ಇದೇ ಡಿ.26(ಗುರುವಾರ) ಅಪರೂಪದ ಕಂಕಣ ಸೂರ್ಯಗ್ರಹಣ| ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ಸನ್ನದ್ಧಗೊಂಡ ಜವಾಹರಲಾಲ್ ನೆಹರೂ ತಾರಾಯಲಯ| ಸುವರ್ಣನ್ಯೂಸ್.ಕಾಂ ಜೊತೆ ನೆಹರೂ ತಾರಾಯಲಯದ ಮುಖ್ಯಸ್ಥರ ಸಂವಾದ| ಕಂಕಂ ಸೂರ್ಯಗ್ರಹಣದ ಸಿದ್ಧತೆ ಕುರಿತು ಮಾಹಿತಿ ನೀಡಿದ ಡಾ. ಪ್ರಮೋದ್ ಗಲಗಲಿ| ಭವಿಷ್ಯದ ಭಾರತದಲ್ಲಿ ವಿಜ್ಞಾನಕ್ಕೆ ಹೆಚ್ಚಿನ ಮನ್ನಣೆ ಸಿಗಲಿದೆ ಎಂದ ಡಾ. ಗಲಗಲಿ| 'ಸತ್ಯಾನ್ವೇಷಣೆಯ ಹಾದಿಯಲ್ಲಿ ನಂಬಿಕೆ, ವಿಜ್ಞಾನದ ನಡುವಿನ ಸಂಘರ್ಷ ಅನಿವಾರ್ಯ'| 'ಭಾರತದ ಯುವ ಸಮುದಾಯ ವಿಜ್ಞಾನದೆಡೆ ಹೆಚ್ಚು ಆಕರ್ಷಿತವಾಗುತ್ತಿದೆ'| ಖಗೋಳ ಕ್ಷೇತ್ರದಲ್ಲಿ ಭಾರತ ಗೆಲುವಿನ ಹೊಸ ಶಕೆಯನ್ನು ಆರಂಭಿಸಲಿದೆ ಎಂದ ಡಾ. ಪ್ರಮೋದ್|
ಬೆಂಗಳೂರು(ಡಿ.18): ಇದೇ ಡಿ.26(ಗುರುವಾರ) ಅಪರೂಪದ ಕಂಕಣ ಸೂರ್ಯಗ್ರಹಣ ಸಂಭವಿಸಲಿದ್ದು, ಖಗೋಳಪ್ರಿಯರ ಹುಮ್ಮಸ್ಸಿಗೆ ಎಣೆ ಇಲ್ಲದಂತಾಗಿದೆ. ಈ ಅಪರೂಪದ ಖಗೋಳೀಯ ವಿದ್ಯಮಾನವನ್ನು ಕಣ್ತುಂಬಿಕೊಳ್ಳಲು ನಗರದ ಜವಾಹರಲಾಲ್ ನೆಹರೂ ತಾರಲಯ ಸರ್ವ ಸನ್ನದ್ಧವಾಗಿದೆ.
ಈ ಹಿನ್ನೆಲೆಯಲ್ಲಿ ಕಂಕಣ ಸೂರ್ಯಗ್ರಹಣ ಮತ್ತು ಅದರ ವೀಕ್ಷಣೆಯ ಸಿದ್ಧತೆ ಕುರಿತು ಜವಾಹರಲಾಲ್ ನೆಹರೂ ತಾರಾಲಯದ ಮುಖ್ಯಸ್ಥ ಡಾ. ಪ್ರಮೋದ್ ಗಲಗಲಿ ನಿಮ್ಮ ಸುವರ್ಣನ್ಯೂಸ್.ಕಾಂ ಜೊತೆ ಮಾತನಾಡಿದ್ದು, ಕಂಕಣ ಸೂರ್ಯಗ್ರಹಣದ ವೀಕ್ಷಣೆಗೆ ತಾರಾಲಯಕ್ಕೆ ನರುವಂತೆ ಜನತೆಗೆ ಕರೆ ನೀಡಿದ್ದಾರೆ.
undefined
ಸೂರ್ಯನಿಂದ ಬದುಕು: ಕಂಕಣ ಸೂರ್ಯಗ್ರಹಣ ನೋಡಲು ನೀವು ಬರಬೇಕು
ಈ ಮಧ್ಯೆ ಸುವರ್ಣನ್ಯೂಸ್.ಕಾಂ ಜೊತೆ ಆಧುನಿಕ ವಿಜ್ಞಾನದ ಪಸರಿಸುವಿಕೆ ಹಾಗೂ ಸಮಾಜ ಅದನ್ನು ಸ್ವೀಕರಿಸುವ ರೀತಿಯ ಕುರಿತು ಮಾತನಾಡಿರುವ ಡಾ. ಪ್ರಮೋದ್ ಗಲಗಲಿ, ವಿಜ್ಞಾನದ ವಿಸ್ತಾರಕ್ಕೆ ಸಮಾಜದ ಸ್ಪಂದನೆ ಸಕಾರಾತ್ಮಕವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚಿಗೆ ನಾಸಾದ ಮಾಜಿ ಮುಖ್ಯಸ್ಥ ಮೆ.ಜ. ಚಾರ್ಲ್ಸ್ ಬೋರ್ಡನ್ ಅವರ ತಾರಾಲಯ ಭೇಟಿ, ಇಸ್ರೋದ ವಿಕ್ರಮ್ ಲ್ಯಾಂಡರ್ ಪತ್ತೆ, ಭಾರತದ ವಿಜ್ಞಾನ ಕ್ಷೇತ್ರದ ವಿಸ್ತಾರ ಮುಂತಾದ ವಿಷಯಗಳ ಕುರಿತು ಡಾ. ಗಲಗಲಿ ಸುವಿಸ್ತಾರವಾಗಿ ಮಾತನಾಡಿದ್ದಾರೆ.
ಡಾ. ಪ್ರಮೋದ್ ಗಲಗಲಿ ಅವರ ಜೊತೆಗಿನ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.
ಪ್ರಶ್ನೆ: ನಾಸಾದ ಮಾಜಿ ಮುಖ್ಯಸ್ಥರ ಭೇಟಿ ಬಳಿಕ ತಾರಾಲಯದ ಹುಮ್ಮಸ್ಸು ಹೇಗಿದೆ?
ಉತ್ತರ: ಕೇವಲ ನಾಸಾ ಮಾಜಿ ಮುಖ್ಯಸ್ಥರ ಭೇಟಿಯಷ್ಟೇ ಅಲ್ಲ, ತಾರಾಯಲಕ್ಕೆ ಖಗೋಳ ಕ್ಷೇತ್ರದ ಹಲವು ಮಹನೀಯರು ಭೇಟಿ ನೀಡಿದ್ದಾರೆ. ಇಸ್ರೋಧ ಅನೇಕ ಹಿರಿಯ ವಿಜ್ಞಾನಿಗಳು ತಾರಾಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಇಂತಹ ಯಶಸ್ವಿ ಸಂವಾದಲ್ಲಿ ಮೆ.ಜ. ಚಾರ್ಲ್ಸ್ ಬೋರ್ಡನ್ ಭೇಟಿಯೂ ಒಂದು ಎಂದು ಹೇಳಬಹುದು.
ಪ್ರಶ್ನೆ: ವಿಕ್ರಮ್ ಲ್ಯಾಂಡರ್ ಪತ್ತೆಯಲ್ಲಿ ನಾಸಾದ ಪಾತ್ರ?
ಉತ್ತರ: ಖಂಡಿತವಾಗಿಯೂ ಮಹತ್ವದ್ದು. ಚಂದ್ರನ ದಕ್ಷಿಣ ದ್ರುವದಲ್ಲಿ ಕಣ್ಮರೆಯಾಗಿದ್ದ ವಿಕ್ರಮ್ ಲ್ಯಾಂಡರ್ ಪತ್ತೆಯಾಗಿರುವುದು ನಿಜಕ್ಕೂ ಸಂತಸದ ವಿಷಯ. ಜಾಗರತಿಕ ಖಗೋಳ ಸಂಸ್ಥೆಗಳು ಪರಸ್ಪರ ಕೈಜೋಡಿಸುವ ಪರಂಪರೆ ಹಿಂದಿನಿಂದಲೂ ಇದ್ದು, ಇದು ಖಗೋಳ ಅನ್ವೇಷಣೆಗಳಿಗೆ ಸಹಾಯಕಾರಿ.
ಪ್ರಶ್ನೆ: ಇಸ್ರೋದ ಭವಿಷ್ಯದ ಖಗೋಳ ಸಾಹಸಗಳ ಕುರಿತು ನಿಮ್ಮ ಅನಿಸಿಕೆ?
ಉತ್ತರ: ಭಾರತದ ಹೆಮ್ಮೆಯ ಇಸ್ರೋ ಸಂಸ್ಥೆ ಈಗಾಗಲೇ ಹಲವು ಮೈಲುಗಳನ್ನು ಸಾಧಿಸಿದೆ. ಹಲವು ಖಗೋಳ ಯಾತ್ರೆಗಳ ಮೂಲಕ ಭಾರತದ ಹೆಸರನ್ನು ಉತ್ತುಂಗಕ್ಕೆ ಕೊಂಡೊಯ್ದಿರುವ ಸಂಸ್ಥೆ, ಭವಿಷ್ಯದಲ್ಲೂ ಭಾರತ ಹೆಮ್ಮೆಪಡುವಂತ ಸಾಧನೆಗಳನ್ನು ಮಾಡಲಿದೆ. ಚಂದ್ರಯಾನ-3 ಸೇರಿದಂತೆ ಭವಿಷ್ಯದ ಇಸ್ರೋ ಯೋಜನೆಗಳು ಖಂಡಿತ ಯಶಸ್ವಿಯಾಗಲಿವೆ ಎಂಬುದು ನನ್ನ ಅಭಿಪ್ರಾಯ.
ಪ್ರಶ್ನೆ: ಭಾರತದಲ್ಲಿ ವಿಜ್ಞಾನದ ವಿಸ್ತಾರ ಹಾಗೂ ಸಾಮಾಜಿಕ ತಿಳುವಳಿಕೆ ನಡುವಿನ ಸಂಘರ್ಷ
ಉತ್ತರ: ನಂಬಿಕೆ ಮತ್ತು ವಿಜ್ಞಾನದ ನಡುವಿನ ಸಂಘರ್ಷಕ್ಕೆ ಶತಮಾನಗಳ ಇತಿಹಾಸವೇ ಇದೆ. ಮಾನವನ ಜ್ಞಾನ ವಿಸ್ತಾರಗೊಂಡಂತೇ ಆತ ತನ್ನ ಅಸ್ತಿತ್ವದ ಕುರಿತು ಪ್ರಶ್ನಿಸುತ್ತಲೇ ಇದ್ದಾನೆ. ಸತ್ಯಾನ್ವೇಷಣೆಯ ಎರಡು ಭಿನ್ನ ಸಿದ್ಧಾಂತಗಳಲ್ಲಿ ಭಿನ್ನಾಭಿಪ್ರಾಯ ಸಹಜವಾದರೂ, ಕೆಲವು ಬಾರಿ ಪೂರಕವಾಗಿಯೂ ಕೆಲಸ ಮಾಡುತ್ತದೆ. ಅದರಂತೆ ಭಾರತದಲ್ಲಿ ವಿಜ್ಞಾನದ ಅರಿವು ಪುರಾತನವಾದದು. ಈಗ ಆಧುನಿಕ ಭಾರತದಲ್ಲಿ ವಿಜ್ಞಾನಕ್ಕೆ ಮತ್ತಷ್ಟು ಮಹತ್ವ ದೊರೆತಿದ್ದು, ಯುವ ಸಮುದಾಯ ವಿಜ್ಞಾನದೆಡೆ ಹೆಚ್ಚು ಆಕರ್ಷಿತವಾಗುತ್ತಿದೆ.
ಶತಶತಮಾನಗಳ ನಂಬಿಕೆಗಳಿಗೆ ಗೌರವ ಕೊಡುವ ಮೂಲಕ ವಿಜ್ಞಾನ ಭಾರತದಲ್ಲಿ ತನ್ನ ವಿಸ್ತರಣೆ ಮುಂದುವರೆಸಿದೆ. ತಂತ್ರಜ್ಞಾನ ಬೆಳೆದಂತೆಲ್ಲಾ ಜನಸಮುದಾಯ ಕೂಡ ವಿಜ್ಞಾನದೆಡೆಗೆ ಹೆಜ್ಜೆ ಹಾಕುತ್ತಿದೆ. ಭವಿಷ್ಯದಲ್ಲಿ ಭಾರತ ಮತ್ತಷ್ಟು ವಿಸ್ತಾರವಾಗಿ ವಿಜ್ಞಾನ ಕ್ಷೇತ್ರಕ್ಕೆ ತನ್ನನ್ನು ತೆರೆದುಕೊಳ್ಳಲಿದ್ದು, ಖಗೋಳ ಕ್ಷೇತ್ರದಲ್ಲಿ ಭಾರತ ಗೆಲುವಿನ ಹೊಸ ಶಕೆಯನ್ನು ಆರಂಭಿಸಲಿದೆ ಎಂಬುದು ನನ್ನ ದೃಢವಾದ ನಂಬಿಕೆ.
ಧನ್ಯವಾದಗಳು....