ಮುಂಬೈ ಉದ್ಯಮಿ ಹತ್ಯೆ ಪ್ರಕರಣ, ಭೂಗತ ಪಾತಕಿ ಚೋಟಾ ರಾಜನ್ ದೋಷಿ ಎಂದ ಕೋರ್ಟ್!
ಮುಂಬೈ ಉದ್ಯಮಿ ಜಯಾ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಭೂಗತ ಪಾತಕಿ ಚೋಟಾ ರಾಜನ್ ದೋಷಿ ಎಂದು ಸೆಷನ್ ಕೋರ್ಟ್ ತೀರ್ಪು ನೀಡಿದೆ.
ಮುಂಬೈ(ಮೇ.30) ಭಾರತದಲ್ಲಿ ಹಲವು ಹತ್ಯೆ, ವಂಚನೆ ಪ್ರಕರಣಗಳ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ಚೋಟ ರಾಜನ್ ಈಗಾಗಲೇ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಚೋಟಾ ರಾಜನ್ ಮೇಲಿರುವ ಒಂದೊಂದೆ ಪ್ರಕರಣಗಳ ತೀರ್ಪು ಇದೀಗ ಹೊರಬೀಳುತ್ತಿದೆ. ಸದ್ಯ ಮುಂಬೈ ಹೊಟೆಲ್ ಉದ್ಯಮಿ ಜಯಾ ಶೆಟ್ಟಿ ಕೊಲೆ ಪ್ರಕರಣದಲ್ಲಿ ಚೋಟಾ ರಾಜನ್ ದೋಷಿ ಎಂದು ಮುಂಬೈ ಸೆಷನ್ ಕೋರ್ಟ್ ತೀರ್ಪು ನೀಡಿದೆ. ಶೀಘ್ರದಲ್ಲೇ ಶಿಕ್ಷೆಯನ್ನು ಪ್ರಕಟಿಸಲಿದೆ.
2001ರಲ್ಲಿ ಹೊಟೆಲ್ ಉದ್ಯಮಿ ಜಯಾ ಶೆಟ್ಟಿ ಕೊಲೆ ಪ್ರಕರಣದಲ್ಲಿ ಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಚೋಟಾ ರಾಜನ್ ಮೇಲಿನ ಆರೋಪಗಳು ಸಾಬೀತಾಗಿದೆ. MCOCA ಅಡಿಯಲ್ಲಿ ಈ ಪ್ರಕರಣವನ್ನು ಪರಿಗಣಿಸಲಾಗಿತ್ತು. ಸದ್ಯ ತೀರ್ಪು ನೀಡಿರುವ ಮುಂಬೈ ಸೆಷನ್ ಕೋರ್ಟ್, ಶಿಕ್ಷೆ ಪ್ರಮಾಣವನ್ನು ನಾಳೆ ಪ್ರಕಟಿಸುವ ಸಾಧ್ಯತೆ ಇದೆ.
ಛೋಟಾ ರಾಜನ್, ಶಹಾಬುದ್ದೀನ್ ಇದ್ದ ತಿಹಾರ್‌ನ ನಂ.2 ಸೆಲ್‌ನಲ್ಲಿ ದಿನ ಕಳೆದ ಅರವಿಂದ್ ಕೇಜ್ರಿವಾಲ್!
2001ರಲ್ಲಿ ಚೋಟಾ ರಾಜನ್ ಹಾವಳಿ ಜೋರಾಗಿತ್ತು. ಮುಂಬೈನ ಉದ್ಯಮಿಗಳಿಂದ ಕೋಟಿ ಕೋಟಿ ರೂಪಾಯಿ ಸುಲಿಗೆ ಮಾಡುತ್ತಿದ್ದ. ಹೀಗೆ ಸೆಂಟ್ರಲ್ ಮುಂಬೈನ ಗಮದೇವಿಯಲ್ಲಿ ಗೋಲ್ಡನ್ ಕ್ರೌನ್ ಹೊಟೆಲ್ ನಡೆಸು್ತ್ತಿದ್ದ ಉದ್ಯಮಿ ಜಯಾ ಶೆಟ್ಟಿ ಬಳಿ ಕೋಟಿ ಕೋಟಿ ರೂಪಾಯಿ ಸುಲಿಗೆ ಮಾಡಲು ಚೋಟಾ ರಾಜನ್ ಮುಂದಾಗಿದ್ದ. ದೂರವಾಣಿ ಮೂಲಕ ಬೆದರಿಕೆ ಹಾಕಿದ್ದ. ಈ ಬೆದರಿಕೆ ಕರೆ ಬೆನ್ನಲ್ಲೇ ಜಯಾ ಶೆಟ್ಟಿ ಮುಂಬೈ ಪೊಲೀಸರಿಗೆ ದೂರು ನೀಡಿದ್ದರು. ಮುಂಬೈನ ಶ್ರೀಮಂತ ಉದ್ಯಮಿಯಾಗಿದ್ದ ಜಯಾ ಶೆಟ್ಟಿಗೆ ಮುಂಬೈ ಪೊಲೀಸರು ಭದ್ರತೆ ನೀಡಿದ್ದರು.
2000ನೇ ಇಸವಿ ನವೆಂಬರ್ ತಿಂಗಳಿನಿಂದ ಚೋಟಾ ರಾಜನ್ ಬೆದರಿಕೆ ಕರೆಯಿಂದ ಪೊಲೀಸರಿಗೆ ದೂರು ನೀಡಿದ್ದ ಜಯಾ ಶೆಟ್ಟಿ, 2001ರ ಮಾರ್ಚ್ ಅಂತ್ಯದಲ್ಲಿ ಭದ್ರತೆ ಹಿಂತೆಗೆದುಕೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದರು. ಪೊಲೀಸ್ ಭದ್ರತೆ ಬಳಿಕ ಚೋಟಾ ರಾಜನ್ ದೂರವಾಣಿ ಕರೆ ಮಾಡಿ ಬೆದರಿಸುವ ಪ್ರಯತ್ನ ಮಾಡಿರಲಿಲ್ಲ. ಹೀಗಾಗಿ ಚೋಟಾ ರಾಜನ್ ತಮ್ಮ ತಂಟೆಗೆ ಬರುವುದಿಲ್ಲ ಎಂದು, ಪೊಲೀಸ್ ಭದ್ರತೆ ವಾಪಸ್ ಪಡೆಯಲು ಪೊಲೀಸರಿಗೆ ಮನವಿ ಮಾಡಿದ್ದರು.
ಭೂಗತ ಪಾತಕಿ ಚೋಟಾ ರಾಜನ್ ಸಾವಿನ ಬಗ್ಗೆ ಏಮ್ಸ್ ಸ್ಪಷ್ಟನೆ
ಜಯಾ ಶೆಟ್ಟಿ ಮನವಿಯಿಂದ ಮುಂಬೈ ಪೊಲೀಸರು ಭದ್ರತೆ ಹಿಂತೆಗೆದುಕೊಂಡಿದ್ದರು. ಇದಾದ ಎರಡೇ ತಿಂಗಳಲ್ಲಿ ಅಂದರೆ ಮೇ 4, 2001ರಲ್ಲಿ ಜಯಾ ಶೆಟ್ಟಿ ಮೇಲೆ ಇಬ್ಬರು ಅಪರಿಚಿತರು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಹೊಟೆಲ್‌ನ ಮೊದಲ ಮಹಡಿಯಲ್ಲೇ ಈ ಹತ್ಯೆ ನಡೆದಿತ್ತು.