ರಾಜ್ಯಾದ್ಯಂತ ಸೈಟ್‌ ನೋಂದಣಿ ಏಕಾ ಏಕಿ ಸ್ಥಗಿತ!

By Kannadaprabha NewsFirst Published Jan 24, 2020, 7:20 AM IST
Highlights

ರಾಜ್ಯದಲ್ಲಿ ಇ-ಸ್ವತ್ತು ಖಾತಾ ಹೊಂದಿರದ ಎಲ್ಲಾ ನಿವೇಶನಗಳ ನೋಂದಣಿ ಕಡ್ಡಾಯವಾಗಿ ಸ್ಥಗಿತಗೊಂಡಿದೆ. ಈ ಮೂಲಕ ಕಂದಾಯ ನಿವೇಶನ ಹೊಂದಿರುವವರು ಹಾಗೂ ಕಂದಾಯ ನಿವೇಶನ ಖರೀದಿಸಿರುವವರಿಗೆ ಮುದ್ರಾಂಕ ಇಲಾಖೆ ಮರ್ಮಾಘಾತ ನೀಡಿದೆ.

ಶ್ರೀಕಾಂತ್‌.ಎನ್‌.ಗೌಡಸಂದ್ರ

ಬೆಂಗಳೂರು [ಜ.24]:  ಭೂ ಬಳಕೆ ಪರಿವರ್ತನೆ ಹಾಗೂ ಸಕ್ಷಮ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆದ ಇ-ಸ್ವತ್ತು ಖಾತಾ ಹೊಂದಿರದ ಎಲ್ಲಾ ನಿವೇಶನಗಳ ನೋಂದಣಿ ಕಡ್ಡಾಯವಾಗಿ ಸ್ಥಗಿತಗೊಂಡಿದೆ. ಹೀಗಾಗಿ, ಇನ್ನು ಮುಂದೆ ಯಾವುದೇ ಪಂಚಾಯ್ತಿ ಹಾಗೂ ಕಂದಾಯ ನಿವೇಶನಗಳೂ ನೋಂದಣಿ ಆಗುವುದಿಲ್ಲ.

ಹೌದು, ಕೃಷಿ ಬಳಕೆಯಿಂದ ಭೂ ಪರಿವರ್ತನೆ (ಡಿ.ಸಿ. ಕನ್ವರ್ಷನ್‌), ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆದ ನಿವೇಶನಗಳು ಇ-ಸ್ವತ್ತು (ಇ-ಖಾತಾ) ಅಡಿ ನೋಂದಣಿಯಾಗಿದ್ದರೆ ಮಾತ್ರ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಲಾಗುತ್ತದೆ. ಇದನ್ನು ಹೊರತುಪಡಿಸಿದ ಕಂದಾಯ ನಿವೇಶನಗಳನ್ನು ಮಾರಾಟ ಮಾಡಲು ಅಥವಾ ಖರೀದಿ ಮಾಡಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಖರೀದಿಸಿದರೂ ಖರೀದಿದಾರರಿಗೆ ನೋಂದಣಿ ಆಗುವುದಿಲ್ಲ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸ್ಪಷ್ಟಪಡಿಸಿದೆ.

ಈ ಮೂಲಕ ಕಂದಾಯ ನಿವೇಶನ ಹೊಂದಿರುವವರು ಹಾಗೂ ಕಂದಾಯ ನಿವೇಶನ ಖರೀದಿಸಿರುವವರಿಗೆ ಮುದ್ರಾಂಕ ಇಲಾಖೆ ಮರ್ಮಾಘಾತ ನೀಡಿದೆ. ರಾಜ್ಯದಲ್ಲಿ ಶೇ.80ರಷ್ಟುನಿವೇಶನಗಳು ಕಂದಾಯ ನಿವೇಶನಗಳೇ ಆಗಿದ್ದು, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದಿಲ್ಲ. ಬೆಂಗಳೂರು ನಗರದಲ್ಲೂ ಶೇ.60 ರಿಂದ 65ರಷ್ಟುನಿವೇಶನಗಳು ಕಂದಾಯ ನಿವೇಶನಗಳೇ ಆಗಿವೆ. ಹೀಗಾಗಿ ಬಹುತೇಕ ನೋಂದಣಿ ಪ್ರಕ್ರಿಯೆಯೇ ಸ್ಥಗಿತಗೊಂಡಿದೆ.

ಕಂದಾಯ ನಿವೇಶನ ನೋಂದಣಿ ನಿಷೇಧ:

ಕೃಷಿ ಭೂಮಿಯನ್ನು ಕೃಷಿಯೇತರ ಬಳಕೆಗೆ ಉಪಯೋಗಿಸಲು ಭೂ ಪರಿವರ್ತನೆ ಕಡ್ಡಾಯ. ಹೀಗಿದ್ದರೂ, ಬಹುತೇಕ ಬಡಾವಣೆ ಅಭಿವೃದ್ಧಿಗಾರರು ಭೂ ಪರಿವರ್ತನೆ ಮಾಡದೆ ಕಂದಾಯ ನಿವೇಶನಗಳನ್ನೇ ಮಾರಾಟ ಮಾಡುತ್ತಿದ್ದರು. ಹೀಗಾಗಿ, 2006ರ ಕರ್ನಾಟಕ ಭೂ ಕಂದಾಯ ತಿದ್ದುಪಡಿ ಕಾಯಿದೆ ಪ್ರಕಾರ ಕಂದಾಯ ನಿವೇಶನಗಳನ್ನು ನೋಂದಣಿ ಮಾಡುವುದನ್ನು ನಿರ್ಬಂಧಿಸಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರವು ಹಲವು ಬಾರಿ ಆದೇಶ ಹೊರಡಿಸಿ ಕಂದಾಯ ನಿವೇಶನಗಳ ನೋಂದಣಿ ಸ್ಥಗಿತಕ್ಕೆ ಆದೇಶಿಸಿತ್ತು. ಇದನ್ನು ವಿರೋಧಿಸಿ ಕೆಲವರು ಕೋರ್ಟ್‌ ಮೊರೆಯನ್ನೂ ಹೋಗಿದ್ದರು.

2016ರಲ್ಲಿ ರಾಜ್ಯ ಸರ್ಕಾರ ಮತ್ತೊಮ್ಮೆ ಕಂದಾಯ ನಿವೇಶನಗಳ ನೋಂದಣಿ ಸ್ಥಗಿತಗೊಳಿಸುವಂತೆ ಆದೇಶಿಸಿತ್ತು. ಹೀಗಿದ್ದರೂ ಉಪ ನೋಂದಣಾಧಿಕಾರಿಗಳು ನೋಂದಣಿ ಮಾಡುತ್ತಿದ್ದರು. ಇದೀಗ ‘ಕಾವೇರಿ ಆಸ್ತಿ ನೋಂದಣಿ ತಂತ್ರಾಂಶದ’ ಮೂಲಕ ನಿವೇಶನಗಳ ನೋಂದಣಿ ಮಾಡುತ್ತಿರುವುದರಿಂದ ಭೂ ಪರಿವರ್ತನೆ, ಪ್ರಾಧಿಕಾರದ ಅನುಮೋದನೆ, ಇ-ಸ್ವತ್ತು ದಾಖಲೆಗಳನ್ನು ಕಡ್ಡಾಯವಾಗಿ ಅಪ್‌ಲೋಡ್‌ ಮಾಡಬೇಕು. ಅಲ್ಲದೆ, ಖರೀದಿದಾರರು ಹಾಗೂ ಮಾರಾಟಗಾರರ ದೂರವಾಣಿ ಸಂಖ್ಯೆಯನ್ನು ನೀಡಿ ಒಟಿಪಿ ಸಂಖ್ಯೆ ನಮೂದಿಸಬೇಕು. ಹೀಗಾಗಿ ಯಾವುದೇ ಕಂದಾಯ ನಿವೇಶನ ನೋಂದಣಿ ಸಾಧ್ಯವಾಗುತ್ತಿಲ್ಲ.

ನೋಂದಣಿಗೆ ಇ- ಸ್ವತ್ತು ಖಾತಾ ಕಡ್ಡಾಯ:

ಈ ಮೊದಲು ಗ್ರಾಮೀಣ ಭಾಗದಲ್ಲಿ ಶುದ್ಧ ಕ್ರಯಪತ್ರ, ಖಾತಾ ನಕಲು, ಕಂದಾಯ ರಸೀದಿ ಇದ್ದರೆ ಸಾಕು ನೋಂದಣಿ ಮಾಡಿಕೊಡಲಾಗುತ್ತಿತ್ತು. ಆದರೆ, ಪ್ರಸ್ತುತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ 9, 11 ಎ, 11 ಬಿ ಫಾರಂ ವಿತರಿಸುತ್ತಿದೆ. ‘ಕಾವೇರಿ’ ಮತ್ತು ‘ಇ-ಸ್ವತ್ತು’ ತಂತ್ರಾಂಶಗಳನ್ನು ಸಂಯೋಜಿಸಲಾಗಿದೆ. ಹೀಗಾಗಿ ಇ-ಸ್ವತ್ತಿನಲ್ಲಿ ಇಲ್ಲದ ನಿವೇಶನಗಳನ್ನು ನೋಂದಣಿ ಮಾಡಲು ಆಗುವುದಿಲ್ಲ.

500 ಚದರ ಮೀಟರ್‌ಗಿಂತ ಹೆಚ್ಚು ವಿಸ್ತೀರ್ಣದ ಎಲ್ಲಾ ಯೋಜನೆಗಳಿಗೆ ‘ರೇರಾ’ (ರಿಯಲ್‌ ಎಸ್ಟೇಟ್‌ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ) ಅನುಮೋದನೆಯೂ ಕಡ್ಡಾಯ. ರಾಜ್ಯದ ಯಾವುದೇ ಉಪ ನೋಂದಣಾಧಿಕಾರಿಗಳ ಕಚೇರಿಯ ಸಾಫ್ಟ್‌ವೇರ್‌ನಲ್ಲಿ ಅಕ್ರಮವಾಗಿ ಇ-ಸ್ವತ್ತು ಪಡೆಯದ ನಿವೇಶನವನ್ನು ದಾಖಲೆ ತಿರುಚಿ ನೋಂದಣಿಗೆ ಮುಂದಾದರೆ ಕೇಂದ್ರ ಕಚೇರಿಗೆ ಎಚ್ಚರಿಕೆ ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಯಾರೂ ನಿಯಮಬದ್ಧವಲ್ಲದ ನಿವೇಶನ ನೋಂದಣಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಕೆ.ವಿ. ತ್ರಿಲೋಕಚಂದ್ರ ಸ್ಪಷ್ಟಪಡಿಸಿದ್ದಾರೆ.

ನೋಂದಣಿ ಮಾಡಿದರೆ ಕ್ರಮದ ಎಚ್ಚರಿಕೆ:

ರಾಜ್ಯದ ಎಲ್ಲಾ ಉಪ ನೋಂದಣಾಧಿಕಾರಿಗಳು ಇ- ಸ್ವತ್ತು ಖಾತಾವನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಬಿಬಿಎಂಪಿ ಹೊರ ಭಾಗದಲ್ಲಿ ಕಂದಾಯ ನಿವೇಶನಗಳಿಗೆ ಬಿಬಿಎಂಪಿ ನೀಡುವ ಬಿ-ಖಾತಾ ಎಂಬ ಅನಧಿಕೃತವಾಗಿ ಮ್ಯಾನುಯಲ್‌ ಖಾತಾ ತೆಗೆದುಕೊಂಡು ಹಲವು ನೋಂದಣಾಧಿಕಾರಿಗಳು ನೋಂದಣಿ ಮಾಡುತ್ತಿದ್ದರು. ಇವರ ಬಗ್ಗೆ ಪತ್ತೆ ಹಚ್ಚು ದೂರು ಸಲ್ಲಿಸಿದ್ದೇವೆ. ಯಾವುದೇ ಕಾರಣಕ್ಕೂ ಗ್ರಾಮೀಣ ಭಾಗಗಳಲ್ಲಿ ಗ್ರಾಮ ಪಂಚಾಯ್ತಿಯಿಂದ ಇ-ಸ್ವತ್ತು ಖಾತಾ ಪಡೆದಿರಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿಬಿಎಂಪಿ ಖಾತಾ, ಬಿಡಿಎ, ಬಿಎಂಆರ್‌ಡಿಎಯಂತಹ ಯೋಜನಾ ಪ್ರಾಧಿಕಾರಿಗಳ ವ್ಯಾಪ್ತಿಯಲ್ಲಿ ಆಯಾ ಪ್ರಾಧಿಕಾರದ ಇ-ಸ್ವತ್ತು ಖಾತಾ ಕಡ್ಡಾಯವಾಗಿ ಹೊಂದಿರಬೇಕು. ಇವುಗಳನ್ನು ಹೊಂದಿಲ್ಲದಿದ್ದರೂ ದಾಖಲೆಗಳನ್ನು ತಿರುಚಿ ನೋಂದಣಿಗೆ ಮುಂದಾದರೆ ಅಂತಹ ನೋಂದಣಾಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಾ.ಕೆ.ವಿ. ತ್ರಿಲೋಕಚಂದ್ರ ಎಚ್ಚರಿಸಿದ್ದಾರೆ.

ಭಾಗಶಃ ಕುಸಿದ ಮನೆ ದುರಸ್ತಿಗೂ ಸರ್ಕಾರ ನೆರವು...

ಇದರಿಂದಾಗುವ ಸಮಸ್ಯೆ ಏನು?

ಪ್ರಸ್ತುತ ಶೇ.80ರಷ್ಟುನಿವೇಶನಗಳು ಕಂದಾಯ ನಿವೇಶನಗಳೇ ಆಗಿರುವುದರಿಂದ ಮಾರಾಟ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಂದಾಯ ಹಾಗೂ ಇ-ಸ್ವತ್ತು ಹೊಂದಿರದ ಪಂಚಾಯ್ತಿ ನಿವೇಶನಗಳನ್ನು ಖರೀದಿಸಬೇಡಿ ಎಂದು ಈವರೆಗೂ ಸರ್ಕಾರ ಸಾರ್ವಜನಿಕರಿಗೆ ನೋಟಿಸ್‌ ನೀಡಿಲ್ಲ. ಹೀಗಾಗಿ ಕಳೆದ ತಿಂಗಳ ಹಿಂದಿನವರೆಗೆ ಲಕ್ಷಾಂತರ ಕಂದಾಯ ನಿವೇಶನಗಳು ಮಾರಾಟವಾಗಿವೆ. ಇದೀಗ ಅದರ ಮಾಲೀಕರು ತಮ್ಮ ನಿವೇಶನಗಳನ್ನು ಬೇರೊಬ್ಬರಿಗೆ ಮಾರಾಟ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರಿನಲ್ಲಿ ಸರ್ಕಾರದಿಂದ ಬಡವರಿಗೆ ಮನೆ : ಶೀಘ್ರ ಚಾಲನೆ...

ಅಲ್ಲದೆ, ಇನ್ನು ಮುಂದೆಯೂ ಬಡಾವಣೆ ಅಭಿವೃದ್ಧಿಪಡಿಸುವವರು ಎಲ್ಲಾ ದಾಖಲೆಗಳನ್ನು ಸಮರ್ಪಕವಾಗಿ ಸಂಗ್ರಹಿಸಿ ಭೂ ಪರಿವರ್ತನೆ ಮಾಡಿಸಿ, ಸಕ್ಷಮ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆದು, ಇ-ಖಾತಾ ಮಾಡಿದ ಬಳಿಕವಷ್ಟೇ ನಿವೇಶನಗಳನ್ನು ಮಾರಾಟ ಮಾಡಿ ಖರೀದಿದಾರರಿಗೆ ನೋಂದಣಿ ಮಾಡಿಕೊಡಬಹುದು. ಇಷ್ಟೂಪ್ರಕ್ರಿಯೆಗಳಿಂದಾಗಿ ಸಹಜವಾಗಿಯೇ ನಿವೇಶನ ದರಗಳು ಹೆಚ್ಚಾಗಿರುತ್ತವೆ.

ಉದಾ: 10 ಲಕ್ಷ ರು.ಗೆ ಕಂದಾಯ ನಿವೇಶನ ಖರೀದಿಸಿ ಸೂರು ನಿರ್ಮಿಸಿಕೊಳ್ಳುತ್ತಿದ್ದ ನಾಗರಿಕರು ಇದೀಗ 25-30 ಲಕ್ಷ ರು. ಪಾವತಿಸಿ ಅನುಮೋದಿತ ನಿವೇಶನಗಳನ್ನೂ ಖರೀದಿಸಬೇಕಾಗಿದೆ. ಇದರಿಂದ ಬಹುತೇಕ ಬಡವರು ನಿವೇಶನಗಳನ್ನು ಖರೀದಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಲಾಗುತ್ತಿದೆ.

ಇದರಿಂದಾಗುವ ಲಾಭವೇನು?

ಕಂದಾಯ ನಿವೇಶನಗಳ ನೋಂದಣಿ ನಿರ್ಬಂಧದಿಂದ ಇನ್ನು ಮುಂದೆ ಬಡಾವಣೆ ಅಭಿವೃದ್ಧಿದಾರರು ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಭೂ ಪರಿವರ್ತನೆ, ಪ್ರಾಧಿಕಾರದಿಂದ ಅನುಮೋದನೆ ಹಾಗೂ ಇ-ಸ್ವತ್ತು ಖಾತಾ ಮಾಡಿಸಿದ ಬಳಿಕವೇ ನಿವೇಶನಗಳನ್ನು ಮಾರಾಟ ಮಾಡುತ್ತಾರೆ. ಹೀಗಾಗಿ ಸರ್ಕಾರಿ ಭೂಮಿ ಒತ್ತುವರಿ, ಭೂ ಪರಿವರ್ತನೆಯಾಗದ ಜಮೀನಿನಲ್ಲಿ ನಿವೇಶನಗಳನ್ನು ಮಾಡಿ ಜನರಿಗೆ ವಂಚಿಸುವುದು ತಪ್ಪಲಿದೆ. ಕೃಷಿ ಭೂಮಿ ಅನ್ಯ ಉದ್ದೇಶಕ್ಕೆ ಬಳಕೆ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಲಿದೆ.

ಸರ್ಕಾರಕ್ಕೆ ಭಾರೀ ಆದಾಯ ಖೋತಾ

ಕಾವೇರಿ ತಂತ್ರಾಂಶದಲ್ಲಿ ಕಾನೂನುಬದ್ಧವಲ್ಲದ ನಿವೇಶನಗಳ ನೋಂದಣಿಗೆ ಅವಕಾಶವಿಲ್ಲದ ಕಾರಣ 2019-20ನೇ ಸಾಲಿನ ಮೊದಲ ಏಳು ತಿಂಗಳಲ್ಲಿ 924 ಕೋಟಿ ರು. ಆದಾಯ ಖೋತಾ ಆಗಿದೆ. ಇದೀಗ ಕಂದಾಯ ನಿವೇಶನಗಳ ನೋಂದಣಿ ಸಂಪೂರ್ಣ ನಿಲ್ಲಿಸಿರುವುದರಿಂದ ಮುಂದಿನ ನಾಲ್ಕು ತಿಂಗಳಲ್ಲಿ ಭಾರೀ ಪ್ರಮಾಣದಲ್ಲಿ ಆದಾಯ ಕೊರತೆ ಉಂಟಾಗಲಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

* ರೆವಿನ್ಯೂ ನಿವೇಶನಗಳನ್ನು ನೋಂದಣಿ ಮಾಡಿಕೊಳ್ಳಲು ನಿಯಮಗಳಲ್ಲಿ ಅವಕಾಶವಿಲ್ಲ. ಹೀಗಾಗಿ ಕಾವೇರಿ ತಂತ್ರಾಂಶದ ಲೋಪಗಳನ್ನು ತಿದ್ದಿ ಯಾವುದೇ ಕಾರಣಕ್ಕೂ ಕಾನೂನುಬದ್ಧವಲ್ಲದ ನಿವೇಶನ ನೋಂದಣಿ ಆಗದಂತೆ ಮಾಡಿದ್ದೇವೆ. ಹೀಗಾಗಿ ಖರೀದಿ ಮಾಡುವವರು ಭೂ ಪರಿವರ್ತನೆ, ಸಕ್ಷಮ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಹಾಗೂ ಇ-ಸ್ವತ್ತು ಹೊಂದಿರುವ ನಿವೇಶನಗಳನ್ನು ಮಾತ್ರವೇ ಖರೀದಿಸುವುದು ಉತ್ತಮ.

- ಡಾ.ಕೆ.ವಿ. ತ್ರಿಲೋಕಚಂದ್ರ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ

ಕಂದಾಯ ನಿವೇಶನಗಳಿಗೆ ಪರಿಹಾರ ಸೂಚಿಸದ ಸರ್ಕಾರ!

ರಾಜ್ಯದಲ್ಲಿ ಅನುಮೋದಿತ ನಿವೇಶನಗಳಿಂತ ಕಂದಾಯ ನಿವೇಶನಗಳೇ ಹೆಚ್ಚಿವೆ. ಈ ನಿವೇಶನಗಳ ನೋಂದಣಿ ರದ್ದುಪಡಿಸಿರುವುದರಿಂದ ಕಂದಾಯ ನಿವೇಶನ ಹೊಂದಿರುವವರಿಗೆ ಪರಿಹಾರವೇನು ಎಂಬ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇಂತಹ ನಿವೇಶನಗಳನ್ನು ಸಕ್ರಮಗೊಳಿಸಲು ಸಹ ಮುಂದಾಗಿಲ್ಲ. ಹೀಗಾಗಿ ಕಂದಾಯ ನಿವೇಶನ ಹೊಂದಿರುವ ಲಕ್ಷಾಂತರ ಜನ ಸಮಸ್ಯೆ ಎದುರಿಸಲಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ಕಾನೂನು ತಿದ್ದುಪಡಿ ಮಾಡಿ ಇಂತಹ ನಿವೇಶನಗಳನ್ನು ಸಕ್ರಮಗೊಳಿಸಲು ಮುಂದಾಗಬೇಕಾದ ಅನಿವಾರ್ಯತೆ ಇದೆ ಎನ್ನುತ್ತಾರೆ ತಜ್ಞರು.

click me!