Feb 11, 2022, 4:22 PM IST
ಚಿತ್ರದುರ್ಗ (ಫೆ. 11): ಸಣ್ಣ ಹಾಗೂ ಅತಿ ಸಣ್ಣರೈತರು ಅವರ ಜಮೀನನ್ನು ನೀರಾವರಿ ಮಾಡಿಕೊಂಡು ಆರ್ಥಿಕವಾಗಿ ಸಶಕ್ತರಾಗಲೆಂದು ಸರ್ಕಾರ ಉಚಿತ ಗಂಗಾಕಲ್ಯಾಣ ಯೋಜನೆಯನ್ನು ಜಾರಿಗೊಳಿಸಿದೆ. ಆದ್ರೆ ಕೃಷಿ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ಅಧಿಕಾರಿಗಳ ಎಡವಟ್ಟಿನಿಂದಾಗಿ ಅನ್ನದಾತರಿಗೆ ಯೋಜನೆಯ ಸಾಮಾಗ್ರಿಗಳು ಸಿಗಲಾರದೇ ಕಚೇರಿಗೆ ಪದೇ ಪದೇ ಅಲೆದಾಡುವಂತಾಗಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಸೊಂಡೆಕೆರೆ ಗ್ರಾಮದ ರೈತ ನಿಂಗಪ್ಪ 2018 ರಲ್ಲಿ ಗಂಗಾಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸಿದ್ದಾರೆ. ಆದ್ರೆ ಈವರೆಗೆ ರೈತನ ಜಮೀನಿಗೆ ಪೈಪ್ ಗಳನ್ನು ಪೂರೈಸದೇ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಅಲ್ಲದೇ ಕೇವಲ ಮೋಟರ್ ಹಾಗೂ ಪಂಪನ್ನು ಕೊಟ್ಟು ಕೈತೊಳೆದುಕೊಂಡಿದ್ದಾರೆ. ಸರ್ಕಾರ ನೀಡಿದ್ದ 2 ಲಕ್ಷ ರೂಪಾಯಿ ಹಣಕ್ಕೆ ಬರುವ ಎಲ್ಲಾ ಸಾಮಾಗ್ರಿಗಳನ್ನು ನಿಮಗೆ ನೀಡಲಾಗಿದೆ ಅಂತ ವಂಚಿಸಿದ್ದಾರೆ. ಹೀಗಾಗಿ ಆಕ್ರೋಶಗೊಂಡಿರೋ ರೈತ ಸರ್ಕಾರ ಉಚಿತವಾಗಿ ಕೊಡುವ ಯೋಜನೆಯಲ್ಲೂ ಯಾಕೆ ಗೋಲ್ಮಾಲ್ ಮಾಡ್ತೀರ ಅಂತ ಕಿಡಿ ಕಾರಿದ್ದಾರೆ. ನಮಗೆ ಬರುವ ಪೈಪ್ ಗಳನ್ನು ಆಂಧ್ರಪ್ರದೇಶಕ್ಕೆ ಕಾಳಸಂತೆಯಲ್ಲಿ ಮಾರಾಟ ಮಾಡ್ತೀರಾ!. ಆದರೆ ನಮಗೆ ಮಾತ್ರ ಕೊಡಲ್ಲವೆಂದು ಆರೋಪಿದ್ದಾರೆ. ಹೀಗಾಗಿ ಸರ್ಕಾರ ಉಚಿತವಾಗಿ ಕೊಟ್ಟಿರೋ ಪೈಪ್ ಗಳ ವಿಚಾರದಲ್ಲಿ ಕೋಟೆನಾಡಿನ ರೈತರ ಪಾಡು ದೇವರು ಕೊಟ್ರೂ ಪೂಜಾರಿ ವರ ಕೊಡ್ತಿಲ್ಲ ಎಂಬಂತಾಗಿದೆ.
Chitradurga: ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ, ನೀರು ಹಂಚಿಕೆ ವಿಚಾರದಲ್ಲಿ ಆಂಧ್ರ ಕ್ಯಾತೆ
ಇನ್ನೂ ಈ ರೈತನ ಗೋಳಾಟ ನೋಡಿದ ಮೇಲೆ ನಿನ್ನೆ ಜಿಲ್ಲೆಗೆ ಆಗಮಿಸಿದ್ದ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ್ ಸಾಹೇಬರನ್ನು ಕೇಳಿದ್ರೆ ಅವರು ಸಹ ಅಧಿಕಾರಿಗಳ ಪರ ಬ್ಯಾಟ್ ಬೀಸಿದ್ದಾರೆ. ಕೊಳವೆ ಬಾವಿಯನ್ನು ಹೆಚ್ಚು ಆಳವಾಗಿ ಕೊರೆಸಿದಾಗ ಇಂತಹ ಸಮಸ್ಯೆ ಸರ್ವೆ ಸಾಮಾನ್ಯ ಅಂತ ನಿರ್ಲಕ್ಷ್ಯ ತೋರಿದ್ದಾರೆ. ಆದ್ರೆ ರೈತನ ಪುಣ್ಯ ಎಂಬಂತೆ ಹೊಸದಾಗಿ ಬಂದಿರೋ ಬಿಸಿಎಂ ಇಲಾಖೆ ಅಧಿಕಾರಿ ವೆಂಕಟರಾಜ್ ಮಾತ್ರ, ಕಡು ಬಡವರಾದ ಈ ರೈತನಿಗೆ ಅನ್ಯಾಯವಾಗದಂತೆ ಅಗತ್ಯ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸೋದಾಗಿ ಭರವಸೆ ನೀಡಿದ್ದಾರೆ.
ಒಟ್ಟಾರೆ ಕೃಷಿ ಸಚಿವರ ಉಸ್ತುವಾರಿಯ ಜಿಲ್ಲೆಯಲ್ಲೇ ಅನ್ನದಾತರು ಗಂಗಾಕಲ್ಯಾಣ ಯೋಜನೆಯಡಿ ಉಚಿತ ಸಾಮಾಗ್ರಿಗಳು ಸಿಗಲಾರದೇ ಪರದಾಡ್ತಿದ್ದಾರೆ. ಆದ್ರೆ ಇದನ್ನ ಪರಿಶೀಲಿಸಿ ಫಲಾನುಭವಿಗಳಿಗೆ ಯೋಜನೆ ತಲುಪಿಸಬೇಕಾದ ಸಚಿವರೇ ಅಧಿಕಾರಿಗಳ ಪರ ಬ್ಯಾಟ್ ಬೀಸಿರೋದು ವಿಪರ್ಯಾಸ. ಇನ್ನಾದ್ರು ಸಂಕಷ್ಟದಲ್ಲಿರೋ ಸಣ್ಣ ರೈತನಿಗೆ ನ್ಯಾಯ ಸಿಗಲಿ.