
ಬೆಂಗಳೂರು(ಆ.07): ಕೇಂದ್ರದ ನೀತಿ ಆಯೋಗದ ಮಾದರಿಯಲ್ಲಿ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಮಂಡಳಿಯನ್ನು ‘ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆ’ಯನ್ನಾಗಿ (ಎಸ್‌ಐಟಿಕೆ) ಪುನರ್ ರಚಿಸಲಾಗಿದ್ದು, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇದು ಕಾರ್ಯನಿರ್ವಹಿಸಲಿದೆ. ಈ ಸಂಬಂಧ ನಿಯಮಾವಳಿ ರೂಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಹೆಚ್ಚಿಸುವುದು, ನವ ಕರ್ನಾಟಕ ವಿಕಸನ ಸೇರಿದಂತೆ ‘ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ-2030’ ಹಾಗೂ ‘2047ರಲ್ಲಿ ಭಾರತ’ ಗುರಿ ಸಾಧಿಸುವ ಮೂಲಕ ‘ನವ ಭಾರತಕ್ಕಾಗಿ ನವ ಕರ್ನಾಟಕ’ ನಿರ್ಮಿಸುವ ಉದ್ದೇಶದಿಂದ ಸಂಸ್ಥೆ ರಚಿಸಲಾಗಿದೆ.
ಈ ಸಂಸ್ಥೆಗೆ ಸರ್ಕಾರದ ಯೋಜನೆ ಹಾಗೂ ಸಂಬಂಧಿಸಿದ ವಿಷಯಗಳಲ್ಲಿ ಪರಿಣತರಾದವರನ್ನು ಸರ್ಕಾರದಿಂದ ಉಪಾಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಲಾಗುವುದು. ಸಂಸ್ಥೆಯನ್ನು ಪರಿಣಾಮಕಾರಿಯಾಗಿ ನಡೆಸಲು ಹಾಗೂ ಗುರಿಗಳನ್ನು ಸಾಧಿಸಲು ವಾರ್ಷಿಕ 150 ಕೋಟಿ ರು. ಒದಗಿಸಲಾಗುತ್ತದೆ. ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಲಹೆಗಾರರಾಗಿರುತ್ತಾರೆ ಎಂದು ಯೋಜನಾ ಇಲಾಖೆ ಆದೇಶದಲ್ಲಿ ತಿಳಿಸಿದೆ.
ನೀತಿ ಆಯೋಗ ಸಭೆಗೆ ಗೈರಾಗಲಿರುವ ನಿತೀಶ್ ಕುಮಾರ್, ಕೆಸಿಆರ್: ಕೇಂದ್ರದ ವಿರುದ್ಧ ತೆಲಂಗಾಣ ಸಿಎಂ ಪತ್ರ ಬರೆದು ಆಕ್ರೋಶ
8 ವಲಯದಿಂದ ಸಲಹೆಗಾರರು:
ಶಿಕ್ಷಣ, ಆರೋಗ್ಯ-ಪೋಷಣೆ, ಕೃಷಿ ಮತ್ತು ಕೈಗಾರಿಕೆ, ಗ್ರಾಮೀಣ ಮತ್ತು ನಗರಾಭಿವೃದ್ಧಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ, ಶುದ್ಧ ಮತ್ತು ಹಸಿರು ಇಂಧನ, ಆರ್ಥಿಕತೆ ಮತ್ತು ಹಣಕಾಸು ವಲಯಗಳಾಗಿ ಒಟ್ಟು 8 ವಲಯಗಳಿಂದ ಪರಿಣಿತರನ್ನು ಸಲಹೆಗಾರರನ್ನಾಗಿ ನೇಮಿಸಲಾಗುತ್ತದೆ. ಯೋಜನೆ, ಆರ್ಥಿಕ, ಸಮಾಜ ಕಲ್ಯಾಣ, ಶಿಕ್ಷಣ, ಆರೋಗ್ಯ, ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ನಗರಾಭಿವೃದ್ಧಿ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಗಳ ಸಚಿವರು ವಿಶೇಷ ಆಹ್ವಾನಿತರಾಗಿರುತ್ತಾರೆ. ಎಂಟು ಪ್ರಮುಖ ಇಲಾಖೆಗಳ ಮುಖ್ಯಸ್ಥರು ಅಧಿಕೃತ ಸಸ್ಯರಾಗಿರುತ್ತಾರೆ.
14 ಪಾಲುದಾರ ಸಂಸ್ಥೆ:
ಸಂಸ್ಥೆಯಲ್ಲಿ ಕರ್ನಾಟಕ ಇನ್ನೋವೇಟಿವ್ ಅಥಾರಿಟಿ, ಐಐಎಸ್‌ಸಿ, ಐಐಎಂ-ಬೆಂಗಳೂರು, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ, ಹಣಕಾಸು ನೀತಿ ಸಂಸ್ಥೆ, ಕರ್ನಾಟಕ ರಾಜ್ಯ ಕಾರ್ಮಿಕ ಸಂಸ್ಥೆ, ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ, ಆಡಳಿತ ತರಬೇತಿ ಸಂಸ್ಥೆ ಸೇರಿದಂತೆ 14 ಪ್ರಖ್ಯಾತ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳು ಪಾಲುದಾರ ಸಂಸ್ಥೆಗಳಾಗಿರುತ್ತವೆ.
ಉದ್ದೇಶಗಳು
ನವ ಭಾರತಕ್ಕಾಗಿ ನವ ಕರ್ನಾಟಕ ನಿರ್ಮಿಸಲು ಅಗತ್ಯ ಯೋಜನೆ ರೂಪಿಸಲು ಸಲಹೆ ನೀಡುವುದು. ಉದಾ: ಪ್ರಾದೇಶಿಕ ಅಸಮತೋಲನವನ್ನು ಕಡಿಮೆ ಮಾಡುವುದು, ಉತ್ತಮ ಆಡಳಿತ ಅಭ್ಯಾಸಗಳನ್ನು ಅನುಷ್ಠಾನಗೊಳಿಸುವುದು, ಆವಿಷ್ಕಾರ ಹಾಗೂ ಜ್ಞಾನವನ್ನು ಉತ್ತೇಜಿಸುವದು, ಸಾಕ್ಷ್ಯಾಧಾರಿತ ನೀತಿ ರಚನೆಗೆ, ರಾಜ್ಯದ ಸಮಗ್ರ ಅಭಿವೃದ್ಧಿ ದರ, ಒಟ್ಟು ಆಂತರಿಕ ಉತ್ಪನ್ನ ಹೆಚ್ಚಿಸುವುದು ಸೇರಿದಂತೆ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ-2030ರ ಗುರಿ ಹಾಗೂ ‘2047ರಲ್ಲಿ ಭಾರತ’ ಗುರಿ ತಲುಪುವ ಉದ್ದೇಶದೊಂದಿಗೆ ಸಂಸ್ಥೆ ರಚಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ