ಲಾಂಚ್‌ಅನ್ನು ಬರೀ 4 ಸೆಕೆಂಡ್‌ ವಿಳಂಬ ಮಾಡೋ ಮೂಲಕ ಚಂದ್ರಯಾನ-3 ಯೋಜನೆಯನ್ನ ರಕ್ಷಣೆ ಮಾಡಿತ್ತು ಇಸ್ರೋ!

By Santosh NaikFirst Published Apr 29, 2024, 6:14 PM IST
Highlights


ನಿಖರ ಹಾಗೂ ಅಷ್ಟೇ ಉತ್ಕಷ್ಟ ಬಾಹ್ಯಾಕಾಶ ನಿರ್ವಹಣೆಯಿಂದಾಗಿಯೇ ಇಸ್ರೋ ಚಂದ್ರಯಾನ -3 ಮತ್ತು ಬಾಹ್ಯಾಕಾಶ ಅವಶೇಷಗಳ ನಡುವಿನ ಸಂಭಾವ್ಯ ಘರ್ಷಣೆಯನ್ನು ತಪ್ಪಿಸಿತ್ತು ಎನ್ನುವ ಮಾಹಿತಿ ಬಂದಿದೆ.
 

ನವದೆಹಲಿ (ಏ.29): ಚಂದ್ರನ ಮೇಲೆ ಇಳಿದ ಭಾರತದ ಐತಿಹಾಸಿಕ ಮಿಷನ್ ಚಂದ್ರಯಾನ-3, ಚಂದ್ರನನ್ನು ತಲುಪುವ ಮೊದಲೇ ಬಾಹ್ಯಾಕಾಶದಲ್ಲಿ ಕಳೆದುಹೋಗುವ ಅಪಾಯ ಎದುರಿಸಿತ್ತು.ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜುಲೈ 2023 ರಲ್ಲಿ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳುವ ಮೊದಲೇ ಈ ಯೋಜನೆಯನ್ನು ಹೇಗೆ ರಕ್ಷಣೆ ಮಾಡಿತ್ತು ಅನ್ನೋದನ್ನ ಬಹಿರಂಗ ಮಾಡಿದೆ.  ನಿಖರ ಹಾಗೂ ಅಷ್ಟೇ ಉತ್ಕಷ್ಟ ಬಾಹ್ಯಾಕಾಶ ನಿರ್ವಹಣೆಯಿಂದಾಗಿಯೇ ಇಸ್ರೋ ಚಂದ್ರಯಾನ -3 ಮತ್ತು ಬಾಹ್ಯಾಕಾಶ ಅವಶೇಷಗಳ ನಡುವಿನ ಸಂಭಾವ್ಯ ಘರ್ಷಣೆಯನ್ನು ತಪ್ಪಿಸಿತ್ತು ಎನ್ನುವ ಮಾಹಿತಿ ಬಂದಿದೆ.

ಏನಾಗಿತ್ತು?: ಭಾರತದ ಮಹತ್ವಾಕಾಂಕ್ಷೆಯ ಚಂದ್ರನ ಪರಿಶೋಧನಾ ಕಾರ್ಯಕ್ರಮದ ಭಾಗವಾಗಿದ್ದ ಚಂದ್ರಯಾನ-3 ಅನ್ನು 2023ರ ಜುಲೈ 14 ರಂದು ಉಡಾವಣೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಉಡಾವಣೆಗೆ ಇನ್ನೇನು ಕೆಲವೇ ನಿಮಷ ಇರುವಾಗ ಇಸ್ರೋದ ನಿಖರವಾದ ಮೇಲ್ವಿಚಾರಣಾ ವ್ಯವಸ್ಥೆಗಳು ಚಂದ್ರಯಾನ-3 ಪಥದಲ್ಲಿರುವ ಸಂಭಾವ್ಯ ಅಪಾಯವನ್ನು ಪತ್ತೆ ಮಾಡಿದ್ದವು. ನಿರ್ಣಾಯಕ ಆರಂಭಿಕ ಕಕ್ಷೆಯ ಹಂತದಲ್ಲಿ ಚಂದ್ರಯಾನ-3 ರ ಮಾರ್ಗದಲ್ಲಿ ಬಾಹ್ಯಾಕಾಶ ಅವಶೇಷಗಳ ತುಂಡು ಇರೋದನ್ನು ಇಸ್ರೋ ಪತ್ತೆ ಮಾಡಿತ್ತು.  ಈ ಹಿಂದಿನ ಬಾಹ್ಯಾಕಾಶ ಕಾರ್ಯಾಚರಣೆಗೆ ಅವಶೇಷಗಳು ಇದಾಇದ್ದವು. ಬಾಹ್ಯಾಕಾಶದಲ್ಲಿ ನೌಕೆಗಳು ಹೆಚ್ಚಿನ ವೇಗದಲ್ಲಿ ಪ್ರಯಾಣ ಮಾಡುವ ಕಾರಣ, ಒಂದು ಸಣ್ಣ ತುಂಡು ಕೂಡ ನೌಕೆಗೆ ದೊಡ್ಡ ಮಟ್ಟದ ಅಪಾಯವನ್ನುಂಟು ಮಾಡುತ್ತಿತ್ತು.

ಆದರೆ, ಕ್ಷಿಪ್ರವಾಗಿ ಕಾರ್ಯನಿರ್ವಹಿಸಿದ ಇಸ್ರೋದ ಮಿಷನ್‌ ಕಂಟ್ರೋಲ್‌ ಟೀಮ್‌, ಚಂದ್ರಯಾನ-3 ಲಾಂಚ್‌ಅನ್ನು ನಾಲ್ಕು ಸೆಕೆಂಡ್‌ನ ಕಾಲ ವಿಳಂಬ ಮಾಡಲು ನಿರ್ಧಾರ ಮಾಡಿತು. ಭೂಮಿಯ ಮೇಲೆ ನಾಲ್ಕು ಸೆಕೆಂಡ್‌ ಏನು ಮಹಾ ಬದಲಾವಣೆ ಅನಿಸೋದಿಲ್ಲವಾದರೂ, ಬಾಹ್ಯಾಕಾಶದಲ್ಲಿ ಇದು ಏನು ಬೇಕಾದರೂ ಆಗಬಹುದಾದ ಸಮಯ. ಆದರೆ, ಈ ನಾಲ್ಕು ಸೆಕೆಂಡ್‌ನ ವಿಳಂಬ ಬಾಹ್ಯಾಕಾಶ ನೌಕೆಯ ಪಥವನ್ನು ಸರಿಹೊಂದಿಸುವಲ್ಲಿ ಪ್ರಮುಖವಾಗಿದ್ದವು ಮತ್ತು ವಿನಾಶಕಾರಿ ಘರ್ಷಣೆಯನ್ನು ತಪ್ಪಿಸಲು ಸಾಕಾಗಿತ್ತು. ಈ ನಿರ್ಧಾರವು ಇಸ್ರೋದ ಸ್ಟ್ಯಾಂಡರ್ಡ್ ಲಾಂಚ್ ಕ್ಲಿಯರೆನ್ಸ್ ಪ್ರೋಟೋಕಾಲ್‌ನ ಭಾಗವಾಗಿ ವಿವರವಾದ ಘರ್ಷಣೆ ತಪ್ಪಿಸುವಿಕೆ ವಿಶ್ಲೇಷಣೆ (COLA) ಅನ್ನು ಆಧರಿಸಿದೆ.

ಅಡ್ಜಸ್ಟ್‌ಮೆಂಟ್‌ಅನ್ನು ಯಶಸ್ವಿಯಾಗಿ ಮಾಡಿದ್ದರಿಂದ ಚಂದ್ರಯಾನ-3 ಘರ್ಷಣೆಯ ಅಪಾಯವಿಲ್ಲದೆ ಚಂದ್ರನತ್ತ ತನ್ನ ಪ್ರಯಾಣವನ್ನು ಮುಂದುವರಿಸುವುದು ಖಚಿತವಾಗಿತ್ತು. ಈ ಘಟನೆಯು ಬಾಹ್ಯಾಕಾಶ ಕಸಗಳಿಂದ ಆಗುವ ಸವಾಲುಗಳನ್ನು ತೋರಿಸುವುದು ಮಾತ್ರವಲ್ಲದೆ, ಈ ಸವಾಲುಗಳನ್ನು ನ್ಯಾವಿಗೇಟ್ ಮಾಡುವಲ್ಲಿ ಇಸ್ರೋದ ಸಾಮರ್ಥ್ಯಗಳನ್ನು ತೋರಿಸುತ್ತದೆ.

ಗಗನಯಾನ ಯೋಜನೆಯ ಪ್ರಮುಖ ಪ್ಯಾರಾಶೂಟ್ ಸುರಕ್ಷತಾ ಪರೀಕ್ಷೆಗೆ ಸಿದ್ಧವಾದ ಇಸ್ರೋ

2023 ರ ಬಾಹ್ಯಾಕಾಶ ಪರಿಸ್ಥಿತಿಯ ಮೌಲ್ಯಮಾಪನ ವರದಿ (ISSAR) ಮೂಲಕ, ISRO ತನ್ನ ಬಾಹ್ಯಾಕಾಶ ಆಸ್ತಿಗಳ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಸುಧಾರಿತ ತಂತ್ರಜ್ಞಾನಗಳು ಮತ್ತು ಕಾರ್ಯತಂತ್ರದ ಯೋಜನೆಯನ್ನು ಬಳಸಿಕೊಳ್ಳುವಲ್ಲಿ ತನ್ನ ಕೌಶಲ್ಯವನ್ನು ಬಹಿರಂಗಪಡಿಸಿದೆ. ಇಸ್ರೋ ತನ್ನ ಇತ್ತೀಚಿನ ವರದಿಯಲ್ಲಿ ಉಪಗ್ರಹಗಳನ್ನು ರಕ್ಷಿಸಲು 23 ಘರ್ಷಣೆ ತಪ್ಪಿಸುವ ಕಾರ್ಯಾಚರಣೆಗಳನ್ನು ನಡೆಸಿದೆ ಎಂದು ಬಹಿರಂಗಪಡಿಸಿದೆ. ಹಾಗಿದ್ದರೂ ಚಂದ್ರಯಾನ-3 ಮತ್ತು ಆದಿತ್ಯ-L1 ನಂತಹ ಉನ್ನತ-ಪ್ರೊಫೈಲ್ ಮಿಷನ್‌ಗಳು ಬಾಹ್ಯಾಕಾಶದಲ್ಲಿದ್ದಾಗ ಯಾವುದೇ ನಿರ್ದಿಷ್ಟ ಕಾರ್ಯತಂತ್ರಗಳು ನಡೆದಿರಲಿಲ್ಲ.

ಬಾಹ್ಯಾಕಾಶದಿಂದ ಹಿಮಾಲಯದ ಹಿಮ ಸರೋವರಗಳ ಮೇಲೆ ಕಣ್ಣಿಟ್ಟ ಇಸ್ರೋ!

click me!