ಜೈ ಶ್ರೀರಾಮ್ ಅಂದ್ರೆ ಅಪರಾಧ ಹೇಗಾದೀತು?: ಸುಪ್ರೀಂ ಪ್ರಶ್ನೆ
'ಜೈ ಶ್ರೀರಾಮ್' ಘೋಷಣೆ ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಕೆರಳಿಸುವುದಿಲ್ಲ. ಈ ರೀತಿ ಕೂಗುವುದು ತಪ್ಪಲ್ಲ' ಎಂದು ಹೇಳಿ ಪ್ರಕರಣವನ್ನು ರದ್ದುಗೊಳಿಸಿದ್ದ ಹೈಕೋರ್ಟ್
ನವದೆಹಲಿ(ಡಿ.17): ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಮಸೀದಿಯಲ್ಲಿ ಜೈಶ್ರೀರಾಮ್ ಎಂದು ಘೋಷಣೆ ಕೂಗಿದವರ ವಿರುದ್ದ ದಾಖಲಾಗಿದ್ದ ಕ್ರಿಮಿನಲ್ ಕೇಸ್ ರದ್ದುಪಡಿಸಿದ್ದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಆರಂಭಿಸಿರುವ ಸುಪ್ರೀಂಕೋರ್ಟ್, 'ಜೈ ಶ್ರೀರಾಮ್ ಎನ್ನುವುದು ಅಪರಾಧ ಹೇಗಾದೀತು?' ಎಂದು ಪ್ರಶ್ನಿಸಿದೆ. ಇದೇ ವೇಳೆ ಮುಂದಿನ ವಿಚಾರಣೆಯನ್ನು ಜನವರಿಗೆ ನಿಗದಿಪಡಿಸಿದೆ.
ಹೈದರ್ ಅಲಿ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ| ಪಂಕಜ್ ಮಿತ್ತಲ್ ಹಾಗೂ ಸಂದೀಪ್ ಮೆಹ್ರಾ ಅವರ ಪೀಠ, 'ಮಸೀದಿಯ ಒಳಗೆ ಬಂದು ಘೋಷಣೆ ಕೂಗಿದವರನ್ನು ಹೇಗೆ ಗುರುತಿಸಿದಿರಿ? ಆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು ಎನ್ನುವಿರಿ. ಆದರೆ ಅವರನ್ನು ಗುರುತು ಹಿಡಿದವರು ಯಾರು?' ಎಂದು ಅರ್ಜಿದಾರರ ಪರ ವಕೀಲ ದೇವದತ್ತ ಕಾಮತ್ ಅವರನ್ನು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಕಾಮತ್, ರಾಜ್ಯ ಪೊಲೀಸರೇ ಉತ್ತರಿಸಬೇಕು ಎಂದರು.
ಬಳಿಕ ಪೀಠ, ವಿಚಾರಣೆಯನ್ನು ಜನವರಿಗೆ ಮುಂದೂಡಿತು. ಇದೇ ವೇಳೆ, ಪ್ರಕರಣದ ತನಿಖೆ ನಡೆಯುತ್ತಿದ್ದಾಗಲೇ ಹೈಕೋರ್ಟ್ ಕೇಸನ್ನು ರದ್ದುಗೊಳಿಸಿದೆ. ಇದು ಸರಿಯಲ್ಲ ಎಂಬುದನ್ನು ವಕೀಲ ಕಾಮತ್ ಅವರು ಪೀಠದ ಗಮನಕ್ಕೆ ತಂದಾಗ, 'ಈ ಘಟನೆ ಐಪಿಸಿಯ ಸೆಕ್ಷನ್ 503(4, ಬೆದರಿಕೆ) ಅಥವಾ 447 (ಕ್ರಿಮಿನಲ್ ಅಪರಾಧಕ್ಕಾಗಿ ಶಿಕ್ಷೆ ಸಂಬಂಧಿತ)ರ ಅಡಿಯಲ್ಲಿ ಬರುವುದಿಲ್ಲ' ಎಂದು ಸ್ಪಷ್ಟಪಡಿಸಿತು.
ರೈಲಲ್ಲಿ ಜೈ ಶ್ರೀರಾಮ್ ಘೋಷಣೆ ಪ್ರಶ್ನಿಸಿದ ನಟಿ ಪೂಜಾ ಭಟ್‌ಗೆ ನೆಟ್ಟಿಗರ ಕ್ಲಾಸ್
ಹೈಕೋರ್ಟ್ ಹೊರಡಿಸಿದ ತೀರ್ಪಿನಲ್ಲಿ 'ಜೈಶ್ರೀರಾಮ್ ಘೋಷಣೆ ಒಂದು ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆಯಾಗಬಹುದು ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಜತೆಗೆ, ಇದರಿಂದ ಸಮಾಜದಲ್ಲಿ ಯಾವುದೇ ರೀತಿಯ ತೊಂದರೆಯಾಗಿಲ್ಲ. ದೂರಿನಲ್ಲಿ ಘೋಷಣೆ ಯಾರೆಂಬುದೇ ಎನ್ನಲಾಗಿದೆ' ಹೇಳಲಾಗಿತ್ತು.
ಪ್ರಕರಣದ ಹಿನ್ನೆಲೆ:
2023ರಲ್ಲಿ ದಕ್ಷಿಣ ಕನ್ನಡ ಕಡಬದ ಬದ್ರಿಯಾ ಜುಮಾ ಮಸೀದಿಯಲ್ಲಿ ಇಬ್ಬರು ಜೈಶ್ರೀರಾಮ್ ಎಂದು ಘೋಷಣೆಗಳನ್ನು ಕೂಗಿದ್ದರು. ಮುಸ್ಲಿಮರಿಗೆ ಬೆದರಿಕೆ ಹಾಕಿ 'ಬ್ಯಾರಿ (ಮುಸ್ಲಿಂ)ಗಳನ್ನು ಶಾಂತಿಯಿಂದ ಬದುಕಲು ಬಿಡುವುದಿಲ್ಲ' ಎಂದಿದ್ದರು ಎಂದು ಪ್ರಕರಣ ದಾಖಲಾಗಿತ್ತು. ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್ 'ಜೈ ಶ್ರೀರಾಮ್' ಘೋಷಣೆ ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಕೆರಳಿಸುವುದಿಲ್ಲ. ಈ ರೀತಿ ಕೂಗುವುದು ತಪ್ಪಲ್ಲ' ಎಂದು ಹೇಳಿ ಪ್ರಕರಣವನ್ನು ರದ್ದುಗೊಳಿಸಿತ್ತು.