Asianet Suvarna News Asianet Suvarna News

POCSO ಪ್ರಕರಣ ಹಿಂಪಡೆಯುವಂತೆ ಬೆದರಿಕೆ, ಅಧಿಕಾರ ದುರ್ಬಳಕೆ: ADGP Alok Kumar ವಿರುದ್ಧ ಪಿಸಿಆರ್‌ಗೆ ಆದೇಶ

ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಅಲೋಕ್‌ ಕುಮಾರ್‌ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ಪ್ರಕರಣ ದಾಖಲಾಗಿದ್ದು, ಪಿಸಿಆರ್‌ ದಾಖಲಿಸವಂತೆ ಆದೇಶಿಸಲಾಗಿದೆ. ಪೋಕ್ಸೊ ಪ್ರಕರಣವೊಂದರ ಸಂತ್ರಸ್ತ ಮಗುವಿನ ತಾಯಿಯ ಮೇಲೆ ದೂರು ಹಿಂಪಡೆಯುವಂತೆ ಹಲ್ಲೆ ಮಾಡಿರುವ ಆರೋಪ ಹಿರಿಯ ಐಪಿಎಸ್‌ ಅಧಿಕಾರಿ ವಿರುದ್ಧ ಕೇಳಿಬಂದಿದೆ. 

Court orders to book PCR against ADGP Alok Kumar for allegedly assaulting woman
Author
First Published Sep 20, 2022, 12:35 PM IST

ಬೆಂಗಳೂರು: ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್‌ ಕುಮಾರ್‌ (Additional Director General of Police Alok Kumar) ಅವರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಪೋಕ್ಸೊ ಪ್ರಕರಣವೊಂದರ ಸಂತ್ರಸ್ತ ಮಗುವಿನ ತಾಯಿಗೆ ಪ್ರಕರಣ ಹಿಂಪಡೆಯುವಂತೆ ಬೆದರಿಕೆ ಹಾಕಿ ಹಲ್ಲೆ ಮಾಡಲಾಗಿದೆ, ಎಂದು ನ್ಯಾಯಾಲಯದಲ್ಲಿ ಖಾಸಗಿ ಮೊಖದ್ದಮೆ ದಾಖಲಾಗಿದೆ. ಘಟನೆ ನಡೆದು ವರ್ಷಗಳೇ ಕಳೆದರೂ ಯಾವುದೇ ತನಿಖೆ ಅಥವಾ ಎಫ್‌ಐಆರ್‌ (First Information Report) ದಾಖಲಾಗಿರಲಿಲ್ಲ. ಪೋಕ್ಸೊ (POCSO) ಸಂತ್ರಸ್ತೆಯ ತಾಯಿ ಹೂಡಿರುವ ಮೊಕದ್ದಮೆಯ ತನಿಖೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಆಕೆಯ ಹೇಳಿಕೆ ದಾಖಲಿಸಲು ನ್ಯಾಯಾಲಯ ಸಮಯ ನಿಗದಿ ಮಾಡಲಿದೆ. ಈ ಸಂಬಂಧ ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆ ವರದಿ ಮಾಡಿದ್ದು, ಪತ್ರಿಕೆಗೆ ಪ್ರತಿಕ್ರಿಯೆ ನೀಡಿರುವ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಕುಮಾರ್‌, ಈ ಆರೋಪವನ್ನು ಅಲ್ಲಗಳೆದಿದ್ದಾರೆ. ಮಹಿಳೆ ಭೇಟಿ ಮಾಡಲು ಬಂದಿದ್ದರು. ಆದರೆ ಅವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ನ್ಯಾಯಾಲಯ ಪಿಸಿಆರ್‌ ಮಾಡಲು ನಿರ್ದೇಶನ ನೀಡಿರುವ ಬಗ್ಗೆ ತಮಗೆ ಮಾಹಿತಿಯಿಲ್ಲ. ರಾಜ್ಯ ಮಾನವ ಹಕ್ಕುಗಳ ಆಯೋಗ ಆರೋಪದ ಕುರಿತು ತನಿಖೆ ನಡೆಸಿ ದೂರಿನಲ್ಲಿರುವ ಆರೋಪಗಳು ಸುಳ್ಳು ಎಂದು ವರದಿ ನೀಡಿದೆ, ಎಂದಿದ್ದಾರೆ.
 
ಹಿರಿಯ ಐಪಿಎಸ್‌ ಅಧಿಕಾರಿ ವಿರುದ್ಧ ಪಿಸಿಆರ್‌ ದಾಖಲಿಸುವಂತೆ ನ್ಯಾಯಾಲಯ ಆದೇಶಿಸಿದ್ದು, ಆದೇಶದ ಪ್ರತಿ ಏಷ್ಯಾನೆಟ್‌ ನ್ಯೂಸ್‌ಗೆ ಲಭ್ಯವಾಗಿದೆ. ಐವತ್ತು ವರ್ಷ ವಯಸ್ಸಿನ ಮಹಿಳೆ ಮೇಲೆ 2019ರಲ್ಲಿ ಬೆಂಗಳೂರು ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪಿಸಲಾಗಿದೆ. ಮಹಿಳೆಯ ಹೇಳಿಕೆ ದಾಖಲಿಸಿಕೊಂಡ ನಂತರ ಪ್ರಕರಣ ಸಂಬಂಧ ಎಫ್‌ಐಆರ್‌ ದಾಖಲಾಗುವ ಸಾಧ್ಯತೆಯಿದೆ. ಫೆಬ್ರವರಿ 11, 2019ರಲ್ಲಿ ಮಹಿಳೆಯ ಮೇಲೆ ಹಲ್ಲೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಅಲೋಕ್‌ ಕುಮಾರ್‌ ಬೆಂಗಳೂರು ಹೆಚ್ಚುವರಿ ಪೊಲೀಸ್‌ ಆಯುಕ್ತರಾಗಿದ್ದರು. ಘಟನೆ ನಡೆದ ದಿನ ಅಂದಿನ ಪೊಲೀಸ್‌ ಕಮೀಷನರ್‌ ಸುನೀಲ್‌ ಕುಮಾರ್‌ ರಜೆಯಲ್ಲಿದ್ದ ಕಾರಣ, ಅಲೋಕ್‌ ಕುಮಾರ್‌ ಪ್ರಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಸಿಸ್ಟರ್‌ ಶಾಲಿನಿ ಎಂಬ ಎನ್‌ಜಿಒ ಕಾರ್ಯಕರ್ತೆಯೊಬ್ಬರ ಮೇಲೆ ನೀಡಿದ ದೂರಿನ ಕುರಿತು ಮಾತನಾಡಲು ಅಲೋಕ್‌ ಕುಮಾರ್‌ ಅವರನ್ನು ದೂರುದಾರ ಮಹಿಳೆ ಭೇಟಿಯಾಗಿದ್ದರು. ಮಗಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ನ್ಯಾಯಾಲಯದ ಆಚೆ ಮಾತುಕತೆಯಲ್ಲಿ ಮುಗಿಸಿಕೊಳ್ಳುವಂತೆ ಶಾಲಿನಿ ಪೀಡಿಸುತ್ತಿದ್ದಾರೆ, ಎಂದು ಮಹಿಳೆ ದೂರಿದ್ದರು. 2016ರಲ್ಲಿ ಬಿಹಾರ ಮೂಲದ ವ್ಯಕ್ತಿಯೊಬ್ಬ ಮಹಿಳೆಯ ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದಡಿ ಬಂಧಿತನಾಗಿದ್ದ. ಈ ಪೋಕ್ಸೊ ಪ್ರಕರಣದ ವಿಚಾರಣೆ ಸದ್ಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿದೆ. 

ಇದನ್ನೂ ಓದಿ: Bengaluru; ತರಗತಿಯಲ್ಲಿ ಬಾಲಕಿಯ ಪ್ಯಾಂಟ್‌ ಎಳೆದ ಶಿಕ್ಷಕಿ ವಿರುದ್ಧ ಕ್ರಿಮಿನಲ್‌ ಕೇಸ್‌

ಪತ್ರಿಕೆಯ ಜೊತೆ ದೂರುದಾರೆ ಮಾತನಾಡಿದ್ದು, "ನಾನು ಅಲೋಕ್‌ ಕುಮಾರ್‌ ಅವರನ್ನು ಭೇಟಿಯಾದಾಗ ಅವರು ಪ್ರಕರಣವನ್ನು ಹಿಂಪಡೆಯುವಂತೆ ಹೇಳಿದರು. ಸ್ಥಳೀಯ ಪೊಲೀಸರಿಗೆ ಎನ್‌ಜಿಒ ಕಾರ್ಯಕರ್ತೆಯ ವಿರುದ್ಧ ಎಫ್‌ಐಆರ್‌ ದಾಖಲಿಸಲು ನಿರ್ದೇಶನ ನೀಡುವುದು ಅವರ ಕರ್ತವ್ಯ ಎಂದು ನಾನು ಹೇಳಿದೆ. ಅದಕ್ಕವರು ನನ್ನ ಮೇಲೆ ಕಿರುಚಾಡಿದರು. ನಂತರ ಅವರು ಪ್ರಕರಣ ಹಿಂಪಡೆಯುವಂತೆ ಬೆದರಿಸಿ ನನ್ನ ಮೇಲೆ ಹಲ್ಲೆ ಮಾಡಿದರು. ನಾನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದೆ," ಎಂದಿದ್ದಾರೆ. 

"ಅಲೋಕ್‌ ಕುಮಾರ್‌ ನನ್ನ ಮುಖಕ್ಕೆ ಗುದ್ದಿದ್ದರು. ನನ್ನ ಕಣ್ಣಿಗೆ ಗಾಯವಾಯಿತು. ನಂತರ ಅಂದಿನ ಪೊಲೀಸ್‌ ಆಯುಕ್ತ ಸುನೀಲ್‌ ಕುಮಾರ್‌ ಅವರನ್ನು ಮತ್ತು ಗೃಹ ಸಚಿವರನ್ನು ಭೇಟಿ ಮಾಡಿದೆ. ಆದರೆ ಯಾವುದೇ ಉಪಯೋಗವಾಗಲಿಲ್ಲ," ಎಂದು ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ. 

ಇದನ್ನೂ ಓದಿ: Muruga Mata Case: ಮುರುಘಾ ಶ್ರೀ ವಿರುದ್ಧ ದಲಿತ ದೌರ್ಜನ್ಯ ಪ್ರಕರಣವೂ ದಾಖಲು

ಮಹಿಳೆಯ ವಿರುದ್ಧವೇ ಎಫ್‌ಐಆರ್‌:
ಮಾರ್ಚ್‌ 25, 2019ರಂದು ವಿಧಾನ ಸೌಧ ಪೊಲೀಸ್‌ ಠಾಣೆಯಲ್ಲಿ ಮಹಿಳೆಯ ವಿರುದ್ಧವೇ ಹಲವು ಐಪಿಎಸ್‌ ಸೆಕ್ಷನ್‌ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪೊಲೀಸ್‌ ಆಯುಕ್ತರ ಕಚೇರಿ ಆವರಣದಲ್ಲಿ ಗಲಾಟೆ ಮಾಡಿದ ಆರೋಪದಡಿ ಎಫ್‌ಐಆರ್‌ ಮಾಡಲಾಗಿತ್ತು. ಈ ಪ್ರಕರಣವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ ಬಳಿಕ ಎಫ್‌ಐಆರ್‌ನ್ನು ಹೈಕೋರ್ಟ್‌ ರದ್ದುಗೊಳಿಸಿತ್ತು. ಎಫ್‌ಐಆರ್‌ ರದ್ದುಗೊಳಿಸುವಾಗ ಹೈಕೋರ್ಟ್‌ "ಒಂದು ವೇಳೆ ಮಹಿಳೆ ಪೊಲೀಸ್‌ ಆಯುಕ್ತರ ಕಚೇರಿಯ ಆವರಣದಲ್ಲಿ ಗಲಾಟೆ ಮಾಡಿದ್ದಾರೆ ಎಂದೇ ಅಂದುಕೊಂಡರೂ ಮಾರ್ಚ್‌ 25, 2019ರವರೆಗೆ ಎಫ್‌ಐಆರ್‌ ಮಾಡುವ ಬಗ್ಗೆ ಯಾಕೆ ನಿರ್ಧಾರ ಮಾಡಲಿಲ್ಲ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಫೆಬ್ರವರಿ 11, 2019ರಲ್ಲಿ ನಡೆದ ಘಟನೆಯ ಸಂಬಂಧ ಮಾರ್ಚ್‌ 17, 2020ರಂದು ಹಿರಿಯ ಪೊಲೀಸ್‌ ಅಧಿಕಾರಿ ಅಲೋಕ್‌ ಕುಮಾರ್‌ ಹೇಳಿಕೆ ದಾಖಲಿಸುತ್ತಾರೆ. ಇದಕ್ಕೆ ಯಾವುದೇ ರೀತಿಯ ವಿಶ್ಲೇಷಣೆ ನೀಡಿರುವುದಿಲ್ಲ. ದೂರುದಾರೆ ಅಲೋಕ್‌ ಕುಮಾರ್‌ ಮತ್ತು ಉಳಿದವರ ವಿರುದ್ಧ ಪೊಲೀಸ್‌ ಆಯುಕ್ತ ಸುನೀಲ್‌ ಕುಮಾರ್‌ಗೆ ದೂರು ನೀಡಿದ ಕಾರಣಕ್ಕೆ ಮಹಿಳೆಯ ವಿರುದ್ಧ ಎಫ್‌ಐಆರ್‌ ಮಾಡಲು ಮುಂದಾಗಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಸಹಾಯ ಕೋರಿ ಹಿರಿಯ ಅಧಿಕಾರಿಗಳ ಕದ ತಟ್ಟಿದ ಅಸಹಾಯಕ ಮಹಿಳೆಯ ವೇದನೆ ಈ ಪ್ರಕರಣದಿಂದ ಬೆಳಕಿಗೆ ಬಂದಿದೆ. ಈ ಕಾರಣದಿಂದ ಮಹಿಳೆಯ ಮೇಲಿರುವ ಎಫ್‌ಐಆರ್‌ನ್ನು ಕೋರ್ಟ್‌ ವಜಾಗೊಳಿಸಿದೆ," ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು.
 
ಸಿಸ್ಟರ್‌ ಶಾಲಿನಿ ಟಿಒಐಗೆ ಪ್ರತಿಕ್ರಿಯೆ ನೀಡಿರುವ ಪ್ರಕಾರ ಮಹಿಳೆಯನ್ನು ಸಂಪರ್ಕಿಸಿದ್ದು ಸತ್ಯ. ಆದರೆ ಅಲೋಕ್‌ ಕುಮಾರ್‌ ಅವರ ಪರಿಚಯ ಅವರಿಗಿಲ್ಲ. ಪೋಕ್ಸೊ ಪ್ರಕರಣದ ಆರೋಪಿಯ ಮನವಿ ಮೇರೆಗೆ ಸಂತ್ರಸ್ತೆಯ ತಾಯಿಯನ್ನು ಸಂಪರ್ಕಿಸಿದ್ದಾಗಿ ಶಾಲಿನಿ ಹೇಳಿದ್ದಾರೆ. "ಆರೋಪಿ ಹೇಳಿದ ಪ್ರಕಾರ ಆತನ ಮೇಲಿನ ಪೋಕ್ಸೊ ಪ್ರಕರಣ ಸುಳ್ಳು. ನ್ಯಾಯಾಲಯದ ಆಚೆಗೆ ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳಲು ಆರೋಪಿಗೆ ಮನವಿ ಮಾಡಲಾಗಿತ್ತು. ಅದಕ್ಕಾಗಿ ಸಂತ್ರಸ್ತೆಯ ತಾಯಿಯನ್ನು ಸಂಪರ್ಕಿಸಿದೆ. ಅವರು ಅದಕ್ಕೆ ಒಪ್ಪಲಿಲ್ಲ," ಎಂದು ಹೇಳಿರುವುದಾಗಿ ಪತ್ರಿಕೆ ವರದಿ ಮಾಡಿದೆ.

ಇದನ್ನೂ ಓದಿ: ಮುರುಘಾ ಮಠ ಶ್ರೀಗಳಿಂದ ಲೈಂಗಿಕ ದೌರ್ಜನ್ಯ; ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು

ಪಿಸಿಆರ್‌ ಎಂದರೇನು?:

Private Complaint Registrar ಎಂದರೆ ಖಾಸಗಿ ದೂರು ದಾಖಲಿಸುವುದು ಎಂದರ್ಥ. ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳದ ಪಕ್ಷದಲ್ಲಿ, ಅಥವಾ ಪೊಲೀಸರ ಹಸ್ತಕ್ಷೇಪವೇ ಇಲ್ಲದಿದ್ದರೂ, ನೇರವಾಗಿ ಖಾಸಗಿ ದೂರನ್ನು ನ್ಯಾಯಾಲಯಕ್ಕೆ ಸಲ್ಲಿಸಬಹುದು. ನ್ಯಾಯಾಲಯದ ಮುಂದೆ ದೂರನ್ನು ಸಲ್ಲಿಸಿದ ನಂತರ, ಆರೋಪಿ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ಧಾರ ಎಂಬುದನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತದೆ. ಖಾಸಗಿ ದೂರು ನೀಡಿದವರು ಅವರ ಬಳಿಯಿರುವ ಸಾಕ್ಷಿಯನ್ನು ನ್ಯಾಯಾಲಯಕ್ಕೆ ಒದಗಿಸಬೇಕು. ಆರೋಪಿಯ ವಿರುದ್ಧದ ಆರೋಪ ಸರಿ ಎಂದು ಕಂಡು ಬಂದ ಪಕ್ಷದಲ್ಲಿ ಪೊಲೀಸರಿಗೆ ಪ್ರಕರಣ ಸಂಬಂಧ ಎಫ್‌ಐಆರ್‌ ದಾಖಲಿಸಿ ತನಿಖೆ ಆರಂಭಿಸುವಂತೆ ನ್ಯಾಯಾಲಯ ಆದೇಶ ನೀಡುತ್ತದೆ. 

Follow Us:
Download App:
  • android
  • ios