ಅಧ್ಯಕ್ಷೀಯ ಚುನಾವಣೆಯ ಮುಖ್ಯ ಘಟ್ಟಗಳಲ್ಲಿ, ಅಭ್ಯರ್ಥಿಗಳ ನಡುವೆ ಏರ್ಪಡುವ ಸಾರ್ವಜನಿಕ ಸಂವಾದ ಕೂಡ ಒಂದು. ಇಂತಹ ಸಂವಾದಗಳು ಜನರ ಒಲವು, ನಿಲುವುಗಳನ್ನು ಬದಲಿಸಬಲ್ಲದೇ ಎಂಬುದು ಚರ್ಚಾರ್ಹ ವಿಷಯ. ಆದರೆ ಯಾವುದೇ ಪಕ್ಷದ ಪರ ಒಲವು ತೋರದೇ ಬೇಲಿಯ ಮೇಲೆ ಕೂತ ಮತದಾರರು ಸೂಕ್ತ ನಿಲುವು ತಳೆಯಲು ಅಭ್ಯರ್ಥಿಗಳ ನಡುವಿನ ಸಂವಾದಗಳು ಅನುಕೂಲವನ್ನಂತೂ ಮಾಡಿಕೊಡುತ್ತವೆ.
ಸುಧೀಂದ್ರ ಬುಧ್ಯ
ಹಾಗಾಗಿಯೇ ಬಹುತೇಕ ಸುದ್ದಿವಾಹಿನಿಗಳು ಅಭ್ಯರ್ಥಿಗಳ ನಡುವಿನ ಸಂವಾದದ ನೇರಪ್ರಸಾರ ಮಾಡುತ್ತವೆ. ರಾಷ್ಟ್ರ ಮಟ್ಟದ ಸಮೀಕ್ಷೆಗಳಲ್ಲಿ ಶೇಕಡ 15ಕ್ಕೂ ಹೆಚ್ಚಿನ ಮತ ಪಡೆದವರನ್ನು ಮಾತ್ರ ಚರ್ಚೆಗೆ ಆಹ್ವಾನಿಸಲಾಗುತ್ತದೆ. ಸಾಮಾನ್ಯವಾಗಿ ಕೇವಲ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಳಷ್ಟೇ ಚರ್ಚೆಯಲ್ಲಿ ಭಾಗವಹಿಸುವ ಅರ್ಹತೆ ಪಡೆದುಕೊಳ್ಳುತ್ತಾರೆ. ಇತರ ಸಣ್ಣ ಪುಟ್ಟಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರ ಉಮೇದುವಾರರು ಚರ್ಚೆಯಿಂದ ಹೊರಗುಳಿಯುತ್ತಾರೆ.
undefined
ಸೀರೆಯುಟ್ಟು ಟ್ರಂಪ್ ಸಮ್ಮುಖ ಅಮೆರಿಕದ ಪ್ರಜೆಯಾದ ಸುಧಾ ಸುಂದರಿ
ಪ್ರತೀ ಚುನಾವಣೆಯಲ್ಲೂ, ಅಭ್ಯರ್ಥಿಗಳ ನಡುವಿನ ಸಂವಾದವನ್ನು ವ್ಯವಸ್ಥಿತವಾಗಿ ಆಯೋಜಿಸಲಾಗುತ್ತದೆ. ಚರ್ಚೆಯ ನಿರ್ವಾಹಕರು ಯಾರು ಎಂಬುದನ್ನು ಮೊದಲೇ ಪ್ರಕಟಿಸಲಾಗುತ್ತದೆ. ಮೊದಲ ಸಂವಾದ ದೇಶದ ಆಂತರಿಕ ಸಮಸ್ಯೆಗಳ ಕುರಿತಾಗಿದ್ದರೆ, ಎರಡನೆಯದು ಟೌನ್ ಹಾಲ್ ಮಾದರಿಯಲ್ಲಿರುತ್ತದೆ, ಅಲ್ಲಿ ಆಯ್ದ ಸಭಿಕರು ಪ್ರಶ್ನೆ ಕೇಳಬಹುದು. ಮೂರನೆಯ ಚರ್ಚೆಗೆ ವಿದೇಶಾಂಗ ಕಾರ್ಯನೀತಿಯನ್ನು ಮುಖ್ಯ ವಿಷಯವಾಗಿ ಆರಿಸಿಕೊಳ್ಳಲಾಗುತ್ತದೆ. ಸಂವಾದದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಕೆಲವು ನಿಬಂಧನೆಗಳಿರುತ್ತವೆ. ಸಂವಾದ ಆಯೋಜಕರು ಅವುಗಳನ್ನು ಉಭಯ ಪಕ್ಷಗಳ ಪ್ರಚಾರ ನಿರ್ವಹಣಾ ತಂಡಗಳೊಂದಿಗೆ ಚರ್ಚಿಸುತ್ತಾರೆ. ಆಕ್ಷೇಪಗಳಿದ್ದರೆ ನಿಬಂಧನೆಗಳನ್ನು ಪರಿಶೀಲಿಸಿ, ಇಬ್ಬರಿಗೂ ಒಪ್ಪಿತವಾಗುವಂತೆ ಮಾರ್ಪಡಿಸಲಾಗುತ್ತದೆ. ಚರ್ಚೆಯ ನಿರ್ವಾಹಕ ತಂಡ ಪ್ರತ್ಯೇಕವಾಗಿರುತ್ತದೆ. ಈ ತಂಡದಲ್ಲಿ ವಿವಿಧ ಪತ್ರಿಕೆಯ ಹಾಗೂ ಸುದ್ದಿವಾಹಿನಿಯ ಮುಖ್ಯಸ್ಥರು, ಜನಪ್ರಿಯ ಪತ್ರಕರ್ತರು, ರಾಜಕೀಯ ವಿಶ್ಲೇಷಕರು ಇರುತ್ತಾರೆ. ಕೆಲವೊಮ್ಮೆ ಚರ್ಚೆಯ ನಿರ್ವಾಹಕರ ಬಗ್ಗೆ ಅಭ್ಯರ್ಥಿಗಳು ಅಸಮಾಧಾನ ತೋರುವುದಿದೆ. 2016ರ ಚುನಾವಣೆಯಲ್ಲಿ ಟ್ರಂಪ್ ಮೊದಲಿಗೆ ಚರ್ಚೆಯಲ್ಲಿ ಭಾಗವಹಿಸಲು ಒಪ್ಪಿಕೊಂಡಿರಲಿಲ್ಲ. ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವ ನಿರ್ವಾಹಕರು ಇದ್ದರೆ ಮಾತ್ರ ನಾನು ಭಾಗವಹಿಸುತ್ತೇನೆ ಎಂದಿದ್ದರು.
ಇನ್ನು ಈ ಸಂವಾದದಲ್ಲಿ ಭಾಗವಹಿಸಲು ಅಭ್ಯರ್ಥಿಗಳು ಸಾಕಷ್ಟುಬೆವರು ಹರಿಸುತ್ತಾರೆ. ತಜ್ಞರ ತಂಡ ಕಟ್ಟಿಕೊಂಡು ತಾಲೀಮು ನಡೆಸುತ್ತಾರೆ. ತಜ್ಞರು ಸಿದ್ಧಪಡಿಸಿದ ಟಿಪ್ಪಣಿಗಳನ್ನು, ಮಾಹಿತಿ ಹೊತ್ತಗೆಯನ್ನು ಪರೀಕ್ಷೆಗೆ ಕುಳಿತ ವಿದ್ಯಾರ್ಥಿಯಂತೆ ಪಟ್ಟಾಗಿ ಕುಳಿತು ಓದುತ್ತಾರೆ. ಎದುರಾಳಿ ಭಾಗವಹಿಸಿದ ಹಿಂದಿನ ಚರ್ಚೆಗಳ ವೀಡಿಯೋ ವೀಕ್ಷಿಸುತ್ತಾರೆ. ಪ್ರತಿಸ್ಪರ್ಧಿಯ ದೌರ್ಬಲ್ಯವೇನು, ಎಂತಹ ಪ್ರಶ್ನೆಗೆ ಅವರು ತಬ್ಬಿಬ್ಬಾಗಬಹುದು ಎಂಬುದನ್ನು ಊಹಿಸಿ ಸಾಧ್ಯವಾದಷ್ಟುಬಾಣಗಳನ್ನು ತಮ್ಮ ಬತ್ತಳಿಕೆಗೆ ತುಂಬಿಕೊಳ್ಳುತ್ತಾರೆ. ಶಾಲಾ ವಿದ್ಯಾರ್ಥಿಗಳು ಒಂದೊಮ್ಮೆ ಪರೀಕ್ಷೆಯೇ ಇಲ್ಲವಾಗಿದ್ದರೆ ಎಷ್ಟುಚೆನ್ನಿತ್ತು ಎಂದುಕೊಳ್ಳುವಂತೆಯೇ ಅಧ್ಯಕ್ಷೀಯ ಅಭ್ಯರ್ಥಿಗಳು ಚರ್ಚೆಗೆ ಬೆದರುವುದೂ ಇದೆ. ನೌಕರಿಯ ಸಂದರ್ಶನದಲ್ಲಿ ನಿರುದ್ಯೋಗಿ ತಳಮಳಗೊಳ್ಳುವಂತೆ, ಚರ್ಚೆಯ ವೇದಿಕೆಯಲ್ಲಿ ಅಧ್ಯಕ್ಷೀಯ ಅಭ್ಯರ್ಥಿಗಳು ತಬ್ಬಿಬ್ಬಾಗುವ ಸಂದರ್ಭ ಇಲ್ಲವೆಂದಲ್ಲ.
ಚೀನಾ ವಿಷಯದಲ್ಲಿ ನಮ್ಮ ಬೆಂಬಲ ಭಾರತಕ್ಕೆ: ಅಮೆರಿಕ!
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳ ನಡುವಿನ ಸಂವಾದ, ಅಧ್ಯಕ್ಷೀಯ ಅಭ್ಯರ್ಥಿಗಳ ಸಂವಾದದಷ್ಟುಜನರ ಗಮನ ಸೆಳೆಯುವುದಿಲ್ಲವಾದರೂ ಅದಕ್ಕೆ ಮಹತ್ವವಂತೂ ಇದೆ. ಒಂದುವೇಳೆ, ಅಧಿಕಾರದ ಅವಧಿಯಲ್ಲಿ ದುರದೃಷ್ಟವಶಾತ್ ಅಧ್ಯಕ್ಷರ ಸ್ಥಾನ ತೆರವಾದರೆ, ಉಪಾಧ್ಯಕ್ಷರು ಹಂಗಾಮಿ ಅಧ್ಯಕ್ಷರಾಗಿ ಆಡಳಿತದ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ. ಆ ಅರ್ಹತೆ ಉಪಾಧ್ಯಕ್ಷ ಅಭ್ಯರ್ಥಿಗಳಲ್ಲಿ ಇದೆಯೇ ಎಂಬುದಕ್ಕೆ ಈ ಸಂವಾದ ಒಂದು ಮಾಪನವಾಗುತ್ತದೆ.
ಪ್ರತೀ ಚುನಾವಣೆಯಲ್ಲೂ ಅಭ್ಯರ್ಥಿಗಳನ್ನು ಸಂವಾದಕ್ಕೆ ಅಣಿಗೊಳಿಸುವ ಕೆಲಸ ನಡೆಯುತ್ತದೆ. 2008 ಮತ್ತು 2012ರ ಚುನಾವಣೆಯಲ್ಲಿ ತಮ್ಮ ಮಾತನ್ನೇ ಬಂಡವಾಳವಾಗಿಸಿಕೊಂಡಿದ್ದ ಒಬಾಮ ಕೂಡ, ಚರ್ಚೆಯಲ್ಲಿ ರಾಮ್ನಿ ಮತ್ತು ಮೆಕ್ಕೈನ್ ಅವರನ್ನು ಎದುರಿಸಲು ಸಾಕಷ್ಟುಶ್ರಮ ಪಟ್ಟಿದ್ದರು. 1976ರಲ್ಲಿ ಎರಡನೆಯ ಅವಧಿಗೆ ಸ್ಪರ್ಧಿಸಿದ್ದ ಫೋರ್ಡ್ ಅವರನ್ನು ಚರ್ಚೆಗೆ ಅಣಿಗೊಳಿಸಲು ಶ್ವೇತ ಭವನದ ಒಳಗೆ ಸಂವಾದ ವೇದಿಕೆಯನ್ನು ಸಿದ್ಧಪಡಿಸಲಾಗಿತ್ತು. ನೂರಾರು ಕುರ್ಚಿಗಳನ್ನು ವೇದಿಕೆಯ ಮುಂದಿಟ್ಟು, ಜೊತೆಗೆ ದೊಡ್ಡ ಪರದೆಯನ್ನು ಅಳವಡಿಸಿ ಅದರಲ್ಲಿ ಪ್ರತಿಸ್ಪರ್ಧಿ ಜಿಮ್ಮಿ ಕಾರ್ಟರ್ ಅವರು ಹಿಂದೆ ಭಾಗವಹಿಸಿದ್ದ ಸಂವಾದಗಳ ವಿಡಿಯೊ ಪ್ರಸಾರ ಮಾಡುತ್ತಾ ಫೋರ್ಡ್ ಅವರನ್ನು ಚರ್ಚೆಗೆ ಸಿದ್ಧಪಡಿಸಲಾಗಿತ್ತು. ಚರ್ಚೆಯ ವಾತಾವರಣವನ್ನೇ ಸೃಷ್ಟಿಸಿ ಅಭ್ಯರ್ಥಿಗೆ ತರಬೇತಿ ನೀಡಿದರೆ, ನೇರ ಪ್ರಸಾರದ ಚರ್ಚೆಯಲ್ಲಿ ಅಭ್ಯರ್ಥಿ ತಬ್ಬಿಬ್ಬಾಗುವುದಿಲ್ಲ ಎಂಬುದು ತರಬೇತುದಾರರ ಅಭಿಪ್ರಾಯವಾಗಿತ್ತು.
ನರೇಂದ್ರ ಮೋದಿ ವಿಶ್ವ ನಾಯಕ, ಮತ್ತೊಮ್ಮೆ ಸಾಬೀತು ಮಾಡಿದ ವೈಟ್ ಹೌಸ್!
ಹಿಂದೆ ಜಾಜ್‌ರ್ ಬುಷ್ ಜೂನಿಯರ್ ಅವರು ಚುನಾವಣಾ ಕಣದಲ್ಲಿದ್ದಾಗ ಬುಷ್ ಅವರನ್ನು ಅವರ ಆಪ್ತ ಜಾಶ್ ಬಾಲ್ಟೆನ್ ಚರ್ಚೆಗೆ ಅಣಿಗೊಳಿಸಿದ್ದರು. ಬಾಸ್ಟನ್‌ನಲ್ಲಿ ಮೊದಲ ಚರ್ಚೆ ಆಯೋಜನೆಗೊಂಡಿತ್ತು. ಸಾಕಷ್ಟುಬಾರಿ ಅಣಕು ಸಂವಾದ ನಡೆಸಿ ತಯಾರಾಗಿದ್ದರೂ ಬಾಸ್ಟನ್ ವಿಶ್ವವಿದ್ಯಾಲಯಕ್ಕೆ ಆಗಮಿಸಿದಾಗ ಬುಷ್ ಆತಂಕಕ್ಕೆ ಒಳಗಾಗಿದ್ದರು. ಆತಂಕ ನಿವಾರಣೆಗಾಗಿ ಚಚ್‌ರ್ ಒಂದರ ಪಾದ್ರಿಗೆ ಕರೆಮಾಡಿ, ದೂರವಾಣಿ ಮೂಲಕವೇ ಪ್ರಾರ್ಥನೆ ಸಲ್ಲಿಸಿದ್ದರು. ಸಂವಾದ ಮುಗಿಸಿ ಹೊರಬಂದಾಗ ‘ಏನೇ ಹೇಳಿ, ಚರ್ಚೆಯ ವೇದಿಕೆಯಲ್ಲಿ ನಿರ್ವಾಹಕ ಮತ್ತು ಪ್ರತಿಸ್ಪರ್ಧಿ ತೂರಿ ಬಿಡುವ ಬಾಣಕ್ಕೆ ಗುರಾಣಿ ಹಿಡಿಯುವುದಂತೂ ಕಷ್ಟ’ ಎನ್ನುತ್ತಾ ಬುಷ್ ನಿಟ್ಟುಸಿರು ಬಿಟ್ಟಿದ್ದರು.
ಆರಂಭದ ವರ್ಷಗಳಲ್ಲಿ ಅಭ್ಯರ್ಥಿಗಳ ಬೌದ್ಧಿಕ ಸಾಮರ್ಥ್ಯವಷ್ಟೇ ಚರ್ಚೆಯಲ್ಲಿ ಮುಖ್ಯವಾಗುತ್ತಿತ್ತು. 1960ರಲ್ಲಿ ದೃಶ್ಯ ಮಾಧ್ಯಮಗಳು ಈ ಚರ್ಚೆಗಳನ್ನು ಪ್ರಸಾರ ಮಾಡಲು ಆರಂಭಿಸಿದವು. ಅಂದಿನಿಂದ ತೀರಾ ಸಣ್ಣ ಪುಟ್ಟಸಂಗತಿಗಳನ್ನೂ ಜನ ಗಮನಿಸಲಾರಂಭಿಸಿದರು. ಮುಖ್ಯ ವಿಷಯ ಬದಿಗೆ ಸರಿದು, ಸಣ್ಣ ಸಂಗತಿಗಳಿಗೇ ಪ್ರಾಶಸ್ತ್ಯ ದೊರೆಯಿತು. ನಿಕ್ಸನ್ ಮತ್ತು ಕೆನಡಿ ನಡುವಿನ ಚರ್ಚೆ ಆ ನಿಟ್ಟಿನಲ್ಲಿ ಹೊಸ ತಿರುವು. 1960ರಲ್ಲಿ ಚುನಾವಣಾ ಕಣದಲ್ಲಿ ಆಡಳಿತದ ಅನುಭವವಿದ್ದ ನಿಕ್ಸನ್ ಮತ್ತು ಯುವ ಉತ್ಸಾಹಿ ಸೆನೆಟರ್ ಕೆನಡಿ ಇದ್ದರು. ನಾಲ್ಕು ಸುತ್ತಿನ ಸಂವಾದ ಈ ಇಬ್ಬರ ನಡುವೆ ನಡೆಯಿತು. ವಿಷಯಗಳ ಪರಿಣಿತಿಯನ್ನಷ್ಟೇ ಜನ ನೋಡಿದ್ದರೆ ನಿಕ್ಸನ್ ಅದರಲ್ಲಿ ಮುಂದಿದ್ದರು. ಅನುಭವವನ್ನು ಒರೆಗೆ ಹಚ್ಚಿ ಕರಾರುವಕ್ಕು ವಾದ ಮಂಡಿಸುತ್ತಿದ್ದರು. ಕೆನಡಿ ಅವರಿಗೆ ಅವರದ್ದೇ ಆದ ನಿಲುವುಗಳಿದ್ದವು. ಆದರೆ ನಿಕ್ಸನ್ ಅವರಿಗೆ ಒಂದು ದೌರ್ಬಲ್ಯವಿತ್ತು. ನಿಕ್ಸನ್ ಹೆಚ್ಚು ಬೆವರುತ್ತಿದ್ದರು. ಜೊತೆಗೆ ಅವರು ಆಗಷ್ಟೇ ಜ್ವರದಿಂದ ಚೇತರಿಸಿಕೊಂಡು ಪೇಲವವಾಗಿ ಕಾಣುತ್ತಿದ್ದರು. ಕೊಂಚ ಮೇಕಪ್ ಸಹಾಯ ಪಡೆದಿದ್ದರೆ, ತಮ್ಮ ದಣಿವನ್ನು ಮರೆಮಾಚಬಹುದಿತ್ತೇನೋ, ಆತುರ ಸ್ವಭಾವದ ನಿಕ್ಸನ್, ಪ್ರಚಾರ ಮುಗಿಸಿ ಚರ್ಚೆಯ ವೇದಿಕೆಗೆ ನೇರವಾಗಿ ಬಂದಿದ್ದರು. ಇದು ಕೆನಡಿ ಅವರಿಗೆ ವರದಾನವಾಯಿತು. ರೇಡಿಯೋ ಮೂಲಕ ಡಿಬೆಟ್ ಆಲಿಸಿದವರಿಗೆ ನಿಕ್ಸನ್ ಚರ್ಚೆಯಲ್ಲಿ ಮುನ್ನಡೆ ಸಾಧಿಸಿದರು ಎಂಬ ಅಭಿಪ್ರಾಯವಿತ್ತು. ಆದರೆ ಟಿ.ವಿ ವೀಕ್ಷಕರಿಗೆ ನಿಕ್ಸನ್ ಅವರಿಗಿಂತ ‘ಯಂಗ್ ಅಂಡ್ ಎನರ್ಜೆಟಿಕ್’ ಆಗಿ ಕಾಣುತ್ತಿದ್ದ ಕೆನಡಿ ಇಷ್ಟವಾಗಿದ್ದರು!
1984ರಲ್ಲಿ ರೇಗನ್ ಮತ್ತು ವಾಲ್ಡರ್ ಮಾಂಡೇಲ್ ನಡುವೆ ಚರ್ಚೆ ಏರ್ಪಟ್ಟಿತ್ತು. ಮೊದಲ ಚರ್ಚೆಯಲ್ಲಿ ರೇಗನ್ ಹೆಚ್ಚು ಬಳಲಿದಂತೆ ಕಾಣುತ್ತಿದ್ದರು. ಮಾತಿನಲ್ಲೂ ಉತ್ಸಾಹವಿರಲಿಲ್ಲ. ಇದು ರೇಗನ್ ಅವರಿಗೆ ವಯಸ್ಸಾಯಿತೇ ಎಂಬ ಪ್ರಶ್ನೆ ಹುಟ್ಟುಹಾಕಿತ್ತು. ಸಂವಾದ ನಡೆಸಿಕೊಡುತ್ತಿದ್ದ ಪತ್ರಕರ್ತೆ, ವಯಸ್ಸಿನ ವಿಚಾರವಾಗಿ ರೇಗನ್ ಅವರನ್ನು ಪ್ರಶ್ನಿಸಿದರು. ಆಗ ರೇಗನ್ ‘ವಯಸ್ಸು ಈ ವೇದಿಕೆಯಲ್ಲಿ ಚರ್ಚೆಯ ವಿಷಯ ಆಗಬಾರದು, ನನ್ನ ಪ್ರತಿಸ್ಪರ್ಧಿಯ ಕಿರಿವಯಸ್ಸು ಮತ್ತು ಅನನುಭವವನ್ನು ನಾನು ಚುನಾವಣಾ ವಿಷಯವಾಗಿ ಬಳಸಿಕೊಳ್ಳುವುದಿಲ್ಲ’ ಎಂದರು. ಆ ಮೂಲಕ ತನಗೆ ವಯಸ್ಸಾಗಿದ್ದರೂ, ಅಷ್ಟೇ ಅನುಭವವಿದೆ ತನ್ನ ಎದುರಾಳಿಗೆ ಅನುಭವದ ಕೊರತೆ ಇದೆ ಎಂಬುದನ್ನು ರೇಗನ್ ಸಭಿಕರಿಗೆ ಮನವರಿಕೆ ಮಾಡಿಕೊಟ್ಟಿದ್ದರು.
ಕ್ಲಿಂಟನ್ ಮತ್ತು ಜಾಜ್‌ರ್ ಬುಷ್ ಸೀನಿಯರ್ ನಡುವಿನ ಸಂವಾದದಲ್ಲಿ ಮತ್ತೊಮ್ಮೆ ವಯಸ್ಸು ಚರ್ಚೆಯ ವಿಷಯವಾಗಿತ್ತು. ಜಾಜ್‌ರ್ ಬುಷ್ ಅವರಿಗಿಂತ ಕ್ಲಿಂಟನ್ 22 ವರ್ಷಕ್ಕೆ ಕಿರಿಯರಾಗಿದ್ದರು. ವಯಸ್ಸಿನ ಅಂತರ ಎದ್ದು ಕಾಣುತ್ತಿತ್ತು. ಬುಷ್ ಒಟ್ಟು 90 ನಿಮಿಷದಲ್ಲಿ ಎರಡು ಬಾರಿ ಕೈ ಗಡಿಯಾರ ನೋಡಿಕೊಂಡಿದ್ದರು. ಚರ್ಚೆ ಮುಗಿಯುವುದನ್ನೇ ಬುಷ್ ಕಾಯುತ್ತಿದ್ದರೇ? ಬುಷ್ ಅವರ ಬಳಿ ಸಮರ್ಪಕ ಉತ್ತರಗಳು ಇರಲಿಲ್ಲವೇ? ಕ್ಲಿಂಟನ್ ಎದುರು ತಾನು ಮಂಕಾಗಿ ಕಾಣಿಸುತ್ತಿದ್ದೇನೆ ಎಂದು ಅವರಿಗೆ ಅನಿಸುತ್ತಿತ್ತೇ? ಹೀಗೆ ನಾಲ್ಕಾರು ಪ್ರಶ್ನೆಗಳನ್ನು ಬುಷ್ ನಡವಳಿಕೆ ಹುಟ್ಟುಹಾಕಿತ್ತು. ಎರಡನೆಯ ಚರ್ಚೆಯಲ್ಲಿ ಹೆಚ್ಚು ಅಂಕಗಳಿಸಲು ಕ್ಲಿಂಟನ್ ಚಾರಿತ್ರ್ಯ ಕುರಿತಾದ ಪ್ರಶ್ನೆಯನ್ನು ಬುಷ್ ಎತ್ತಿದ್ದರು. ಆಗ ಕ್ಲಿಂಟನ್ ಅವರು ಹೊಂದಿದ್ದ ಅಕ್ರಮ ಸಂಬಂಧದ ಬಗ್ಗೆ ಸುದ್ದಿ ಚಾಲ್ತಿಯಲ್ಲಿತ್ತು. ಬುಷ್ ಅವರನ್ನು ವಾಷಿಂಗ್ಟನ್ ನಗರದ ಶ್ರೇಷ್ಠ ವಕೀಲ ಬಾಬ್ ಬರ್ನೆಟ್ ಅಣಿಗೊಳಿಸಿದ್ದರು. ಆಗ ಚರ್ಚೆ ಬೇಗ ಮುಗಿದರೆ ಸಾಕು ಎನ್ನುವ ಸರದಿ ಕ್ಲಿಂಟನ್ ಅವರದ್ದಾಗಿತ್ತು.
ಮೂರನೆಯ ಚರ್ಚೆಯ ಹೊತ್ತಿಗೆ, ನಿರಂತರ ಪ್ರಚಾರ ಮತ್ತು ಭಾಷಣಗಳಿಂದಾಗಿ ಕ್ಲಿಂಟನ್ ಧ್ವನಿ ಕ್ಷೀಣವಾಗಿತ್ತು. ಅದೇ ಸ್ಥಿತಿಯಲ್ಲಿ ಚರ್ಚೆಯಲ್ಲಿ ಪಾಲ್ಗೊಂಡರೆ ತಪ್ಪು ಸಂದೇಶ ರವಾನೆ ಆಗಬಹುದೆಂದು ಅರಿತ ಕ್ಲಿಂಟನ್, ಧ್ವನಿ ತಜ್ಞರೊಬ್ಬರ ಸಹಾಯ ಪಡೆದು ತಮ್ಮ ಧ್ವನಿಯನ್ನು ಉತ್ತಮಪಡಿಸಿಕೊಂಡಿದ್ದರು. ಆತಂಕದಿಂದ ಹೊರಬರಲು ‘ಲಿಂಕನ್ ಒಬ್ಬ ಮಹಾನ್ ಭಾಷಣಕಾರ’ ಎಂದು ಪದೇ ಪದೇ ಹೇಳಿಕೊಳ್ಳುತ್ತಿದ್ದರಂತೆ. ಆ ಮೂಲಕ ಲಿಂಕನ್ ಅವರನ್ನು ನೆನೆದು, ಉತ್ಸಾಹ ತುಂಬಿಕೊಳ್ಳುತ್ತಿದ್ದರಂತೆ. ಕ್ಲಿಂಟನ್ ಮೂರನೆಯ ಸಂವಾದದಲ್ಲಿ, ಬುಷ್ ಸೀನಿಯರ್ ಆಡಳಿತ ಅವಧಿಯಲ್ಲಿನ ಆರ್ಥಿಕ ಸಂಕಷ್ಟದ ಬಗ್ಗೆ, ಉದ್ಯೋಗ ನಷ್ಟದ ಬಗ್ಗೆ ಮಾತನಾಡಿ ಜನರನ್ನು ಒಲಿಸಿಕೊಂಡಿದ್ದರು.
ನಿಮಗೆ ಅಚ್ಚರಿಯಾಗಬಹುದು. ಕೆಲವೊಮ್ಮೆ ಪಕ್ಷಗಳು ಚರ್ಚೆ ನಡೆಯುವ ವೇದಿಕೆ ಹೇಗಿರುತ್ತದೆ, ಇಬ್ಬರು ಅಭ್ಯರ್ಥಿಗಳ ನಡುವೆ ಅಂತರ ಎಷ್ಟಿರುತ್ತದೆ, ಚರ್ಚೆ ನಡೆಯುವ ಕೋಣೆಯ ತಾಪಮಾನವನ್ನು ಎಷ್ಟುಇಡಲಾಗುತ್ತದೆ ಎಂಬ ಸಣ್ಣಪುಟ್ಟಮಾಹಿತಿಯನ್ನೂ ಮೊದಲೇ ಪರಿಶೀಲಿಸುತ್ತವೆ. 2004ರಲ್ಲಿ ಹಾಗೆಯೇ ಆಯಿತು. ರಿಪಬ್ಲಿಕನ್ ಪಕ್ಷ ತನ್ನ ಬೇಡಿಕೆಯನ್ನು ಮುಂದಿಟ್ಟಿತು. ನಿಲ್ಲುಪೀಠದ (್ಝಛ್ಚಿಠಿಛಿಞ) ಎತ್ತರ 50 ಇಂಚಿಗಿಂತ ಹೆಚ್ಚಿರಬಾರದು, ಇಬ್ಬರು ಅಭ್ಯರ್ಥಿಗಳ ನಡುವೆ ಹತ್ತು ಅಡಿ ಅಂತರವಾದರೂ ಇರಬೇಕು ಎಂಬುದು ರಿಪಬ್ಲಿಕನ್ ಪಕ್ಷದ ಬೇಡಿಕೆಯಾಗಿತ್ತು. ಕಾರಣವಿಷ್ಟೇ, ಆ ವರ್ಷ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿದ್ದ ಜಾಜ್‌ರ್ ಬುಷ್ ಅವರಿಗಿಂತ ಜಾನ್ ಕೆರ್ರಿ ಐದು ಇಂಚು ಎತ್ತರವಿದ್ದರು. ಒಂದೊಮ್ಮೆ ಇಬ್ಬರ ನಡುವೆ ಕಡಿಮೆ ಅಂತರವಿದ್ದರೆ ಎತ್ತರದ ವ್ಯತ್ಯಾಸವನ್ನು ನೋಡುಗರು ಸುಲಭವಾಗಿ ಗ್ರಹಿಸಬಹುದು. ಕೆರ್ರಿ ಹೆಚ್ಚು ಆಕರ್ಷಕವಾಗಿ ಕಾಣಬಹುದು ಎಂಬುದು ರಿಪಬ್ಲಿಕನ್ ಪ್ರಚಾರ ನಿರ್ವಹಣಾ ತಂಡದ ಶಂಕೆಯಾಗಿತ್ತು. ಡೆಮಾಕ್ರೆಟಿಕರು ಚರ್ಚೆ ನಡೆಯುವ ಕೋಣೆಯ ತಾಪಮಾನವನ್ನು 70 ಡಿಗ್ರಿ ಫ್ಯಾರನ್‌ಹೀಟ್ ಇಡಬೇಕೆಂದು ಕೇಳಿದಾಗ ರಿಪಬ್ಲಿಕನ್ನರು ಒಪ್ಪಿಕೊಂಡಿರಲಿಲ್ಲ. ಈ ಹಿಂದಿನ ಭಾಷಣಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದ ಬುಷ್ ತಂಡ, ಕೊಂಚ ತಾಪಮಾನ ಹೆಚ್ಚಾದರೂ ಜಾನ್ ಕೆರ್ರಿ ಬೆವರುತ್ತಾರೆ ಎನ್ನುವುದನ್ನು ಗಮನಿಸಿತ್ತು. ಜಾನ್ ಕೆರ್ರಿ ಬೆವರಿ ಆಗಾಗ ಮುಖ ಒರೆಸಿಕೊಳ್ಳಬೇಕು ಎಂಬುದು ಬುಷ್ ತಂಡದ ಅಪೇಕ್ಷೆಯಾಗಿತ್ತು.
ಅಲ್ ಗೋರ್ ಮತ್ತು ಜಾಜ್‌ರ್ ಬುಷ್ ಜೂನಿಯರ್ ನಡುವಿನ ಚರ್ಚೆಯಲ್ಲಿ ಅಲ್ ಗೋರ್ ನಾಲ್ಕು ಬಾರಿ ನಿಟ್ಟುಸಿರು ಬಿಟ್ಟಿದ್ದರು, ಪದೇ ಪದೇ ಬುಷ್ ಮಾತಿಗೆ ಮುಖ ಮುರಿದಿದ್ದರು. ಅದು ದೊಡ್ಡ ಸುದ್ದಿಯೇ ಆಯಿತು. ಮಾಧ್ಯಮಗಳು ತಾಸುಗಟ್ಟಲೆ ಚರ್ಚಿಸಿದ್ದವು. ತಮ್ಮ ತಂದೆ ಮಾಡಿದ್ದ ತಪ್ಪುಗಳು, ಬುಷ್ ಜೂನಿಯರ್ ಅವರಿಗೆ ನೆನಪಿತ್ತು. ಅಲ್ ಗೋರ್ ಅವರೊಂದಿಗಿನ ಚರ್ಚೆಯಲ್ಲಿ ವೇದಿಕೆಗೆ ಬಂದಕೂಡಲೇ ತಮ್ಮ ವಾಚ್ ತೆಗೆದು ನಿಲ್ಲುಪೀಠದ ಮೇಲಿಟ್ಟು ಚರ್ಚೆಯ ಕಡೆ ಗಮನ ಹರಿಸಿದ್ದರು. ಏಕಾಗ್ರತೆಯಿಂದ ಸಂವಾದದಲ್ಲಿ ಪಾಲ್ಗೊಂಡು ಜನರ ವಿಶ್ವಾಸ ಗಳಿಸಿದ್ದರು. ಆದರೆ 2004ರಲ್ಲಿ ಜಾನ್ ಕೆರ್ರಿ ಅವರೊಂದಿಗಿನ ಚರ್ಚೆಯಲ್ಲಿ ಬುಷ್ ಜೂನಿಯರ್ ಮೂರ್ನಾಲ್ಕು ಬಾರಿ ಮುಖ ಮುರಿದು ಚರ್ಚೆಯಲ್ಲಿ ಹಿನ್ನಡೆ ಅನುಭವಿಸಿದ್ದರು. 2016ರಲ್ಲಿ ಹಿಲರಿ ಅವರೊಂದಿಗಿನ ಚರ್ಚೆಯಲ್ಲಿ ಟ್ರಂಪ್ 90 ನಿಮಿಷದಲ್ಲಿ ನಾಲ್ಕು ಬಾರಿ ನೀರು ಕುಡಿದದ್ದನ್ನು ಮಾಧ್ಯಮಗಳು ಎರಡು ಘಂಟೆ ಚರ್ಚಿಸಿದ್ದವು. ನಂತರದ ಚರ್ಚೆಯಲ್ಲಿ ಹಿಲರಿ ಮಾತನಾಡುವಾಗ ನೋಡುಗರ ಗಮನವನ್ನು ತನ್ನತ್ತ ಸೆಳೆದುಕೊಳ್ಳಲು ಹಿಲರಿ ಅವರ ಸುತ್ತ ಒಂದು ಸುತ್ತು ಬರುವ ತಂತ್ರವನ್ನು ಟ್ರಂಪ್ ಅನುಸರಿಸಿದ್ದರು. ಅದನ್ನು ಮಾಧ್ಯಮಗಳು ಸಿಂಹ ಚಲನೆ ಎಂದು ಬಣ್ಣಿಸಿದ್ದವು. ಆ ಚರ್ಚೆಯಲ್ಲಿ ಹಿಲರಿ ತೀಕ್ಷ$್ಣವಾದ ಮಾತಿನ ಬಾಣವನ್ನು ಟ್ರಂಪ್ ಅವರತ್ತ ತೂರಿದ್ದರಾದರೂ, ತಮ್ಮ ಚಲನೆಯ ಮೂಲಕ ಟ್ರಂಪ್ ಮುನ್ನಡೆ ಕಾಯ್ದುಕೊಂಡಿದ್ದರು.
ಈ ವರ್ಷ ನಡೆದ ಮೊದಲ ಚರ್ಚೆಯಲ್ಲಿ ಅಧ್ಯಕ್ಷ ಟ್ರಂಪ್ ಅವರಿಗೆ ‘’Wಜ್ಝ್ಝಿ yಟ್ಠ sh್ಠಠ್ಠಿp ಞa್ಞ’ ಎಂದ ಜೋ ಬೈಡೆನ್ ಆ ಚರ್ಚೆಯ ಮಟ್ಟಿಗೆ ಮುನ್ನಡೆ ಕಾಯ್ದುಕೊಂಡರು. ಟ್ರಂಪ್ ಅವರಿಗೆ ಕೋವಿಡ್ ಸೋಂಕು ತಗುಲಿದ್ದರಿಂದ ಎರಡನೇಯ ಟೌನ್ ಹಾಲ್ ಮಾದರಿಯ ಚರ್ಚೆ ನಡೆಯಲಿಲ್ಲ. ಮೂರನೆಯ ಚರ್ಚೆಯ ಕುರಿತು ಅನಿಶ್ಚಿತತೆ ಇದೆ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಅಭ್ಯರ್ಥಿಗಳ ನಡುವಿನ ಚರ್ಚೆ ನಿರ್ಣಾಯಕವಲ್ಲ ಎಂದು ಹೇಳಲಾಗುತ್ತಿದೆ. ಮೊದಲ ಚರ್ಚೆಯ ಮುನ್ನಡೆಯೇ ಬೈಡನ್ ಗೆಲುವಿಗೆ ನೂಕುಬಲವಾದಿತೇ ಕಾದು ನೋಡಬೇಕು.