ಅಂಕಣ: ಅನನ್ಯ
ಲೇಖಕರು: ಅಜಿತ್ ಪಿಳ್ಳೈ, ಹಿರಿಯ ಪತ್ರಕರ್ತರು

ನರೇಂದ್ರ ಮೋದಿಯವರ ಸರ್ಕಾರದ ನಾಟಕೀಯ ನೋಟು ರದ್ದತಿ ಕ್ರಮವನ್ನು ಹೇಗೆ ಅರ್ಥ ಮಾಡಿಕೊಳ್ಳುವುದು? ಇದು ನಿಜಕ್ಕೂ ಕಪ್ಪುಹಣದ ವಿರುದ್ಧದ ಸರ್ಜಿಕಲ್ ದಾಳಿಯೇ ಅಥವಾ ಇದನ್ನು ಎನ್‌'ಪಿಎ (ವಸೂಲಾಗದ ಸಾಲ) ಬಿಕ್ಕಟ್ಟಿನಲ್ಲಿರುವ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕುಸಿತದಿಂದ ಪಾರು ಮಾಡಲು ಇಡೀ ದೇಶ ತನಗೆ ಗೊತ್ತಿಲ್ಲದೆ ತೆರುತ್ತಿರುವ ಬೆಲೆ ಎಂದು ಕರೆಯಬೇಕೇ?

ರಾತ್ರೋರಾತ್ರಿ ಐದುನೂರು ಮತ್ತು ಸಾವಿರ ಮುಖಬೆಲೆಯ ನೋಟುಗಳ ಚಲಾವಣೆ ರದ್ದು ಮಾಡುವ ಮೂಲಕ ಸರ್ಕಾರ ಒಂದೇ ಏಟಿಗೆ ಬ್ಯಾಂಕುಗಳ ಖಜಾನೆ ತುಂಬಿಸಿದೆ. ಬಂಡವಾಳದ ಕೊರತೆಯಿಂದ ನೆಲಕಚ್ಚಿದ್ದ ಅವುಗಳಿಗೆ ದಿಢೀರ್ ಬಂಡವಾಳ ಹರಿದುಬರುವಂತೆ ಮಾಡಿದೆ. ಈಗ ಬ್ಯಾಂಕ್ ದಾಖಲೆಗಳಲ್ಲಿ ಹಣದ ಹರಿವು ಪ್ರವಾಹದಂತೆ ಉಕ್ಕೇರುತ್ತಿದೆ. ದೇಶದಲ್ಲಿ ಚಲಾವಣೆಯಲ್ಲಿದ್ದ ಹಣದ ಒಟ್ಟು ಪ್ರಮಾಣದಲ್ಲಿ ಸರ್ಕಾರ ರದ್ದು ಮಾಡಿದ ಈ ಉನ್ನತ ವೌಲ್ಯದ ನೋಟುಗಳ ಪ್ರಮಾಣ ಶೇ.86ರಷ್ಟಿತ್ತು ಎಂಬುದನ್ನು ಮರೆಯಬಾರದು. ಈ ಶೇ.86ರಷ್ಟು ಪ್ರಮಾಣದ ಹಣದಲ್ಲೇ ಒಂದು ಭಾಗ ಹಣದ ಮಾರುಕಟ್ಟೆಯಿಂದ ಸೋರಿಹೋಗಿ ಸುರಕ್ಷತಾ ನಿಯಾಗಿ ಬ್ಯಾಂಕುಗಳ ಖಜಾನೆ ಸೇರಿತ್ತು. ಈಗ ನೋಟು ರದ್ದತಿ ಕ್ರಮದಿಂದ ಡಿ.31ರ ವೇಳೆಗೆ ಜನತೆ 10 ಲಕ್ಷ ಕೋಟಿ ರು. ವೌಲ್ಯದ ಹಳೆಯ ನೋಟುಗಳನ್ನು ಬ್ಯಾಂಕುಗಳಿಗೆ ವಾಪಸು ಮಾಡುತ್ತಾರೆ ಎಂದು ಸರ್ಕಾರ ಅಂದಾಜಿಸಿದೆ.

ಆದರೆ ಚಲಾವಣೆಯಲ್ಲಿದ್ದ ಐದುನೂರು ಮತ್ತು ಸಾವಿರ ಮುಖಬೆಲೆಯ ನೋಟುಗಳ ಒಟ್ಟು ವೌಲ್ಯ 16 ಲಕ್ಷ ಕೋಟಿ ರು. ಅಂದರೆ, ಕಾಂಗ್ರೆಸ್ ನಾಯಕ ಮತ್ತು ವಕೀಲ ಕಪಿಲ್ ಸಿಬಲ್ ಆರೋಪಿಸಿದಂತೆ, ಚಲಾವಣೆಯಲ್ಲಿದ್ದ ನೋಟುಗಳ ಒಟ್ಟು ವೌಲ್ಯ ಮತ್ತು ಜನ ಹಿಂತಿರುಗಿಸುವ ನೋಟುಗಳ ವೌಲ್ಯದ ನಡುವೆ ಇರುವ ಈ 6 ಲಕ್ಷ ಕೋಟಿ ಹಣದ ವ್ಯತ್ಯಾಸವನ್ನು ಸರಿದೂಗಿಸಲು ಆರ್‌ಬಿಐ ಅಷ್ಟು ಮೊತ್ತದ ಹೊಸ ನೋಟುಗಳನ್ನು ಮುದ್ರಿಸುತ್ತದೆಯೇ ಅಥವಾ ಆ ಹೆಚ್ಚುವರಿ ಮೊತ್ತವನ್ನು ಬ್ಯಾಂಕುಗಳು ತಮ್ಮ ವಸೂಲಾಗದ ಸಾಲವನ್ನು ಮನ್ನಾ ಮಾಡಲು ಬಳಸಿಕೊಳ್ಳುತ್ತವೆಯೇ ಎಂಬುದು ಈಗಿನ ಪ್ರಶ್ನೆ. ಸರ್ಕಾರ ಮತ್ತು ಬ್ಯಾಂಕುಗಳಿಗೆ ಇಂಥ ಯೋಜನೆಗಳು ಇರಬಹುದು ಎಂಬುದು ಸದ್ಯದ ಊಹೆ. ಆದರೆ ಜನಸಾಮಾನ್ಯರ ಬೆವರಿನ ಹಣದಲ್ಲಿ ಬ್ಯಾಂಕುಗಳು ತಮ್ಮ ಪ್ರಮಾದಗಳನ್ನು ಮುಚ್ಚಿ–ಕೊಂಡು ಕೊಬ್ಬಲಿವೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.

ಹಾಗೆ ನೋಡಿದರೆ, ನೋಟು ರದ್ದತಿಯ ಸಮರೋಪಾದಿಯ ಕ್ರಮದಿಂದಾಗಿ ನಿಜಕ್ಕೂ ಲಾಭವಾಗುವುದು ಬ್ಯಾಂಕುಗಳಿಗೆ ಮತ್ತು 6.30 ಲಕ್ಷ ಕೋಟಿಯಷ್ಟು ಅಗಾಧ ಪ್ರಮಾಣದ ವಸೂಲಿಯಾಗದ ಸಾಲ ಮತ್ತು ನಿಷ್ಕ್ರಿಯ ಆಸ್ತಿಗೆ ಕಾರಣವಾಗಿರುವ ದೇಶದ ಕಾರ್ಪೊರೇಟ್ ವಲಯಕ್ಕೆ ಮಾತ್ರ. ಆರ್‌ಬಿಐ 2016ರ ಜೂನ್‌ನಲ್ಲಿ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಈ ವಸೂಲಿಯಾಗದ ಸಾಲದ ಪೈಕಿ ಸಾರ್ವಜನಿಕ ವಲಯದ ಬ್ಯಾಂಕುಗಳ ಪಾಲು 5,71,443 ಕೋಟಿ ರು., ಖಾಸಗಿ ವಲಯದ ಬ್ಯಾಂಕುಗಳ ಪಾಲು 58,331 ಕೋಟಿ ರು. ಕಳೆದ ವರ್ಷ ಸಾರ್ವಜನಿಕ ವಲಯದ ಬ್ಯಾಂಕುಗಳ ವಸೂಲಿ–ಯಾಗದ ಸಾಲದ ಮೊತ್ತ 2,85,748 ಕೋಟಿ ಮತ್ತು ಖಾಸಗಿ ವಲಯದಲ್ಲಿ ಆ ಪ್ರಮಾಣ 34,805 ಕೋಟಿ ಇತ್ತು.

ವಸೂಲಿಯಾಗದ ಸಾಲ ಮತ್ತು ನಿಷ್ಕ್ರಿಯ ಆಸ್ತಿಯ ಪ್ರಮಾಣದಲ್ಲಿ ಆದ ಈ ಅಪಾಯಕಾರಿ ಏರಿಕೆಯೇ ಆರ್‌ಬಿಐ ಮಾಜಿ ಗವರ್ನರ್ ರಘುರಾಂ ರಾಜನ್ ಅವರು, ‘‘ಸುಸ್ತಿದಾರರ ಆಸ್ತಿ ವಶಪಡಿಸಿಕೊಳ್ಳುವ ಮೂಲಕವಾದರೂ ಸರಿ ಎಲ್ಲ ರೀತಿಯ ವಸೂಲಾಗದ ಸಾಲಗಳ ವಸೂಲಿ ಮಾಡುವ ಮೂಲಕ ಬ್ಯಾಂಕುಗಳನ್ನು ಸ್ವಚ್ಛಗೊಳಿಸ–ಬೇಕು,’’ ಎಂದು ಸಲಹೆ ನೀಡಲು ಕಾರಣವಾ–ಗಿತ್ತು. ಆದರೆ ಅಂಥದ್ದೊಂದು ಕ್ರಮ ಸರ್ಕಾರದ ಆಪ್ತ ವಲಯದಲ್ಲಿರುವವರೂ ಸೇರಿದಂತೆ ಹಲವು ಬೃಹತ್ ಕಾರ್ಪೊರೇಟ್ ಕಂಪನಿಗಳ ಪಾಲಿಗೆ ದುಬಾರಿಯಾಗಿ ಪರಿಣಮಿಸುತ್ತಿತ್ತು. ಆದರೆ ಇದೀಗ ಬ್ಯಾಂಕುಗಳು ನೋಟು ರದ್ದತಿ ಕ್ರಮ–ದಿಂದಾಗಿ ಹರಿದುಬರುತ್ತಿರುವ ಹಣದಲ್ಲಿ ತಮ್ಮ ವಸೂಲಿಯಾಗದ ಸಾಲಗಳನ್ನು ಮನ್ನಾ ಮಾಡುವ ಮೂಲಕ ತಮ್ಮ ಬ್ಯಾಲೆನ್ಸ್ ಶೀಟ್ ಅನ್ನು ಸ್ವಚ್ಛ ಮಾಡಿಕೊಳ್ಳುತ್ತಿವೆ.

ಈಗಾಗಲೇ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಆದ ಎಸ್‌ಬಿಐ ತನ್ನ ಬ್ಯಾಲೆನ್ಸ್ ಶೀಟ್ ಸ್ವಚ್ಚತೆ ಆರಂಭಿಸಿಬಿಟ್ಟಿದೆ. ನೋಟು ರದ್ದತಿ ಜಾರಿಗೆ ಬಂದ ಒಂದೇ ವಾರದಲ್ಲಿ ಅದು ತನ್ನ 100 ಮಂದಿ ಸ್ವಯಂಕೃತ ಸುಸ್ತಿದಾರರ ಪೈಕಿ 60 ಮಂದಿಗೆ ಸೇರಿದ ಬರೋಬ್ಬರಿ 7,016 ಕೋಟಿ ರು. ಮೊತ್ತದ ಸಾಲ ರದ್ದು ಮಾಡಿದೆ. ಆ ಪೈಕಿ ವಿಜಯ ಮಲ್ಯಗೆ ಸೇರಿದ 1200 ಕೋಟಿ ರು. ಬಾಕಿ ಸಾಲವೂ ಸೇರಿದೆ. ಹಾಗೆ ನೋಡಿದರೆ, ಸಾಲ ಮನ್ನಾ ಅಥವಾ ರದ್ದತಿ ನಡುವೆ ಅಂಥ ವ್ಯತ್ಯಾಸವೇನೂ ಇಲ್ಲ ಮತ್ತು ಇಂಥ ಪ್ರಕ್ರಿಯೆ ಈಗಾಗಲೇ ಜಾರಿಯಾಗಿಬಿಟ್ಟಿದೆ. 2016ರ ಜೂ.30ರಂದೇ ಎಸ್‌ಬಿಐ 48,000 ಕೋಟಿ ರು. ಮೊತ್ತದ ವಸೂಲಾಗದ ಸಾಲ ಮನ್ನಾ ಮಾಡಿತ್ತು. ಇದೀಗ ನೋಟು ರದ್ದತಿ ಬಳಿಕ ಬ್ಯಾಂಕುಗಳಿಗೆ ಕಾರ್ಪೊರೇಟ್ ಸಾಲ ಮನ್ನಾ ನಿಟ್ಟಿನಲ್ಲಿ ಹೊಸ ಹುಮ್ಮಸ್ಸು ಬಂದಿದ್ದು, ಇನ್ನೂ ಹಲವು ಬ್ಯಾಂಕುಗಳು ಎಸ್‌ಬಿಐ ಮಾದರಿ ಅನುಸರಿಸಲಿವೆ ಎಂಬುದು ತಜ್ಞರ ಅಭಿಪ್ರಾಯ.

ವಸೂಲಾತಿ ಬಾಕಿ ಇರುವ ಮುಂಗಡ (ಎಯುಸಿಎ) ಎಂಬ ಖಾತೆಗೆ ಸಾಲದ ಹಣ ಜಮಾ ಮಾಡುವ ಮೂಲಕ ಬ್ಯಾಂಕುಗಳು ವಸೂಲಾಗದ ಸಾಲ ರದ್ದು ಮಾಡುತ್ತವೆ. ಒಮ್ಮೆ ಹೀಗೆ ಮಾಡಿದರೆ, ವಸೂಲಾಗದ ಬಾಕಿ ಸಾಲಗಳು ಬ್ಯಾಂಕಿನ ಬ್ಯಾಲೆನ್ಸ್‌ಶೀಟ್‌ನಲ್ಲಿ ಕಾಣಿಸಿಕೊಳ್ಳುವು–ದಿಲ್ಲ ಮತ್ತು ಆ ಮೂಲಕ ಅವು ತಮ್ಮ ವಸೂ–ಲಾಗದ ಸಾಲದ ಪ್ರಮಾಣವನ್ನು ಮರೆಮಾಚು–ತ್ತವೆ. ಹಾಗಾಗಿ ಬ್ಯಾಂಕಿನ ಎನ್‌ಪಿಎ ಗಣನೀ– ಯ–ವಾಗಿ ತಗ್ಗಿದಂತೆ ಭಾಸವಾಗುತ್ತದೆ. ಸುಸ್ತಿ–ಯಾಗಿರುವ ಸಾಲ ವಸೂಲಾತಿಯ ಎಲ್ಲ ಪ್ರಯತ್ನಗಳೂ ಕೊನೆಗೊಂಡ ಬಳಿಕ ಬ್ಯಾಂಕುಗಳು ಹೀಗೆ ಎಯುಸಿಎ ಖಾತೆಗೆ ಸಾಲವನ್ನು ವರ್ಗಾಯಿಸಿ ಕೈತೊಳೆದುಕೊಳ್ಳುತ್ತವೆ. ಆದರೆ ಎಸ್‌ಬಿಐ ಈ ನಡುವೆ ನೀಡಿರುವ ಹೇಳಿಕೆಯಲ್ಲಿ, ಮಲ್ಯ ಸೇರಿದಂತೆ ಹಲವರು ಉಳಿಸಿಕೊಂಡಿರುವ ಬಾಕಿ ಸಾಲ ವಸೂಲಿ ಮಾಡಲು ಎಲ್ಲ ಪ್ರಯತ್ನ ಮುಂದುವರಿಸುವುದಾಗಿ ಹೇಳಿದೆ.

ಹೀಗೆ ಭಾರತೀಯ ಬ್ಯಾಂಕುಗಳನ್ನು ಅಪಾಯ–ದಿಂದ ಪಾರು ಮಾಡಲು ಹೆಚ್ಚುವರಿ ಹಣಕಾಸಿನ ಸರಬರಾಜು ಅಗತ್ಯವಿದೆ ಎಂಬ ಅಂಶ ಕೆಲವು ತಿಂಗಳ ಹಿಂದೆಯೇ ಗೊತ್ತಾಗಿತ್ತು. ಕಳೆದ ಮೇ ತಿಂಗ–ಳಲ್ಲಿ ಐಎಂಎ್ ನೀಡಿದ ವರದಿ–ಯೊಂದ–ರಲ್ಲಿ ಈ ಬಗ್ಗೆ ಗಮನ ಸೆಳೆಯಲಾಗಿತ್ತು. ಇಡೀ ಏಷ್ಯಾ-ೆಸಿಪಿಕ್ ವಲಯದ ಪ್ರಮುಖ ರಾಷ್ಟ್ರಗಳ ಪೈಕಿ ಭಾರತೀಯ ಬ್ಯಾಂಕುಗಳಲ್ಲಿ ಸುರ–ಕ್ಷತಾ ನಿ– ಯಾಗಿ ಇಡಬೇಕಾದ ‘ಟೈಯರ್-1 ಕ್ಯಾಪಿಟಲ್’ ಅಥವಾ ಹಣಕಾಸಿನ ತುರ್ತು ಪರಿಸ್ಥಿತಿಯಲ್ಲಿ ಬಳಕೆಗೆ ಮೀಸಲಿಡುವ ಹಣದ ಮೊತ್ತ ಅತ್ಯಂತ ಕನಿಷ್ಠ ಪ್ರಮಾಣದಲ್ಲಿದೆ ಎಂದು ಆ ವರದಿ ಎಚ್ಚರಿ–ಸಿತ್ತು. ಅಂದರೆ, ದೊಡ್ಡ ಮಟ್ಟದ ಹಣಕಾಸಿನ ಹೊಡೆ–ತ ತಾಳಿಕೊಳ್ಳುವಂಥ ಸುರಕ್ಷತಾ ಕ್ರಮಗ–ಳನ್ನು ಭಾರತೀಯ ಬ್ಯಾಂಕುಗಳು ಹೊಂದಿಲ್ಲ ಎಂಬುದು ಆಗಲೇ ಜಗಜ್ಜಾಹೀರಾಗಿತ್ತು.

ಆರ್‌ಬಿಐ ಪ್ರಕಾರ, ಎನ್‌ಪಿಎ ಮತ್ತು ಕೆಟ್ಟ ಸಾಲಗಳ ಪ್ರಮಾಣ ರಾಷ್ಟ್ರೀಯ ಜಿಡಿಪಿಯ ಶೇ.7ರಷ್ಟು ಇದೆ. ಅಂದರೆ, ಸುಮಾರು 146 ಬಿಲಿಯನ್ ಡಾಲರ್‌ನಷ್ಟು (ಸುಮಾರು 9.8 ಲಕ್ಷ ಕೋಟಿ ರು.) ಅಗಾಧ ಪ್ರಮಾಣದ ಸಾಲ ವಸೂ–ಲಾಗದೆ ಉಳಿದಿದೆ. ಆ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟದಲ್ಲಿರುವ ಬ್ಯಾಂಕುಗಳನ್ನು ಉಳಿಸುವ ಯತ್ನವಾಗಿ ಸರ್ಕಾರ ಇಂದ್ರಧನುಷ್ ಯೋಜನೆ ಮೂಲಕ 2015ರ ಆಗಸ್ಟ್‌ನಲ್ಲಿ ಸಾರ್ವಜನಿಕ ವಲ–ಯದ ಬ್ಯಾಂಕುಗಳ ಪುನರ್ ಹಣ ಸರಬ–ರಾಜು ಮಾಡಿತು. ಆ ಯೋಜನೆಯಡಿ ದೇಶದ 13 ಬ್ಯಾಂಕುಗಳಿಗೆ 20,058 ಕೋಟಿ ರು. ನೀಡಲಾ–ಯಿತು. ಆದರೂ ಹೆಚ್ಚುತ್ತಲೇ ಇದ್ದ ಎನ್‌ಪಿಎ ಪ್ರಮಾಣಕ್ಕೆ ಕಡಿವಾಣ ಹಾಕುವುದು ಸಾಧ್ಯವಾಗ–ಲಿಲ್ಲ. ಹಾಗಾಗಿ, ಬ್ಯಾಂಕುಗಳನ್ನು ರಕ್ಷಿಸಲು ಏನಾ–ದರೂ ಮಹತ್ವದ ಕ್ರಮ ಕೈಗೊಳ್ಳ–ಲೇಬೇಕಾಗಿತ್ತು. ಆಗ ಸರ್ಕಾರಕ್ಕೆ ಹೊಳೆದ ಉಪಾ–ಯವೇ ನೋಟು ರದ್ದತಿ ಕ್ರಮ. ಆದರೆ ಹಣ–ಕಾಸಿನ ಜಗತ್ತಿನಲ್ಲಿ ಭಾರಿ ವ್ಯತಿರಿಕ್ತ ಪರಿಣಾಮ ಉಂಟುಮಾಡುವ ಮತ್ತು ಬೃಹತ್ ಮೊತ್ತದ ಹಣ ಜಮಾ ಮಾಡು–ವವರು ಹಿಂಜರಿಯುವಂತೆ ಮಾಡುವ ಅಂಥ ದಿಢೀರ್ ಕ್ರಮದ ಹಿಂದಿನ ತನ್ನ ನಿಜವಾದ ಉದ್ದೇಶವನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳು–ವುದು ಒಳಿತಲ್ಲ ಎಂದು ಅರಿತ ಸರ್ಕಾರ, ಅದಕ್ಕಾಗಿ ಕಪ್ಪುಹಣದ ಮೇಲಿನ ಸರ್ಜಿಕಲ್ ದಾಳಿ ಎಂದು ಘೋಷಿಸಿ ಜನರ ಕಣ್ಣಿಗೆ ಮಣ್ಣೆರಚಿತು!

ಜೆಎನ್‌ಯು ಸೆಂಟರ್ ಫಾರ್ ಎಕನಾಮಿಕ್ ಸ್ಟಡೀಸ್ ಆ್ಯಂಡ್ ಪ್ಲಾನಿಂಗ್ ವಿಭಾಗದ ಮಾಜಿ ಮುಖ್ಯಸ್ಥರಾದ ಪ್ರೊ.ರಾಮ್ ಕುಮಾರ್ ಅವರಂಥ ಕಪ್ಪುಹಣದ ಕುರಿತ ತಜ್ಞರ ಪ್ರಕಾರ, ಈ ವರ್ಷ ಗುರುತಿಸಲಾದ 90 ಲಕ್ಷ ಕೋಟಿ ರು. ಕಪ್ಪು ಹಣದ (ಆಸ್ತಿ ಸಹಿತ) ಪೈಕಿ, ನಗದು ಪ್ರಮಾಣ ಶೇ.3 ಮಾತ್ರ. ಹಾಗಾಗಿ ಕೆಲವು ಮಾಧ್ಯಮಗಳು ಬಿಂಬಿಸುತ್ತಿರುವಂತೆ ಈಗ ಬ್ಯಾಂಕುಗಳಲ್ಲಿ ಜಮಾ ಆಗಿರುವ ಹಣದಲ್ಲಿ ಬಹುಪಾಲು ಕಪ್ಪುಹಣವಲ್ಲ ಎಂದು ಯಾರು ಬೇಕಾದರೂ ಊಹಿಸಬಹುದು.

ಬ್ಯಾಂಕುಗಳ ಖಜಾನೆ ತುಂಬುತ್ತಿರುವ ಈ ಹಣ ಬರುತ್ತಿರುವುದು ಭೂಗತ ದೊರೆಗಳಿಂದಲೂ ಅಲ್ಲ, ಭ್ರಷ್ಟ ಉದ್ಯಮಿಗಳಿಂದಲೂ ಅಲ್ಲ, ಸಿನಿಮಾ ತಾರೆಗಳಾಗಲೀ ಅಥವಾ ರಾಜಕಾರಣಿಗಳಿಂದಲೂ ಅಲ್ಲ. ಬದಲಾಗಿ ಬ್ಯಾಂಕಿನ ಮುಂದೆ ಸರದಿಯಲ್ಲಿ ನಿಂತಿರುವವರು ಗೃಹಿಣಿಯರು, ಆಟೋ ಚಾಲಕರು, ಸಾಮಾನ್ಯ ವೃತ್ತಿನಿರತರು ಮತ್ತು ದಿನಗೂಲಿ ಕಾರ್ಮಿಕರು. ಅವರು ಪ್ರಾಮಾಣಿಕ ಜನ ಮತ್ತು ಆ ಕಾರಣಕ್ಕಾಗೇ ಶೋಷಣೆಯ ಆತಂಕಕ್ಕೆ ಒಳಗಾದವರು. ತಮ್ಮ ಬೆವರಿನ ಫಲವಾದ ಹಣ ಉಳಿಸಿಕೊಳ್ಳಲು ಬೇರೆ ದಾರಿ ಇಲ್ಲದೆ ಬ್ಯಾಂಕುಗಳ ಮುಂದೆ ಊಟ, ನಿದ್ರೆ ಬಿಟ್ಟು ಕಾಯುತ್ತಿರುವವರು. ಆದರೆ ಅವರಿಗೆ ಗೊತ್ತಿಲ್ಲದ ಸಂಗತಿ ಎಂದರೆ, ಅವರು ಹಾಗೆ ಮಾಡುವ ಮೂಲಕ ಕಪ್ಪುಹಣದ ವಿರುದ್ಧ ಹೋರಾಡುತ್ತಿಲ್ಲ; ಬದಲಾಗಿ ಲೂಟಿಯಾಗಿರುವ ಬ್ಯಾಂಕಿಂಗ್ ವ್ಯವಸ್ಥೆಯನ್ನು ಉಳಿಸುವ ಮೂಲಕ ಪರೋಕ್ಷವಾಗಿ ಸಾಲಗಳ್ಳರು ಮತ್ತು ಕಾರ್ಪೊರೇಟ್ ಕುಳಗಳ ಬಾಕಿಯನ್ನು ತೀರಿಸುತ್ತಿದ್ದಾರೆ!

(ಕನ್ನಡಪ್ರಭ)