ಐಜ್ವಾಲ್‌(ಅ.29): ಕೊರೋನಾದಿಂದ ಈವರೆಗೆ ಒಂದೇ ಒಂದು ಸಾವು ಕೂಡ ಸಂಭವಿಸಿರದ ರಾಜ್ಯ ಎನಿಸಿಕೊಂಡಿದ್ದ ಮಿಜೋರಂನಲ್ಲಿ ಕೊರೋನಾಕ್ಕೆ ಮೊದಲ ಬಲಿ ಆಗಿದ್ದು, 62 ವರ್ಷದ ವ್ಯಕ್ತಿಯೊಬ್ಬರು ಸೋಂಕಿನಿಂದ ಸಾವಿಗೀಡಾಗಿದ್ದಾರೆ. ಈ ಮೂಲಕ ದೇಶದ ಎಲ್ಲಾ ರಾಜ್ಯಗಳಲ್ಲಿ ಕೊರೋನಾ ಸಾವು ಸಂಭವಿಸಿದಂತಾಗಿದೆ. ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಲ್ಲಿ ಮಾತ್ರ ಇದುವರೆಗೂ ಒಂದೇ ಒಂದು ಕೊರೋನಾ ಸಾವು ಸಂಭವಿಸಿಲ್ಲ.

ಸಾವನ್ನಪ್ಪಿದ ವ್ಯಕ್ತಿಯನ್ನು 10 ದಿನಗಳ ಹಿಂದೆ ಐಜ್ವಾಲ್‌ ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತ ಹೃದಯ ಸಂಬಂಧಿ ಕಾಯಿಲೆಯಿಂದಲೂ ಬಳಲುತ್ತಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.

ಮಿಜೋರಂನಲ್ಲಿ ಮಾ.24ರಂದು ಮೊದಲ ಕೊರೋನಾ ಕೇಸ್‌ ದಾಖಲಾಗಿತ್ತು. ನೆದರ್ಲೆಂಡ್‌ನಿಂದ ಆಗಮಿಸಿದ್ದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. 45 ದಿನಗಳ ಬಳಿಕ ಆತ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದ. ಬಳಿಕ ಜೂ.1ರಂದು ಎರಡನೇ ಕೊರೋನಾ ವೈರಸ್‌ ಪ್ರಕರಣ ದಾಖಲಾಗಿ 12 ಮಂದಿಗೆ ಸೋಂಕು ಕಾಣಿಸಿಕೊಂಡಿತ್ತು. ನಂತರದಲ್ಲಿ ಕೊರೋನಾ ವೈರಸ್‌ ಪ್ರಕರಣಗಳು ಏರಿಕೆ ಕಂಡಿದ್ದರೂ ಯಾವುದೇ ಸಾವು ಸಂಭವಿಸಿರಲಿಲ್ಲ.

ಅ.28ರಂದು 80 ಮಂದಿ ಸೋಂಕಿಗೆ ತುತ್ತಾಗುವುದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,607ಕ್ಕೆ ಏರಿಕೆ ಆಗಿದೆ. ಮಿಜೋರಂನಲ್ಲಿ ಇದುವರೆಗೆ ದಾಖಲಾದ ಕೊರೋನಾ ವೈರಸ್‌ ಪ್ರಕರಣಗಳ ಪೈಕಿ ಶೇ.34ರಷ್ಟುಪ್ರಕರಣಗಳು ಅಕ್ಟೋಬರ್‌ನಲ್ಲಿ ದಾಖಲಾಗಿವೆ. ಇದೇ ವೇಳೆ ಮಿಜೋರಂನಲ್ಲಿ ಕೊರೋನಾ ವೈರಸ್‌ ನಿಯಂತ್ರಣಕ್ಕಾಗಿ ಅ.26ರಿಂದ ಐಜ್ವಾಲ್‌ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಲಾಕ್‌ಡೌನ್‌ ಹೇರಿಕೆ ಮಾಡಲಾಗಿದೆ. ನ.9ರವರೆಗೂ ರಾಜ್ಯವ್ಯಾಪಿ ಕೊರೋನಾ ಜಾಗೃತಿ ಕೈಗೊಳ್ಳಲಾಗಿದೆ.