ಒಂದು ಗಂಟೆ ಓದಿ, ಗಿಫ್ಟ್ ಪಡೆಯಿರಿ!

May 26, 2022, 2:26 PM IST

ಬಿಸಿಲುನಾಡು ರಾಯಚೂರು(Rayachuru) ಜಿಲ್ಲೆಯಲ್ಲಿ ಈಗ ದಿನೇ ದಿನೇ ಬಿಸಿಲು ಹೆಚ್ಚಾಗುತ್ತಿದೆ. ಮಕ್ಕಳು ಬಿರುಬಿಸಿಲಿನಲ್ಲಿ ತಿರುಗಾಟ ನಡೆಸಿ ಆರೋಗ್ಯ(health) ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದನ್ನ ಗಮನಿಸಿದ ರಾಯಚೂರಿನ ಯುವಕರೊಬ್ಬರು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ. 

ಸಣ್ಣ ಕೋಣೆಯೊಂದರಲ್ಲಿ ನಿರ್ಮಾಣವಾಗಿರುವ ಪುಸ್ತಕಾಲಯ(Library)ದಲ್ಲಿ ನೂರಾರು ಮಹಾನ್ ಸಾಧಕರ ಸಾಧನೆ ಹಾದಿಯ ಪುಸ್ತಕಗಳು(books). ಏಕಾಗ್ರತೆಯಿಂದ ತಮಗಿಷ್ಟ ಬಂದ ಪುಸ್ತಕಗಳನ್ನ ಆಯ್ಕೆ ಮಾಡಿಕೊಂಡು ಓದುತ್ತಿರೋ ಪುಟಾಣಿ ಮಕ್ಳು. ಈ ದೃಶ್ಯಗಳು ಕಂಡುಬಂದಿದ್ದು ರಾಯಚೂರು ನಗರದ ಗಾಜಗಾರಪೇಟೆಯಲ್ಲಿ. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿರುವ ಕಾಡ್ಲೂರು ರಂಗರಾವ್ ದೇಸಾಯಿವರ ವಿನೂತನ ಆಲೋಚನೆಯಿಂದಲೇ ಈ ಕಾರ್ಯ ಆಗಿರೋದು. 

ಅಂದ ಹಾಗೇ ಬೇಸಿಗೆ ರಜೆಯಲ್ಲಿರುವ ಬಡ, ಕೂಲಿ, ಕಾರ್ಮಿಕರ ಮಕ್ಕಳನ್ನ ಗಮನದಲ್ಲಿಟ್ಕೊಂಡು, ಕನಿಷ್ಠ ಒಂದು ಗಂಟೆಗೆ ಒಂದು ಪುಸ್ತಕ ಓದಿ, ಗಿಫ್ಟ್‌ ಪಡೆಯಿರಿ ಅನ್ನೋ ನಿಟ್ಟಿನಲ್ಲಿ ಬೇಸಿಗೆ ರಜೆ ಕಳೆಯುವ ಮಕ್ಕಳಿಗೊಂದು ಭರ್ಜರಿ ಆಫರ್ ನೀಡಿದ್ದಾರೆ. 800 ಕ್ಕೂ ಹೆಚ್ಚು ಸಾಧಕರ ಕಿರು ಪುಸ್ತಕ ಸಂಗ್ರಹಿಸಿ ಮಕ್ಕಳಿಗೆ ಓದುವ ಅಭ್ಯಾಸ ಮಾಡಿಸ್ತಿದ್ದಾರೆ. ಒಂದು ಗಂಟೆ ಸತತವಾಗಿ ಕುಳಿತು ಪುಸ್ತಕ ಓದಿದವ್ರಿಗೆ, ವಾಟರ್ ಬಾಟಲ್ , ಆಟಿಕೆ ಸಾಮಗ್ರಿ , ಗಾಳಿಪಟ ಕೊಡುಗೆ ನೀಡಿ ಮಕ್ಕಳ ಓದಿಗೆ ಉತ್ತೇಜನ ನೀಡ್ತಿದ್ದಾರೆ.

ಮಕ್ಕಳ ಜೊತೆ ಈ ರೀತಿ ನಡೆದುಕೊಂಡ್ರೆ ಮಾನಸಿಕವಾಗಿ ಕುಗ್ಗಿ ಹೋಗ್ತಾರೆ !

ಈ ಹಿಂದೆಯೂ ರಂಗರಾವ್ ದೇಸಾಯಿವರು ಶ್ರೀರಾಘವೇಂದ್ರ ಅಕ್ಷರ ಯಜ್ಞ ಎಂಬ ಕಾರ್ಯಕ್ರಮದಡಿ ಕೊರೋನಾ ಸಮಯದಲ್ಲಿ ಮಕ್ಕಳ ಕಲಿಕೆಗೆ ಪೂರಕವಾಗಿ ಕಲಿಕಾ ಸಾಮಗ್ರಿ(learning materials) ಉಚಿತವಾಗಿ ನೀಡಿದ್ರು. ಹಾಗೇ ಹೋಳಿ ಹಬ್ಬಕ್ಕೆ ಸರಕಾರಿ ಶಾಲೆ(government schools)ಗಳಿಗೆ ಬಣ್ಣ ಬಳಿಸುವ ಕಾರ್ಯವನ್ನೂ ಸ್ವಂತ ಹಣದಿಂದಲೇ ಮಾಡಿದ್ದರು. ಮತ್ತದೇ ರೀತಿಯ ಮಹಾನ್ ಕಾರ್ಯಕ್ಕೆ ಮುಂದಾಗಿರುವ ರಂಗರಾವ್ ದೇಸಾಯಿವರು ದೇಶ ಕಂಡ ಮಹಾನ್ ನಾಯಕರು, ಸಾಧಕರ ಪುಸ್ತಕಗಳನ್ನ ದಿನವೂ ಒಂದು ಗಂಟೆ ಓದುವ ಮಕ್ಕಳಿಗೆ ಕೊಡುಗೆ ನೀಡುವ ಮೂಲಕ ಸಾಧಕರನ್ನ ಮಕ್ಕಳಿಗೆ ಪರಿಚಯಿಸ್ತಿದ್ದಾರೆ. ಅಲ್ಲದೇ ಸಾಧಕರ ಜೀವನ ಚರಿತ್ರೆ ಮಕ್ಕಳ ಬಾಳಿಗೆ ಪ್ರೇರಣಾದಾಯಕವಾಗಬೇಕೆಂಬ ಉದ್ದೇಶದಿಂದ ಇದೀಗ ಮನೆಯಲ್ಲಿಯೇ, ದೇಶಕಂಡ ಸ್ವಾತಂತ್ರ್ಯ ಹೋರಾಟಗಾರರು, ಮಹಾನ್ ನಾಯಕರು, ದಾರ್ಶನಿಕರ ಜೀವನ ಚರಿತ್ರೆ ಮತ್ತು ಸಾಧನೆಯ ಮಾಹಿತಿ ಒದಗಿಸುವ ಕಿರು ಪುಸ್ತಕಗಳ ಭಂಡಾರವನ್ನು ಇರಿಸಿ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ನಿರಂತರವಾಗಿ ಟಿವಿ ನೋಡಿದರೆ ಇಂಥಾ ಆರೋಗ್ಯ ಸಮಸ್ಯೆ ಕಾಡುತ್ತಂತೆ, ಹುಷಾರ್ !

ಒಟ್ಟಿನಲ್ಲಿ ಬೇಸಿಗೆ ರಜೆ(Summer holidays)ಯಲ್ಲಿ ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಕಳಿಸುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಆದ್ರೆ ಬಡಪಾಲಕರ ಮಕ್ಕಳು ಕಲಿಕೆಯಿಂದ ಬೇಸಿಗೆಯಲ್ಲಿ ವಂಚಿತರಾಗ್ತಾರೆ. ಇಂಥ ಮಕ್ಕಳನ್ನು ಗಮನದಲ್ಲಿಟ್ಕೊಂಡೇ ರಂಗರಾವ್ ದೇಸಾಯಿ ಅವರು ಒಂದು ಗಂಟೆ ಓದಿದರೆ ಒಂದು ಗಿಫ್ಟ್ ಎನ್ನುವ ವಿನೂತನ ಕಾರ್ಯಕ್ಕೆ ಮುಂದಾಗಿದ್ದಾರೆ. ಮಕ್ಕಳು ಆಸಕ್ತಿಯಿಂದ ಬೆಳಗ್ಗೆ ಮತ್ತು ಸಂಜೆಯ ವೇಳೆ ಆಗಮಿಸಿ ಪುಸ್ತಕಗಳನ್ನು ಆಸಕ್ತಿಯಿಂದ ಓದಿ, ಗಿಫ್ಟ್ ಪಡೆಯುತ್ತಿದ್ದಾರೆ.

ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್
ಕ್ಯಾಮೆರಾಮನ್ ಶ್ರೀನಿವಾಸ್, ರಾಯಚೂರು