ವೀಸಾ ಇಲ್ಲದೆ ಪ್ರಜ್ವಲ್‌ ರೇವಣ್ಣ ಜರ್ಮನಿಗೆ ತೆರಳಿದ್ದು ಹೇಗೆ? ಇಲ್ಲಿದೆ ಕಂಪ್ಲೀಟ್‌ ಡೀಟೆಲ್ಸ್

By Suvarna News  |  First Published May 1, 2024, 5:07 PM IST

 ಪ್ರಜ್ವಲ್‌ ರೇವಣ್ಣ ಅವರು ಭಾರತ ಬಿಟ್ಟು  ವಿದೇಶಕ್ಕೆ ತೆರಳಿದ್ದು, ವೀಸಾ ಇಲ್ಲದೆ ಸಂಸದ ದೇಶ ಬಿಟ್ಟು ಜರ್ಮನಿಗೆ ತೆರಳಿದ್ದು ಹೇಗೆ ಎಂದು ವ್ಯಾಪಕ ಚರ್ಚೆ ಹುಟ್ಟಿಕೊಂಡಿದೆ.


ಬೆಂಗಳೂರು (ಮೇ.1): ಹಾಸನ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್‌ ರೇವಣ್ಣ ಅವರು ಭಾರತ ಬಿಟ್ಟು  ವಿದೇಶಕ್ಕೆ ತೆರಳಿದ್ದಾರೆ. ವೀಸಾ ಇಲ್ಲದೆ ಹಾಸನ ಸಂಸದ ದೇಶ ಬಿಟ್ಟು ಜರ್ಮನಿಗೆ ತೆರಳಿದ್ದು ಹೇಗೆ ಎಂದು ವ್ಯಾಪಕ ಚರ್ಚೆ ಹುಟ್ಟಿಕೊಂಡಿತ್ತು. ಇದೀಗ ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಏಪ್ರಿಲ್‌ 26ರಂದು ಹಾಸನದಲ್ಲಿ ಮತದಾನ ಮಾಡಿದ ಸಂಸದ ಪ್ರಜ್ವಲ್ ರೇವಣ್ಣ ಅದೇ ದಿನ ವಿದೇಶಕ್ಕೆ ಹಾರಿದ್ದರು. ಪ್ರಕರಣದ ಕಾವು ಹೆಚ್ಚಾಗುತ್ತಿದ್ದಂತೆಯೇ ತಮ್ಮ  ರಾಜತಾಂತ್ರಿಕ ಪಾಸ್​ ಪೋರ್ಟ್ (Diplomatic Passport) ಅನ್ನು ಬಳಸಿಕೊಂಡಿರುವ ಪ್ರಜ್ವಲ್‌ ವೀಸಾ ಇಲ್ಲದೆ ಜರ್ಮನಿಯ ಫ್ಲೈಟ್‌ ಹತ್ತಿದ್ದಾರೆ.

Latest Videos

ಪ್ರಜ್ವಲ್‌ ರೇವಣ್ಣ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

ಪ್ರಜ್ವಲ್​ ರೇವಣ್ಣ ಹಾಲಿ ಸಂಸದರಾಗಿರುವ ಕಾರಣ ವೀಸಾ ಇಲ್ಲದೇ ರಾಜತಾಂತ್ರಿಕ ಪಾಸ್​ ಪೋರ್ಟ್ ಬಳಸಿಕೊಂಡು ಜರ್ಮನಿಗೆ ತೆರಳಿದ್ದಾರೆ.  ಜರ್ಮನಿ ಮಾತ್ರವಲ್ಲ ಇತರ  ಹಲವು ದೇಶಗಳಿಗೆ ಪ್ರಯಾಣಿಸುವ ಅವಕಾಶ ಇವರಿಗಿದೆ. ಪ್ರಜ್ವಲ್‌ ರೇವಣ್ಣ ಗೆ  ನವೆಂಬರ್ ವರೆಗೂ ವಿದೇಶಕ್ಕೆ ಪ್ರಯಾಣಿಸುವ ಅವಕಾಶ ಈ ಪಾಸ್‌ಪೋರ್ಟ್ ಮೂಲಕ ಇದೆ.

ಪ್ರಪಂಚದ ಕೆಲವು ದೇಶಗಳಿಗೆ ವೀಸಾ ಇಲ್ಲದೇ ಹೋಗುವ ಈ ಅವಕಾಶ ಬಳಸಿಕೊಂಡು  ಪ್ರಜ್ವಲ್ ರೇವಣ್ಣ  ಜರ್ಮನಿಗೆ ತೆರಳಿದ್ದಾರೆ. ವೀಸಾ ಇಲ್ಲದೇ ಜರ್ಮನಿ ಅಲ್ಲದೇ ಬೇರೆ ದೇಶಗಳಿಗೂ ಪ್ರಜ್ವಲ್ ಪ್ರಯಾಣಿಸಬಹುದು.

ಪ್ರಜ್ವಲ್ ರೇವಣ್ಣ ವಿದೇಶದಿಂದಲೇ ಮೊದಲ ಪ್ರತಿಕ್ರಿಯೆ; ವಿಚಾರಣೆಗೆ ಹಾಜರಾಗಲು ಸಮಯ ಕೇಳಿದ ಸಂಸದ

ರಾಜತಾಂತ್ರಿಕ ಪಾಸ್ಪೋರ್ಟ್ ಎಂದರೇನು? ಯಾರು ಹೊಂದಿರಬಹುದು?
ಟೈಪ್ ‘ಡಿ’ ಪಾಸ್ಪೋರ್ಟ್ಗಳು ಎಂದೂ ಕರೆಯಲಾಗುವ ರಾಜತಾಂತ್ರಿಕ ಪಾಸ್ಪೋರ್ಟ್ಗಳನ್ನು ಭಾರತೀಯ ರಾಜತಾಂತ್ರಿಕರು,  ಸರ್ಕಾರದ ಅಧಿಕಾರಿಗಳು ಮತ್ತು ಭಾರತ ಸರಕಾರದ ಪರವಾಗಿ ಅಧಿಕೃತ ವಿದೇಶ ಪ್ರಯಾಣವನ್ನು ಕೈಗೊಳ್ಳಲು ಅಧಿಕಾರ ಹೊಂದಿರುವ ಆಯ್ದ ವ್ಯಕ್ತಿಗಳಿಗೆ ಮಾತ್ರವೇ ಈ ಪಾಸ್‌ಪೋರ್ಟ್ ಒದಗಿಸಲಾಗುತ್ತದೆ. ಈ   ಮರೂನ್ ಅಥವಾ ಕುಂಕುಮದ ಬಣ್ಣವನ್ನು ಹೊಂದಿರುತ್ತವೆ. ಇದು ವ್ಯಕ್ತಿಯ ಗುರುತು ಮತ್ತು ಅಧಿಕೃತ ಸ್ಥಾನಮಾನವನ್ನು ಸಾಬೀತುಗೊಳಿಸಲು  ನೆರವಾಗುತ್ತದೆ.

ವೀಸಾ ಅನುಕೂಲಕ್ಕೆ ಸಂಬಂಧಿಸಿದಂತೆ ರಾಜತಾಂತ್ರಿಕ ಪಾಸ್ಪೋರ್ಟ್ಗಳು ಕೆಲವು ವಿಶೇಷ ಸೌಲಭ್ಯಗಳನ್ನು ಹೊಂದಿವೆ. ಅನೇಕ ದೇಶಗಳು ರಾಜತಾಂತ್ರಿಕ ಪಾಸ್‌ಪೋಟ್‌ ಯಾರು ಹೊಂದಿರುತ್ತಾರೋ ಅವರಿಗಾಗಿ ವೀಸಾ ಸಂಸ್ಕರಣೆ ಪ್ರಕ್ರಿಯೆಯನ್ನು ತ್ವರಿತಗೊಳಿಸುತ್ತವೆ ಅಥವಾ ವೀಸಾ ಅಗತ್ಯಗಳನ್ನೇ ಸಂಪೂರ್ಣವಾಗಿ ಕೈಬಿಡುತ್ತವೆ,ಇದು ಅಧಿಕೃತ ಉದ್ದೇಶಗಳಿಗಾಗಿ ಪ್ರಯಾಣ ಮಾಡುವ ವ್ಯವಸ್ಥೆಗಳನ್ನು ಸರಳಗೊಳಿಸುತ್ತದೆ.

ರಾಜತಾಂತ್ರಿಕ ಪಾಸ್ಪೋರ್ಟ್‌ಗಳನ್ನು ಹೊಂದಿರುವ ವ್ಯಕ್ತಿಗಳು ಅಂತರರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಕೆಲವು ವಿಶೇಷ ಸೌಲಭ್ಯ ಜೊತೆಗೆ ರಕ್ಷಣೆಗಳಿಗೆ ಅರ್ಹರಾಗಿರುತ್ತಾರೆ.  ಆತಿಥೇಯ ದೇಶದಲ್ಲಿ ಬಂಧನ, ಸ್ಥಾನ ಬದ್ಧತೆ ಮತ್ತು ಕೆಲವು ಕಾನೂನು ಕ್ರಮಗಳ ವಿರುದ್ಧ ರಕ್ಷಣೆಯನ್ನು ಒದಗಿಸುತ್ತದೆ. ಯಾವುದೇ ಅಡೆತಡೆಗಳಿಲ್ಲದೆ ತಮ್ಮ ಅಧಿಕೃತ ಉದ್ದೇಶಗಳಿಗಾಗಿ ಪ್ರಯಾಣದ ವ್ಯವಸ್ಥೆಗಳನ್ನು ಸರಳಗೊಳಿಸುತ್ತದೆ.

ಪಾಸ್‌ ಪೋರ್ಟ್ ಮುಟ್ಟುಗೋಲಿಗೆ ಒತ್ತಾಯ:
ಇನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ   ಪ್ರಕರಣದ ಸಂಬಂಧ  ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು  ಪ್ರಜ್ವಲ್‌ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ.

ಹಾಸನದ ಸಂಸದ, ಎನ್ ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಅಸಂಖ್ಯಾತ ಮಹಿಳೆಯರ ಮೇಲೆ ಲೈಂಗಿಕ ಶೋಷಣೆ ಮಾಡಿದ್ದಾರೆ. ಈ ಗಂಭೀರ ಪ್ರಕರಣದ ಬಗ್ಗೆ ನಿಮಗೂ ತಿಳಿದಿರಬಹುದು. ಅವರ ವಿರುದ್ಧದ ಆರೋಪಗಳು ಭಯಾನಕ ಮತ್ತು ನಾಚಿಕೆ ಗೇಡಿನದ್ದು,  ಇದು ದೇಶದ ಆತ್ಮ ಸಾಕ್ಷಿಯನ್ನೇ ಅಲ್ಲಾಡಿಸಿದ ಪ್ರಕರಣವಾಗಿದೆ. ರಾಜ್ಯ ಸರ್ಕಾರ ಈ ಸಬಂಧ ಎಸ್ ಐಟಿ ರಚನೆ ಮಾಡಿದೆ. ಎಸ್‌ಐಟಿ ತಂಡ ಈಗಾಗಲೇ ತನಿಖೆಯನ್ನು ಪ್ರಾರಂಭಿಸಿದೆ. ಪ್ರಕರಣ ಹೊರ ಬಿದ್ದ ಕೂಡಲೇ ಪ್ರಜ್ವಲ್ ವಿದೇಶಕ್ಕೆ ತೆರಳಿದ್ದಾರೆ. ಅವರು ತಮ್ಮ ರಾಜತಾಂತ್ರಿಕ ಪಾಸ್ ಪೋರ್ಟ್ ನಲ್ಲೆ ವಿದೇಶಿ ಪ್ರವಾಸ ಮಾಡುತ್ತಿದ್ದಾರೆ. ಈ ಬಗ್ಗೆ ನಮಗೆ ಮಾಹಿತಿ ತಿಳಿದು ಬಂದಿದೆ.   

ದೇಶದ ಕಾನೂನಿನ ಪ್ರಕಾರ ತನಿಖೆ ವಿಚಾರಣೆ ನಡೆಸಬೇಕು. ಹಾಗಾಗಿ ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದುಗೊಳಿಸಿ, ಅಲ್ಲದೆ ಅಂತರಾಷ್ಟ್ರೀಯ ಏಜೆನ್ಸಿ ಮೂಲಕ ಪ್ರಜ್ವಲ್ ರೇವಣ್ಣ ಕರೆತರಲು ಸಹಕರಿಸಿ ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ವಿದೇಶಾಂಗ ಸಚಿವಾಲಯಕ್ಕೆ ಕೂಡ ಸೂಚನೆ ನೀಡಬೇಕು. 

click me!