Asianet Suvarna News Asianet Suvarna News

ಕೇಪ್‌ಟೌನ್‌ನಲ್ಲಿ ಸಿರಾಜ್ ಬಿರುಗಾಳಿ ಬೌಲಿಂಗ್‌; 55 ರನ್‌ಗೆ ಹರಿಣಗಳು ಧೂಳೀಪಟ..!

ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ಡೀನ್ ಎಲ್ಗರ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ವೇಗಿ ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ಹಾಗೂ ಮುಕೇಶ್ ಕುಮಾರ್ ಮಾರಕ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ತಂಡವು ಅಲ್ಪಮೊತ್ತಕ್ಕೆ ಆಲೌಟ್ ಆಗಿದೆ.

Mohammed Siraj Takes 6 Wicket Haul As India Bowl Out SA For 55 kvn
Author
First Published Jan 3, 2024, 3:38 PM IST

ಕೇಪ್‌ಟೌನ್‌(ಜ.03): 2024ರ ವರ್ಷವನ್ನು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಭರ್ಜರಿಯಾಗಿಯೇ ಆರಂಭಿಸಿದೆ. ಹೈದರಾಬಾದ್ ಮೂಲದ ಮಾರಕ ವೇಗಿ ಮೊಹಮ್ಮದ್ ಸಿರಾಜ್ ಅವರ ವೃತ್ತಿಜೀವನದ ಶ್ರೇಷ್ಠ ಬೌಲಿಂಗ್ ಪ್ರದರ್ಶನ(15/6)ಕ್ಕೆ ತತ್ತರಿಸಿದ ಆತಿಥೇಯ ದಕ್ಷಿಣ ಆಫ್ರಿಕಾ ತಂಡವು, ಕೇಪ್‌ಟೌನ್ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕೇವಲ 55 ರನ್‌ಗಳಿಗೆ ಸರ್ವಪತನ ಕಂಡಿದೆ. ಸೆಂಚೂರಿಯನ್‌ನಲ್ಲಿ ಇನಿಂಗ್ಸ್‌ ಹಾಗೂ 32 ರನ್ ಸೋಲು ಅನುಭವಿಸಿದ್ದ ಟೀಂ ಇಂಡಿಯಾ, ಎರಡನೇ ಪಂದ್ಯದಲ್ಲಿ ಭರ್ಜರಿಯಾಗಿಯೇ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದೆ.

ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ಡೀನ್ ಎಲ್ಗರ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ವೇಗಿ ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ಹಾಗೂ ಮುಕೇಶ್ ಕುಮಾರ್ ಮಾರಕ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ತಂಡವು ಅಲ್ಪಮೊತ್ತಕ್ಕೆ ಆಲೌಟ್ ಆಗಿದೆ. ಟೀಂ ಇಂಡಿಯಾ ಬೌಲಿಂಗ್ ದಾಳಿ ಹೇಗಿತ್ತೆಂದರೆ, ಹರಿಣಗಳ ಪಡೆಯ ಇಬ್ಬರು ಬ್ಯಾಟರ್‌ಗಳು ಮಾತ್ರ ಎರಡಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾದರು. ಕೈಲ್ ವೆರೈನ್‌ 15 ರನ್ ಬಾರಿಸಿದ್ದೇ, ಹರಿಣಗಳ ಪಡೆಯ ಪರ ದಾಖಲಾದ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿಕೊಂಡಿತು.

ಕೇಪ್‌ಟೌನ್‌ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿಕೆಟ್ ಪತನ ಹೀಗಿತ್ತು: 5 for 1. 8 for 2. 11 for 3. 15 for 4. 34 for 5. 34 for 6. 45 for 7. 46 for 8. 55 for 9. 55 for 10.

ಕೇಪ್‌ಟೌನ್ ಟೆಸ್ಟ್‌ನಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ಕೆ; ಉಭಯ ಪಡೆಯಲ್ಲೂ ಮೇಜರ್ ಚೇಂಜ್

ದಕ್ಷಿಣ ಆಫ್ರಿಕಾ ತಂಡವು 1932ರ ಬಳಿಕ ಇದೇ ಮೊದಲ ಬಾರಿಗೆ ಟೆಸ್ಟ್‌ ಕ್ರಿಕೆಟ್‌ನ ಮೊದಲ ಇನಿಂಗ್ಸ್‌ನಲ್ಲಿ 55 ರನ್‌ಗಳಿಗೆ ಆಲೌಟ್ ಆಗಿದೆ. ಭಾರತ ಎದುರು ಟೆಸ್ಟ್‌ ಕ್ರಿಕೆಟ್‌ನಲ್ಲಿ ಎದುರಾಳಿ ತಂಡವೊಂದು ಅಲ್ಪಮೊತ್ತಕ್ಕೆ ಆಲೌಟ್ ಆದ ಅಪಖ್ಯಾತಿಗೆ ಹರಿಣಗಳ ಪಡೆ ಪಾತ್ರವಾಗಿದೆ.

ಮೊದಲ ಟೆಸ್ಟ್‌ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದ್ದ ಭಾರತ, ಇದೀಗ ಕೇಪ್‌ಟೌನ್ ಟೆಸ್ಟ್‌ನಲ್ಲಿ ಭರ್ಜರಿಯಾಗಿಯೇ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದೆ. ಹರಿಣಗಳ ಪಡೆಯ ಅಗ್ರಕ್ರಮಾಂಕದ ನಾಲ್ವರು ಬ್ಯಾಟರ್‌ಗಳಾದ ಮಾರ್ಕ್‌ರಮ್(2), ನಾಯಕ ಡೀನ್ ಎಲ್ಗರ್(4), ಜೋರ್ಜಿ(2) ಹಾಗೂ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಸ್ಟಬ್ಸ್(3) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. 15 ರನ್‌ಗೆ 4 ವಿಕೆಟ್ ಕಳೆದುಕೊಂಡು ಹರಿಣಗಳ ಪಡೆ ಕಂಗಾಲಾಗಿ ಹೋಯಿತು.

ಇನ್ನು ಡೇವಿಡ್ ಬೆಡಿಂಗ್‌ಹ್ಯಾಮ್‌(12) ಹಾಗೂ ಕೈಲ್ ವೆರೈನ್‌ 15 ಇಬ್ಬರು ಮಾತ್ರ ಕೊಂಚ ಪ್ರತಿರೋಧ ತೋರುವ ಯತ್ನ ಮಾಡಿದರಾದರೂ ಈ ಇಬ್ಬರನ್ನು ಬಲಿ ಪಡೆಯುವಲ್ಲಿ ಸಿರಾಜ್ ಯಶಸ್ವಿಯಾದರು. ಇನ್ನು ಬುಮ್ರಾ ಹಾಗೂ ಮುಕೇಶ್ ಕುಮಾರ್ ತಲಾ ಎರಡು ವಿಕೆಟ್ ತಮ್ಮ ಖಾತೆಗೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು.

Follow Us:
Download App:
  • android
  • ios