಖಾಸಗಿ ಉದ್ಯೋಗದಲ್ಲೂ ಮೀಸಲಾತಿ ಕಲ್ಪಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಆದರೆ, ಇದಕ್ಕೆ ಕಾನೂನಿನಲ್ಲಿ ಹಲವು ತೊಡಕುಗಳು ಉಂಟಾಗಿತ್ತು. ಹೀಗಾಗಿ ‘ಕರ್ನಾಟಕ ಔದ್ಯೋಗಿಕ ಕೈಗಾರಿಕಾ ಉದ್ಯೋಗಗಳ ನಿಯಮಾವಳಿ’ ಅಡಿ ಬರುವ ಕಂಪೆನಿಗಳು ಸರ್ಕಾರದಿಂದ ರಿಯಾಯಿತಿ ಅಥವಾ ಸವಲತ್ತುಗಳನ್ನು ಪಡೆಯುತ್ತಿದ್ದರೆ ಅಂತಹ ಕಂಪೆನಿಗಳಿಗೆ ಇದನ್ನು ಕಡ್ಡಾಯ ಮಾಡಿ ನಿಯಮಾವಳಿಗೆ ತಿದ್ದುಪಡಿ ತಂದಿದ್ದೇವೆ. ಮುಂದಿನ ಹಂತದಲ್ಲಿ ಇವುಗಳಿಗೆ ಮತ್ತಷ್ಟುಸಮರ್ಪಕ ನಿಯಮಾವಳಿ ರೂಪಿಸಲಾಗುವದು ಎಂದು ಹೇಳಿದರು.

ಕನ್ನಡಿಗರು ಎನ್ನಿಸಿಕೊಳ್ಳಲು 15 ವರ್ಷ ವಾಸ:  ಕನ್ನಡಿಗರು ಎಂದು ಕರೆಸಿಕೊಳ್ಳಲು ರಾಜ್ಯದಲ್ಲಿ ಕಡ್ಡಾಯವಾಗಿ ಹದಿನೈದು ವರ್ಷ ವಾಸವಿರಬೇಕು. ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಉದ್ಯೋಗ ಬೇಡುವ ಕನಿಷ್ಠ ವಿದ್ಯಾರ್ಹತೆ ಪಡೆದಿರಬೇಕು. ಉದ್ಯೋಗ ಲಭ್ಯವಿದ್ದು ತಮಗೆ ಉದ್ದೇಶಪೂರ್ವಕವಾಗಿ ಆದ್ಯತೆ ನೀಡದಿದ್ದರೆ ಅವರು ದೂರು ಸಲ್ಲಿಸಬಹುದು. ಈವರೆಗೆ ಡಾ. ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಾನೂನು ಬಲ ಇರಲಿಲ್ಲ. ಹೀಗಾಗಿ ಕಾನೂನು ಬಲ ತುಂಬುವ ಸಲುವಾಗಿ ಈ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ವರದಿ ಮಂಡನೆಯಾದ 33 ವರ್ಷಕ್ಕೆ ಕ್ರಮ:  ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ ಖಾಸಗಿ ಕಂಪೆನಿಗಳಲ್ಲೂ ಸ್ಥಳೀಯರಿಗೆ ಆದ್ಯತೆ ನೀಡುವ ಉದ್ದೇಶದಿಂದ ಶಿಫಾರಸುಗಳನ್ನು ನೀಡುವಂತೆ 1983ರಲ್ಲಿ ಡಾ. ಸರೋಜಿನಿ ಮಹಿಷಿ ನೇತೃತ್ವದ ಸಮಿತಿ ರಚಿಸಲಾಗಿತ್ತು. 1986ರಲ್ಲಿ ಡಾ. ಸರೋಜಿನಿ ಮಹಿಷಿ ಅವರು ವರದಿ ನೀಡಿ, 58 ಪ್ರಮುಖ ಶಿಫಾರಸುಗಳನ್ನು ನೀಡಿದ್ದರು. ಇದರಲ್ಲಿ ಸರ್ಕಾರಿ ನೇಮಕಾತಿಗಳಲ್ಲಿ ಶೇ.100 ರಷ್ಟುಹುದ್ದೆಗಳು ಕನ್ನಡಿಗರಿಗೇ ನೀಡುವುದು ಸೇರಿದಂತೆ ಹಲವು 46 ಶಿಫಾರಸುಗಳನ್ನು ಸರ್ಕಾರ ಅಂಗೀಕರಿಸಿತ್ತು.

ಆದರೆ, ಖಾಸಗಿ ಕಂಪೆನಿಗಳ ಸಿ ಹಾಗೂ ಡಿ ಹುದ್ದೆಗಳಲ್ಲಿ ಶೇ.100 ರಷ್ಟುಕನ್ನಡಿಗರಿಗೆ ಮೀಸಲಾತಿ ನೀಡಬೇಕು ಎಂಬುದನ್ನು ಈವರೆಗೂ ಅನುಷ್ಠಾನಗೊಳಿಸಿರಲಿಲ್ಲ. ವರದಿ ಮಂಡನೆಯಾದ 33 ವರ್ಷಗಳ ಬಳಿಕ ಸಚಿವ ಸಂಪುಟದಲ್ಲಿ ಈ ಬಗ್ಗೆ ಒಪ್ಪಿಗೆ ಪಡೆಯಲಾಗಿದ್ದು, ಪ್ರಾಥಮಿಕ ಹಂತದ ಪ್ರಯತ್ನ ನಡೆಸಿದಂತಾಗಿದೆ.