ಪ್ರತ್ಯೇಕ ಕೊಠಡಿ ಏಕೆ ಬೇಕು?

ಕೊರೋನಾ ಎಂಬುದು ವೈರಸ್‌ ಸೋಂಕು. ಇದು ತಗುಲಿರುವ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಬೇರೆಯವರಿಗೂ ಹಬ್ಬುತ್ತದೆ. ಕೊರೋನಾಪೀಡಿತರ ಜತೆ ಸಂಪರ್ಕ ಹೊಂದಿದ ವ್ಯಕ್ತಿಗಳಲ್ಲೂ ಸೋಂಕು ಕಾಣಿಸಿಕೊಳ್ಳಬಹುದು. ಹೀಗಾಗಿ ಆ ಕುರಿತ ಶಂಕೆ ಇರುವ ವ್ಯಕ್ತಿಗಳು ಎಲ್ಲೆಂದರಲ್ಲಿ ಓಡಾಡದಂತೆ, ಹೆಚ್ಚು ಹೆಚ್ಚು ಜನರ ಜತೆ ಸಂಪರ್ಕ ಹೊಂದದಂತೆ ತಡೆಯಲು ಹಾಗೂ ಅವರಲ್ಲಿ ಸೋಂಕು ಇದೆಯೇ, ಇಲ್ಲವೇ ಎಂಬುದನ್ನು ದೃಢಪಡಿಸಿಕೊಳ್ಳಲು ವಿಶ್ವಾದ್ಯಂತ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕೊಠಡಿಗಳನ್ನು ಮೀಸಲಿರಿಸಲಾಗಿದೆ. ಇದನ್ನು ‘ಕ್ವಾರಂಟೇನ್‌ ಹೋಂ’ ಎಂದೂ ಕರೆಯಲಾಗುತ್ತದೆ.

ಪ್ರತ್ಯೇಕ ತಟ್ಟೆ, ಲೋಟ, ಹಾಸಿಗೆ

ಸೂಕ್ತ ಗಾಳಿ, ಬೆಳಕು ಹಾಗೂ ಶೌಚಾ​ಲಯ, ಸ್ನಾನ​ಗೃ​ಹ​ವನ್ನು ಈ ಕೋಣೆ​ಗ​ಳು ಹೊಂದಿ​ರು​ತ್ತವೆ. ಈ ರೀತಿಯ ಪ್ರತ್ಯೇಕ ಕೊಠ​ಡಿ​ಗ​ಳ​ಲ್ಲಿ ತಂಗು​​ವ​ವ​ರು ಮುಂದಿನ 14 ದಿನ​ಗಳವರೆಗೆ ಯಾವುದೇ ಸಾಮಾ​ಜಿಕ ಮತ್ತು ಧಾರ್ಮಿಕ ಕಾರ್ಯ​ಕ್ರ​ಮಗಳಲ್ಲಿ ಪಾಲ್ಗೊ​ಳ್ಳ​ದಂತೆ, ಇತ​ರ​ರನ್ನು ಸ್ಪರ್ಶಿ​ಸ​ದಂತೆ, ಸಂಪ​ರ್ಕಿ​ಸ​ದಂತೆ ನಿರ್ಬಂಧ ವಿಧಿ​ಸ​ಲಾ​ಗು​ತ್ತದೆ. ಎಲ್ಲಾ ಸಮ​ಯ​ದಲ್ಲಿ ಮಾಸ್ಕ್‌ ಧರಿ​ಸು​ವಂತೆ ಹಾಗೂ ಪ್ರತಿ 6-8 ಗಂಟೆಗೊಮ್ಮೆ ಮಾಸ್ಕ್‌ ಬದ​ಲಿ​ಸು​ವಂತೆ ಸೂಚಿ​ಸ​ಲಾಗುತ್ತ​ದೆ. ಹಾಗೆಯೇ ಅವರು ಬಳ​ಸಿದ ಲೋಟ, ಆಹಾರ, ಪಾತ್ರೆ, ಟವೆಲ್‌, ಬೆಡ್‌ಗ​ಳನ್ನು ಯಾರೂ ಬಳ​ಸ​ದಂತೆ ಎಚ್ಚರ ವಹಿ​ಸ​ಲಾ​ಗು​ತ್ತದೆ. ಜೊತೆ​ಗೆ ರೋಗಿ​ಗಳು, ಕಾರು ಚಾಲ​ಕರು ಮತ್ತು ಹೋಂ ಕೇರ್‌ ವೇಳೆ ರೋಗಿ​ಗ​ಳನ್ನು ಸಂಪ​ರ್ಕಿ​ಸಿ​ದ​ವರು ಬಳ​ಸಿದ ಮಾಸ್ಕ್‌​ಗ​ಳನ್ನು ಸುಟ್ಟು ಹಾಕ​ಲಾ​ಗು​ತ್ತ​ದೆ. ಒಂದು ವೇಳೆ ರೋಗಿಯ ಸಂಬಂಧಿ​ಕರು ಅಥವಾ ಕುಟುಂಬ​ಸ್ಥರು ಅವ​ರೊಂದಿಗಿದ್ದು ಶುಶ್ರೂಷೆ ಮಾಡ​ಬೇ​ಕೆಂದರೆ ರೋಗಿ​ಯಿಂದ ಕನಿಷ್ಠ 1 ಮೀಟರ್‌ ಅಂತರ ಕಾಯ್ದು​ಕೊ​ಳ್ಳ​ಲು ಕಟ್ಟುನಿಟ್ಟಾಗಿ ಆದೇ​ಶಿ​ಸ​ಲಾ​ಗು​ತ್ತ​ದೆ.

14 ದಿನಗಳ ದಿಗ್ಬಂಧನ

ಕೋವಿ​ಡ್‌-19 ಅಥವಾ ಕೊರೋನಾ ಸೋಂಕು ಶಂಕಿ​ತರು ಮತ್ತು ಸೋಂಕು ದೃಢ​ಪ​ಟ್ಟಿ​ರುವ ವ್ಯಕ್ತಿಯ ಸಂಪ​ರ್ಕಕ್ಕೆ ಬಂದ ಎಲ್ಲಾ ವ್ಯಕ್ತಿ​ಗ​ಳನ್ನೂ ಕ್ವಾರಂಟೇನ್‌ ಹೋಂನಲ್ಲಿಟ್ಟು ನಿಗಾ ವಹಿ​ಸು​ವುದು ಅತ್ಯ​ವ​ಶ್ಯಕ. ಏಕೆಂದರೆ ಕೋವಿ​ಡ್‌-19 ಬರೀ ಸಾಂಕ್ರಾ​ಮಿಕ ರೋಗ ಮಾತ್ರ​ವ​ಲ್ಲದೆ, 14 ದಿನ​ಗಳವರೆಗೆ ರೋಗ ಲಕ್ಷ​ಣ​ಗಳು ಪತ್ತೆ​ಯಾ​ಗದ ಕಾರಣ ಮತ್ತು 14 ದಿನದ ನಂತ​ರವೂ ರೋಗ ಲಕ್ಷಣ ಕಾಣಿ​ಸಿ​ಕೊಂಡು, ಇತ​ರ​ರಿ​ಗೆ ಹರ​ಡುವ ಸಾಧ್ಯತೆ ಇರು​ವು​ದ​ರಿಂದ ಪ್ರಯೋ​ಗಾ​ಲ​ಯ​ದಲ್ಲಿ ಸೋಂಕು ಇಲ್ಲ ಎಂಬ ಖಚಿತ ವರದಿ ಬರುವವರೆ​ಗೂ ಶಂಕಿ​ತ​ರನ್ನು ಪ್ರತ್ಯೇ​ಕ​ವಾ​ಗಿಟ್ಟು ನಿಗಾ ವಹಿ​ಸ​ಲಾಗು​ತ್ತದೆ. ಕ್ವಾರಂಟೇನ್‌ ಹೋಂನಲ್ಲಿ 14 ದಿನ​ಗಳ ತಂಗಿದ ವ್ಯಕ್ತಿ ರೋಗ ಮುಕ್ತ​ನಾಗಿ ಹೊರ​ಬಂದು ಮತ್ತೆ ಕೊರೋನಾಪೀಡಿತ ವ್ಯಕ್ತಿಯ ಸಂಪ​ರ್ಕಕ್ಕೆ ಬಂದರೆ ಮತ್ತೆ ಆತ/ಆಕೆ​ಯನ್ನು 14 ದಿನ​ಗಳ ಕಾಲ ಪ್ರತ್ಯೇ​ಕ​ವಾ​ಗಿಟ್ಟು ತಪಾ​ಸಣೆ ನಡೆಸ​ಬೇ​ಕಾ​ಗು​ತ್ತ​ದೆ. ಈ 14 ದಿನ​ಗಳ ವರೆಗೆ ಅವ​ರಿಗೆ ಮೊಬೈಲ್‌, ಕೇರಂಬೋರ್ಡ್‌ ಬಳ​ಸಲೂ ಅವ​ಕಾಶ ಇರು​ತ್ತ​ದೆ.

ಯಾರೆಲ್ಲಾ ಕ್ವಾರಂಟೇನ್‌ ಹೋಂಗ​ಳಲ್ಲಿ ಚಿಕಿತ್ಸೆ ಪಡೆ​ಯ​ಬೇ​ಕು?

- ಕೊರೋನಾ ಸೋಂಕಿ​ತರ ಕುಟುಂಬ​ಸ್ಥರು ಅಥವಾ ಅವ​ರೊಂದಿಗೆ ವಾಸ​ವಿ​ದ್ದ​ವ​ರು.

- ವೈಯ​ಕ್ತಿಕ ಸುರಕ್ಷಾ ಸಾಧ​ನ​ವನ್ನು ಬಳ​ಸದೇ ಕೊರೋನಾ ಸೋಂಕು ಪೀಡಿತ ವ್ಯಕ್ತಿಯೊಂದಿಗೆ ದೈಹಿಕ ಸಂಪರ್ಕ ಹೊಂದಿ​ದ​ವ​ರು.

- ವಿಮಾನ ಪ್ರಯಾ​ಣ​ದಲ್ಲಿ ಅಥವಾ ಕೊರೋನಾ ಸೋಂಕಿ​ತರ ಸುತ್ತಮುತ್ತಲ 1 ಮೀಟರ್‌ ಪ್ರದೇ​ಶ​ದಲ್ಲಿ ಸಂಪರ್ಕ ಹೊಂದಿ​ದ​ವ​ರು.

ಮಕ್ಕಳು, ಗರ್ಭಿ​ಣಿ​ಯ​ರನ್ನು ಸಂಪ​ರ್ಕಿ​ಸು​ವಂತಿ​ಲ್ಲ

ಹೀಗೆ ಪ್ರತ್ಯೇಕ ಕೊಠ​ಡಿ​ಯಲ್ಲಿ ಇರು​ವ​ವ​ರು ವಯ​ಸ್ಸಾ​ದ​ವರು, ಗರ್ಭಿ​ಣಿ​ಯರು, ಮಕ್ಕಳು, ಅಸ್ವ​ಸ್ಥ​ಗೊಂಡಿ​ರುವವರಿಂದ ದೂರ ಇರು​ವಂತೆ ಸೂಚಿ​ಸ​ಲಾ​ಗು​ತ್ತ​ದೆ. ಕೊರೋನಾ ವೈರಸ್‌ ಮಕ್ಕ​ಳಲ್ಲಿ ಕಂಡು​ಬಂದಿ​ರು​ವುದು ತೀರಾ ಕಡಿಮೆ. ಚೀನಾ​ದ ಒಟ್ಟು ಕೊರೋನಾ ಪೀಡಿ​ತರ ಪೈಕಿ 2% ರೋಗಿ​ಗಳು ಮಾತ್ರ 20 ವರ್ಷ​ಕ್ಕಿಂತ ಕಡಿಮೆ ವಯ​ಸ್ಸಿ​ನ​ವರು. ಆದಾಗ್ಯೂ ಮಕ್ಕ​ಳನ್ನು ಶಂಕಿತರಿಂದ ದೂರ ಇಡಲು ಭಾರ​ತ ಸರ್ಕಾ​ರ​ ಸೂಚಿ​ಸಿ​ದೆ.

ಇದರಿಂದ ನಿಜಕ್ಕೂ ಉಪಯೋಗ ಇದೆಯಾ?

ಕೊರೋನಾ ವೈರಸ್‌ ಇದೀಗ ಜಗ​ತ್ತಿನ 130 ದೇಶ​ಗ​ಳಿಗೆ ಹರ​ಡಿದೆ. ಎಲ್ಲಾ ದೇಶ​ಗ​ಳೂ ಲಸಿಕೆ ರಹಿ​ತ​ವಾದ ಮಾರಕ ವೈರಸ್‌ ನಿಯಂತ್ರ​ಣಕ್ಕೆ ಶತ​ಪ್ರ​ಯತ್ನ ನಡೆ​ಸು​ತ್ತಿವೆ. ವಿಶೇಷ ಎಂದರೆ ಈ ವೈರಸ್‌ ನಿಯಂತ್ರ​ಣ​ದಲ್ಲಿ ಚೀನಾ ಯಶಸ್ಸು ಕಾಣು​ತ್ತಿದೆ. ಇದಕ್ಕೆ ಮೂಲಕ ಕಾರಣ ಕ್ವಾರಂಟೇನ್‌ ಹೋಂಗಳು ಎನ್ನ​ಲಾ​ಗು​ತ್ತಿ​ದೆ. ತಜ್ಞರ ಪ್ರಕಾರ ಈ ಪ್ರತ್ಯೇಕ ಚಿಕಿತ್ಸಾ ​ಕೋ​ಣೆ​ಗಳು ಕೊರೋನಾ ತಡೆ​ಗ​ಟ್ಟು​ವಲ್ಲಿ ಪರಿ​ಣಾ​ಮ​ಕಾರಿ ಪಾತ್ರ ವಹಿ​ಸಿವೆ. ಅದೆಷ್ಟೋ ರೋಗಿ​ಗಳ ಕುಟುಂಬ​ಸ್ಥ​ರನ್ನು ಮಾರಕ ರೋಗ​ದಿಂದ ಪಾರು ಮಾಡಿ​ದೆ.

ಕುಟುಂಬ​ಸ್ಥರು ಏನು ಮಾಡ​ಬೇ​ಕು?

- ಎಲ್ಲಾ ಸಮ​ಯ​ದಲ್ಲಿ ಮಾಸ್ಕ್‌ ಧರಿ​ಸಿ​ರ​ಬೇಕು.

- ಶಂಕಿತರೊಂದಿಗೆ ಎಲ್ಲಾ ರೀತಿಯ ದೈಹಿಕ ಸಂಪ​ರ್ಕ​ವನ್ನು ನಿಲ್ಲಿ​ಸ​ಬೇ​ಕು.

- ಜನರನ್ನು ಭೇಟಿ ಮಾಡು​ವು​ದನ್ನು ನಿಯಂತ್ರಿ​ಸ​ಬೇಕು.

- ವಾಸಿ​ಸುವ ಪ್ರದೇ​ಶ​ವನ್ನು ಅತ್ಯಂತ ಶುಚಿ​ಯಾ​ಗಿ​ಡ​ಬೇಕು.

- ಶಂಕಿತರ ಬಟ್ಟೆ​ಗ​ಳನ್ನು ಪ್ರ​ತ್ಯೇ​ಕ​ವಾ​ಗಿಟ್ಟು ತೊಳೆ​ಯ​ಬೇಕು.

- ಅವರು ಬಳ​ಸಿದ ಶೌಚಾ​ಲ​ಯ​ವ​ನ್ನು ಇತ​ರರು ಬಳ​ಬಾ​ರ​ದು.

ದಿಗ್ಬಂಧನ ಕೊಠಡಿ ಕಲ್ಪನೆ ಬಂದಿದ್ದು ಹೇಗೆ?

ರೋಗಿ​ಗ​ಳನ್ನು ಪ್ರತ್ಯೇ​ಕ​ವಾ​ಗಿಟ್ಟು ನಿಗಾ ಇಡುವ ಪದ್ಧತಿ ಆರಂಭ​ವಾ​ಗಿದ್ದು ಈಗಲ್ಲ. 14ನೇ ಶತ​ಮಾ​ನದ ವೇಳೆ​ಯ​ಲ್ಲಿಯೇ ಇಂಥ​ದ್ದೊಂದು ವಿಧಾನ ಬಳ​ಕೆ​ಯ​ಲ್ಲಿತ್ತು ಎಂಬು​ದಕ್ಕೆ ಹಲವು ಕುರು​ಹು​ಗಳು ಲಭ್ಯ​ವಾ​ಗಿವೆ. 1773ರಲ್ಲಿ ಅಮೆ​ರಿ​ಕ​ದಲ್ಲಿ ಹಳದಿ ಜ್ವರ ಎಂಬ ಸಾಂಕ್ರಾ​ಮಿಕ ರೋಗ ಹರ​ಡಿ​ ಸುಮಾರು 5000 ಜನ​ರನ್ನು ಬಲಿ ಪಡೆ​ದಿತ್ತು. 1799ರಲ್ಲಿ ಅದರಿಂದ ಪಾರಾ​ಗ​ಲು ಅಮೆ​ರಿ​ಕದ ಕಾಮ​ನ್‌​ವೆಲ್ತ್‌ ಆಫ್‌ ಫಿಲಿ​ಡೆ​ಲ್ಫಿ​ಯಾ​ದಲ್ಲಿ ಕ್ವಾರಂಟೇನ್‌ ಹೋಂ ತೆರೆದು ಸೋಂಕಿ​ತ​ರನ್ನು ಪ್ರತ್ಯೇ​ಕ​ವಾಗಿ ಇಡ​ಲಾ​ಗಿ​ತ್ತು. 1830ರಲ್ಲಿ ಕಾಲರಾ ಸಾಂಕ್ರಾ​ಮಿಕ ವ್ಯಾಧಿ ತ​ಡೆ​ಗ​ಟ್ಟಲು ನ್ಯೂಯಾ​ರ್ಕ್ನಲ್ಲಿ ಹಡಗು ಮತ್ತು ವಾಹ​ನ​ಗಳ ಮೂಲಕ ಪ್ರವೇ​ಶಿ​ಸಿ​ದ​ವರ ತಪಾ​ಸ​ಣೆ​ಗೆ ಪ್ರತ್ಯೇಕ ಚಿಕಿತ್ಸಾ ಕೊಠ​ಡಿ​ಯನ್ನು ತೆರೆ​ಯ​ಲಾ​ಗಿತ್ತು. ಹೀಗೇ ಇವು​ಗಳ ಬಳಕೆ ಮುಂದು​ವ​ರೆ​ಯಿತು. ಅನಂತರ ಆಧು​ನಿಕ ಯುಗ​ದಲ್ಲಿ ಈ ದಿಗ್ಭಂಧನ ಕೊಠ​ಡಿ​ಗಳು ಸಾಂಕ್ರಾ​ಮಿಕ ರೋಗ ತಡೆ​ಗ​ಟ್ಟುವ ಪರಿ​ಣಾ​ಮ​ಕಾರಿ ವಿಧಾ​ನ​ವಾಗಿ ಬಳ​ಕೆ​ಯಾ​ಗು​ತ್ತಿವೆ. 2003ರಲ್ಲಿ ಸಾರ್ಸ್‌ ಎಂಬ ಕಾಯಿಲೆ ಹರ​ಡಿ​ದಾ​ಗಲೂ ಹಲವು ದೇಶ​ಗಳು ಕ್ವಾರಂಟೇನ್‌ ಹೋಂ ಮೊರೆ ಹೋಗಿ​ದ್ದ​ವು.