ಸ್ಯಾಕ್ಸೋಫೋನ್ ಮಾಂತ್ರಿಕನ ಕೊನೆಯ ಸಾರ್ವಜನಿಕ ಕಛೇರಿ ಮಂಗಳೂರಲ್ಲೇ!
ಸ್ಯಾಕ್ಸೋಫೋನ್ ಮಾಂತ್ರಿಕ ಕದ್ರಿ ಗೋಪಾಲನಾಥ್ ಅವರ ಕೊನೆಯ ಸಾರ್ವಜನಿಕ ಕಛೇರಿ ಮಂಗಳೂರಿನಲ್ಲಿ ನಡೆದಿದೆ. ಈ ವರ್ಷ ಜೂ.23ರಂದು ಬೆಂಗಳೂರಿನಲ್ಲಿ ನಡೆಸಿಕೊಟ್ಟಸಂಗೀತ ಕಛೇರಿ ಕದ್ರಿ ಗೋಪಾಲನಾಥ್ ಅವರ ಜೀವನದ ಕಟ್ಟಕಡೆಯ ಕಛೇರಿ. ಆದರೆ ಅದು ಖಾಸಗಿ ಸಮಾರಂಭವಾಗಿತ್ತು.
ಮಂಗಳೂರು(ಅ.15): ದೇಶ ವಿದೇಶಗಳಲ್ಲಿ ಸ್ಯಾಕ್ಸೋಫೋನ್‌ನ ನಾದ ತರಂಗಗಳನ್ನು ಪಸರಿಸಿ ಕರಾವಳಿಯ ಕೀರ್ತಿ ಪತಾಕೆ ಹಾರಿಸಿದ ಪದ್ಮಶ್ರೀ ಕದ್ರಿ ಗೋಪಾಲನಾಥ್ ಅವರು ತಮ್ಮ ಕೊನೆಯ ಸಾರ್ವಜನಿಕ ಸಂಗೀತ ಕಛೇರಿ ನಡೆಸಿಕೊಟ್ಟದ್ದು ತವರು ಜಿಲ್ಲೆ ದಕ್ಷಿಣ ಕನ್ನಡದಲ್ಲೇ, ಅದೂ ಮಂಗಳೂರಿನಲ್ಲಿ!
ಈ ವರ್ಷ ಜೂ.23ರಂದು ಬೆಂಗಳೂರಿನಲ್ಲಿ ನಡೆಸಿಕೊಟ್ಟಸಂಗೀತ ಕಛೇರಿ ಕದ್ರಿ ಗೋಪಾಲನಾಥ್ ಅವರ ಜೀವನದ ಕಟ್ಟಕಡೆಯ ಕಛೇರಿ. ಆದರೆ ಅದು ಖಾಸಗಿ ಸಮಾರಂಭವಾಗಿತ್ತು. ಅದರ ಹಿಂದಿನ ದಿನ ಜೂ.22ರಂದು ಮಂಗಳೂರಿನ ಪುರಭವನದಲ್ಲಿ ಕಛೇರಿ ನಡೆಸಿದ್ದರು. ಇದೇ ಅವರ ಕೊನೆಯ ಸಾರ್ವಜನಿಕ ಸಂಗೀತ ಕಛೇರಿಯಾಗಿದೆ ಎಂದು ಗೋಪಾಲನಾಥ್ ಸಂಗೀತ ತಂಡದ ಹಿರಿಯ ಕಲಾವಿದ ರಾಜೇಂದ್ರ ನಾಕೋಡ್ ಸ್ಮರಿಸಿದರು.
ಪಾಶ್ಚಿಮಾತ್ಯ ವಾದ್ಯದಲ್ಲಿ ಪೂರ್ವ- ಪಶ್ಚಿಮ ಬೆಸೆದ ನಾದ ಗಾರುಡಿಗ
ನಗರದ ಮಿನಿ ಪುರಭವನದಲ್ಲಿ ಗೋಪಾಲನಾಥ್ ಅಂತಿಮ ದರ್ಶನ ಪಡೆದ ಅವರು ಬಳಿಕ ‘ಕನ್ನಡಪ್ರಭ’ದೊಂದಿಗೆ ಮಾತನಾಡಿ ಗುರುವಿನ ಜತೆಗಿನ 15 ವರ್ಷಗಳ ಬಾಂಧವ್ಯಗಳನ್ನು ನೆನೆಸಿಕೊಂಡರು.
ಹೊಸತನದ ರೂವಾರಿ:
ಪಾಶ್ಚಾತ್ಯ ಸಂಗೀತ ಪರಿಕರವಾದ ಸ್ಯಾಕ್ಸೋಫೋನ್‌ನ್ನು ಕರ್ನಾಟಕ ಸಂಗೀತಕ್ಕೆ ಅಳವಡಿಸಿದ ಜಗತ್ತಿನ ಏಕೈಕ ಕಲಾವಿದ ಕದ್ರಿ ಗೋಪಾಲನಾಥ್. ಇದರಲ್ಲಿ ಅವರು ಹಲವಾರು ಪ್ರಯೋಗಗಳನ್ನು ಯಶಸ್ವಿಯಾಗಿ ಮಾಡಿ ಸೈ ಎನಿಸಿಕೊಂಡಿದ್ದಾರೆ. ಕೇವಲ ಕರ್ನಾಟಕ ಸಂಗೀತಕ್ಕೆ ಒಗ್ಗಿಕೊಳ್ಳದೆ ಹಿಂದೂಸ್ತಾನಿ ಸಂಗೀತವನ್ನೂ ಆಳವಾಗಿ ಅಭ್ಯಸಿಸಿ, ಚರ್ಚಿಸಿ ಅದರಲ್ಲಿನ ಅಂಶಗಳನ್ನು ತಮ್ಮ ಸಂಗೀತ ಕಛೇರಿಯಲ್ಲಿ ಅಳವಡಿಸಿ ಹೊಸತನ್ನು ಸೃಷ್ಟಿಮಾಡುತ್ತಿದ್ದರು. ಇದು ಅವರ ವಿಶೇಷ ಗುಣವಾಗಿತ್ತು ಎಂದರು.
ಮುಂಚಿತವಾಗಿಯೇ ಹಾಜರ್!:
ಗೋಪಾಲನಾಥ್ ಸಂಗೀತ ತಂಡದಲ್ಲಿ ನಾವು ಐದು ಮಂದಿ- ಮೃದಂಗದಲ್ಲಿ ಬಿ.ಹರಿಕುಮಾರ್, ವಯೋಲಿನ್‌ನಲ್ಲಿ ಕನ್ಯಾಕುಮಾರಿ, ತಬಲಾದಲ್ಲಿ ನಾನು, ಮೊಹರ್‌ಸಿಂಗ್‌ನಲ್ಲಿ ಬಿ.ರಾಜಶೇಖರ್ ಇದ್ದೆವು. ಎಲ್ಲೇ ಸಂಗೀತ ಕಛೇರಿ ಇರಲಿ, ಅದಕ್ಕಿಂತ ಸಾಕಷ್ಟು ಮುಂಚಿತವಾಗಿಯೇ ಗೋಪಾಲನಾಥ್ ಅಲ್ಲಿ ಹಾಜರಿರುತ್ತಿದ್ದರು. 6 ಗಂಟೆಗೆ ಕಛೇರಿ ಇದ್ದರೆ 5 ಗಂಟೆಗೇ ಅಲ್ಲಿರುತ್ತಿದ್ದರು. ಸಮಯ ಪರಿಪಾಲನೆ ಅವರ ಶಿಸ್ತಿನ ಜೀವನಕ್ಕೆ ಸಾಕ್ಷಿಯಾಗಿತ್ತು ಎಂದು ಹೇಳಿದರು.
ಹೊರಗೆ ಜೋಕ್ಸ್, ವೇದಿಕೆಯಲ್ಲಿ ತಲ್ಲೀನ:
ಕಛೇರಿ ಬಿಟ್ಟು ಹೊರಗಿದ್ದಾಗ ಜೋಕುಗಳನ್ನು ಹೇಳಿ ನಗಿಸಿ ನಗುತ್ತಿದ್ದ ಕದ್ರಿ ಗೋಪಾಲನಾಥ್ ಒಮ್ಮೆ ವೇದಿಕೆ ಏರಿದರೆಂದರೆ ಸಂಗೀತದಲ್ಲೇ ಶೇ.100ರಷ್ಟುತಲ್ಲೀನರಾಗಿಬಿಡುತ್ತಿದ್ದರು. ಇಡೀ ತಂಡವನ್ನು ಅಚ್ಚುಕಟ್ಟಾಗಿ ಮುನ್ನಡೆಸುತ್ತಿದ್ದ ಅವರ ರೀತಿಯೇ ಅನನ್ಯ ಎಂದರು ರಾಜೇಂದ್ರ ನಾಕೋಡ್.
ಕೇಳುವವರಿಹರೆಂದು..:
ಕೆಲವೊಂದು ಬಾರಿ ನಾಲ್ಕೈದು ಗಂಟೆ ಬಿಡದೆ ಸಂಗೀತ ಕಛೇರಿ ನಡೆಸುತ್ತಿದ್ದರು. ಯಾಕ್ ಸಾರ್ ಎಂದರೆ, ಜನರನ್ನು ಖುಷಿಪಡಿಸಬೇಕು. ಅವರು ಕೇಳುತ್ತಿದ್ದಾರೆ ಎಂದರೆ ನಾನು ನುಡಿಸಲೇಬೇಕು ಎನ್ನುತ್ತಿದ್ದರು. ಅವರ ಸಂಗೀತ ಸೇವೆ ಅಪರೂಪದ್ದು ಎಂದು ನಾಕೋಡ್ ಸ್ಮರಿಸಿಕೊಂಡರು.
ಸರ್ಕಾರಿ ಗೌರವಗಳೊಂದಿಗೆ ಜೋಗಿ ಸಂಪ್ರದಾಯದಂತೆ ಸ್ಯಾಕ್ಸೋಫೋನ್ ಮಾಂತ್ರಿಕನ ಅಂತ್ಯಕ್ರಿಯೆ