ಟೋಕಿಯೋ 2020: ಬಡತನ, ಅವಮಾನ ಮೀರಿ ಹಾಕಿ ತಾರೆಯರಾದ 16 ಸಾಧಕಿಯರು!

By Kannadaprabha NewsFirst Published Aug 7, 2021, 3:06 PM IST
Highlights

* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರಿದ ಮಹಿಳಾ ಹಾಕಿ ತಂಡ

* 16 ಭಾರತೀಯ ಹಾಕಿ ಆಟಗಾರ್ತಿಯರದ್ದೂ ಒಂದೊಂದು ಕಥೆ

* ಭಾರತೀಯ ಆಟಗಾರ್ತಿಯರು ಬಡತನ, ಅವಮಾನ ಮೀರಿ ತಾರೆಯರಾಗಿದ್ದಾರೆ.

ಟೋಕಿಯೋ(ಆ.07): ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಸನಿಹಕ್ಕೆ ಬಂದ ಭಾರತ ಮಹಿಳಾ ಹಾಕಿ ತಂಡದ ಆಟಗಾರ್ತಿಯರು ರಾತ್ರೋರಾತ್ರಿ ಕ್ರೀಡಾಪಟುಗಳಾದವರಲ್ಲ. ತಂಡದಲ್ಲಿರುವ ಎಲ್ಲಾ 16 ಆಟಗಾರ್ತಿಯರು ತಮ್ಮ ಜೀವನದುದ್ದಕ್ಕೂ ಬಡತನ, ಅವಮಾನ, ಸಂಕಷ್ಟಗಳನ್ನು ಎದುರಿಸಿ ಮೇಲೆ ಬಂದವರು. 2012ರ ವರೆಗೂ ಆಟಗಾರ್ತಿಯರು ಸರ್ಕಾರಿ ನೌಕರಿ, ಕ್ವಾಟ್ರಸ್‌ಗಾಗಿ ಅಷ್ಟೇ ಹಾಕಿಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. 2012ರ ನಂತರವೇ ಮಹಿಳಾ ಹಾಕಿಗೆ ಮಹತ್ವ ಸಿಕ್ಕಿದ್ದು.

2012ರಲ್ಲಿ ಆಸ್ಪ್ರೇಲಿಯಾದ ನೀಲ್‌ ಹೌಗುಡ್‌ ಕೋಚ್‌ ಆಗಿ ತಂಡ ಸೇರಿದರು. ಆ ವೇಳೆ ಒಂದು ತಂಡವಾಗಿ ಗೆಲ್ಲಲು ಆಡಬೇಕು ಎನ್ನುವ ಮನಸ್ಥಿತಿಗೆ ಆಟಗಾರ್ತಿಯರನ್ನು ತರಲು ಬಹಳ ಕಷ್ಟಪಡಬೇಕಾಯಿತು. ಅಲ್ಲದೇ ದೀಕ್‌ ಗ್ರೇಸ್‌, ಸುನಿತಾ ಲಾಕ್ರಾ ಸೇರಿ ಎಷ್ಟೋ ಆಟಗಾರ್ತಿಯರು ಅವರ ಮುಖ ನೋಡಿ ಮಾತನಾಡುವುದಕ್ಕೇ 2 ವರ್ಷವಾಗಿತ್ತಂತೆ. ಹೌಗುಡ್‌ ಅವರ ಮಾರ್ಗದರ್ಶನದಲ್ಲಿ ಭಾರತ ಮಹಿಳಾ ತಂಡ 36 ವರ್ಷಗಳ ಬಳಿಕ 2016ರಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿತ್ತು.

ಭಾರತ ಹಾಕಿ ತಂಡದ ಯಶಸ್ಸಿನ ಹಿಂದಿದೆ ಕೋಚ್‌ ಮರಿನೆ, ಲೊಂಬಾರ್ಡ್‌ ಶ್ರಮ..!

ರಾಣಿ ರಾಂಪಾಲ್‌: ರಾಣಿ ಹಾಕಿಗೆ ಕಾಲಿಡುವುದು ಅಷ್ಟು ಸುಲಭವಾಗಿರಲಿಲ್ಲ. ಚಿಕ್ಕ ಸ್ಕರ್ಟ್‌ ಹಾಕಿಕೊಂಡು ಮೈದಾನದಲ್ಲಿ ಓಡಾಡುವುದರಿಂದ ಕುಟುಂಬಕ್ಕೆ ಕೆಟ್ಟ ಹೆಸರು ಬರಲಿದೆ ಎಂದು ಅನೇಕರು ಅವರ ಪೋಷಕರಿಗೆ ಹೆದರಿಸಿದ್ದರು.

ವಂದನಾ ಕಟಾರಿಯಾ: ಹುಡುಗಿಯರು ಹಾಕಿ ಆಡಬಾರದು. ಮನೆ ಕೆಲಸದಲ್ಲಿ ತೊಡಿಗಿಸಿಕೊಳ್ಳಬೇಕು ಎಂದು ವಂದನಾಗೆ ಕುಟುಂಬದವರಿಂದಲೇ ಪ್ರೋತ್ಸಾಹ ಸಿಕ್ಕಿರಲಿಲ್ಲ.

ನೇಹಾ ಗೋಯಲ್‌: ನೇಹಾ ಅವರ ತಂದೆ ಕುಡಿತದ ಚಟಕ್ಕೆ ಬಿದ್ದಿದ್ದರು. ಅಲ್ಲದೇ ಮಗಳ ಮೇಲೆ ಕೈ ಮಾಡುತ್ತಿದ್ದರು. ಹೀಗಾಗಿ ನೇಹಾ ಹಾಕಿ ಫೀಲ್ಡ್‌ನಲ್ಲೇ ಹೆಚ್ಚು ಸಮಯ ಕಳೆಯಬೇಕಾಯಿತು.

ನಿಶಾ: ನಿಶಾ ವಾರ್ಸಿ ಅವರ ತಾಯಿ ಸಣ್ಣ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿ ಮಗಳನ್ನು ಹಾಕಿಗೆ ಸೇರಿಸಿದರು. 2015ರಲ್ಲಿ ತಂದೆ ಪಾರ್ಶವಾಯುಗೆ ತುತ್ತಾದ ಮೇಲೆ ನಿಶಾ ಕೂಡ ಕುಟುಂಬದ ಜವಾಬ್ದಾರಿ ಹೊತ್ತಿದ್ದಾರೆ.

ನಿಕ್ಕಿ ಪ್ರಧಾನ್‌: ಜಾರ್ಖಂಡ್‌ನ ಕುಗ್ರಾಮದಲ್ಲಿ ಭತ್ತದ ಗದ್ದೆಗಳಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ನಿಕ್ಕಿ ಪ್ರಧಾನ್‌, ಮುರಿದುಹೋದ ಹಾಕಿ ಸ್ಟಿಕ್‌ಗಳಲ್ಲಿ ಜಲ್ಲಿ ಕಲ್ಲಿನ ಮೈದಾನಗಳಲ್ಲಿ ಅಭ್ಯಾಸ ನಡೆಸುತ್ತಿದ್ದರು.
 

click me!