ತಮ್ಮ ಪುತ್ರರ ಗೆಲುವಿಗೆ ಕ್ಷೇತ್ರದಲ್ಲಿಯೇ ಬೀಡುಬಿಟ್ಟು ನಿರಂತರ ಪ್ರಚಾರ ಕೈಗೊಂಡರೂ ಮಾಜಿ ಮುಖ್ಯಮಂತ್ರಿಗಳಿಬ್ಬರ ಅವಿರತ ಶ್ರಮ ವ್ಯರ್ಥವಾಗಿದ್ದು, ಪುತ್ರರಿಬ್ಬರು ಉಪಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ.
ಬೆಂಗಳೂರು (ನ.24): ತಮ್ಮ ಪುತ್ರರ ಗೆಲುವಿಗೆ ಕ್ಷೇತ್ರದಲ್ಲಿಯೇ ಬೀಡುಬಿಟ್ಟು ನಿರಂತರ ಪ್ರಚಾರ ಕೈಗೊಂಡರೂ ಮಾಜಿ ಮುಖ್ಯಮಂತ್ರಿಗಳಿಬ್ಬರ ಅವಿರತ ಶ್ರಮ ವ್ಯರ್ಥವಾಗಿದ್ದು, ಪುತ್ರರಿಬ್ಬರು ಉಪಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿಯೂ ಆಗಿರುವ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಮತ್ತೊಬ್ಬ ಮಾಜಿ ಮುಖ್ಯಮಂತ್ರಿಯೂ ಆಗಿರುವ ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರು ತಮ್ಮ ಪುತ್ರರನ್ನು ಉಪಸಮರದಲ್ಲಿ ಗೆಲ್ಲಿಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ.
ತಮ್ಮ ಕ್ಷೇತ್ರವನ್ನು ಮಕ್ಕಳಿಗೆ ಬಿಟ್ಟುಕೊಟ್ಟರೂ ಗೆಲ್ಲಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಶಿಗ್ಗಾಂವಿ ಕ್ಷೇತ್ರದಲ್ಲಿ ಭರತ್ ಬೊಮ್ಮಾಯಿ ಮೊದಲ ಸೋಲನುಭವಿಸಿದರೆ, ಚನ್ನಪಟ್ಟಣ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಸತತ ಮೂರನೇ ಸೋಲು ಕಂಡಿದ್ದಾರೆ. ಉಪಚುನಾವಣೆ ಘೋಷಣೆಯಾದ ಬಳಿಕ ಎನ್‌ಡಿಎ ಅಭ್ಯರ್ಥಿಗಳ ಹೆಸರು ಅಂತಿಮಗೊಂಡು ಉಮೇದುವಾರಿಕೆ ಸಲ್ಲಿಕೆ ನಂತರ ಪ್ರಚಾರ ಮುಕ್ತಾಯದವರೆಗೆ ನಿರಂತರ 20 ದಿನಗಳ ಕಾಲ ಇಬ್ಬರೂ ತಮ್ಮ ಪುತ್ರರ ಪರವಾಗಿ ಪ್ರಚಾರ ನಡೆಸಿದ್ದರು. ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದರೆ, ಬಸವರಾಜ ಬೊಮ್ಮಾಯಿ ಶಿಗ್ಗಾಂವಿ ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿದ್ದರು.
undefined
ಈ ಇಬ್ಬರು ಬೇರೆ ಕ್ಷೇತ್ರದಲ್ಲಿ ಪ್ರಚಾರವನ್ನೇ ಕೈಗೊಳ್ಳಲಿಲ್ಲ. ಬಸವರಾಜ ಬೊಮ್ಮಾಯಿ ಚನ್ನಪಟ್ಟಣ ಕ್ಷೇತ್ರಕ್ಕಾಗಲಿ, ಸಂಡೂರು ಕ್ಷೇತ್ರಕ್ಕಾಗಲಿ ಪ್ರಚಾರಕ್ಕೆ ತೆರಳಿಲ್ಲ. ಅಂತಯೇ ಕುಮಾರಸ್ವಾಮಿ ಸಹ ಶಿಗ್ಗಾಂವಿಗಾಗಲೀ, ಸಂಡೂರು ಕ್ಷೇತ್ರಕ್ಕಾಗಲಿ ಪ್ರಚಾರಕ್ಕೆ ಹೋಗಲಿಲ್ಲ. ಇಬ್ಬರೂ ತಮ್ಮ ಪುತ್ರರನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಲು ಅವಿರತ ಶ್ರಮ ಹಾಕಿದರು. ಆಡಳಿತಾರೂಢ ಕಾಂಗ್ರೆಸ್ ತಂತ್ರಕ್ಕೆ ಪ್ರತಿತಂತ್ರ ಹೆಣೆಯುವಲ್ಲಿ ನಿರತರಾಗಿದ್ದರು. ಆದರೂ ಕಾಂಗ್ರೆಸ್‌ಗೆ ರಾಜಕೀಯವಾಗಿ ತಿರುಗೇಟು ನೀಡಲು ಸಾಧ್ಯವಾಗಲಿಲ್ಲ. ಮತದಾರರು ಮಾಜಿ ಮುಖ್ಯಮಂತ್ರಿಗಳ ಪುತ್ರರನ್ನು ಸೋಲಿಸುವ ಮೂಲಕ ಅವರ ನಾಯಕತ್ವವನ್ನು ತಿರಸ್ಕರಿಸಿದ್ದಾರೆ.
ಇದು ಸಿಎಂ ಸಿದ್ದು, ಡಿಸಿಎಂ ಡಿಕೆಶಿ ಗೆಲುವಲ್ಲ, ಹಣದ ಗೆಲುವು: ಆರ್.ಅಶೋಕ್
ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಪಠಾಣ್ ವಿರುದ್ಧ ಭರತ್ ಬೊಮ್ಮಾಯಿ 13,448 ಮತಗಳ ಅಂತರದಲ್ಲಿ ಸೋಲೊಪ್ಪಿಕೊಂಡಿದ್ದಾರೆ. ಯಾಸೀರ್ ಪಠಾಣ್ 1,00,756 ಮತಗಳನ್ನು ಪಡೆದುಕೊಂಡರೆ, ಭರತ್ ಬೊಮ್ಮಾಯಿ 87,308 ಮತಗಳನ್ನು ಗಳಿಸಿದ್ದಾರೆ. ಇನ್ನು, ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ವಿರುದ್ಧ ನಿಖಿಲ್ ಕುಮಾರಸ್ವಾಮಿ 25,413 ಮತಗಳಿಂದ ಸೋಲನುಭವಿಸಿದ್ದಾರೆ. ಸಿ.ಪಿ.ಯೋಗೇಶ್ವರ್ 1,12,642 ಮತಗಳನ್ನು ಪಡೆದರೆ, ನಿಖಿಲ್ ಕುಮಾರಸ್ವಾಮಿ 87,229 ಮತಗಳನ್ನು ಪಡೆದುಕೊಂಡಿದ್ದಾರೆ.