ವಾಗ್ದಂಡನೆ: ಟ್ರಂಪ್‌ ಬಚಾವಾಗುವ ಸಾಧ್ಯತೆಯೇ ಹೆಚ್ಚು, ಏಕೆ?

By Suvarna NewsFirst Published Dec 22, 2019, 3:17 PM IST
Highlights

ಹೌಸ್‌ ಆಫ್‌ ರೆಪ್ರೆಸೆಂಟೇಟಿವ್‌ನಲ್ಲಿ ಪಾಸ್‌ ಆಗಿರುವ ಟ್ರಂಪ್‌ ವಾಗ್ದಂಡನೆ ಮಸೂದೆ ಸೆನೆಟ್‌ನಲ್ಲಿ 2020ರ ಜನವರಿಯಲ್ಲಿ ಮಂಡನೆಯಾಗುವ ಸಾಧ್ಯತೆಯಿದೆ. ಸೆನೆಟ್‌ನಲ್ಲಿ ಟ್ರಂಪ್‌ ವಾಗ್ದಂಡನೆಯ ಮತದಾನಕ್ಕೂ ಮುನ್ನ ಈ ಬಗ್ಗೆ ನ್ಯಾಯಾಂಗ ಸಮಿತಿ ಹಾಗೂ ಗುಪ್ತಚರ ಸಮಿತಿ ನೇತೃತ್ವದಲ್ಲಿ ತನಿಖೆ ನಡೆಯಲಿದೆ.

ಅಧಿಕಾರದ ದುರುಪಯೋಗ ಹಾಗೂ ಸಂಸತ್ತಿನ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಿದ ಆರೋಪಕ್ಕೆ ಗುರಿಯಾಗಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವಿರುದ್ಧ ವಾಗ್ದಂಡನೆ ಪ್ರಕ್ರಿಯೆ ಆರಂಭವಾಗಿದೆ. ಪ್ರತಿಪಕ್ಷ ಡೆಮಾಕ್ರೆಟಿಕ್‌ ಪಾರ್ಟಿಯ ಸದಸ್ಯರು ಮಂಡಿಸಿದ ವಾಗ್ದಂಡನೆ ಮಸೂದೆ ಅಮೆರಿಕದ ಕೆಳಮನೆಯಾದ ಹೌಸ್‌ ಆಫ್‌ ರೆಪ್ರೆಸೆಂಟೇಟಿವ್‌ (ಪ್ರಜಾಪ್ರತಿನಿಧಿ ಸಭೆ)ನಲ್ಲಿ ಇತ್ತೀಚೆಗಷ್ಟೇ ಪಾಸ್‌ ಆಗಿದೆ.

ಅದು ಈಗ ಅಮೆರಿಕದ ಸಂಸತ್ತಿನ ಮೇಲ್ಮನೆಯಾದ ಸೆನೆಟ್‌ನಲ್ಲಿ ಮಂಡನೆಯಾಗಿ ಅಂಗೀಕಾರ ಪಡೆಯಬೇಕು. ಆಗ ಟ್ರಂಪ್‌ ಅಧ್ಯಕ್ಷ ಪಟ್ಟತ್ಯಜಿಸಬೇಕಾಗುತ್ತದೆ. ಅಲ್ಲೇ ಇರುವುದು ಮಹತ್ವದ ತಿರುವು. ಅದು ಏನು? ಟ್ರಂಪ್‌ ಅವರ ವಾಗ್ದಂಡನೆಗೆ ಸಂಬಂಧಿಸಿದ ಕುತೂಹಲಕಾರಿ ಸಂಗತಿಗಳು ಇಲ್ಲಿವೆ.

ಅಮೆರಿಕದಲ್ಲಿ ಬಾಹ್ಯಾಕಾಶ ಸೇನೆ: ಹೇಗೆ ಸೈನಿಕರ ರವಾನೆ?

ಭಾರತದಂತೆ ಅಮೆರಿಕದಲ್ಲೂ ವಾಗ್ದಂಡನೆ

ಭಾರತದ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವಲ್ಲಿ ವಿಫಲವಾಗುವ ಸಾಂವಿಧಾನಿಕ ಹುದ್ದೆಯಲ್ಲಿರುವವರನ್ನು ಅಧಿಕಾರದಿಂದ ಕಿತ್ತೊಗೆಯುವ ಅಧಿಕಾರ ಸಂಸತ್ತಿಗಿದೆ. ಈ ಪ್ರಕ್ರಿಯೆಯನ್ನು ಮಹಾಭಿಯೋಗ ಅಥವಾ ವಾಗ್ದಂಡನೆ ಎಂದು ಕರೆಯಲಾಗುತ್ತದೆ. ಭಾರತದಂತೆಯೇ ಅಮೆರಿಕದ ಸಂವಿಧಾನವೂ ದೇಶದ ಅಧ್ಯಕ್ಷ ಸ್ಥಾನದಲ್ಲಿರುವವರು ಗುರುತರ ಅಪರಾಧದಲ್ಲಿ ಭಾಗಿಯಾಗಿದ್ದರೆ ಅಂಥವರನ್ನು ಅಧಿಕಾರದಿಂದ ಕಿತ್ತುಹಾಕಲು ಜನಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಿಕೊಟ್ಟಿದೆ.

ಅದಕ್ಕಾಗಿ ಮೊದಲ ಹೆಜ್ಜೆಯಾಗಿ ಹೌಸ್‌ ಆಫ್‌ ರೆಪ್ರೆಸೆಂಟೇಟಿವ್‌ (ಜನಪ್ರತಿನಿಧಿ ಸಭೆ) ಅಥವಾ ಕೆಳಮನೆಯಲ್ಲಿ ವಾಗ್ದಂಡನೆ ಮಸೂದೆ ಮಂಡಿಸಿ 50%+1 ಬಹುಮತ ಪಡೆಯಬೇಕು. ನಂತರ ಮೇಲ್ಮನೆ ಅಥವಾ ಸೆನೆಟ್‌ನಲ್ಲಿ ಮಂಡಸಿ ಅಲ್ಲೂ ಪಾಸಾಗಬೇಕು.

ಟ್ರಂಪ್‌ ವಿರುದ್ಧದ ವಾಗ್ದಂಡನೆಗೆ ಕಾರಣವೇನು?

2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿ ಎರಡನೇ ಬಾರಿ ಅಧ್ಯಕ್ಷರಾಗುವ ಮಹತ್ವಾಕಾಂಕ್ಷೆಯನ್ನು ಟ್ರಂಪ್‌ ಹೊಂದಿದ್ದಾರೆ. ಇದಕ್ಕಾಗಿ ಈಗಾಗಲೇ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಅವರಿಗೆ ಪ್ರಮುಖ ಎದುರಾಳಿಯಾಗಿ ಡೆಮಾಕ್ರೆಟಿಕ್‌ ಪಕ್ಷದ ಜೋ ಬೈಡನ್‌ ಹೊರಹೊಮ್ಮಿದ್ದಾರೆ. ಇವರು ಹಿಂದೆ ಬರಾಕ್‌ ಒಬಾಮಾ ಅಧ್ಯಕ್ಷರಾಗಿದ್ದಾಗ ಅಮೆರಿಕದ ಉಪಾಧ್ಯಕ್ಷರಾಗಿದ್ದರು. ಬೈಡನ್‌ರ ವ್ಯಕ್ತಿತ್ವಕ್ಕೆ ಕಳಂಕ ಹಚ್ಚಲು ಟ್ರಂಪ್‌ ಅಧಿಕಾರ ದುರುಪಯೋಗ ಮಾಡಿಕೊಂಡು ಉಕ್ರೇನ್‌ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪವಿದೆ.

ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಸಂಸತ್ ವಾಗ್ದಂಡನೆ!

ಉಕ್ರೇನ್‌ನಲ್ಲಿ ಇಂಧನ ಕಂಪನಿಯೊಂದಕ್ಕೆ ಈ ಹಿಂದೆ ಬೈಡನ್‌ ಅವರ ಪುತ್ರ ಹಂಟರ್‌ ಬೈಡನ್‌ ನಿರ್ದೇಶಕರಾಗಿದ್ದರು. ಆ ವೇಳೆ ಕಂಪನಿಯಲ್ಲಿ ನಡೆದಿದೆ ಎನ್ನಲಾಗಿದ್ದ ಭ್ರಷ್ಟಾಚಾರದ ಬಗ್ಗೆ ಉಕ್ರೇನ್‌ನಲ್ಲಿ ತನಿಖೆ ನಡೆದಿತ್ತು. ಆದರೆ, ಬೈಡನ್‌ ಅಧಿಕಾರ ದುರುಪಯೋಗ ಮಾಡಿಕೊಂಡು ತಮ್ಮ ಪುತ್ರ ನಿರ್ದೇಶಕನಾಗಿದ್ದ ಕಂಪನಿಯ ವಿರುದ್ಧ ತನಿಖೆ ಕೈಗೊಂಡಿದ್ದ ಉಕ್ರೇನ್‌ನ ಪ್ರಾಸಿಕ್ಯೂಟರ್‌ನನ್ನೇ ವಜಾಗೊಳಿಸಿದ್ದರು ಎಂದು ಆರೋಪ ಕೇಳಿಬಂದಿತ್ತು.

ಆ ಬಗ್ಗೆ ಈಗ ಪುನಃ ತನಿಖೆ ಆರಂಭಿಸಿ ಬೈಡನ್‌ರ ವ್ಯಕ್ತಿತ್ವಕ್ಕೆ ಕಳಂಕ ತರುವಂತಹ ಮಾಹಿತಿ ಬಹಿರಂಗಪಡಿಸುವಂತೆ ಉಕ್ರೇನ್‌ನ ಅಧ್ಯಕ್ಷ ವ್ಲಾದಿಮಿರ್‌ ಝೆಲೆನ್ಸಿ$್ಕ ಮೇಲೆ ಟ್ರಂಪ್‌ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಅದಕ್ಕಾಗಿಯೇ ಉಕ್ರೇನ್‌ಗೆ ಅಮೆರಿಕದಿಂದ ಬಿಡುಗಡೆಯಾಗಿದ್ದ 400 ಮಿಲಿಯನ್‌ ಡಾಲರ್‌ ಭದ್ರತಾ ನೆರವನ್ನು ಟ್ರಂಪ್‌ ತಡೆಹಿಡಿದಿದ್ದರು ಎಂದು ಡೆಮಾಕ್ರೆಟಿಕ್‌ ಪಕ್ಷದ ಸದಸ್ಯರು ಆರೋಪಿಸುತ್ತಿದ್ದಾರೆ. ಈ ವಿಷಯದಲ್ಲಿ ಟ್ರಂಪ್‌ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಅವರ ವಿರುದ್ಧ ವಾಗ್ದಂಡನೆ ಪ್ರಕ್ರಿಯೆ ಆರಂಭವಾಗಿದೆ.

ವಾಗ್ದಂಡನೆ ಮಸೂದೆ ಸೆನೆಟ್‌ನಲ್ಲಿ ಪಾಸ್‌ ಆಗುತ್ತಾ?

ಹೌಸ್‌ ಆಫ್‌ ರೆಪ್ರೆಸೆಂಟೇಟಿವ್‌ನಲ್ಲಿ ಪಾಸ್‌ ಆಗಿರುವ ಟ್ರಂಪ್‌ ವಾಗ್ದಂಡನೆ ಮಸೂದೆ ಸೆನೆಟ್‌ನಲ್ಲಿ 2020ರ ಜನವರಿಯಲ್ಲಿ ಮಂಡನೆಯಾಗುವ ಸಾಧ್ಯತೆಯಿದೆ. ಸೆನೆಟ್‌ನಲ್ಲಿ ಟ್ರಂಪ್‌ ವಾಗ್ದಂಡನೆಯ ಮತದಾನಕ್ಕೂ ಮುನ್ನ ಈ ಬಗ್ಗೆ ನ್ಯಾಯಾಂಗ ಸಮಿತಿ ಹಾಗೂ ಗುಪ್ತಚರ ಸಮಿತಿ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಈ ಸಂದರ್ಭದಲ್ಲಿ ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಟ್ರಂಪ್‌ ತಮ್ಮ ಕಾನೂನು ತಜ್ಞರ ತಂಡದ ಮೂಲಕ ವಾದ ಮಂಡಿಸಲು ಅವಕಾಶವಿದೆ.

ಅದರಲ್ಲಿ ಟ್ರಂಪ್‌ ವಿಫಲರಾದರೆ ಸೆನೆಟ್‌ನಲ್ಲಿ ವಾಗ್ದಂಡನೆ ಮಸೂದೆಯ ಮೇಲೆ ಮತದಾನ ನಡೆಯಲಿದೆ. ಸೆನೆಟ್‌ನಲ್ಲಿ ಒಟ್ಟು 100 ಸದಸ್ಯರಿದ್ದಾರೆ. ಅಲ್ಲಿ ಯಾವುದೇ ಮಸೂದೆ ಪಾಸಾಗಲು ಮೂರನೇ ಎರಡರಷ್ಟು(2/3) ಬಹುಮತದ ಅಗತ್ಯವಿದೆ. ಆದರೆ, ಸದ್ಯ ಸೆನೆಟ್‌ನಲ್ಲಿ ಡೆಮಾಕ್ರಟಿಕ್‌ನ 45 ಸದಸ್ಯರು, ಇಬ್ಬರು ಪಕ್ಷೇತರರು ಹಾಗೂ ಟ್ರಂಪ್‌ ಅವರ ರಿಪಬ್ಲಿಕನ್‌ ಪಕ್ಷದ 53 ಸದಸ್ಯರಿದ್ದಾರೆ. ಹೀಗಾಗಿ, ಟ್ರಂಪ್‌ ಅವರ ವಾಗ್ದಂಡನೆಗೆ ಡೆಮಾಕ್ರಟಿಕ್‌ ಪಕ್ಷಕ್ಕೆ ಕನಿಷ್ಠ 20 ರಿಪಬ್ಲಿಕನ್‌ ಸದಸ್ಯರ ಬೆಂಬಲ ಬೇಕು. ತಮ್ಮದೇ ಪಕ್ಷದ ಅಧ್ಯಕ್ಷರ ವಾಗ್ದಂಡನೆಗೆ ರಿಪಬ್ಲಿಕನ್‌ ಪಕ್ಷದ ಸಂಸದರು ಮತದಾನ ಮಾಡುವ ಸಾಧ್ಯತೆ ಬಹಳ ಕಡಿಮೆ. ಹೀಗಾಗಿ ಟ್ರಂಪ್‌ ವಾಗ್ದಂಡನೆ ಪ್ರಕ್ರಿಯೆಗೆ ಸೋಲುಂಟಾಗುವ ಸಾಧ್ಯತೆಯೇ ಹೆಚ್ಚು.

ವಾಗ್ದಂಡನೆಯಿಂದ ಪಾರಾದ ಅಮೆರಿಕದ ಅಧ್ಯಕ್ಷರು ಆ್ಯಂಡ್ರೂ ಜಾನ್ಸನ್‌

ನಿಯಮಗಳನ್ನು ಉಲ್ಲಂಘಿಸಿ ರಕ್ಷಣಾ ಸಚಿವರನ್ನು ವಜಾಗೊಳಿಸಿದ ಆರೋಪದ ಮೇಲೆ 1868ರಲ್ಲಿ ಇವರ ವಿರುದ್ಧ ವಾಗ್ದಂಡನೆ ಮಸೂದೆ ಮಂಡಿಸಲಾಗಿತ್ತು. ಅದು ಪ್ರಜಾಪ್ರತಿನಿಧಿ ಸಭೆಯಲ್ಲಿ ಪಾಸಾಗಿ, ಸೆನೆಟ್‌ನಲ್ಲಿ ಬಿದ್ದುಹೋಗಿತ್ತು.

ಬಿಲ್‌ ಕ್ಲಿಂಟನ್‌

1995ರಲ್ಲಿ ಅಧ್ಯಕ್ಷರಾಗಿದ್ದ ಇವರ ವಿರುದ್ಧ ಶ್ವೇತಭವನದ 22 ವರ್ಷದ ಇಂಟರ್ನಿ ಮೋನಿಕಾ ಲೆವಿನ್ಸಿ$್ಕ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಆರೋಪ ಕೇಳಿಬಂದಿತ್ತು. ಹೀಗಾಗಿ ವಾಗ್ದಂಡನೆ ಮಂಡನೆಯಾಗಿ, ಅದು ಹೌಸ್‌ ಆಫ್‌ ರೆಪ್ರೆಸೆಂಟೇಟಿವ್‌ನಲ್ಲಿ ಅಂಗೀಕಾರವಾಗಿ, ಸೆನೆಟ್‌ನಲ್ಲಿ ಬಿದ್ದುಹೋಗಿತ್ತು. ಆದರೂ ನಂತರ ಕ್ಲಿಂಟನ್‌ ರಾಜೀನಾಮೆ ನೀಡಿದ್ದರು.

ರಿಚರ್ಡ್‌ ನಿಕ್ಸನ್‌

1974ರಲ್ಲಿ ಇವರು ನ್ಯಾಯಾಂಗ ಇಲಾಖೆಯಲ್ಲಿದ್ದ ಇಬ್ಬರು ಹಿರಿಯ ಅಧಿಕಾರಿಗಳನ್ನು ಅಕ್ರಮವಾಗಿ ವಜಾಗೊಳಿಸಿದ್ದಾರೆಂದು ವಾಗ್ದಂಡನೆಯ ಭೀತಿಗೆ ಸಿಲುಕಿದ್ದರು. ಆದರೆ, ಸಂಸತ್ತಿನಲ್ಲಿ ವಾಗ್ದಂಡನೆ ಪ್ರಕ್ರಿಯೆ ನಡೆಯುತ್ತಿರುವಾಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ವಾಗ್ದಂಡನೆ ಯಶಸ್ವಿಯಾದರೆ ಇತಿಹಾಸ ಸೃಷ್ಟಿ!

ಅಮೆರಿಕದ 243 ವರ್ಷಗಳ ಇತಿಹಾಸದಲ್ಲಿ ಇದುವರೆಗೂ ಯಾವುದೇ ಅಧ್ಯಕ್ಷರನ್ನು ವಾಗ್ದಂಡನೆ ಪ್ರಕ್ರಿಯೆ ಮೂಲಕ ಅಧಿಕಾರದಿಂದ ವಜಾ ಮಾಡಿದ ಉದಾಹರಣೆಗಳಿಲ್ಲ. ಹೀಗಾಗಿ ಟ್ರಂಪ್‌ ವಾಗ್ದಂಡನೆಗೆ ಗುರಿಯಾಗಿ ಅಧಿಕಾರ ಕಳೆದುಕೊಂಡರೆ ಅಮೆರಿಕದಲ್ಲಿ ಇತಿಹಾಸ ಸೃಷ್ಟಿಸಲಿದ್ದಾರೆ. ಆದರೆ, ಅಮೆರಿಕವೂ ಸೇರಿದಂತೆ ಯಾವುದೇ ದೇಶದಲ್ಲಿ ವಾಗ್ದಂಡನೆಯೆಂಬುದು ಬಹಳ ಸಂಕೀರ್ಣ ಪ್ರಕ್ರಿಯೆ. ಭಾರತದಲ್ಲಿ ಹಲವಾರು ಹೈಕೋರ್ಟ್‌ ಹಾಗೂ ಸುಪ್ರೀಂಕೋರ್ಟ್‌ನ ಜಡ್ಜ್‌ಗಳ ವಿರುದ್ಧ ವಾಗ್ದಂಡನೆಗೆ ಪ್ರಯತ್ನ ನಡೆದಿದೆಯಾದರೂ ಇಲ್ಲಿಯವರೆಗೆ ಒಬ್ಬರೇ ಒಬ್ಬ ಜಡ್ಜ್‌ ವಿರುದ್ಧ ವಾಗ್ದಂಡನೆ ಯಶಸ್ವಿಯಾಗಿಲ್ಲ.

ಟ್ರಂಪ್‌ ರೌದ್ರಾವತಾರ

ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ನಾನು ಯಾವುದೇ ತಪ್ಪು ಮಾಡಿರದೆ ಇದ್ದರೂ ನನ್ನನ್ನು ವಾಗ್ದಂಡನೆಗೆ ಗುರಿಪಡಿಸುತ್ತಿರುವುದು ಏಕೆ? ನಿಮಗೇನು ಹುಚ್ಚೇ?

ಭಾರತೀಯ ಮೂಲದ ತುಳಸಿ ನಡೆ ನಿಗೂಢ

ಭಾರತೀಯ ಸಂಜಾತೆ ಹಾಗೂ ಅಮೆರಿಕದ ಹೌಸ್‌ ಆಫ್‌ ರೆಪ್ರೆಸೆಂಟೇಟಿವ್‌ನ ಡೆಮಾಕ್ರೆಟಿಕ್‌ ಪಕ್ಷದ ಸದಸ್ಯೆ ತುಳಸಿ ಗಬ್ಬಾರ್ಡ್‌ ಅವರ ನಡೆ ಅಚ್ಚರಿಗೆ ಕಾರಣವಾಗಿದೆ. ಟ್ರಂಪ್‌ ವಿರುದ್ಧದ ವಾಗ್ದಂಡನೆ ಪ್ರಕ್ರಿಯೆ ವೇಳೆ ಹಾಜರಿದ್ದ ತುಳಸಿ ಅವರು ವಾಗ್ದಂಡನೆಯ ಪರವಾಗಿಯೂ ಮತ ಚಲಾಯಿಸಿಲ್ಲ, ವಿರುದ್ಧವಾಗಿಯೂ ಮತ ಚಲಾಯಿಸಿಲ್ಲ.

ಅಮೆರಿಕದ ಅತ್ಯಂತ ವಿವಾದಿತ ಅಧ್ಯಕ್ಷ

ವಾಗ್ದಂಡನೆಗೆ ಗುರಿಯಾದರೂ ಅಥವಾ ಆಗದೇ ಇದ್ದರೂ ಈಗಾಗಲೇ ಟ್ರಂಪ್‌ ಅಮೆರಿಕದ ಅತ್ಯಂತ ವಿವಾದಿತ ಅಧ್ಯಕ್ಷ ಎಂಬ ‘ಇತಿಹಾಸ’ ನಿರ್ಮಿಸಿದ್ದಾರೆ. ಅಧ್ಯಕ್ಷರಾದ ಮೇಲೆ ಅವರ ವಿರುದ್ಧ ಹತ್ತಾರು ಮಹಿಳೆಯರು ಲೈಂಗಿಕ ದೌರ್ಜನ್ಯ ಹಾಗೂ ಅಕ್ರಮ ಸಂಬಂಧದ ಆರೋಪ ಮಾಡಿದ್ದರು. ನಂತರ ಆಡಳಿತದಲ್ಲೂ ಟ್ರಂಪ್‌ ಅನೇಕ ವಿವಾದಿತ ನಿರ್ಣಯಗಳನ್ನು ಕೈಗೊಂಡಿದ್ದಾರೆ. ತಮ್ಮ ಮಗಳು ಹಾಗೂ ಅಳಿಯನನ್ನೇ ಅಮೆರಿಕದ ಸರ್ಕಾರಕ್ಕೆ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿದ್ದಾರೆ.

ಕಡ್ಲೇಕಾಯಿ ಮಾರುವ ಪಾಕ್‌ ಮಾಜಿ ಸಂಸದಗೆ ಪೌರತ್ವ ಖುಷಿ!

ಪಕ್ಕದ ಮೆಕ್ಸಿಕೋದಿಂದ ಅಕ್ರಮ ವಲಸೆ ತಡೆಯಲು ಗಡಿಯಲ್ಲಿ ಸಾವಿರಾರು ಕೋಟಿ ಡಾಲರ್‌ ಖರ್ಚು ಮಾಡಿ ಎಲ್ಲರ ವಿರೋಧದ ನಡುವೆಯೇ ಗೋಡೆ ಕಟ್ಟಿಸಿದ್ದಾರೆ. ಮೆಕ್ಸಿಕೋದಿಂದ ಅಕ್ರಮವಾಗಿ ವಲಸೆ ಬಂದವರನ್ನು ಬಂಧಿಸುವ ವೇಳೆ ಮಕ್ಕಳನ್ನು ಬೇರ್ಪಡಿಸುವ ನಿರ್ಧಾರ ಕೈಗೊಂಡು ಜಗತ್ತಿನೆಲ್ಲೆಡೆಯಿಂದ ಆಕ್ರೋಶ ಎದುರಿಸಿದ್ದಾರೆ. ಪ್ರಮುಖ ಮಾಧ್ಯಮಗಳಿಗೆಲ್ಲ ಶ್ವೇತಭವನಕ್ಕೆ ಪ್ರವೇಶ ನಿಷೇಧಿಸಿದ್ದಾರೆ. ಇವುಗಳ ಹೊರತಾಗಿಯೂ ಅಧಿಕಾರ ದುರುಪಯೋಗ ಮಾಡಿಕೊಂಡ ಹತ್ತಾರು ಆರೋಪಗಳು ಅವರ ಮೇಲಿವೆ. ಕೆಲ ದಿನಗಳ ಹಿಂದೆ ತಮ್ಮ ವಾಗ್ದಂಡನೆಯ ಯತ್ನದ ಬಗ್ಗೆ ಕೇವಲ 2 ಗಂಟೆಯಲ್ಲಿ 123 ಟ್ವೀಟ್‌ ಮಾಡಿ ‘ದಾಖಲೆ’ ನಿರ್ಮಿಸಿದ್ದರು!

- ಅಯ್ಯಣ್ಣ ಬಸವರಾಜ್

click me!