*ಕಬ್ಬು, ಮೆಕ್ಕಜೋಳ, ಭತ್ತ ಬಳಸಿ ಎಥೆನಾಲ್ ಉತ್ಪಾದನೆಗೆ ಕ್ರಮ:
*ಉ.ಪ್ರದೇಶ, ಮ.ಪ್ರದೇಶ, ಮಹಾರಾಷ್ಟ್ರದಲ್ಲಿ ರಾಜ್ಯದ ತಜ್ಞರ ಅಧ್ಯಯನ
*ಈ ಸಂಬಂಧ ಮುಂದಿನ ವಾರ ಕೇಂದ್ರ ಸಚಿವರ ಜತೆ ದೆಹಲಿಯಲ್ಲಿ ಚರ್ಚೆ
*ಸರ್ಕಾರವೇ ಎಥೆನಾಲ್ ಖರೀದಿಸಿ ಪೆಟ್ರೋಲಿಯಂ ಕಂಪನಿಗಳಿಗೆ ಮಾರಾಟ
ಉಡುಪಿ (ಜ. 1): ಉತ್ತರ ಪ್ರದೇಶ, ಮಧ್ಯಪ್ರದೇಶ ರಾಜ್ಯಗಳ ಮಾದರಿಯಲ್ಲಿ ಕರ್ನಾಟಕದಲ್ಲೂ ಎಥೆನಾಲ್ ನೀತಿಯನ್ನು (Ethanol Policy) ಜಾರಿಗೆ ತರಲಾಗುವುದು ಎಂದು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ ಬಿ.ಪಾಟೀಲ ಮುನೇನಕೊಪ್ಪ ( Shankar B Patil Munenakoppa) ತಿಳಿಸಿದ್ದಾರೆ. ಶುಕ್ರವಾರ ನಗರದ ಉಡುಪಿ ನೇಕಾರರ ಪ್ರಾಥಮಿಕ ಸಹಕಾರಿ ಸಂಘದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕೈಮಗ್ಗ-ಜವಳಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಗಣನೀಯವಾಗಿ ಬೆಳೆಯುವ ಕಬ್ಬು, ಭತ್ತ ಮತ್ತು ಮೆಕ್ಕೆಜೋಳಗಳಲ್ಲಿಂದ ಎಥೆನಾಲ್ ತಯಾರಿಸಲು ಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ತಜ್ಞರ ತಂಡ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಎಥೆನಾಲ್ ತಯಾರಿಕಾ ಘಟಕಗಳಿಗೆ ಭೇಟಿ ನೀಡಿ, ಅಲ್ಲಿನ ಎಥೆನಾಲ್ ನೀತಿಯನ್ನು ಅಧ್ಯಯನ ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿಯೂ ಅಂತಹ ನೀತಿಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವಾರ ದೆಹಲಿಗೆ ತೆರಳಿ ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸಲಿದ್ದೇನೆ ಎಂದರು.
undefined
ನಷ್ಟದಲ್ಲಿರುವ ಸರ್ಕರೆ ಕಾರ್ಖಾನೆಗಳ ಪುನಶ್ಚೇತನ!
ಈ ನೀತಿಯ ಮೂಲಕ ರಾಜ್ಯದಲ್ಲಿ ಎಥೆನಾಲ್ ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ದೊರೆಯಲಿದೆ. ಈ ಎಥೆನಾಲ್‌ನ್ನು ಸರ್ಕಾರವೇ ಖರೀದಿಸಿ ಪೆಟ್ರೋಲಿಯಂ ಕಂಪನಿಗಳಿಗೆ ಮಾರಾಟ ಮಾಡಲಿದೆ. ಇದರಿಂದ ನಷ್ಟದಲ್ಲಿರುವ ಸರ್ಕರೆ ಕಾರ್ಖಾನೆಗಳ ಪುನಶ್ಚೇತನವಾಗಲಿದೆ. ರೈತರಿಗೂ ಉತ್ತಮ ಬೆಲೆ ದೊರೆಯಲಿದೆ. ಡಿಸೇಲ್ ಪೆಟ್ರೋಲ್‌ನಲ್ಲಿ ಶೇ.35ರಷ್ಟುಎಥೆನಾಲ್ ಬೆರೆಸುವುದರಿಂದ ಕಚ್ಚಾ ತೈಲದ ಆಮದು ಕಡಿಮೆಯಾಗಲಿದೆ. ಹೆಚ್ಚುವರಿ ಎಥೆನಾಲ್‌ನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತದೆ. ಸರ್ಕಾರದ ಬೊಕ್ಕಸಕ್ಕೆ ಜಿಎಸ್‌ಟಿಯಿಂದ ಲಾಭವಾಗಲಿದೆ ಎಂದು ವಿವರಿಸಿದರು.
63 ಕಾರ್ಖಾನೆಗಳಿಂದ ರೈತರ ಬಾಕಿ ಚುಕ್ತ:
ಈಗಾಗಲೇ ಅನೇಕ ಸಕ್ಕರೆ ಕಾರ್ಖಾನೆಗಳು ಎಥೆಲಾನ್ ಉತ್ಪಾದನೆಗೆ ಅರ್ಜಿ ಹಾಕಿವೆ. ಅವುಗಳಿಗೆ ಸಬ್ಸಿಡಿ ನೀಡಿ ಪ್ರೋತ್ಸಾಹಿಸಲಾಗುತ್ತದೆ. 20-21ರಲ್ಲಿ ರಾಜ್ಯದ 88 ಸಕ್ಕರೆ ಕರ್ಖಾನೆಗಳಲ್ಲಿ 65 ಕಾರ್ಖಾನೆಗಳಿಂದ ಕಬ್ಬು ಬೆಳೆದ ರೈತರ ಬಾಕಿಯನ್ನು ಸಂಪೂರ್ಣ ಚುಕ್ತಗೊಳಿಸಲಾಗಿದೆ ಎಂದು ಸಚಿವರು ಹೇಳಿದರು.
ಉಡುಪಿಯಲ್ಲಿ ಕಾರ್ಯಸ್ಥಗಿತಗೊಳಿಸಿರುವ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನಶ್ಚೇತನ ಮಾಡುವಂಕೆ ಶಾಸಕ ರಘುಪತಿ ಭಟ್ಟರ ಮನವಿಗೆ ಪ್ರತಿಕ್ರಿಯಿಸಿದ ಸಚಿವರು, ಕಾರ್ಖಾನೆಯ ಆಡಳಿತ ಮಂಡಳಿಯ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಏಕೆ ಬೇಕು ಎಥೆನಾಲ್:
ಕಾರ್ಖಾನೆಗಳು ಬರೀ ಸಕ್ಕರೆಯನ್ನಷ್ಟೇ (Sugar) ಉತ್ಪಾದಿಸುವುದರಿಂದ ಅಷ್ಟೊಂದು ಲಾಭ ಬರುವುದಿಲ್ಲ. ಸಕ್ಕರೆ ಉತ್ಪಾದಿಸಿದ ಬಳಿಕ ಮಾರುಕಟ್ಟೆಯಲ್ಲಿ ದರ ಕಡಿಮೆಯಿದ್ದರೆ ಅದನ್ನು ಶೇಖರಣೆ ಮಾಡಿಟ್ಟುಕೊಳ್ಳಬೇಕು. ಹೀಗೆ ದಾಸ್ತಾನಾಗಿದ್ದ ಸಕ್ಕರೆ ಮಳೆ, ಗಾಳಿಗೆ ಹಾಳಾದರೆ ಸಂಪೂರ್ಣ ನಷ್ಟ ಅನುಭವಿಸಬೇಕಾಗುತ್ತದೆ. ಇದರಿಂದ ರೈತರಿಗೂ(Farmers) ಸಕಾಲಕ್ಕೆ ದುಡ್ಡು ಕೊಡಲು ಸಾಧ್ಯವಾಗುವುದಿಲ್ಲ. ಇದರ ಬದಲಿಗೆ ಎಥೆನಾಲ್ ಉತ್ಪಾದಿಸಿದರೆ (Ethanol Production) ಕೇಂದ್ರ ಸರ್ಕಾರದಿಂದ ಸಾಲ ಸೇರಿದಂತೆ ವಿವಿಧ ಸೌಲಭ್ಯವೂ ಸಿಗುತ್ತದೆ. ಎಥೆನಾಲ್‌ಗೆ ಮಾರುಕಟ್ಟೆಯ ಸಮಸ್ಯೆಯಾಗುವುದಿಲ್ಲ ಎನ್ನುವುದು ಕಾರ್ಖಾನೆಗಳ ಅಭಿಪ್ರಾಯ.
ಕೇಂದ್ರ ಸರ್ಕಾರವೇ 2022ರಲ್ಲಿ ಪೆಟ್ರೋಲ್‌ನಲ್ಲಿ(Petrol) ಶೇ.10ರಷ್ಟು ಹಾಗೂ 2025ರಲ್ಲಿ ಶೇ.20ರಷ್ಟು ಎಥೆನಾಲ್ ಮಿಶ್ರಣ ಮಾಡಲು ಯೋಜಿಸಿದೆ. ಇದರಿಂದಾಗಿ ಎಥೆನಾಲ್ ಪರ್ಯಾಯ ಇಂಧನವಾಗಿ ಬಳಕೆಯಾಗುವುದರಿಂದ ನಷ್ಟವಾಗುವುದಿಲ್ಲ. ರೈತರಿಗೂ ಸಕಾಲದಲ್ಲಿ ಹಣ ಪಾವತಿ ಮಾಡಬಹುದಾಗಿದೆ. ಹೀಗಾಗಿ ಎಥೆನಾಲ್ ಉತ್ಪಾದನೆಯತ್ತ ಕಾರ್ಖಾನೆಗಳು ಚಿತ್ತ ಹರಿಸಿವೆ.
ಇದನ್ನೂ ಓದಿ:
1) Ethanol Petrol: ಸಕ್ಕರೆಗಿಂತ ಎಥೆನಾಲ್ ಉತ್ಪಾದನೆಗೆ ಕಾರ್ಖಾನೆಗಳ ಒತ್ತು?
2) Alcohol Sale in Karnataka: ನೈಟ್ ಕರ್ಫ್ಯೂ ಇದ್ದರೂ ₹975 ಕೋಟಿ ಮದ್ಯ ಮಾರಾಟ!
3) Tax Returns: ಆದಾಯ ತೆರಿಗೆ ಪಾವತಿ ಗಡುವು ವಿಸ್ತರಣೆ ಇಲ್ಲ: ಕೇಂದ್ರ