ಸಂಸದ ಪ್ರಜ್ವಲ್ ರೇವಣ್ಣ ಅವರು ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಂಧನಕ್ಕೆ ಹೆದರಿ ಜಾಮೀನು ಪಡೆಯಲು ಅರ್ಜಿ ಹಾಕಿಲ್ಲ. ಎಸ್‌ಐಟಿ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.
ಬೆಂಗಳೂರು (ಮೇ 01): ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಅವರು ವಿದೇಶದಲ್ಲಿರುವ ಕಾರಣ ವಿಶೇಷ ತನಿಖಾ ದಳ(ಎಸ್‌ಐಟಿ) ನೀಡಿರುವ ನೋಟಿಸ್‌ನಂತೆ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಪ್ರಜ್ವಲ್ ರೇವಣ್ಣ ಅವರು ಬಂಧನಕ್ಕೆ ಹೆದರಿ ಜಾಮೀನು ಪಡೆಯುವುದಕ್ಕೆ ಯಾವುದೇ ಅರ್ಜಿಯನ್ನು ಹಾಕಿಲ್ಲ. ತಮ್ಮ ಮೇಲಿರುವ ಆರೋಪದ ಬಗ್ಗೆ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಪರ ವಕೀಲ ಅರುಣ್ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಕಕ್ಷಿದಾರರ (ಪ್ರಜ್ವಲ್ ರೇವಣ್ಣ) ರಿಕ್ವೆಸ್ಟ್ ಮೇಲೆ ಎಸ್ಐಟಿ ತಂಡಕ್ಕೆ ಮನವಿ ಮಾಡಲಾಗಿದೆ. ಅವರ ಮನೆಗೆ ಸಿಆರ್ ಪಿಸಿ 41ಎ ಅಡಿ ನೊಟೀಸ್ ನೀಡಲಾಗಿತ್ತು. ಆದರೆ, ಈಗ ಅವರು ಬೆಂಗಳೂರಿನಲ್ಲಿ ಇರದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಲು 7 ದಿನಗಳ ಕಾಲ ಅವಕಾಶ ಕೋರಿದ್ದೀವಿ. ಇನ್ನು ಸಂಸದ ಪ್ರಜ್ವಲ್ ರೇವಣ್ಣ ಕೂಡ ವಿಚಾರಣೆಗೆ ಹಾಜರಾಗ್ತೀನಿ ಅಂತಾ ಹೇಳಿದ್ದಾರೆ. ನಾವು ಯಾವುದೇ ಬೇಲ್ ಅಪ್ಲೈ ಮಾಡಿಲ್ಲ. ಪ್ರಕರಣದ ತನಿಖೆಗೆ ನಾವು ಸಹಕಾರ ಮಾಡಲು ರೆಡಿ ಇದ್ದೀವಿ ಎಂದು ಹೇಳಿದರು.
ಪ್ರಜ್ವಲ್ ರೇವಣ್ಣ ವಿದೇಶದಿಂದಲೇ ಮೊದಲ ಪ್ರತಿಕ್ರಿಯೆ; ವಿಚಾರಣೆಗೆ ಹಾಜರಾಗಲು ಸಮಯ ಕೇಳಿದ ಸಂಸದ
ಪ್ರಜ್ವಲ್ ಅವರ ತಂದೆ ಹೆಚ್.ಡಿ. ರೇವಣ್ಣ ಅವರು ಕೂಡ ನಾವು ತನಿಖೆಗೆ ಏನೆಲ್ಲಾ ಸಹಕಾರ ಬೇಕು ಎಲ್ಲವನ್ನೂ ಮಾಡ್ತೀವಿ ಎಂದು ಹೇಳಿದ್ದಾರೆ. ನಾನು ಸದ್ಯಕ್ಕೆ ಪ್ರಜ್ವಲ್ ರೇವಣ್ಣ ಅವರ ಪರವಾಗಿ ಮಾತ್ರ ಅರ್ಜಿ ಹಾಕಿದ್ದೀನಿ. ನಮಗೆ ಮನೆ ಬಾಗಿಲು ಬಳಿ ಸಿಕ್ಕಿರೋ ನೊಟೀಸ್ ಪ್ರಕಾರ, 24ಗಂಟೇಲಿ ಬಂದಿಲ್ಲ ಅಂದ್ರೆ ಕ್ರಮ ಅಂತಾ ಹೇಳಿಲ್ಲ. ವಿಚಾರಣೆಗೆ ಹಾಜರಾಗಲು ಸೂಚಿಸಿದ್ದು, ಅದಕ್ಕೆ ಸಹಕಾರ ನೀಡ್ತೀವಿ. 7 ದಿನದಲ್ಲಿ ವಿಚಾರಣೆಗೆ ಹಾಜರಾಗ್ತಾರೆ ಎಂದು ಮಾಹಿತಿ ನೀಡಿದರು.
ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿದ್ದು ಪ್ರೀಪ್ಲಾನ್ ಅನ್ನೋದು ಸುಳ್ಳು. ಇದೇ ಕೇಸ್‌ಗಾಗಿ ಅವರು ದೇಶವನ್ನು ಬಿಟ್ಟು ಹೋಗಿಲ್ಲ. ಈ ವಿಡಿಯೋ ಕೇಸ್ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ. ಆದರೆ, ಈ ಕೇಸ್ ರಿಜಿಸ್ಟರ್ ಆಗೋ ಮುಂಚೆಯೇ ವಿದೇಶಕ್ಕೆ ಹೋಗಿದ್ದಾರೆ. ನಾವು ಕೇಸ್ ಬಗ್ಗೆ ಕಮ್ಯೂನಿಕೇಟ್ ಮಾಡ್ತಿದೀವಿ ಎಂದು ಪ್ರಜ್ವಲ್ ರೇವಣ್ಣ ಪರ ವಕೀಲ ಅರುಣ್ ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ
ವಕೀಲರು ಎಸ್‌ಐಟಿಗೆ ಬರೆದ ಪತ್ರದಲ್ಲೇನಿದೆ?
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ನನ್ನ ಕಕ್ಷಿದಾರರಾದ ಶ್ರೀ ಪ್ರಜ್ವಲ್ ರವರ ಮನೆಯ ಮೇಲೆ ತಮ್ಮ ಕಛೇರಿಯಿಂದ ಕಳುಹಿಸಿರುವ ನೋಟಿಸನ್ನು ಅಂಟಿಸಿರುವ ಬಗ್ಗೆ ನನಗೆ ನನ್ನ ಕಕ್ಷಿದಾರರಾದ ಶ್ರೀ ಪ್ರಜ್ವಲ್ ರವರ ಕುಟುಂಬದವರಿಂದ ಬಂದ ಮಾಹಿತಿ ಪ್ರಕಾರ ಕಲಂ 41 (ಎ) ಸಿ.ಆರ್.ಪಿ.ಸಿ. ದಿನಾಂಕ:30-04-2024ರ ತಮ್ಮ ನೋಟಿಸ್ ನಲ್ಲಿ ತಾವು ದಿನಾಂಕ:01-05-2024 ರಂದು ತಮ್ಮ ಮುಂದೆ ಹಾಜರಾಗಲು ತಿಳಿಸಿರುತ್ತೀರಿ. ಆದರೆ ನನ್ನ ಕಕ್ಷಿದಾರರಾದ ಶ್ರೀ ಪ್ರಜ್ವಲ್ ರೇವಣ್ಣ ರವರು ಬೆಂಗಳೂರಿನಿಂದ ಹೊರಗಡೆ ಪ್ರವಾಸದಲ್ಲಿದ್ದು ಅವರಿಗೆ ನೋಟಿಸ್ ಬಗ್ಗೆ ವಿಷಯ ತಿಳಿಸಿದ್ದು, ನನ್ನ ಕಕ್ಷಿದಾರರು ಬೆಂಗಳೂರಿಗೆ ಬಂದು ತಮ್ಮ ಮುಂದೆ ನೋಟಿಸ್‌ನ ಸೂಚನೆಯಂತೆ ಹಾಜರಾಗಲು 7 ದಿನಗಳ ಕಾಲಾವಕಾಶ ಅಗತ್ಯವಿರುವುದಾಗಿ ತಿಳಿಸಿದ್ದು, ನನ್ನ ಕಕ್ಷಿದಾರರಿಗೆ ಸುಮಾರು 7 ದಿನಗಳ ಕಾಲಾವಕಾಶ ಕೊಟ್ಟು ಮತ್ತೊಂದು ದಿನಾಂಕದಂದು ತಮ್ಮ ಮುಂದೆ ವಿಚಾರಣೆಗಾಗಿ ಹಾಜರಾಗಲು ಅವಕಾಶ ನೀಡಬೇಕೆಂದು ಈ ಮೂಲಕ ತಮ್ಮಲ್ಲಿ ನನ್ನ ಕಕ್ಷಿದಾರರ ಪರವಾಗಿ ಕೋರುತ್ತೇನೆ.