ಮಂಗಳೂರು: ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೈಸೂರಿನ ಮೂವರು ಯುವತಿಯರು ಸಾವು

By Suvarna News  |  First Published Nov 17, 2024, 1:21 PM IST

ಮಂಗಳೂರಿನ ಖಾಸಗಿ ಬೀಚ್ ರೆಸಾರ್ಟ್‌ನ ಈಜುಕೊಳದಲ್ಲಿ ಮುಳುಗಿ ಮೈಸೂರಿನ ಮೂವರು ಯುವತಿಯರು ಸಾವಿಗೀಡಾಗಿದ್ದಾರೆ. ಈ ಘಟನೆ ನಗರದ ಹೊರವಲಯದ ಉಚ್ಚಿಲ ಬೀಚ್‌ನಲ್ಲಿ ನಡೆದಿದ್ದು, ಮೃತ ಯುವತಿಯರೆಲ್ಲರೂ 20ರ ಹರೆಯದವರಾಗಿದ್ದಾರೆ.


ಮಂಗಳೂರು: ನಗರದ ಖಾಸಗಿ ಬೀಚ್‌ ರೆಸಾರ್ಟ್‌ನ ಈಜುಕೊಳದಲ್ಲಿ ಮುಳುಗಿ ಮೈಸೂರಿನ ಮೂವರು ಹುಡುಗಿಯರು  ಸಾವಿಗೀಡಾದ ಆಘಾತಕಾರಿ ಘಟನೆ ನಗರದ ಹೊರವಲಯದ ಉಚ್ಚಿಲ ಬೀಚ್‌ ನಲ್ಲಿ ನಡೆದಿದೆ.  ನಿನ್ನೆಯಷ್ಟೇ ಈ ಬೀಚ್‌ ರೆಸಾರ್ಟ್ ಆಗಮಿಸಿದ ಈ ಮೂವರು ವಿದ್ಯಾರ್ಥಿನಿಯರು ಇಂದು ಮುಂಜಾನೆ 10 ಗಂಟೆ ವೇಳೆ ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಮೃತ ಯುವತಿಯರೆಲ್ಲರೂ 20ರ ಹರೆಯದ ಯುವತಿಯರಾಗಿದ್ದಾರೆ. ಮೃತರನ್ನು ಮೈಸೂರು ಕುರುಬಾರಹಳ್ಳಿ ನಾಲ್ಕನೇ ಕ್ರಾಸ್ ನಿವಾಸಿ  ನಿಶಿತ ಎಂ.ಡಿ. (21), ಮೈಸೂರು ರಾಮಾನುಜ ರಸ್ತೆ, ಕೆ.ಆರ್ ಮೊಹಲ್ಲಾ ನಿವಾಸಿ ಪಾರ್ವತಿ ಎಸ್ (20),  ಮೈಸೂರು ವಿಜಯ ನಗರ ದೇವರಾಜ ಮೊಹಲ್ಲ ನಿವಾಸಿ ಕೀರ್ತನ ಎನ್(21) ಎಂದು ಗುರುತಿಸಲಾಗಿದೆ. 

Tap to resize

Latest Videos

undefined

ಈ ಮೂವರು ನಿನ್ನೆ ಬೆಳಗ್ಗೆ ಬೀಚ್ ರೆಸಾರ್ಟ್ ಗೆ ಆಗಮಿಸಿ ಕೊಠಡಿ ಪಡೆದಿದ್ದರು.  ಇಂದು ಬೆಳಿಗ್ಗೆ 8.30ರ ಸುಮಾರಿಗೆ ಸ್ವಿಮ್ಮಿಂಗ್ ಫೂಲ್ ನಲ್ಲಿ ಈಜಲು ತೆರಳಿದ್ದರು. ಮೂವರೇ  ಪೂಲ್‌ನಲ್ಲಿ ಆಟವಾಡುತ್ತಿದ್ದ ವೇಳೆ ಈ ದುರಂತ ನಡೆದಿದೆ. ಈ ಬೀಚ್‌ ಒಂದು ಬದಿಯಲ್ಲಿ ಆರು ಅಡಿಯಷ್ಟು ಆಳವಿತ್ತು. ಈಜುತ್ತಿದ್ದ ವೇಳೆ ಓರ್ವ ಯುವತಿ ಆಯತಪ್ಪಿ ಹೊಂಡಕ್ಕೆ ಹೋಗಿ ಮುಳುಗಿದ್ದು, ಈಕೆಯನ್ನು ರಕ್ಷಿಸಲು ಹೋಗಿ ಒಬ್ಬರಾದ ಮೇಲೆ ಒಬ್ಬರು ಸಾವಿನ ಮನೆ ಸೇರಿದ್ದಾರೆ. 

ಸದ್ಯ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಉಳ್ಳಾಲ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಹುಡುಗಿಯರು ಕೊಠಡಿ ಪಡೆಯುವ ವೇಳೆ ನೀಡಿದ್ದ ಆಧಾರ್‌ಕಾರ್ಡ್‌ನ ಆಧಾರದ ಮೇಲೆ ಹುಡುಗಿಯರ ಕುಟುಂಬದವರನ್ನು ಸಂಪರ್ಕಿಸಲಾಗಿದೆ. ಈ ಹುಡುಗಿಯರು ಮನೆಯಲ್ಲಿ ಹೇಳಿ ಬಂದಿದ್ದರೋ ಅಥವಾ ಹೇಳದೆಯೇ ಬಂದಿದ್ದಾರೋ ಎಂಬುದು ತನಿಖೆಯ ನಂತರವಷ್ಟೇ ತಿಳಿದು ಬರಬೇಕಿದೆ. 

ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು,  ಇವತ್ತು ಹತ್ತು ಗಂಟೆಗೆ ಮೂವರು ಈಜುಕೊಳಕ್ಕೆ ಇಳಿದಿದ್ದಾರೆ. ಈಜು ಬಾರದ ಯುವತಿ ಆಳ ಇದ್ದ ಕಡೆ ಹೋಗಿ ಸಿಲುಕಿಕೊಂಡಿದ್ದಳು, ಅವಳ ರಕ್ಷಣೆಗೆ ಇನ್ನಿಬ್ಬರು ಆಳ ಇರುವ ಕಡೆ ತೆರಳಿದ್ದರು, ಆದರೆ ಮೂವರಿಗೂ ಈಜು ಬರುತ್ತಿರಲಿಲ್ಲ, ಹೀಗಾಗಿ ಸಾವು ಸಂಭವಿಸಿದೆ. ಈ ಮೂವರು ಮೈಸೂರು ಮೂಲದವರಾಗಿದ್ದು, ಇಂಜಿನಿಯರಿಂಗ್ ಪೈನಲ್ ಇಯರ್ ಸ್ಟೂಡೆಂಟ್‌ಗಳಾಗಿದ್ದರು.  ಇತ್ತ ರೆಸಾರ್ಟ್‌ನಲ್ಲಿ ಲೈಫ್ ಗಾರ್ಡ್ ಯಾರು ಇರಲಿಲ್ಲ, ಈಜುಕೊಳದ ಆಳದ ಬಗ್ಗೆಯೂ ಮಾಹಿತಿ ಫಲಕ ಅಳವಡಿಸಿರಲಿಲ್ಲ, ಘಟನೆ ಬಗ್ಗೆ  ಮನೆಯವರಿಗೆ ಮಾಹಿತಿ ತಿಳಿಸಿದ್ದೇವೆ, ಬೊಬ್ಬೆ ಹೊಡೆದು ಕೂಗಾಡಿದರು ಯಾರು ರಕ್ಷಣೆಗೆ ಬರಲಿಲ್ಲ ಎಂಬ ವಿಚಾರ ತಿಳಿದಿದ್ದು, ಈ 
ಈ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ಹೇಳಿದ್ದಾರೆ. 

click me!