ಮಹಿಳೆಯರಿಗೆ ಪೀಕ್ ಅವರ್ಸ್ ಎಂದರೆ ಅದು ಬೆಳಗ್ಗೆ. ಹತ್ತು ಕೈಗಳಾದರೂ ಬೇಕಿತ್ತು ನನಗೆ ಎಂದೆನಿಸುವುದು ಇದೇ ಸಮಯದಲ್ಲಿ. ಗಂಡನ ಕೂಗಾಟ, ಮಕ್ಕಳ ರಂಪಾಟದ ನಡುವೆ ಬೆಳಗ್ಗಿನ ಕೆಲಸಗಳನ್ನು ನಿಗದಿತ ಸಮಯದೊಳಗೆ ಮುಗಿಸೋದು ಸೂಪರ್ ಮಿನಿಟ್ ರಿಯಾಲಿಟಿ ಶೂನಲ್ಲಿ ಟಾಸ್ಕ್ ಮಾಡಿದಷ್ಟೇ ಕಷ್ಟ.
ಬೆಳಗ್ಗೆ ಹತ್ತು ನಿಮಿಷ ತಡವಾಗಿ ಎದ್ದರೆ ಸಾಕು, ಕೈ ಕಾಲೇ ಆಡುವುದಿಲ್ಲ. ಸ್ನಾನ ಮಾಡಿ ತಿಂಡಿ ರೆಡಿ ಮಾಡಬೇಕು, ಮಕ್ಕಳು ಮತ್ತು ಗಂಡನ ಲಂಚ್ ಬಾಕ್ಸ್ ಸಿದ್ಧ ಮಾಡಬೇಕು. ಮಕ್ಕಳ ಯುನಿಫಾರ್ಮ್‍ಗಳನ್ನು ಇಸ್ತ್ರಿ ಮಾಡಬೇಕು..ಹೀಗೆ ಗೃಹಿಣಿ ತಲೆಯಲ್ಲಿ ಹತ್ತಾರು ಯೋಚನೆಗಳು ಕಾಡುತ್ತವೆ. ಇನ್ನು ಉದ್ಯೋಗಸ್ಥ ಮಹಿಳೆಯಾದರೆ ಆಕೆಯ ಬೆಳಗ್ಗಿನ ಟೆನ್ಷನ್ ಇನ್ನೂ ಹೆಚ್ಚಿರುತ್ತದೆ. ಆದರೆ, ಸರಿಯಾಗಿ ಪ್ಲ್ಯಾನಿಂಗ್ ಇದ್ರೆ ಬೆಳಗ್ಗಿನ ಒತ್ತಡವನ್ನು ಈಸೀಯಾಗಿ ನಿಭಾಯಿಸಬಹುದು.
undefined
ಹಿಂದಿನ ದಿನವೇ ಬ್ರೇಕ್‍ಫಾಸ್ಟ್ ಪ್ಲ್ಯಾನ್ ಮಾಡಿ: ಹಿಂದಿನ ದಿನವೇ ನಾಳೆ ಬೆಳಗ್ಗೆ ಏನು ತಿಂಡಿ ಮಾಡಬಹುದು ಎಂದು ಯೋಚಿಸಿ, ಅದಕ್ಕೆ ಬೇಕಾದ ಸಿದ್ಧತೆ ಮಾಡಿಟ್ಟುಕೊಳ್ಳುವುದರಿಂದ ಬೆಳಗ್ಗೆ ಎದ್ದ ತಕ್ಷಣ ತಿಂಡಿಯೇನು ಮಾಡುವುದು ಎಂದು ಯೋಚಿಸಿ, ಸಿದ್ಧಪಡಿಸುವ ಟೆನ್ಷನ್‍ನಿಂದ ಪಾರಾಗಬಹುದು. ಹಿಂದಿನ ದಿನವೇ ದೋಸೆಗೆ ಅಕ್ಕಿ ನೆನೆ ಹಾಕಿ ಹಿಟ್ಟು ರುಬ್ಬಿಟ್ಟರೆ ಬೆಳಗ್ಗೆ ತಿಂಡಿಯ ಟೆನ್ಷನ್ ಕಾಡುವುದಿಲ್ಲ. ರೈಸ್‍ಬಾತ್ ಮಾಡುವುದಾದರೆ ಹಿಂದಿನ ದಿನ ರಾತ್ರಿಯೇ ಅದಕ್ಕೆ ಅಗತ್ಯವಾದ ತರಕಾರಿಗಳನ್ನು ಕತ್ತರಿಸಿ ಏರ್‍ಟೈಟ್ ಕಂಟೈನರ್‍ನಲ್ಲಿ ಹಾಕಿ ಫ್ರಿಜ್‍ನಲ್ಲಿಟ್ಟರೆ ಬೆಳಗ್ಗೆ ಕೆಲಸ ಸುಲಭವಾಗುತ್ತದೆ. ಈ ರೀತಿ ಹಿಂದಿನ ದಿನವೇ ಸಿದ್ಧತೆ ಮಾಡುವುದರಿಂದ ಬೆಳಗ್ಗೆ ಸಮಯ ಉಳಿಯುತ್ತದೆ. ಈ ಸಮಯವನ್ನು ಬೇರೆ ಕೆಲಸಗಳಿಗೆ ವಿನಿಯೋಗಿಸಬಹುದು.
ಟೈಮ್‍ಟೇಬಲ್‍ಗೆ ಸ್ಟಿಕ್ ಆಗಿ: ಬೆಳಗ್ಗೆ ಎದ್ದೇಳುವ ಸಮಯದಿಂದ ಹಿಡಿದು ಪ್ರತಿ ಕೆಲಸಕ್ಕೂ ನಿರ್ದಿಷ್ಟ ಸಮಯ ಮಿತಿಯನ್ನು ನಿಗದಿಪಡಿಸಿ. ಆ ಸಮಯದಲ್ಲೇ ಅದನ್ನು ಮಾಡಿ ಮುಗಿಸಿ. ಪ್ರತಿದಿನ ತಪ್ಪದೇ ಈ ಟೈಮ್‍ಟೇಬಲ್‍ಗೆ ಸ್ಟಿಕ್ ಆಗುವುದರಿಂದ ಯಾವುದೇ ಟೆನ್ಷನ್ ಕಾಡುವುದಿಲ್ಲ. ಒಂದು ವೇಳೆ ಯಾವುದಾದರೂ ಕೆಲಸಕ್ಕೆ ನಿಗದಿತ ಸಮಯಕ್ಕಿಂತ ಸ್ವಲ್ಪ ಹೆಚ್ಚು ಹೊತ್ತು ಬೇಕಾದರೆ ಅದರಿಂದ ಉಳಿದ ಕೆಲಸಗಳಿಗೆ ತೊಂದರೆಯಾಗದಂತೆ ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನಿಸಿ. ದೈನಂದಿನ ಕೆಲಸದಲ್ಲಿ ಶಿಸ್ತು ಅಳವಡಿಸಿಕೊಂಡರೆ ಖಂಡಿತಾ ಯಾವ ಕೆಲಸವೂ ಹೊರೆಯಾಗುವುದಿಲ್ಲ. ಅಲ್ಲದೆ, ಬೆಳಗ್ಗೆ ನೀವು ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸಗಳನ್ನು ಮುಗಿಸುವುದರಿಂದ ಪತಿ ಹಾಗೂ ಮಕ್ಕಳಿಗೆ ಸರಿಯಾದ ಸಮಯಕ್ಕೆ ಆಫೀಸ್ ಹಾಗೂ ಸ್ಕೂಲ್‍ಗೆ ತೆರಳಲು ಸಾಧ್ಯವಾಗುತ್ತದೆ. ಒಂದು ವೇಳೆ ನೀವು ಬ್ರೇಕ್‍ಫಾಸ್ಟ್ ಮಾಡುವಾಗ ಸ್ವಲ್ಪ ತಡವಾದರೂ ಅದು ಅವರೆಲ್ಲರ ದಿನಚರಿ ಮೇಲೆ ಪ್ರಭಾವ ಬೀರುತ್ತದೆ. ಅವರಿಂದ ನಿಮಗೆ ಬೈಗುಳವೂ ತಪ್ಪಿದ್ದಲ್ಲ. ಪರಿಣಾಮ ದಿನವಿಡೀ ಮೂಡ್ ಹಾಳು. ಆದಕಾರಣ ಬೆಳಗ್ಗೆ ಯಾವ ಕೆಲಸವೂ ಲಯ ತಪ್ಪದಂತೆ ಎಚ್ಚರ ವಹಿಸಿ. ಇದರಿಂದ ದಿನವಿಡೀ ನೀವು ನೆಮ್ಮದಿಯಿಂದಿರಲು ಸಾಧ್ಯವಾಗುತ್ತದೆ.
ರೇಪಿಸ್ಟ್ ಅನ್ನು ಗುರುತು ಹಿಡಿಯುವುದು ಹೇಗೆ?
ಡ್ರೆಸ್‍ಗೆ ತಡಕಾಡಬೇಡಿ: ಬೆಳಗ್ಗೆ ಎದ್ದು ಗಂಡ ಆಫೀಸ್‍ಗೆ ಹಾಕಿಕೊಂಡು ಹೋಗುವ ಡ್ರೆಸ್ ಯಾವುದು ಎಂದು ಹುಡುಕುತ್ತ ಅದಕ್ಕೆ ಇಸ್ತ್ರಿ ಹಾಕುವುದು. ಮಕ್ಕಳ ಯೂನಿಫಾರ್ಮ್‍ಗೆ ಇಸ್ತ್ರಿ ಮಾಡುತ್ತ ಕುಳಿತುಕೊಂಡರೆ ನಿಮ್ಮ ಟೈಮ್ ಕೆಡುವುದು ಗ್ಯಾರಂಟಿ. ಈ ಕೆಲಸಗಳನ್ನು ಹಿಂದಿನ ರಾತ್ರಿಯೇ ಮಾಡಿಟ್ಟರೆ ಬೆಳಗ್ಗೆ ಟೆನ್ಷನ್ ಇರುವುದಿಲ್ಲ ಅಲ್ವಾ?
ಶೇರಿಂಗ್ ಈಸ್ ಕೇರಿಂಗ್: ಎಲ್ಲವನ್ನೂ ನೀವೊಬ್ಬರೆ ಮಾಡಲು ನಿಮಗೇನು ದೇವಿಯಂತೆ ಹತ್ತಾರು ಕೈಗಳಿಲ್ಲ ಎಂಬುದು ನೆನಪಿರಲಿ. ಎಲ್ಲವನ್ನು ತಲೆಮೇಲೆ ಹೊತ್ತುಕೊಂಡು ಒದ್ದಾಡುವ ಬದಲು ಕೆಲಸಗಳನ್ನು ಗಂಡ, ಮಕ್ಕಳಿಗೂ ಹಂಚಿ. ಇಲ್ಲವಾದರೆ ಅಮ್ಮ ಮಾಡುತ್ತಾಳೆ, ಹೆಂಡತಿ ಮಾಡುತ್ತಾಳೆ ಎಂಬ ಧೈರ್ಯದಿಂದ ಅವರು ಬೆಳಗ್ಗೆ ಗಂಟೆ ಎಂಟಾದರೂ ಹಾಸಿಗೆ ಬಿಟ್ಟು ಏಳದೆ ಸೋಮಾರಿತನ ತೋರಬಹುದು. ಆ ಬಳಿಕ ಸ್ಕೂಲ್‍ಗೆ, ಆಫೀಸ್‍ಗೆ ಹೋಗಲು ಟೈಮ್ ಆಯ್ತು ಎಂದು ಟೆನ್ಷನ್ ಮಾಡಿಕೊಂಡು ನಿಮ್ಮ ಮೇಲೂ ರೇಗಾಡಿ ನಿಮ್ಮ ಬಿಪಿ ರೈಸ್ ಮಾಡಬಹುದು. ಆದಕಾರಣ ಬೆಳಗ್ಗಿನ ಅವಧಿಯಲ್ಲಿ ಕೆಲಸಗಳಲ್ಲಿ ನಿಮ್ಮ ಜೊತೆ ಕೈಜೋಡಿಸಲು ಅವರಿಗೆ ಸೂಕ್ತ ಟ್ರೈನಿಂಗ್ ನೀಡಿ. ಆಫೀಸ್‍ಗೆ, ಸ್ಕೂಲ್‍ಗೆ ಅಗತ್ಯವಾದ ವಸ್ತುಗಳನ್ನು ಅವರೇ ಹುಡುಕಿ ಬ್ಯಾಗ್‍ಗೆ ಹಾಕಿಕೊಳ್ಳುವಂತೆ ತಿಳಿಸಿ. ಮಕ್ಕಳಿಗೆ ಡ್ರೆಸ್ ಧರಿಸಲು, ಸಾಕ್ಸ್ ಮತ್ತು ಶೂ ಹಾಕಲು ಕಲಿಸಿ. ಇದರಿಂದ ಆ ಕೆಲಸಗಳಿಗೆ ಅವರು ನಿಮ್ಮನ್ನು ಅವಲಂಬಿಸುವುದು ತಪ್ಪುತ್ತದೆ.
ಮಲ್ಟಿ ಟಾಸ್ಕಿಂಗ್: ಬೆಳಗ್ಗಿನ ಅವಧಿಯಲ್ಲಿ ಒಂದೊಂದೇ ಕೆಲಸಗಳನ್ನು ಮಾಡಿ ಮುಗಿಸುತ್ತೇನೆ ಎಂದರೆ ಟೈಮ್ ಕೈಮೀರಿ ಹೋಗುತ್ತದೆ. ಆದಕಾರಣ ಒಂದಕ್ಕಿಂತ ಹೆಚ್ಚು ಕೆಲಸಗಳಿಗೆ ಕೈ ಹಾಕುವುದು ಒಳ್ಳೆಯದು. ಅಂದರೆ ದೋಸೆ ಮಾಡುವಾಗ ಈ ಕಡೆ ಮಕ್ಕಳ ಸ್ನ್ಯಾಕ್ಸ್ ಹಾಗೂ ಲಂಚ್ ಬಾಕ್ಸ್ ರೆಡಿ ಮಾಡುವುದು ಅಥವಾ ಟೀ ಮಾಡುವುದು ಮುಂತಾದ ಒಂದರೊಂದಿಗೆ ಮತ್ತೊಂದನ್ನು ಮ್ಯಾನೇಜ್ ಮಾಡಲು ಸಾಧ್ಯವೆನಿಸುವ ಕೆಲಸಗಳನ್ನು ಒಟ್ಟಿಗೆ ಮಾಡಬಹುದು.
ಆದ್ಯತೆ ಅನುಸಾರ ಕೆಲಸ ಸಾಗಲಿ: ಯಾವ ಕೆಲಸ ಮೊದಲು ಮಾಡಬೇಕು? ಯಾವುದನ್ನು ನಂತರ ಮಾಡಬಹುದು ಎಂಬ ಐಡಿಯಾ ನಿಮಗಿರುವುದು ಅಗತ್ಯ. ಇದರಿಂದ ಗೊಂದಲ ಉಂಟಾಗದೆ ಬೆಳಗ್ಗೆ ಸರಿಯಾದ ಸಮಯಕ್ಕೆ ಅನಿವಾರ್ಯವಾಗಿ ಮಾಡಲೇಬೇಕಾದ ಕೆಲಸಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.
ಕ್ಲೀನಿಂಗ್ ಕೆಲಸ ಪೆಂಡಿಂಗ್ ಇರಲಿ: ಕೆಲವರು ಬೆಳಗ್ಗಿನ ಬ್ಯುಸಿ ಶೆಡ್ಯೂಲ್‍ನಲ್ಲೇ ಮನೆ ಕ್ಲೀನಿಂಗ್ ಮಾಡುವ ಇಲ್ಲವೆ ಪಾತ್ರೆ ತೊಳೆಯುವ ಕೆಲಸಕ್ಕೆ ಕೈ ಹಾಕುತ್ತಾರೆ. ಈ ಕೆಲಸಗಳನ್ನು ನೀವು ಮಕ್ಕಳು ಮತ್ತು ಗಂಡ ಆಫೀಸ್‍ಗೆ ಹೋದ ಬಳಿಕವೂ ಮಾಡಬಹುದು. ಹಾಗಾಗಿ ಯಾವ ಕೆಲಸಕ್ಕೆ ಆದ್ಯತೆ ನೀಡಬೇಕು, ನೀಡಬಾರದು ಎಂಬುದನ್ನು ಅರ್ಥ ಮಾಡಿಕೊಳ್ಳಿ. ದಿನದ ಆರಂಭ ಮನಸ್ಸಿಗೆ ಜೋಷ್ ತುಂಬಿದರೆ ದಿನವಿಡೀ ಖುಷ್ ಆಗಿರಬಹುದು ಅಲ್ಲವೆ?