ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣದ ಸಂತ್ರಸ್ತ ಮಹಿಳೆ ಅಪಹರಣ ಆರೋಪದಲ್ಲಿ ಜೈಲು ಪಾಲಾಗಿರುವ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರಿಗೆ ವಿಚಾರಣಾಧೀನ ಖೈದಿ ನಂಬರ್ 4567 ಕೊಡಲಾಗಿದೆ.
ಬೆಂಗಳೂರು (ಮೇ 08): ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣದ ಸಂತ್ರಸ್ತ ಮಹಿಳೆಯನ್ನು ಅಪಹರಣ ಮಾಡಿದ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರಿಗೆ ವಿಚಾರಣಾಧೀನ ಖೈದಿ ಸಂಖ್ಯೆ 4567 ಕೊಡಲಾಗಿದೆ.
ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ನ್ಯಾಯಂಗ ಬಂಧನ ಹಿನ್ನಲೆಯಲ್ಲಿ ಆರೋಪಿ ಖೈದಿ ರೇವಣ್ಣಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿ ಸಂಖ್ಯೆಯನ್ನು ನೀಡಲಾಗಿದೆ. ಜೈಲು ಅಧಿಕಾರಿಗಳು ಯುಟಿಪಿ ನಂಬರ್ 4567 ನೀಡಿದ್ದಾರೆ. ಅಂದರೆ, ವಿಚಾರಣಾಧೀನ ಖೈದಿ ಎಂದು 4567 ಸಂಖ್ಯೆಯನ್ನು ನೀಡಲಾಗಿದೆ.
ಸಂತ್ರಸ್ತ ಮಹಿಳೆಯರನ್ನು ಕಿಡ್ನಾಪ್ ಮಾಡಿದ ಆರೋಪದಲ್ಲಿ ಬಂಧನವಾಗಿ ಕಳೆದ 4 ದಿನಗಳ ಕಾಲ ವಿಶೇಷ ತನಿಖಾ ತಂಡದ (ಎಸ್‌ಐಟಿ) ಪೊಲೀಸರ ವಶದಲ್ಲಿದ್ದ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರನ್ನು ಪುನಃ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ರೇವಣ್ಣ ಪರ ವಕೀಲರು ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಿದರು. ಆದರೆ, ಪ್ರಕರಣದ ಗಂಭೀರತೆ ಅರಿತ ನ್ಯಾಯಾಲಯವು ಎಸ್‌ಐಟಿ ಕಸ್ಟಡಿಗೂ ಕೊಡದೇ, ಜಾಮೀನು ಕೂಡ ಮಂಜೂರು ಮಾಡದೇ 7 ದಿನಗಳ ಕಾಲ ನ್ಯಾಯಾಂಗ ಬಂಧನವನ್ನು ವಿಧಿಸಿ ಆದೇಶ ಹೊರಡಿಸಲಾಯಿತು. ಇದರ ಬೆನ್ನಲ್ಲಿಯೇ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ತಮ್ಮ ವಶದಿಂದ ಪರಪ್ಪನ ಅಗ್ರಹಾರ ಜೈಲಿಗೆ ವರ್ಗಾವಣೆ ಮಾಡಲಾಯಿತು. ಜೈಲಿನಲ್ಲಿ ವಿಚಾರಣಾಧೀನ ಕೈದಿಗಳನ್ನು ಸೇರ್ಪಡೆ ಮಾಡಿಕೊಳ್ಳುವ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಜೈಲಿನೊಳಗೆ ಕಳುಹಿಸಲಾಯಿತು.
ಹೆಚ್.ಡಿ. ರೇವಣ್ಣಗೆ ಒಂದು ವಾರ ನ್ಯಾಯಾಂಗ ಬಂಧನ; ಪರಪ್ಪನ ಅಗ್ರಹಾರಕ್ಕೆ ಶಿಫ್ಟ್
ಜೈಲಿನಲ್ಲಿಯೂ ರೇವಣ್ಣಗೆ ವೈದ್ಯಕೀಯ ಪರೀಕ್ಷೆ: ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ವೇಳೆ ಎಸ್‌ಐಟಿ ತಂಡದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಜೊತೆಗೆ, ತಮಗೆ ಎದೆನೋವು ಹಾಗೂ ಹೊಟ್ಟೆ ಉರಿ ಇದ್ದು, ಅನಾರೋಗ್ಯದಿಂದ ಬಳಲುತ್ತಿದ್ದೇನೆ. ಎಸ್‌ಐಟಿ ಅಧಿಕಾರಿಗಳ ವಿಚಾರಣೆಯಿಂದ ನನಗೆ ಬಿಡುಗಡೆ ಕೊಡಿಸಿ ಎಂದು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರೇವಣ್ಣಗೆ ಮೇ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಇನ್ನು ಪರಪ್ಪನ ಅಗ್ರಹಾರ ಜೈಲು ಸೇರಿದ ನಂತರ ರೇವಣ್ಣ ಅವರಿಗೆ ಜೈಲಿನ ವೈದ್ಯಕೀಯ ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡಿದ್ದಾರೆ. ನಂತರ, ಜೈಲಿನ ಕ್ವಾರಂಟೇನ್ ಸೆಲ್ ನಲ್ಲಿ ರೇವಣ್ಣ ಉಳಿಯಲು ವ್ಯವಸ್ಥೆ ಮಾಡಲಾಗಿತ್ತು. ಈಗ ಅವರಿಗೆ ಕೈದಿ ಸಂಖ್ಯೆಯನ್ನು ಹಂಚಿಕೆ ಮಾಡಲಾಗಿದೆ.
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಮಾಡಿ ಮಹಿಳೆಯ ಮಾನ ಕಳೆದ ಕಿರಾಕರು ಇಲ್ಲಿದ್ದಾರೆ ನೋಡಿ..
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಹಂಚಿದ ಆರೋಪಿಗಳ ಜಾಮೀನು ಅರ್ಜಿ ವಜಾ: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಹಂಚಿಕೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಆರೋಪದಡಿ ವಕೀಲ ಪೂರ್ಣಚಂದ್ರ ಅವರು ಹಾಸನದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ಆರೋಪಿಗಳಾದ ಕಾರ್ತಿಕ್, ನವೀನ್, ಚೇತನ್, ಪುಟ್ಟಿ@ಪುಟ್ಟರಾಜ್ ಜಾಮೀನಿಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಬುಧವಾರ ಈ ಜಾಮೀನು ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ಹಾಸನ ಜಿಲ್ಲಾ ಜಿಲ್ಲಾ 3 ನೇ ಅಧಿಕ ಸತ್ರ ನ್ಯಾಯಾಲಯವು ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.