ಮುಂಬೈ[ಅ.05]: ಪಂಜಾಬ್‌ ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ ವಂಚನೆ ಸಂಬಂಧ, ಬ್ಯಾಂಕ್‌ನ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಜಾಯ್‌ ಥಾಮಸ್‌ರನ್ನು ಮುಂಬೈ ಪೊಲೀಸ್‌ ಆರ್ಥಿಕ ಅಪರಾಧ ದಳ ಶುಕ್ರವಾರ ಬಂಧಿಸಿದೆ. ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ 4355 ಕೋಟಿ ಹಗರಣದ ತನಿಖೆ ಸಂಬಂಧ ವಿಚಾರಣೆಗೆ ಹಾಜರಾಗಿದ್ದ ವೇಳೆ ಉನ್ನತ ತನಿಖೆಗಾಗಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ಪ್ರಕರಣ ಸಂಬಂಧ ಗುರುವಾರ ಎಚ್‌ಡಿಐಎಲ್‌ನ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ರಾಖೇಶ್‌ ವರ್ಧನ್‌ ಹಾಗೂ ಅವರ ಪುತ್ರ ಸಾರಂಗ್‌ನನ್ನು ಬಂಧಿಸಿ, ಬ್ಯಾಂಕ್‌ಗೆ ಸಂಬಂಧಿಸಿದ್ದ 3500 ಕೋಟಿ ಮೌಲ್ಯದ ಆಸ್ತಿ ಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಶುಕ್ರವಾರ ಇಬ್ಬರನ್ನೂ ನ್ಯಾಯಾಲಯ ಅ.9ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

ಇದೇ ವೇಳೆ ಪ್ರಕರಣ ಸಂಬಂಧ ಮುಂಬೈನ ಆರು ಕಡೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ. ಮುಂಬೈ ಪೊಲೀಸ್‌ ಆರ್ಥಿಕ ಅಪರಾಧ ದಳ ದಾಖಲಿಸಿದ ಎಫ್‌ಐಆರ್‌ ಆಧರಿಸಿ ಇಡಿ ದಾಳಿ ಮಾಡಿದ್ದು, ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಮುಟ್ಟುಗೋಲು ಹಾಕಬಹುದಾದ ಆಸ್ತಿಗಳ ಬಗ್ಗೆಯೂ ತನಿಖೆ ಮಾಡಲಾಗುತ್ತಿದೆ ಎಂದು ಇಡಿ ಮೂಲಗಳು ತಿಳಿಸಿವೆ.

ಆರ್‌ಬಿಐ ನೇಮಕ ಮಾಡಿರುವ ಆಡಳಿತಾಧಿಕಾರಿ ನೀಡಿದ ದೂರಿನನ್ವಯ ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ದಾಖಲೆ ತಿರುಚುವುದು, ಮೋಸ ಹಾಗೂ ಕ್ರಿಮಿನಲ್‌ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ತನಿಖೆಯ ಪ್ರಾಥಮಿಕ ವರದಿ ಪ್ರಕಾರ 2008ರಿಂದಲೇ ಬ್ಯಾಂಕ್‌ 4,355.46 ಕೋಟಿ ರು. ನಷ್ಟದಲ್ಲಿತ್ತು ಎಂದು ತಿಳಿದು ಬಂದಿತ್ತು.