Asianet Suvarna News Asianet Suvarna News

ದೆಹಲಿ ಸೋಲಿನ ಹೊಣೆ ಹೊತ್ತು ಕಾಂಗ್ರೆಸ್‌ನ ಇಬ್ಬರು ಪ್ರಮುಖ ನಾಯಕರ ರಾಜೀನಾಮೆ!

ಕಾಂಗ್ರೆಸ್‌ ಉಳಿಸಲು ಸರ್ಜಿಕಲ್‌ ಆ್ಯಕ್ಷನ್‌ ನಡೆಯಲಿ: ಮೊಯ್ಲಿ| ದಿಲ್ಲಿ ಸೋಲಿನ ಬೆನ್ನಲ್ಲೇ ಕೈ ನಾಯಕರ ಕೆಸರೆರಚಾಟ| ಸೋಲಿನ ಹೊಣೆ ಹೊತ್ತು 2 ನಾಯಕರ ರಾಜೀನಾಮೆ| ಶೀಲಾ ದೀಕ್ಷಿತ್‌ ಕಾಲದಿಂದಲೇ ದಿಲ್ಲಿಯಲ್ಲಿ ಪಕ್ಷ ಹಾಳಾಯ್ತು: ಪಿ.ಸಿಚಾಕೋ| ಶೀಲಾ ಇದ್ದಾಗ ಪಕ್ಷ ಬಲಿಷ್ಠವಾಗೇ ಇತ್ತು: ಮಿಲಿಂದ್‌ ದೇವೋರಾ ಸಮರ್ಥನೆ| ಬಿಜೆಪಿ ಮಣಿಸುವುದನ್ನು ಬೇರೆಯವರಿಗೆ ಗುತ್ತಿಗೆ ಕೊಟ್ಟಿದ್ದೇವಾ?: ಶರ್ಮಿಷ್ಠಾ| ‘ಶೂನ್ಯ ಸಂಪಾದನೆ’ ಬಗ್ಗೆ ಕಾಂಗ್ರೆಸ್‌ ನಾಯಕರಿಂದ ಪರಸ್ಪರ ಆರೋಪ

Sonia Gandhi Accepts Resignations Of PC Chacko Subhash Chopra After Delhi Poll Defeat
Author
Bangalore, First Published Feb 13, 2020, 7:36 AM IST

ನವದೆಹಲಿ[ಫೆ.13]: ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಮತ್ತೊಮ್ಮೆ ಖಾತೆ ತೆರೆಯಲು ವಿಫಲವಾಗಿ ಕಾಂಗ್ರೆಸ್‌ ಹೀನಾಯ ಮುಖಭಂಗ ಅನುಭವಿಸಿದ ಮರುದಿನವೇ ಪಕ್ಷದ ನಾಯಕರಿಂದ ಕೆಸರೆರಚಾಟ ಆರಂಭವಾಗಿದೆ. 2013ರಿಂದಲೇ ದಿಲ್ಲಿಯಲ್ಲಿ ಕಾಂಗ್ರೆಸ್‌ ಅವನತಿ ಆರಂಭವಾಯಿತು ಎನ್ನುವ ಮೂಲಕ ಸೋನಿಯಾ ಆಪ್ತೆಯಾಗಿದ್ದ ಮಾಜಿ ಸಿಎಂ ಶೀಲಾ ದೀಕ್ಷಿತ್‌ ಅವರೇ ಇದಕ್ಕೆ ಕಾರಣ ಎಂದು ದೆಹಲಿ ಕಾಂಗ್ರೆಸ್‌ ಉಸ್ತುವಾರಿ ಪಿ.ಸಿ.ಚಾಕೋ ಪರೋಕ್ಷವಾಗಿ ಆರೋಪ ಮಾಡಿದ್ದರೆ, ಉಳಿದ ಕೆಲ ನಾಯಕರು ಪರಸ್ಪರ ಕಚ್ಚಾಟ ನಡೆಸಿಕೊಂಡಿದ್ದಾರೆ. ಈ ನಡುವೆ ದೆಹಲಿಯಲ್ಲಿ ಪಕ್ಷ ಉಳಿಸಿ ಬೆಳೆಸಬೇಕಿದ್ದರೆ ಸರ್ಜಿಕಲ್‌ ಆ್ಯಕ್ಷನ್‌ ಅನಿವಾರ್ಯ ಎಂದು ಕರ್ನಾಟಕದ ಮಾಜಿ ಸಿಎಂ, ಕಾಂಗ್ರೆಸ್‌ನ ಹಿರಿಯ ನಾಯಕ ವೀರಪ್ಪ ಮೊಯ್ಲಿ ಹೈಕಮಾಂಡ್‌ ಅನ್ನು ಒತ್ತಾಯಿಸಿದ್ದಾರೆ.

ರಾಜೀನಾಮೆ ನೀಡುವುದಾಗಿ ಹೇಳಿದ ಮನೋಜ್ ತಿವಾರಿ: ಬಿಜೆಪಿ ರೆಸ್ಪಾನ್ಸ್?

ಈ ನಡುವೆ ಪಕ್ಷದ ಹೀನಾಯ ಸೋಲಿನ ಹೊಣೆ ಹೊತ್ತು ದೆಹಲಿ ಕಾಂಗ್ರೆಸ್‌ ಉಸ್ತುವಾರಿ ಪಿ.ಸಿ.ಚಾಕೋ ಮತ್ತು ದೆಹಲಿ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಸುಭಾಷ್‌ ಚೋಪ್ರಾ ರಾಜೀನಾಮೆ ನೀಡಿದ್ದಾರೆ. ಈ ರಾಜೀನಾಮೆಯನ್ನು ಪಕ್ಷದ ಹೈಕಮಾಂಡ್‌ ಅಂಗೀಕರಿಸಿದ್ದು, ಶಕ್ತಿ ಸಿನ್‌್ಹ ಗೋಹಿಲ್‌ ಅವರನ್ನು ದೆಹಲಿ ಪ್ರಭಾರಿ ಉಸ್ತುವಾರಿಯಾಗಿ ನೇಮಿಸಿದೆ.

ಕೆಸರೆರಚಾಟ:

ವಿಧಾನಸಭಾ ಚುನಾವಣೆ ಸೋಲಿನ ಬಗ್ಗೆ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿರುವ ಪಕ್ಷದ ಹಿರಿಯ ನಾಯಕ ಪಿ.ಸಿ.ಚಾಕೋ, ‘2013ರ ಬಳಿಕ ದೆಹಲಿಯಲ್ಲಿ ಕಾಂಗ್ರೆಸ್ಸಿನ ಅವನತಿ ಆರಂಭವಾಯಿತು. ಬಳಿಕ ನಡೆದ ಎಲ್ಲಾ ಚುನಾವಣೆಗಳಲ್ಲೂ ಪಕ್ಷ ಸೋಲು ಕಾಣುತ್ತಲೇ ಹೋಯಿತು. ನಮ್ಮ ಮತಗಳು ಆಪ್‌ ಪಾಲಾದವು’ ಎನ್ನುವ ಮೂಲಕ 2013ರವರೆಗೂ ದೆಹಲಿ ಸಿಎಂ ಆಗಿದ್ದ ಶೀಲಾ ದೀಕ್ಷಿತ್‌ ವಿರುದ್ಧ ಕಿಡಿಕಾರಿದ್ದಾರೆ. ಇದಕ್ಕೆ ಮುಖಂಡ ಮಿಲಿಂದ್‌ ದೇವೋರಾ ಅವರು ತಿರುಗೇಟು ನೀಡಿದ್ದು, ಶೀಲಾ ಅವರು ಅಸಾಧಾರಣ ನಾಯಕಿ, ಆಡಳಿತಗಾರ್ತಿ. ಅವರಿದ್ದಾಗ ಕಾಂಗ್ರೆಸ್‌ ಬಲಿಷ್ಠವಾಗಿಯೇ ಇತ್ತು ಎಂದು ಹೇಳಿದ್ದಾರೆ.

ಮತ್ತೊಂದೆಡೆ, ಆಮ್‌ ಆದ್ಮಿ ಪಕ್ಷದ ಗೆಲುವಿನ ಬಗ್ಗೆ ಮಾಜಿ ಸಚಿವ ಪಿ. ಚಿದಂಬರಂ ಅವರು ಸಂಭ್ರಮ ವ್ಯಕ್ತಪಡಿಸಿದ್ದಕ್ಕೆ ಪಕ್ಷದ ನಾಯಕಿ, ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಪುತ್ರಿ ಶರ್ಮಿಷ್ಠಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯನ್ನು ಮಣಿಸುವ ಕೆಲಸವನ್ನು ಕಾಂಗ್ರೆಸ್‌ ಏನಾದರೂ ಬೇರೆ ಪಕ್ಷಗಳಿಗೆ ಗುತ್ತಿಗೆ ಕೊಟ್ಟಿದೆಯೇ? ಆಪ್‌ ಗೆದ್ದಿದ್ದಕ್ಕೆ ಕಳವಳ ಪಡುವ ಬದಲು ಖುಷಿ ಪಡಬೇಕಾ? ಹಾಗಾದರೆ ಕಾಂಗ್ರೆಸ್‌ ತನ್ನ ಅಂಗಡಿ ಬಾಗಿಲನ್ನು ಮುಚ್ಚಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಆಪ್ ಗೆಲುವು ಸಂಭ್ರಮಿಸಿದ ಚಿದಂಬರಂ: ತರಾಟೆಗೆ ತೆಗೆದುಕೊಂಡ ಶರ್ಮಿಷ್ಠ!

ಸರ್ಜಿಕಲ್‌ ಆ್ಯಕ್ಷನ್‌:

ಇದೆಲ್ಲದರ ನಡುವೆ ಬೆಂಗಳೂರಿನಲ್ಲಿ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಪಕ್ಷದ ಮತ್ತೋರ್ವ ಹಿರಿಯ ನಾಯಕ ವೀರಪ್ಪ ಮೊಯ್ಲಿ, ‘ದೆಹಲಿಯ ಅವಮಾನಕರ ಫಲಿತಾಂಶ, ಕಾಂಗ್ರೆಸ್‌ ಪಾಲಿಗೆ ಕಳವಳಕಾರಿಯಾಗಿದೆ. ಅವರು (ಅರವಿಂದ್‌ ಕೇಜ್ರಿವಾಲ್‌) ಮಾತ್ರವೇ ಬಿಜೆಪಿಯನ್ನು ಸೋಲಿಸಬಲ್ಲರು ಎಂಬ ನಿರ್ಧಾರಕ್ಕೆ ಜನತೆ ಬಂದಿದ್ದರು. ಕಾಂಗ್ರೆಸ್‌ಗೆ ಮತ ಹಾಕಿದರೆ ಏನೂ ಪ್ರಯೋಜನವಾಗದು, ಅದು ಪರೋಕ್ಷವಾಗಿ ಬಿಜೆಪಿಗೆ ನೆರವಾಗಲಿದೆ ಎಂದು ಜನತೆಗೆ ಮನವರಿಕೆಯಾಗಿತ್ತು. ಹೀಗಾಗಿ ನಮ್ಮ ಮತಗಳೆಲ್ಲಾ ಆಪ್‌ ಪಾಲಾಯಿತು. ಇದರಿಂದ ನಾವು ಪಾಠ ಕಲಿಯಬೇಕಿದೆ. ಇನ್ನು ನಮ್ಮ ಗುರಿ ಪಕ್ಷವನ್ನು ಪುನರುಜ್ಜೀವನಗೊಳಿಸುವುದು, ಪುನರ್‌ಸಂಘಟಿಸುವುದೇ ಆಗಿರಬೇಕು. ಈ ಸೋಲಿಗೆ ಕೇವಲ ಒಬ್ಬಿಬ್ಬರು ನಾಯಕರತ್ತ ಬೊಟ್ಟು ಮಾಡಲಾಗದು. ಪ್ರತಿಯೊಬ್ಬ ಕಾಂಗ್ರೆಸ್ಸಿಗನೂ ಇದಕ್ಕೆ ಹೊಣೆ ಹೊರಬೇಕು. ಇಡೀ ಸಂಘಟನೆಯನ್ನು ಪುನರ್‌ ರಚಿಸಬೇಕು. ಪಕ್ಷವನ್ನು ಉಳಿಸಿ ಬೆಳೆಸಬೇಕಿದ್ದರೆ ಸರ್ಜಿಕಲ್‌ ಆ್ಯಕ್ಷನ್‌ ಆಗಲೇಬೇಕು’ ಎಂದು ವಿಶ್ಲೇಷಿಸಿದ್ದಾರೆ.

Follow Us:
Download App:
  • android
  • ios