Asianet Suvarna News Asianet Suvarna News

ಚೌತಿ ಸ್ಪೆಶಲ್:‌ ಪುಟ್ಟ ಗಣೇಶನ ಪುಟ್‌ ಪುಟಾಣಿ ಕತೆಗಳು

ಇವು ನಮಗೆಲ್ಲರಿಗೂ ಪ್ರಿಯನಾದ ಗಣಪತಿಯ ಕತೆಗಳು. ನೀವು ಇವುಗಳಲ್ಲಿ ಹಲವನ್ನು ಕೇಳಿರಲಿಕ್ಕಿಲ್ಲ. ಗಣಪತಿ ನಿತ್ಯ ಹೊಸದಾಗುವ ದೇವರು. ಅವನ ಕತೆಗಳೂ ಹೊಸ ಹೊಸದಾಗಿಯೇ ಇರುತ್ತವೆ. 

God Ganesha story for kids on Gowri Ganesha festival
Author
First Published Aug 30, 2022, 2:40 PM IST

ವಕ್ರತುಂಡನಾದ ಗಣಪ

ಒಮ್ಮೆ ಗಣಪತಿಯ ಬಳಿಗೆ ವೇದವ್ಯಾಸರು ಬಂದರು. ʼʼನಾನು ಮಹಾಭಾರತ ಎಂಬ ಕಾವ್ಯವನ್ನು ಬರೆಯಬೇಕೆಂದಿದ್ದೇನೆ. ಆದರೆ ಕಾವ್ಯದ ಪ್ರವಾಹ ನನ್ನ ತಲೆಯಲ್ಲಿ ಬಂದಷ್ಟು ವೇಗವಾಗಿ ಬರೆಯಲು ಆಗುವುದಿಲ್ಲ. ನೀನು ವಿದ್ಯಾಧಿಪತಿ. ನಾನು ಹೇಳಿದಂತೆ ಬರೆದುಕೊಡುತ್ತೀಯಾ?ʼʼ ಎಂದು ಕೇಳಿದರು.

'ಆದೀತು. ಆದರೆ ನಾನು ಬಹಳ ವೇಗವಾಗಿ ಬರೆಯುತ್ತೇನೆ. ನನ್ನ ವೇಗಕ್ಕೆ ತಕ್ಕಂತೆ ನೀವು ಹೇಳುತ್ತ ಹೋಗಬೇಕು. ನಿಧಾನಿಸಿದರೆ ನಾನು ಕೆಲಸ ಬಿಟ್ಟು ಹೋಗುತ್ತೇನೆ' ಎಂದ ವಿನಾಯಕ.

'ಹಾಗೆಯೇ ಆಗಲಿ. ಆದರೆ ನನ್ನದೂ ಒಂದು ಶರತ್ತು ಇದೆ. ನಾನು ಹೇಳುವ ಎಲ್ಲ ಶ್ಲೋಕಗಳನ್ನೂ ನೀನು ಅರ್ಥ ಮಾಡಿಕೊಂಡು ಬರೆಯಬೇಕು' ಎಂದರು ವೇದವ್ಯಾಸರು. ಹಾಗೆ ಮಹಾಭಾರತದ ಬರವಣಿಗೆ ಶುರುವಾಯಿತು.

ಗಣೇಶ ವೇಗವಾಗಿ ಬರೆಯುತ್ತಿದ್ದ. ಅದಕ್ಕೆ ತಕ್ಕಂತೆ ವ್ಯಾಸರು ಕತೆ ಹೇಳುತ್ತಿದ್ದರು. ಎಲ್ಲಿಯಾದರೂ ತಾನು ತುಸು ನಿಧಾನವಾಗಿ ಯೋಚಿಸಬೇಕಾಗಿ ಬಂದರೆ, ವ್ಯಾಸರು ಅದರ ಹಿಂದಿನ ಶ್ಲೋಕವನ್ನು ಕಠಿಣಾರ್ಥಗಳಿಂದು ತುಂಬಿಸಿ ಹೇಳುತ್ತಿದ್ದರು. ಆಗ ಅದನ್ನು ಅರ್ಥ ಮಾಡಿಕೊಳ್ಳಲು ಬೆನಕ ನಿಧಾನಿಸುತ್ತಿದ್ದ. ಈ ಸಮಯದಲ್ಲಿ ವ್ಯಾಸರು ಯೋಚನೆಗೆ ಸಮಯ ತೆಗೆದುಕೊಳ್ಳುತ್ತಿದ್ದರು.

ಹೀಗೆ ಬರೆಯುತ್ತಾ ಬರೆಯುತ್ತಾ ಒಮ್ಮೆ ಗಣಪ ಹಿಡಿದುಕೊಂಡ ಬರೆಯುವ ಕಂಠ ಮುರಿದುಹೋಯಿತು. ವ್ಯಾಸರು ಓಘದಲ್ಲಿ ಕತೆ ಹೇಳುತ್ತಿದ್ದಾರೆ. ಇನ್ನೊಂದು ಕಂಠ ಹುಡುಕಿ ತರಲು ಸಮಯವಿಲ್ಲ. ನಿಲ್ಲಿಸಿದರೆ ಕಾವ್ಯದ ಓಘಕ್ಕೆ ಧಕ್ಕೆಯಾಗುತ್ತದೆ.

ವಿನಾಯಕ ಕ್ಷಣವೂ ಯೋಚಿಸಲಿಲ್ಲ. ತನ್ನ ಎರಡು ದಂತಗಳಲ್ಲಿ ಒಂದನ್ನು ಮುರಿದ. ಅದನ್ನೇ ಶಾಯಿಯಲ್ಲಿ ಅದ್ದಿ ಬರೆದ. ಹೀಗೆ ಗಣೇಶ ಏಕದಂತನಾದ. ವಕ್ರತುಂಡನಾದ.

ಕಾವೇರಿ ನದಿಯ ಜನನ

ಮಹಾಮುನಿ ಅಗಸ್ತ್ಯರು ತಪಸ್ಸು ಮಾಡುತ್ತಿದ್ದರು. ದಕ್ಷಿಣ ಭಾರತದಲ್ಲಿ ಆಗ ಸರಿಯಾದ ನದಿಯಿರಲಿಲ್ಲ. ಮಳೆಯಿರಲಿಲ್ಲ. ಇದರಿಂದಾಗಿ ಜನತೆ ಬರದಿಂದ ತತ್ತರಿಸುತ್ತಿದ್ದರು. ಅವರಿಗಾಗಿ ಏನಾದರೂ ಮಾಡಬೇಕು ಎಂದುಕೊಂಡು ಅವರು ಗಂಗೆಯಿಂದ ಒಂದು ಕಮಂಡಲು ನೀರನ್ನು ತುಂಬಿಕೊಂಡು ದಕ್ಷಿಣಕ್ಕೆ ಬಂದರು. ನಿಯಮ ಏನೆಂದರೆ, ಆ ಕಮಂಡಲುವನ್ನು ಅವರೇ ಮಗುಚಿ ಹಾಕಬೇಕಿತ್ತು. ಹಾಗಾದರೆ ಮಾತ್ರ ಅಲ್ಲಿಂದ ನದಿ ಉದ್ಭವವಾಗಿ ಹರಿಯಲಿತ್ತು.

ಒಂದು ಬೆಟ್ಟದಲ್ಲಿ ಅವರು ಸಂಧ್ಯಾವಂದನೆಗೆ ಕುಳಿತುಕೊಳ್ಳಬೇಕಾಯಿತು. ಆಗ ಅಲ್ಲಿ ಅವರಿಗೆ ಹುಡುಗನೊಬ್ಬ ಕಂಡ. ಆತನನ್ನು ಕರೆದು, 'ನಾನು ಸಂಧ್ಯಾವಂದನೆ ಮುಗಿಸಿ ಬರುವವರೆಗೂ ಈ ಕಮಂಡಲುವನ್ನು ನೋಡಿಕೋ' ಎಂದು ಹೇಳಿ ಹೋದರು.

ಗಣೇಶ ಚತುರ್ಥಿ 2022 ದಿನ ಈ ಕತೆಯನ್ನು ಕೇಳಿದರೆ ಪಾಪ ನಾಶವಾಗುವುದು..

ಅವರು ಮರಳಿ ಬರುವಾಗ ಹುಡುಗ ಕಾಣಿಸಲಿಲ್ಲ. ಬದಲಾಗಿ ಒಂದು ಕಾಗೆ ಕಮಂಡಲುವಿನ ಮೇಲೆ ಕುಳಿತಿತ್ತು. ಅಗಸ್ತ್ಯರು ʼಶ್ಶೂʼ ಎಂದು ಕಾಗೆಯನ್ನು ಓಡಿಸಲು ಮುಂದಾದರು. ಕಾಗೆ ಹಾರಿತು, ಕಮಂಡಲು ಮಗಚಿ ನೀರು ಹರಿಯಿತು. ಅದೇ ಮುಂದೆ ಕಾವೇರಿ ನದಿಯಾಯಿತು.

ಅಲ್ಲಿಂದಲೇ ನದಿ ಉದ್ಭವಿಸಿ ಹರಿಯಲಿ ಎಂಬುದು ದೇವತೆಗಳ ಇಚ್ಛೆಯಾಗಿತ್ತು. ಹುಡುಗನಾಗಿ ಬಂದವನು, ಕಾಗೆಯಾಗಿ ಕಮಂಡಲು ಮಗುಚಿದವನು ಗಣೇಶನಾಗಿದ್ದ.

ಅಮ್ಮನಿಗೆ ಪರಚಿದ ಗಣೇಶ

ಒಮ್ಮೆ ಪುಟ್ಟ ಬೆನಕ ಮನೆಯ ಹೊರಗೆ ಆಡುತ್ತಿದ್ದ. ಒಂದು ಬೆಕ್ಕು ಅವನಿಗೆ ಕಂಡಿತು. ಮುದ್ದೆನಿಸಿತು. ಅದನ್ನು ಹಿಡಿದುಕೊಂಡು ಅಮುಕಿದ. ಮಿಯಾಂವ್‌ ಎಂದಿತು. ಅದರ ಮೈಯನ್ನು ಪರಚಿದ. ಬೆಕ್ಕು ಆಗಲೂ ಮಿಯಾಂವ್‌ ಎಂದಿತು. ನಂತರ ಅವನ ಕೈಯಿಂದ ಜಿಗಿದೋಡಿತು. ಆಟವಾಡಿದ ಗಣಪ ಒಳಗೆ ಬಂದ. ನೋಡುತ್ತಾನೆ- ಅಮ್ಮ ಪಾರ್ವತಿಯ ಮುಖದ ಮೇಲೆ ಪರಚಿದ ಗಾಯವಾಗಿದೆ. ಅವನಿಗೆ ಗಾಬರಿಯಾಯಿತು. ʼʼಯಾರಮ್ಮ ಹೀಗೆ ಮಾಡಿದವರು?ʼʼ ಎಂದು ಪ್ರಶ್ನಿಸಿದ.

'ನೀನೇ ಮಗುʼ ಎಂದಳು ಅಮ್ಮ. ಆಗ ಅವನಿಗೆ ಅರ್ಥವಾಯಿತು- ಸಕಲ ಜೀವಜಾತವೂ ಗೌರಿಯೇ. ಆಕೆ ಪ್ರಕೃತಿಮಾತೆ. ಯಾವ ಜೀವಿಗೆ ನೋವಾದರೂ ದೇವಿಗೇ ಆದಂತೆ ಎಂದು.

ಗಣೇಶ ಚತುರ್ಥಿ 2022: ಮನೆಗೆ ಹಬ್ಬದ ಕಳೆ ತರಲು ಹೀಗೆ ಅಲಂಕರಿಸಿ..

ಬೆನಕನ ಹೊಟ್ಟೆ ತುಂಬಿದ್ದು ಹೇಗೆ?

ಒಮ್ಮೆ ಕುಬೇರನ ಮನೆಯಲ್ಲಿ ದೊಡ್ಡ ಔತಣ. ಎಲ್ಲ ದೇವತೆಗಳನ್ನೂ ಆಹ್ವಾನಿಸಿದ್ದ. ಗಣಪನನ್ನೂ ಕರೆದಿದ್ದ. ಕುಬೇರನಲ್ಲಿ ತಾನು ಧನವಂತ ಎಂಬ ಅಹಂಕಾರವಿತ್ತು. ʼʼನೀನು ಬಂದರೆ ಹೊಟ್ಟೆ ತುಂಬಾ ಊಟ ಮಾಡಬಹುದುʼʼ ಎಂದು ಗಣಪನಿಗೆ ಹೇಳಿದ. ಗಣಪ ಒಳಗೊಳಗೇ ನಕ್ಕ.

ಔತಣದ ದಿನ ಅವನು ಇಲಿಯನ್ನೇರಿ ಸೀದಾ ಕುಬೇರನಲ್ಲಿಗೆ ಹೋದ. ಗಣಪನನ್ನು ಕಂಡ ಕುಬೇರ ನಸುನಕ್ಕು, ಊಟದೆಲೆಯ ಮುಂದೆ ಅವನನ್ನು ಕೂರಿಸಿದ. ಗಣಪನ ಮುಂದೆ ಒಂದೊಂದಾಗಿ ಭಕ್ಷ್ಯಭೋಜ್ಯಗಳು ಬಂದವು. ಅವನು ಎಲ್ಲವನ್ನೂ ಕಣ್ಣುಮುಚ್ಚಿ ಬಿಡುವಷ್ಟರಲ್ಲಿ ನುಂಗಿ ಪಾಯಸ ಕುಡಿದ. ಕುಬೇರನ ಅಡುಗೆಮನೆಯಲ್ಲಿ ಏನೂ ಉಳಿಯಲಿಲ್ಲ.

'ಹೂಂ, ನನ್ನ ಹೊಟ್ಟೆ ತುಂಬಿಲ್ಲ. ಹೊಟ್ಟೆ ತುಂಬಾ ಉಣ್ಣಬಹುದು ಎಂದೆಯಲ್ಲ? ನನ್ನ ಹೊಟ್ಟೆ ಅರ್ಧ ಮಾತ್ರವೂ ತುಂಬಿಲ್ಲ?' ಎಂದು ಕುಬೇರನನ್ನು ಕಿಚಾಯಿಸಿದ. ಕುಬೇರ ಮುಖ ಕೆಳಗೆ ಹಾಕಿ ಪಾರ್ವತಿದೇವಿಯನ್ನು ನೆನೆದ.

ಪಾರ್ವತಿ ಆಗಮಿಸಿ ಒಂದು ಗರಿಕೆಯನ್ನು ಗಣಪನ ಮುಂದಿಟ್ಟಳು. ಅವನು ಅದನ್ನು ಸೇವಿಸಿ ತೇಗಿದ, ಸಂತೃಪ್ತನಾದ. ಕುಬೇರ ಪಾಠ ಕಲಿತ.

Follow Us:
Download App:
  • android
  • ios