
ಸಿನಿಮಾ ನಟಿ ಆಗ್ತೀನಿ ಅಂದಾಗ ಹುಚ್ಚಿಯಂತೆ ನೋಡಿದರು
ಶ್ವೇತಾ ಶ್ರೀವಾತ್ಸವ, ನಟಿ
15, 20 ವರ್ಷಗಳ ಹಿಂದಿನ ಮಾತು. ನಾನು ಸಿನಿಮಾಗಳಲ್ಲಿ ನಾಯಕಿ ಆಗುತ್ತೇನೆ ಎಂದಾಗ ಎಲ್ಲರೂ ನನ್ನ ಅನುಮಾನದಿಂದ ನೋಡಿದರು. ಯಾಕೆಂದರೆ ಅಷ್ಟೊತ್ತಿಗೆ ನನಗೆ ಮದುವೆ ಆಗಿತ್ತು. ಚಿತ್ರರಂಗದಲ್ಲಿ ಯಾರೂ ಪರಿಚಯ ಇಲ್ಲ. ನಾಯಕಿ ಪಾತ್ರ ಇರಲಿ, ಪೋಷಕ ನಟಿ ಆಗೋದೇ ಕಷ್ಟ ಅಂತಲೇ ಎಲ್ಲರೂ ಹೇಳಿದರು. ನಾನು ಹಠಕ್ಕೆ ಬಿದ್ದೆ. ಯಾಕೆ ಆಗಲ್ಲ ನೋಡೋಣ ಅಂತ ಇದ್ದ ಉದ್ಯೋಗವನ್ನೂ ಬಿಟ್ಟೆ. ಸತತವಾಗಿ ಏಳೆಂಟು ವರ್ಷಗಳ ಕಾಲ ಹೋರಾಟ, ಅಲೆದಾಟಗಳ ನಂತರ ನಾನು ನಾಯಕಿ ಆದೆ. ಮಗು ಆದ ಮೇಲೂ ನಾನು ನಟನೆ ಮುಂದುವರಿಸುತ್ತೇನೆ ಅಂದಾಗಲೂ ಮೂಗು ಮುರಿದವರೇ ಹೆಚ್ಚು. ಪುಣ್ಯ, ಮಗು ಆದ ಮೇಲೂ ನಾನು ನಾಲ್ಕು ಚಿತ್ರಗಳಿಗೆ ನಾಯಕಿ ಆದೆ. ನಾವು ಆಯ್ಕೆ ಮಾಡಿಕೊಳ್ಳುವ ಕ್ಷೇತ್ರದ ಬಗ್ಗೆ ನಾಲೆಡ್ಜ್ ಇದ್ದರೆ ನಾವು ಏನು ಬೇಕಾದರೂ ಸಾಧಿಸಬಹುದು. ಅಸಾಧ್ಯ ಎಂಬುದು ಇಲ್ಲ ಅಂತ ಅರ್ಥವಾಯಿತು. ನನ್ನ ಈ ಅನುಭವವನ್ನೇ ಇಟ್ಟುಕೊಂಡು ಈಗ ಪುಸ್ತಕ ಕೂಡ ಬರೆಯುತ್ತಿದ್ದೇನೆ.
ಹೆಣ್ಣು ಮಕ್ಕಳಾ ಎಂದು ಜರಿದವರೇ ನಮ್ಮ ಬಳಿ ಚಿಕಿತ್ಸೆ ಪಡೆಯುತ್ತಿದ್ದಾರೆ!
ಡಾ. ಕೆ.ಎಸ್. ಶುಭ್ರತಾ, ಮನೋವೈದ್ಯರು
ತಂದೆ ತಾಯಿಗೆ ನಾವು ಮೂರು ಜನ ಹೆಣ್ಣುಮಕ್ಕಳು. ತಂದೆ ಹಿರಿಯ ಮನೋವೈದ್ಯರು. ಶಿವಮೊಗ್ಗದಲ್ಲಿ ಅವರ ನರ್ಸಿಂಗ್ ಹೋಂ ಇದೆ. ಅವರ ಬಳಿ ಚಿಕಿತ್ಸೆಗೆ ಬರುತ್ತಿದ್ದ ಕೆಲವೊಬ್ಬರು, ‘ಡಾಕ್ಟ್ರೇ ನಿಮಗೆ ಎಷ್ಟು ಜನ ಮಕ್ಕಳು?’ ಎಂದು ವಿಚಾರಿಸುತ್ತಿದ್ದರು. ತಂದೆ ವಿವರ ಹೇಳಿದರೆ, ‘ಅಯ್ಯೋ, ಮೂರೂ ಹೆಣ್ಣುಮಕ್ಕಳಾ? ನಾಳೆ ಈ ನರ್ಸಿಂಗ್ ಹೋಮ್ ಎಲ್ಲಾ ಯಾರು ನೋಡಿಕೊಳ್ಳುತ್ತಾರೆ? ಇದನ್ನೆಲ್ಲಾ ಮುಂದೆ ಯಾರು ಮುಂದುವರಿಸುತ್ತಾರೆ, ಗಂಡು ಮಕ್ಕಳಿಲ್ಲವಲ್ಲಾ’ ಎಂದೆಲ್ಲ ವರಾತ ತೆಗೆಯುತ್ತಿದ್ದರು. ಅಪ್ಪ ಇಂಥಾ ಮಾತುಗಳಿಗೆ ತಲೆಕೆಡಿಸಿಕೊಂಡವರಲ್ಲ.
ಸೀನ್ ಕಟ್ ಮಾಡಿದರೆ ಈಗ ಅದೇ ನರ್ಸಿಂಗ್ ಹೋಮ್‌ನಲ್ಲಿ ನಾನು ಮತ್ತು ನನ್ನ ಸಹೋದರಿ ಡಾ. ಕೆ.ಎಸ್. ಪವಿತ್ರಾ ಮನೋವೈದ್ಯರಾಗಿ ಕೆಲಸ ಮಾಡುತ್ತಿದ್ದೇವೆ. ಎಂಡಿ ಮಾಡಿ ವಿದೇಶಕ್ಕೆ ಹೋಗುವ ಅವಕಾಶವನ್ನೂ ನಿರಾಕರಿಸಿ ಶಿವಮೊಗ್ಗದಲ್ಲೇ ವೃತ್ತಿ ಕೈಗೊಂಡಿದ್ದೇವೆ. ಅಂದು ತಂದೆ ಬಳಿ ಇದನ್ನೆಲ್ಲ ಯಾರು ನೋಡಿಕೊಳ್ಳುತ್ತಾರೆ ಅಂದಿದ್ದ ಕೆಲವರು ಈಗಲೂ ಚಿಕಿತ್ಸೆಗೆ ಬರುತ್ತಿದ್ದಾರೆ. ‘ನಮಗೆ ಮೇಡಮ್ಮೇ ಟ್ರೀಟ್ ಮಾಡಬೇಕು’ ಅಂತ ನಮ್ಮನ್ನು ಹುಡುಕಿಕೊಂಡು ಬರುತ್ತಾರೆ!
ಎಲ್ಲರನ್ನೂ ಒಂದಾಗಿಸುವವರು ಮಹಿಳೆಯರು: ಶ್ರೀ ಶ್ರೀ ರವಿಶಂಕರ್ ಗುರೂಜಿ
ಮೈಸೂರಲ್ಲಿದ್ದೇ ಮಾರ್ಕೆಟಿಂಗ್ ಮ್ಯಾನೇಜ್ ಮಾಡಬಲ್ಲೆ
ಕಾವ್ಯಾ ಶಂಕರೇಗೌಡ, ಡಿಜಿಟಲ್ ಮಾರ್ಕೆಟಿಂಗ್ ಎಕ್ಸ್‌ಪರ್ಟ್
ಮಕ್ಕಳು ಇಂಜಿನಿಯರ್ ಅಥವಾ ಡಾಕ್ಟರ್ ಆದರೆ ಮಾತ್ರ ಉದ್ಧಾರ ಆಗೋದು ಎಂಬ ಕೌಟುಂಬಿಕ ಹಿನ್ನೆಲೆಯಿಂದ ಬಂದವಳು ನಾನು. ಹೀಗಾಗಿ ಆಸಕ್ತಿ ಇಲ್ಲದಿದ್ದರೂ ಒಂದಿಷ್ಟು ವರ್ಷ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಬೇಕಾಗಿ ಬಂತು. ಒನ್ ಫೈನ್ ಡೇ ಅದರಿಂದ ಹೊರಬಂದು ನನ್ನ ಇಷ್ಟದ ಮನರಂಜನಾ ಜಗತ್ತಿನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಮಾಡಲು ಮುಂದಾದೆ.
ಇದು ಕೋವಿಡ್‌ಗೂ ಮೊದಲಿನ ಘಟನೆ. ನನಗೆ ಮೈಸೂರಲ್ಲಿದ್ದುಕೊಂಡೇ ಕೆಲಸ ಮಾಡಬೇಕಿತ್ತು. ಇಲ್ಲಿಂದಲೇ ಸಿನಿಮಾ ಹಾಗೂ ಟಿವಿ ಕಾರ್ಯಕ್ರಮಗಳಿಗೆ ಡಿಜಿಟಲ್ ಮಾರ್ಕೆಟಿಂಗ್ ಮಾಡ್ತೀನಿ ಅಂದಾಗ, ಎಲ್ಲರಿಂದ ಬಂದ ಮಾತು - ‘ಖಂಡಿತಾ ಸಾಧ್ಯವಿಲ್ಲ’ ಅಂತ.
ಆದರೆ ನನ್ನ ಪ್ರಕಾರ ಈಗಿನ ಡಿಜಿಟಲ್ ಯುಗದಲ್ಲಿ ನೀವು ಯಾವ ಜಾಗದಲ್ಲಿದ್ದೀರಿ, ಹೇಗಿದ್ದೀರಿ ಅನ್ನೋದೆಲ್ಲ ಮ್ಯಾಟರೇ ಆಗೋದಿಲ್ಲ. ನೆಟ್‌ವರ್ಕ್ ಅನ್ನು ಹೇಗೆ ವಿಸ್ತರಿಸಬೇಕು, ಜನರ ಜೊತೆಗೆ ಹೇಗೆ ಸಂವಹನ ಮಾಡಬೇಕು ಅನ್ನೋದರಲ್ಲಿ ಪರಿಣತಿ ಇದ್ದರೆ ಸಾಕು.
ಅಂದುಕೊಂಡ ಕೆಲಸದಲ್ಲಿ ತೊಡಗಿಸಿಕೊಂಡೆ. ಮೈಸೂರಲ್ಲಿದ್ದುಕೊಂಡೇ ಫೇಸ್‌ಬುಕ್ ಹೆಡ್ ಜೊತೆಗೆ ಸಂಪರ್ಕ ಸಾಧಿಸಿದೆ. ಟ್ವಿಟರ್‌ನ ಮುಖ್ಯಸ್ಥರನ್ನೂ ನಾವು ಭೇಟಿಯಾದೆವು. ರಶ್ಮಿಕಾ ಮಂದಣ್ಣ ಅವರ ಕೆರಿಯರ್‌ನ ಆರಂಭದಲ್ಲಿ ಅವರ ಪ್ರಚಾರದ ಕೆಲಸ ನಾನೇ ಮಾಡುತ್ತಿದ್ದೆ. ಬಿಗ್‌ಬಾಸ್ ಕಾರ್ಯಕ್ರಮದ ಪ್ರಚಾರದ ಹೊಣೆಗಾರಿಕೆ ಯಶಸ್ವಿಯಾಗಿ ನಿರ್ವಹಿಸಿದೆ. ಸೆಲೆಬ್ರಿಟಿ ಮ್ಯಾನೇಜ್‌ಮೆಂಟ್ ಅನ್ನೂ ಮೈಸೂರಿನ ಮನೆಯಲ್ಲೇ ಕೂತು ಮಾಡಿದ್ದೇನೆ.
ಒಂದು ತಮಾಷೆ ವಿಚಾರ ಅಂದರೆ ಕೆಲವರು ಕ್ಲೋಸ್ ಆಗಿದ್ರೂ ಅವರಿಗೆ ನನ್ನ ಮುಖ ಪರಿಚಯ ಇಲ್ಲ. ನನ್ನ ಹೆಸರು, ಧ್ವನಿ ಅಷ್ಟೇ ಪರಿಚಿತ. ಆದರೆ ನನ್ನ ನಂಬಿಕೆ ನಿಜವಾದ ಖುಷಿ, ತೃಪ್ತಿ ಇದ್ದೇ ಇದೆ.
ಮಹಿಳಾ ದಿನಾಚರಣೆ 2024; ತುಂಬಾ ಬ್ಯುಸಿನಾ? ಸಮಯ ಉಳಿಸಲು ಇಲ್ಲಿದೆ 6 ಕುಕಿಂಗ್ ಟಿಪ್ಸ್
***
ಪ್ರೋತ್ಸಾಹ, ಹಸ್ತಕ್ಷೇಪದ ನಡುವಿನ ತೆಳುಗೆರೆ
ಅಕ್ಷತಾ ಹುಂಚದಕಟ್ಟೆ, ಪ್ರಕಾಶಕಿ
ಯಾವುದೇ ಆಸಕ್ತಿ ಅಥವಾ ವೃತ್ತಿಯನ್ನು ಮಾಡುವಾಗ ಮನೆಮಂದಿ ಮತ್ತು ಗೆಳೆಯರ ಬಳಗದ ಪ್ರೋತ್ಸಾಹದ ಅಗತ್ಯವಿದೆ ನಿಜ. ಆದರೆ ಹದಿನೈದು ವರುಷ ಅಹರ್ನಿಶಿ ಪ್ರಕಾಶನವನ್ನು ನಡೆಸಿದ ಮತ್ತು ಸ್ವತಃ ಲೇಖಕಿಯು ಆಗಿರುವ ಅನುಭವದಿಂದ ಹೇಳುವುದಾದರೆ ಮನೆಮಂದಿಯ ಪ್ರೋತ್ಸಾಹಕ್ಕಿಂತ ನಮ್ಮ ಬರೆಹ ಮತ್ತು ವೃತ್ತಿಯ ಬಗೆಗೆ ಅವರ ನಿರ್ಲಿಪ್ತತೆ ನಮಗೆ ಹೆಚ್ಚಿನ ಕೊಡುಗೆ ಕೊಡುತ್ತದೆ.
ಒಳ್ಳೆಯ ಕೆಲಸಕ್ಕೆ ಕೈ ಹಾಕಿದಾಗ ನಿರುತ್ಸಾಹಗೊಳಿಸಬಾರದು ಎಂಬುದು ಸತ್ಯ. ಹಾಗೆಂದು ನಾವು ಕೈ ಹಾಕಿದ ಕೆಲಸಕ್ಕೆಲ್ಲ ಮನೆಮಂದಿಯ ಪ್ರೋತ್ಸಾಹ ಸಿಗಲೇಬೇಕು ಎಂದು ಇಲ್ಲ. ಪ್ರೋತ್ಸಾಹ ಮತ್ತು ಹಸ್ತಕ್ಷೇಪದ ನಡುವಿನ ಗೆರೆ ತೆಳುವಾದದ್ದು ಪ್ರೋತ್ಸಾಹದ ಜೊತೆ ನಮ್ಮ ಕೆಲಸಕ್ಕೆ ಮನೆಮಂದಿಯ ಹಸ್ತಕ್ಷೇಪ ಶುರುವಾದರೆ ಅದನ್ನು ಎದುರಿಸಿ ಸ್ವಂತ ನಿರ್ಧಾರವನ್ನು ಕಾಪಾಡಿಕೊಳ್ಳುವ ಶಕ್ತಿ ನಮ್ಮ ಬಳಿ ಇರುವುದಿಲ್ಲ.
ನಿರ್ಲಿಪ್ತವಾಗಿದ್ದರೆ ನಮ್ಮ ಎಲ್ಲ ನಿರ್ಧಾರಕ್ಕೂ ನಾವೊಬ್ಬರೇ ಹೊಣೆಗಾರರು. ಇದರಿಂದ ಸ್ವಂತಿಕೆಯನ್ನು ಸ್ಥಾಪಿಸಬಹುದು. ನನ್ನ ಪ್ರಕಾಶನದ ಕಾರ್ಯದಲ್ಲಾಗಲಿ ಅಥವಾ ಬರಹಗಾರ್ತಿಯ ಬದುಕಲ್ಲಾಗಲಿ ಹಸ್ತಕ್ಷೇಪ ಒಡ್ಡದೆ, ‘ಯಾವುದೇ ಪುಸ್ತಕ ಪ್ರಕಟಿಸು, ಯಾರದೇ ಪುಸ್ತಕ ಪ್ರಕಟಿಸು, ಏನನ್ನೇ ಬರೆ ಎಲ್ಲದಕ್ಕೂ ನೀನು ಮತ್ತು ನೀನು ಮಾತ್ರ ಜವಾಬ್ದಾರಳು’ ಎಂದು ನಿರ್ಲಿಪ್ತವಾಗಿರುವುದು ನನ್ನ ಹೊಣೆಗಾರಿಕೆ ಹೆಚ್ಚಿಸಿದೆ.
ಹಾಗೆಂದು ಮನೆ ಮಂದಿಯ ಸಹಕಾರ ಸಿಗುವುದಿಲ್ಲವೇ ಎಂದರೆ ಹೆಚ್ಚಿನ ಮಟ್ಟದಲ್ಲೇ ಸಿಗುತ್ತದೆ. ಸಹಾಯದ ಅಗತ್ಯವಿದ್ದಾಗ, ಪುಸ್ತಕ ಕಟ್ಟುವುದರಿಂದ, ಪುಸ್ತಕ ಕಳಿಸುವ ತನಕ ಸಹಕಾರ ಸಿಕ್ಕಿದೆ. ಸಲಹೆ ಸೂಚನೆ ಕೇಳಿದಾಗ, ಪುಸ್ತಕ ಸಂಬಂಧ ಹಲವು ಸಲಹೆ ಕೊಟ್ಟಿದಾರೆ. ಜೊತೆಗೆ ಅವರ ನಿರ್ಲಿಪ್ತತೆ, ನನ್ನ ವೃತ್ತಿ ಮತ್ತು ಬರವಣಿಗೆಯ ಹಾದಿಯನ್ನು ಸರಾಗಗೊಳಿಸಿದೆ. ಅದು ಹೀಗೆ ಇರಲಿ ಎಂದು ಬಯಸುವೆ.
ಪ್ರತಿಯೊಬ್ಬ ಮಹಿಳೆ ತನ್ನ ಸುರಕ್ಷತೆಗಾಗಿ ಅನುಸರಿಸಬೇಕಾದ 7 ಸುರಕ್ಷತಾ ಸಲಹೆಗಳು
*
ಸ್ವಂತ ನಿರ್ಧಾರ ಕೈ ಹಿಡಿದು ಮುನ್ನಡೆಸಿದೆ
- ವನಿತಾ ಯಾಜಿ, ಕಲಾವಿದೆ, ಮಕ್ಕಳ ಪುಸ್ತಕ ಪ್ರಕಾಶಕಿ
ಬದುಕಲ್ಲಿ ಸ್ವಂತ ನಿರ್ಧಾರ ಬಹಳ ಮುಖ್ಯ. ಹಾಗಿದ್ದಾಗ ಬೇರೆಯವರ ಯಾವ ಮಾತು, ನಡವಳಿಕೆ ನಮ್ಮ ಬೆಳವಣಿಗೆ ಮೇಲೆ ಪರಿಣಾಮ ಬೀರದು. ಕೆಲವೊಮ್ಮೆ ನಮ್ಮ ಕೆಲವು ನಡೆಗಳೇ ನಮ್ಮನ್ನು ಮುನ್ನಡೆಸುತ್ತವೆ.
ನಾನು ಮಕ್ಕಳ ಪುಸ್ತಕಗಳ ಪ್ರಕಾಶಕಿ. ಆರಂಭದಲ್ಲಿ ನಾನು ನನ್ನ ಮಗಳ ಬರಹ ಚಿತ್ರದ ಪುಸ್ತಕ ಮಾಡಲು ಹೊರಟಾಗ ಬಹಳ ಮಂದಿ ಒಂದಿಷ್ಟು ಜನ ಜನಪ್ರಿಯ ಪ್ರಕಾಶಕರ ಹೆಸರು ಸೂಚಿಸಿದರು. ‘ಈ ಕಾನ್ಸೆಪ್ಟ್ ಚೆನ್ನಾಗಿದೆ, ಇಂಥಾ ಪುಸ್ತಕ ಪ್ರಕಟಿಸುವ ಪ್ರಕಾಶಕರು ಇದನ್ನು ಚೆನ್ನಾಗಿ ಪ್ರಿಂಟ್ ಮಾಡಬಹುದು’ ಅಂದರು. ಅದರಂತೆ ಒಂದಿಷ್ಟು ಮಕ್ಕಳ ಪಬ್ಲಿಕೇಶನ್‌ಗಳನ್ನು ಸಂಪರ್ಕಿಸಿದೆ. ಅಲ್ಲಿಂದ ಯಾವುದೇ ಉತ್ತರ ಬರಲಿಲ್ಲ. ಆಮೇಲೆ ನಾನೂ, ನನ್ನ ಗಂಡ ನಾವೇ ಪ್ರಕಾಶನ ಸಂಸ್ಥೆ ಮಾಡಲು ಮುಂದಾದೆವು.
ಈಗ ಮೂರು ವರ್ಷಗಳಿಂದ ಮಕ್ಕಳ ಪುಸ್ತಕ ಪ್ರಕಟಣೆಯ ಕೆಲಸ ಮಾಡುತ್ತಿದ್ದೇವೆ. ಅದು ಚೆನ್ನಾಗಿ ನಡೆಯುತ್ತಿದೆ.
‘ನೀವೇ ಪಬ್ಲಿಷ್ ಮಾಡೋದಕ್ಕಿಂತ ಬೇರೆಯವರು ಮಾಡಿದರೆ ಚೆನ್ನಾಗಿರುತ್ತೆ’ ಎನ್ನುತ್ತಿದ್ದ ಜನರ ಮಾತನ್ನೇ ಚಾಲೆಂಜಿಂಗ್ ಆಗಿ ತೆಗೆದುಕೊಂಡು ಕೆಲಸ ಮಾಡಿದೆವು. ನಮ್ಮ ಪ್ರಕಾಶನದ ಪುಸ್ತಕಗಳಿಗೆ ಉತ್ತಮ ಪ್ರತಿಕ್ರಿಯೆ ಬಂತು. ಮೂರು ವರ್ಷದಲ್ಲಿ ಸುಮಾರು 9000ಕ್ಕೂ ಹೆಚ್ಚು ಮಕ್ಕಳ ಪುಸ್ತಕಗಳನ್ನು ಮಾರಾಟ ಮಾಡಿದ್ದೇವೆ.
*
ನಮ್ಮ ಬಳಗದಲ್ಲಿ ಬೇಲಿ ಮುರಿದ ಮೊದಲಿಗಳು ನಾನು
ದೀಪದಮಲ್ಲಿ
ನಮ್ಮ ಹೆತ್ತವರಿಗೆ ನಾವು ಮೂವರು ಹೆಣ್ಣುಮಕ್ಕಳು. ಕೇಶವನಿಗೆ ಗಂಡು ಸಂತಾನದ ಭಾಗ್ಯವಿಲ್ಲ ಅಂತ ಜನ ಆಡಿಕೊಳ್ಳುವಾಗ, ನಮ್ಮಪ್ಪ ಮೂರನೆ ಮಗಳಾಗಿ ಹುಟ್ಟಿದ ನನಗೆ ಕೂದಲು ಕಟ್ ಮಾಡಿಸಿ, ನಿಕ್ಕರು ಷರ್ಟು ತೊಡಿಸಿ ಮೆರೆಸುತ್ತಿದ್ದರು. ಅವರಿಗೆ ಜನರ ಬಾಯಿ ಮುಚ್ಚಿಸುವ ಜೊತೆಗೆ ತಮ್ಮ ಒಳಗಿನ ಕೊರಗನ್ನು ನೀಗಿಕೊಳ್ಳಬೇಕಿತ್ತು.
ಅಂದಿನ ದಿನಗಳು ನನ್ನ ಬಾಲ್ಯದ ಮೇಲೆ ಬೀರಿದ ಪರಿಣಾಮ ಬಹಳ ಕಾಲ ನನ್ನ ಬಾಡಿ ಲ್ಯಾಂಗ್ವೇಜ್‌ನಲ್ಲಿ ಕಾಣಿಸಿದರೂ, ಅದೃಷ್ಟವಷಾತ್ ಮೌಲ್ಯಗಳಾಗಿ ನನ್ನನ್ನು ಆವರಿಸಿಕೊಳ್ಳಲಿಲ್ಲ.
ಇಷ್ಟಾಗಿಯೂ ನನ್ನ ಅಪ್ಪನ ಆ ನಡೆ ನಮ್ಮ ಬಳಗದ ಅನೇಕರ ಕುಹಕಕ್ಕೆ ಕಾರಣವಾಗಿದ್ದೂ ನಿಜ. ಎಷ್ಟು ದಿನ ಮೆರೆಸುತ್ತಾನೆ ಮಗಳನ್ನ ಮಗನಾಗಿ? ಹಾಗಂದುಕೊಳ್ಳುವವರಿಗೆ ಆಗ ಮನಸಿನಲ್ಲಿ ಇದ್ದದ್ದು ಹೆಣ್ಣುಮಕ್ಕಳು ಸ್ವತಂತ್ರವಾಗಿ ಓಡಾಡುವುದು, ಅಪರಿಚಿತರೊಂದಿಗೆ ಮಾತನಾಡುವುದು ಅಪರಾಧವೆಂದು.
ನಾನು ಬಹುಶಃ ನಮ್ಮ ಬಳಗದಲ್ಲೇ ಆ ಬೇಲಿಗಳನ್ನು ಮುರಿದ ಮೊದಲಿಗಳು. ಅಂತರ್ಜಾತಿ ವಿವಾಹ, ಸಾಮಾಜಿಕ ಒಟನಾಟ, ಸಂಘಟನೆ, ಭಾಷಣ, ಸೋಲೋ ಟ್ರಾವಲಿಂಗ್ ಇತ್ಯಾದಿ, ಇತ್ಯಾದಿ.
ಒಂದು ಸ್ಪೆಷಲ್ ನೀಡ್ ಚೈಲ್ಡ್ ಬಗಲಲ್ಲಿ ಇದ್ದಾಗಲೂ, ನನ್ನ ಚಟುವಟಿಕೆಗಳು ಮಾಧ್ಯಮ ಬದಲಿಸಿದೆಯೋ ಹೊರತು, ನಿಂತಿಲ್ಲ. ನಿಲ್ಲುವುದೂ ಇಲ್ಲ.
ಸಿಮೋನ್ ದ ಬೋವ ಹೇಳುವ ಹಾಗೆ, ‘ದೇಹ ಅನ್ನುವುದು ಒಂದು ಪರಿಸ್ಥಿತಿಯಷ್ಟೇ. ಅದು ನಾವು ಪ್ರಪಂಚವನ್ನು ಹೇಗೆ ಗ್ರಹಿಸುತ್ತೇವೆ ಮತ್ತು ಅದನ್ನು ಹೇಗೆ ಚಿತ್ರಿಸುತ್ತೇವೆ ಅನ್ನುವುದರ ಮೇಲೆ ಅವಲಂಬಿತ’.
ಅಷ್ಟೇ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.