2014, 2019ಕ್ಕಿಂತ ಈ ಸಲ 2% ಹೆಚ್ಚು ಮತದಾನ: ಲಾಭ ಯಾರಿಗೆ?

By Kannadaprabha NewsFirst Published May 9, 2024, 5:00 AM IST
Highlights

2014ರಲ್ಲಿ ಶೇ.67.20ರಷ್ಟು ಮತದಾನವಾಗಿದ್ದರೆ, 2019ರ ಲೋಕಸಭಾ ಚುನಾವಣೆಯಲ್ಲಿ ಶೇ.68.81ರಷ್ಟು ಮತದಾನವಾಗಿತ್ತು. ಈ ಬಾರಿ ಶೇ.70.64ರಷ್ಟು ಮತದಾನವಾಗಿದೆ. ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಶೇ.1.83ರಷ್ಟು ಮತದಾನ ಪ್ರಮಾಣ ಹೆಚ್ಚಾಗಿದೆ. ಈ ಮತದಾನದ ಹೆಚ್ಚಳಗೊಂಡ ಬೆನ್ನಲ್ಲೇ ರಾಜಕೀಯ ಲೆಕ್ಕಾಚಾರವೂ ಕೇಳಿಬರುತ್ತಿದ್ದು, ಇದರಿಂದ ಯಾವ ಪಕ್ಷಕ್ಕೆ ಅನುಕೂಲವಾಗಬಹುದು ಎಂಬ ಚರ್ಚೆ ಶುರುವಾಗಿದೆ.
 

ಬೆಂಗಳೂರು(ಮೇ.09):  ರಾಜ್ಯದಲ್ಲಿ ಸಂಸತ್‌ ಸಮರ ಸಣ್ಣಪುಟ್ಟ ಲೋಪದೋಷಗಳೊಂದಿಗೆ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಎರಡು ಹಂತದ ಒಟ್ಟಾರೆ ಮತದಾನ ಪ್ರಮಾಣವು ಶೇ.70.64 ರಷ್ಟಾಗಿದೆ. ಇದು 2014, 2019ರ ಲೋಕಸಭೆ ಚುನಾವಣೆಗಿಂತ ಅಧಿಕವಾಗಿದೆ.

2014ರಲ್ಲಿ ಶೇ.67.20ರಷ್ಟು ಮತದಾನವಾಗಿದ್ದರೆ, 2019ರ ಲೋಕಸಭಾ ಚುನಾವಣೆಯಲ್ಲಿ ಶೇ.68.81ರಷ್ಟು ಮತದಾನವಾಗಿತ್ತು. ಈ ಬಾರಿ ಶೇ.70.64ರಷ್ಟು ಮತದಾನವಾಗಿದೆ. ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಶೇ.1.83ರಷ್ಟು ಮತದಾನ ಪ್ರಮಾಣ ಹೆಚ್ಚಾಗಿದೆ. ಈ ಮತದಾನದ ಹೆಚ್ಚಳಗೊಂಡ ಬೆನ್ನಲ್ಲೇ ರಾಜಕೀಯ ಲೆಕ್ಕಾಚಾರವೂ ಕೇಳಿಬರುತ್ತಿದ್ದು, ಇದರಿಂದ ಯಾವ ಪಕ್ಷಕ್ಕೆ ಅನುಕೂಲವಾಗಬಹುದು ಎಂಬ ಚರ್ಚೆ ಶುರುವಾಗಿದೆ.
ಮತದಾನ ಪ್ರಮಾಣ ಹೆಚ್ಚಾಗಿರುವುದರಿಂದ ಈ ಬಾರಿ ಮೋದಿ ನಾಯಕತ್ವಕ್ಕೆ ಮತದಾರರು ಹೆಚ್ಚು ಬೆಂಬಲ ಸೂಚಿಸಿದ್ದಾರೆ ಎಂಬ ವಾದವನ್ನು ಬಿಜೆಪಿ ನಾಯಕರು ಮಂಡಿಸುತ್ತಿದ್ದರೆ, ಮುಸ್ಲಿಂ ಸಮುದಾಯ ಮತ್ತು ಇತರ ಹಿಂದುಳಿದ ವರ್ಗದ ಜನರು ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಿರುವುದರಿಂದ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯವನ್ನು ಆ ಪಕ್ಷದ ನಾಯಕರು ಪ್ರತಿಪಾದಿಸುತ್ತಿದ್ದಾರೆ.

ಮತದಾರ ಕಾಂಗ್ರೆಸ್‌ ಕೈ ಹಿಡಿಯಲು ಉತ್ಸುಕ: ಸಚಿವ ಪ್ರಿಯಾಂಕ್ ಖರ್ಗೆ

ಅಂತಿಮವಾಗಿ ಈ ಮತದಾನ ಹೆಚ್ಚಳವಾಗಿರುವುದರಿಂದ ಯಾರಿಗೆ ಲಾಭ‍ವಾಗಲಿದೆ ಎಂಬುದನ್ನು ಕರಾರುವಕ್ಕಾಗಿ ತಿಳಿಯುವುದಕ್ಕೆ ಬರುವ ಜೂ.4ರಂದು ನಡೆಯುವ ಮತ ಎಣಿಕೆವರೆಗೆ ಕಾಯಲೇಬೇಕಾಗಿದೆ. ಈ ಬಾರಿ ಮೊದಲ ಹಂತದಲ್ಲಿ ಶೇ.71.84ರಷ್ಟು ಮತದಾನವಾಗಿದ್ದು, ಎರಡನೇ ಹಂತದಲ್ಲಿ ಶೇ.69.56ರಷ್ಟು ಮತದಾನವಾಗಿದೆ. ಎರಡು ಹಂತದಲ್ಲಿ ಒಟ್ಟು ಶೇ.70.64ರಷ್ಟು ಮತದಾನವಾಗಿದೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ. ಮಂಡ್ಯ ಕ್ಷೇತ್ರದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಮತದಾನವಾಗಿದ್ದು, ಶೇ.81.67ರಷ್ಟು ಮತದಾನವಾಗಿದೆ. ಇನ್ನು, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಶೇ.53.17ರಷ್ಟು ಮತದಾನವಾಗುವ ಮೂಲಕ ಕಡಿಮೆ ಮತದಾನವಾಗಿದೆ.

2019ರ ಲೋಕಸಭಾ ಚುನಾವಣೆಯಲ್ಲಿಯೂ ಮಂಡ್ಯ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣ ಮತದಾನವಾಗಿತ್ತು. ಆಗ ಶೇ.80.59ರಷ್ಟು ಮತದಾನವಾಗುವ ಮೂಲಕ ಮತದಾರರು ಚುನಾವಣೆಯಲ್ಲಿ ಉತ್ತಮವಾಗಿ ಸ್ಪಂದಿಸಿದ್ದರು. ಅಂತೆಯೇ ಈ ಬಾರಿಯೂ ಮಂಡ್ಯದ ಮತದಾರರು ಉತ್ತಮವಾಗಿ ಮತದಾನದಲ್ಲಿ ತೊಡಗಿಸಿಕೊಂಡಿದ್ದಾರೆ.

ಮೋದಿ ಮತ್ತೆ ಪ್ರಧಾನಿ ಆಗೋದು ಗ್ಯಾರಂಟಿ: ಗೋವಿಂದ ಕಾರಜೋಳ

ಮೊದಲ ಹಂತದಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿಯ ಶೋಭಾ ಕರಂದ್ಲಾಜೆ, ಡಾ.ಸಿ.ಎನ್.ಮಂಜುನಾಥ್, ವಿ.ಸೋಮಣ್ಣ, ಗೋವಿಂದ ಕಾರಜೋಳ, ಕಾಂಗ್ರೆಸ್‌ನ ಡಿ.ಕೆ.ಸುರೇಶ್, ಜಯಪ್ರಕಾಶ್ ಹೆಗ್ಡೆ ಸೇರಿದಂತೆ 247 ಅಭ್ಯರ್ಥಿಗಳು ಕಣದಲ್ಲಿದ್ದರೆ, ಎರಡನೇ ಹಂತದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪ್ರಭಾ ಮಲ್ಲಿಕಾರ್ಜುನ್, ಗಾಯತ್ರಿ ಸಿದ್ದೇಶ್ವರ್, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸೇರಿದಂತೆ 227 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ಒಟ್ಟು 474 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಪೆಟ್ಟಿಗೆಯಲ್ಲಿದ್ದು, ಜೂ.4ರಂದು ಪ್ರಕಟವಾಗುವ ಫಲಿತಾಂಶದಲ್ಲಿ ಅಭ್ಯರ್ಥಿಗಳ ಭವಿಷ್ಯ ಬಹಿರಂಗವಾಗಲಿದೆ.

ಮತದಾನ ಪ್ರಮಾಣ: ವರ್ಷ ಮತದಾನ

2014 ಶೇ.67.20
2019 ಶೇ.68.81
2024 ಶೇ.70.64

click me!