ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ವಿಚಾರಣೆಗೆ ಹಾಜರಾಗಲು 7 ದಿನ ಕಾಲಾವಕಾಶ ಕೋರಿದ್ದಾರೆ.
ಬೆಂಗಳೂರು (ಮೇ 01): ಇಡೀ ದೇಶದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದು, ವಿಚಾರಣೆಗೆ ಹಾಜರಾಗಲು 7 ದಿನಗಳ ಕಾಲ ಕಾಲಾವಕಾಶವನ್ನು ಕೇಳಿದ್ದಾರೆ.
ಹಾಸನ ಲೋಕಸಣಾ ಕ್ಷೇತ್ರದ ಚುನಾವಣೆಯ ಮತದಾನದ ಮೂರು ದಿನಗಳ ಮುಂಚೆ ಪೆನ್‌ಡ್ರೈವ್‌ನ ಮೂಲಕ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳನ್ನು ಹಂಚಿಕೆ ಮಾಡಲಾಗಿತ್ತು. ಈ ಮೂಲಕ ಪ್ರಜ್ವಲ್ ರೇವಣ್ಣನ ಕಾಮಕಾಂಡ ಇಡೀ ರಾಜ್ಯಕ್ಕೆ ಹಾಗೂ ಈಗ ದೇಶಕ್ಕೆ ಪಸರಿಸಿದೆ. ಇನ್ನು ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಿದ್ದರು. ಇಲ್ಲಿ ಚುನಾವಣೆ ಮುಗಿಯುತ್ತಿದ್ದಂತೆ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಜೊತೆಗೆ, ರಾಜ್ಯ ಮಹಿಳಾ ಆಯೋಗದ ದೂರಿನ ಆಧಾರದಲ್ಲಿ ರಾಜ್ಯ ಸರ್ಕಾರದಿಂದಲೂ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆಗೆ ಎಸ್‌ಐಟಿ ತಂಡವನ್ನು ರಚಿಸಲಾಗಿದೆ. ಇದರ ಬೆನ್ನಲ್ಲಿಯೇ ಸಂಸದನಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನಿಡಲಾಗಿದೆ.
ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ
ಸಂಸದ ಪ್ರಜ್ವಲ್ ರೇವಣ್ಣ ಪರ ವಕೀಲರಿಗೆ ಎಸ್‌ಐಟಿಯಿಂದ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ನೋಟೀಸ್ ಸ್ವೀಕರಿಸಿದ ಪ್ರಜ್ವಲ್ ರೇವಣ್ಣ ಪರ ವಕೀಲರು ವಿಚಾರವನ್ನು ಸಂಸದನಿಗೆ ತಿಳಿಸಿದ್ದಾರೆ. ಜೊತೆಗೆ, ತಾವು ವಿದೇಶದಲ್ಲಿದ್ದು, ವಿಚಾರಣೆಗೆ ಹಾಜರಾಗಲು ನೀಡಿದ ಕಾಲಾವಕಾಶದಲ್ಲಿ ಬರಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಇನ್ನೂ 7 ದಿನಗಳ ಕಾಲಾವಕಾಶವನ್ನು ಕೊಡಬೇಕು ಎಂದು ಸಂಸದ ಪ್ರಜ್ವಲ್ ರೇವಣ್ಣ ತಮ್ಮ ಪರವಾಗಿ ವಕೀಲರಿಂದ ಪೊಲೀಸ್ ಇಲಾಖೆಗೆ ಪತ್ರವನ್ನು ರವಾನಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಪರವಾಗಿ ವಕೀಲರು ಬರೆದ ಪತ್ರವನ್ನು ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ಮತ್ತು ಟ್ವಿಟರ್ ಖಾತೆಯ ಮೂಲಕ ಹಂಚಿಕೊಂಡು, ವಿಚಾರಣೆಗೆ ಹಾಜರಾಗಲು ನಾನು ಬೆಂಗಳೂರಿನಲ್ಲಿ ಇಲ್ಲ. ಹೀಗಾಗಿ, ನಾನು ನನ್ನ ವಕೀಲರ ಮೂಲಕ C.I.D ಬೆಂಗಳೂರಿಗೆ ಮನವಿ ಮಾಡಿದ್ದೇನೆ. ಸತ್ಯ ಆದಷ್ಟು ಬೇಗ ಹೊರಬರಲಿದೆ ಎಂದು ಬರೆದುಕೊಂಡು ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಮೂಲಕ ತಾವು ತಪ್ಪು ಮಾಡಿಲ್ಲ, ತಮ್ಮ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂಬ ಸುಳಿವನ್ನೂ ನೀಡಿದ್ದಾರೆ.
ವಕೀಲರು ಬರದ ಪತ್ರದಲ್ಲೇನಿದೆ?
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ನನ್ನ ಕಕ್ಷಿದಾರರಾದ ಶ್ರೀ ಪ್ರಜ್ವಲ್ ರವರ ಮನೆಯ ಮೇಲೆ ತಮ್ಮ ಕಛೇರಿಯಿಂದ ಕಳುಹಿಸಿರುವ ನೋಟಿಸನ್ನು ಅಂಟಿಸಿರುವ ಬಗ್ಗೆ ನನಗೆ ನನ್ನ ಕಕ್ಷಿದಾರರಾದ ಶ್ರೀ ಪ್ರಜ್ವಲ್ ರವರ ಕುಟುಂಬದವರಿಂದ ಬಂದ ಮಾಹಿತಿ ಪ್ರಕಾರ ಕಲಂ 41 (ಎ) ಸಿ.ಆರ್.ಪಿ.ಸಿ. ದಿನಾಂಕ:30-04-2024ರ ತಮ್ಮ ನೋಟಿಸ್ ನಲ್ಲಿ ತಾವು ದಿನಾಂಕ:01-05-2024 ರಂದು ತಮ್ಮ ಮುಂದೆ ಹಾಜರಾಗಲು ತಿಳಿಸಿರುತ್ತೀರಿ. ಆದರೆ ನನ್ನ ಕಕ್ಷಿದಾರರಾದ ಶ್ರೀ ಪ್ರಜ್ವಲ್ ರೇವಣ್ಣ ರವರು ಬೆಂಗಳೂರಿನಿಂದ ಹೊರಗಡೆ ಪ್ರವಾಸದಲ್ಲಿದ್ದು ಅವರಿಗೆ ನೋಟಿಸ್ ಬಗ್ಗೆ ವಿಷಯ ತಿಳಿಸಿದ್ದು, ನನ್ನ ಕಕ್ಷಿದಾರರು ಬೆಂಗಳೂರಿಗೆ ಬಂದು ತಮ್ಮ ಮುಂದೆ ನೋಟಿಸ್‌ನ ಸೂಚನೆಯಂತೆ ಹಾಜರಾಗಲು 7 ದಿನಗಳ ಕಾಲಾವಕಾಶ ಅಗತ್ಯವಿರುವುದಾಗಿ ತಿಳಿಸಿದ್ದು, ನನ್ನ ಕಕ್ಷಿದಾರರಿಗೆ ಸುಮಾರು 7 ದಿನಗಳ ಕಾಲಾವಕಾಶ ಕೊಟ್ಟು ಮತ್ತೊಂದು ದಿನಾಂಕದಂದು ತಮ್ಮ ಮುಂದೆ ವಿಚಾರಣೆಗಾಗಿ ಹಾಜರಾಗಲು ಅವಕಾಶ ನೀಡಬೇಕೆಂದು ಈ ಮೂಲಕ ತಮ್ಮಲ್ಲಿ ನನ್ನ ಕಕ್ಷಿದಾರರ ಪರವಾಗಿ ಕೋರುತ್ತೇನೆ.